ಕನ್ನಡ ಪರ ಸಂಘಟನೆಗಳಿಂದ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ದೂರು ದಾಖಲಾಗಿದೆ. ಕನ್ನಡ ಕಷ್ಟವೆಂದು ಹೇಳಿದ್ದಕ್ಕೆ ಕನ್ನಡ ಚಿತ್ರರಂಗದಿಂದ ನಿಷೇಧಿಸಲು ಆಗ್ರಹಿಸಲಾಗಿದೆ. 

ಬೆಂಗಳೂರು [ಜು.22] :  ‘ಕಿರಿಕ್‌ ಪಾರ್ಟಿ’ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಮಿಳಿನ ಯುಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಕನ್ನಡ ಡಬ್ಬಿಂಗ್‌ ಕಷ್ಟಎಂದು ರಶ್ಮಿಕಾ ಮಂದಣ್ಣ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಒಕ್ಕೂಟದ ಸದಸ್ಯರು ಸೋಮವಾರ ಬೆಳಗ್ಗೆ ವಾಣಿಜ್ಯ ಮಂಡಳಿ ಮುಂಭಾಗ ಪ್ರತಿಭಟನೆ ನಡೆಸಿ, ರಶ್ಮಿಕಾ ಮಂದಣ್ಣ ನಟನೆಯ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆ ಆಗದಂತೆ ನಿಷೇಧ ಹೇರಬೇಕೆಂದು ಆಗ್ರಹಿಸಿದರು.

Add Asianetnews Kannada as a Preferred SourcegooglePreferred

ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಳುವಳಿ ನಾಗೇಶ್‌ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಚಳವಳಿ ನಾಗೇಶ್‌, ‘ಕನ್ನಡದಿಂದಲೇ ನಟಿಯಾಗಿ ಬೆಳೆದ ರಶ್ಮಿಕಾ ಮಂದಣ್ಣ, ಪರಭಾಷೆಗಳಲ್ಲಿ ತಮಗೆ ಅವಕಾಶಗಳಿವೆ ಎನ್ನುವ ಕಾರಣಕ್ಕೆ ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಶುಕ್ರವಾರ ಕನ್ನಡದಲ್ಲಿ ತೆರೆ ಕಾಣುತ್ತಿರುವ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್‌ ಕಾಮ್ರೇಡ್‌’ ಚಿತ್ರದ ಬಿಡುಗಡೆ ವಿರೋಧಿಸಿ ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯ ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಅವರಿಗೆ ದೂರು ಸಲ್ಲಿಸಿದರು. ಕರ್ನಾಟಕ ಸಂಘಟನೆಗಳ ಒಕ್ಕೂಟದ ದೂರಿಗೆ ಪ್ರತಿಕ್ರಿಯಿಸಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ‘ರಶ್ಮಿಕಾ ಮಂದಣ್ಣ ಕನ್ನಡದ ವಿರುದ್ಧ ಮಾತನಾಡಿದ್ದಾರೆಂಬ ವಿಷಯ ನಮ್ಮ ಗಮನಕ್ಕೆ ಬಂದಿದೆ. ಅವರು ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ, ಯಾಕಾಗಿ ಮಾತನಾಡಿದ್ದಾರೆ ಎನ್ನುವ ವಿಚಾರವನ್ನು ನಾವು ಕೂಡ ಸಮಗ್ರವಾಗಿ ತಿಳಿದುಕೊಳ್ಳಬೇಕಿದೆ. ಅದೆಲ್ಲ ಮಾಹಿತಿ ಪಡೆದ ನಂತರ ನಮ್ಮ ಪರಿಮಿತಿಯೊಳಗೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆನ್ನುವುದನ್ನು ಆದಷ್ಟುಬೇಗ ನಿರ್ಧರಿಸಲಾಗುವುದು’ ಎಂದು ಪ್ರತಿಭಟನೆಕಾರರಿಗೆ ಭರವಸೆ ನೀಡಿದರು.