ಸಾಣೇಹಳ್ಳಿ ನಾಟಕೋತ್ಸವದಲ್ಲಿ ಕಾಳಿದಾಸನ ದೃಶ್ಯ ಕಾವ್ಯ- ಮೇಘದೂತ ದರ್ಶನ
ಸಾಹಿತ್ಯ ಲೋಕದಲ್ಲಿ ಅತ್ಯದ್ಭುತವಾದ ಕೃತಿ ಎಂದು ಪರಿಗಣಿಸಿರುವ ಕಾಳಿದಾಸನ ಮಹಾಕಾವ್ಯವನ್ನು ಬೇರೆ ಭಾಷೆಗೆ ಅನುವಾದಿಸುವುದಾಗಲಿ ಅಥವಾ ಅದನ್ನು ರಂಗದ ಮೇಲೆ ಪ್ರಯೋಗಿಸುವುದಾಗಲಿ ಅಷ್ಟು ಸುಲಭದ ಮಾತಲ್ಲ. ಈ ಕಾವ್ಯದಲ್ಲಿ ಬರುವ ಪ್ರತಿಯೊಂದೂ ಪ್ರಾಣಿ, ಪಕ್ಷಿ, ಮರವೂ ಅಮೋಘ ಪಾತ್ರಗಳೇ. ಅಂಥದ್ದೊಂದು ಪ್ರಯೋಗಕ್ಕೆ ಸಾಣೇಹಳ್ಳಿ ನಾಟಕೋತ್ಸವ ಸಾಕ್ಷಿಯಾಗಿದೆ.
-ಎಚ್.ಎಸ್.ನವೀನಕುಮಾರ್ ಹೊಸದುರ್ಗ
ಮಹಾ ಕವಿ ಕಾಳಿದಾಸನನ್ನು ಕನ್ನಡಕ್ಕೆ ಅನುವಾದಿಸಿರುವ ಹಿರಿಯ ಸಾಹಿತಿ ಪ್ರೊ. ಎಸ್ ವಿ ಪರಮೇಶ್ವರ ಭಟ್ಟರು ಒಂದೆಡೆಯಲ್ಲಿ ಕಾಳಿದಾಸ ರಘುವಂಶವನ್ನು ವರ್ಣಿಸುವಾಗ, 'ಸೂರ್ಯನಿಂದೊಗೆದ ಕುಲವೆತ್ತಣದು, ಅಲ್ಪ ವಿಷಯಜ್ಞಮತಿ ಎತ್ತಣಿದು, ಮೋಹದಿಂದಿಳಿಸಿದೆನು, ದುಸ್ತರ ಸಾಗರವ ತೆಪ್ಪದೊಳು ದಾಂಟಲೆಂದು' ಎಂಬುವುದಾಗಿ ಅನುವಾದಿಸುತ್ತಾರೆ. ಕಾಳಿದಾಸನ ಕಾವ್ಯದ ಅನುವಾದವೆಂದರೆ ದುಸ್ತರ ಸಾಗರವನ್ನು ತೆಪ್ಪದೊಳು ದಾಟುವ ಸಾಹಸವೇ ಸರಿ. ಅದರಲ್ಲೂ ಕಾಳಿದಾಸನ ಕಾವ್ಯವನ್ನು ನಾಟಕವಾಗಿಸುವುದು ಇನ್ನಷ್ಟು ಸಾಹಸದ ಕೆಲಸ. ಇದನ್ನು ಬಹಳ ಅದ್ಭುತವಾಗಿ ಮಾಡಿ, ಕನ್ನಡದ ರಂಗ ರಸಿಕರಿಗೆ ದೃಶ್ಯ ಕಾವ್ಯವೊಂದನ್ನು ಉಣಬಡಿಸುವ ಪ್ರಯತ್ನವನ್ನು ಬೆಂಗಳೂರಿನ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್‌ನವರು ಬಹಳ ಚೆನ್ನಾಗಿ ಮಾಡಿದ್ದಾರೆ. ರಂಗಾಸಕ್ತರಿಗೆ ಪ್ರತಿ ವರ್ಷವೂ ವಿವಿಧ ರೀತಿಯ ನಾಟಕಗಳ ನವರಸವನ್ನು ಉಣಬಡಿಸುವ ಸಾಣೇಹಳ್ಳಿ ನಾಟಕೋತ್ಸವ-2022ರಲ್ಲಿ ಪ್ರದರ್ಶಿತವಾದ ಮಾಲತೇಶ್ ಬಡಿಗೇರ ನಿರ್ದೇಶನದ 'ಮೇಘದೂತ ದರ್ಶನಂ' ತನ್ನ ವಿಭಿನ್ನ ಪ್ರಯೋಗಶೀಲತೆಯಿಂದ ಜನಮನ ಗೆದ್ದಿತು. ನಾರಾಯಣಘಟ್ಟ ಅವರ ಅತ್ಯಂತ ಸಮರ್ಥ ಕನ್ನಡ ರಂಗರೂಪ, ಅತ್ಯುತ್ತಮ ಸಂಗೀತ, ಶ್ರೀಮಂತ ರಂಗ ಪರಿಕರ ಹಾಗೂ ನಟವರ್ಗದ ತನ್ಮಯ ಭರಿತ ಅಭಿನಯದಿಂದ, ಕಾಳಿದಾಸನ ಬಹಳ ಸುಂದರವಾದ ಕಾವ್ಯವೊಂದರ ಪರಿಚಯ ಕನ್ನಡ ಜನತೆಗೆ ಈ ನಾಟಕದ ಮೂಲಕ ಸಿಕ್ಕಂತಾಗಿದ್ದು ನಿಜಕ್ಕೂ ವಿಶೇಷ.
ಈ ನಾಟಕದಲ್ಲಿ ದಾಂಪತ್ಯ ಜೀವನದ (Married Life) ಸವಿ, ಒಲವೇ ಆತ್ಮ ವಿಸ್ತರಣ, ನಲುಮೆಯನ್ನು ಹೊರಹೊಮ್ಮಿಸುವುದು ನರ ಜೀವನದ ಔನ್ನತ್ಯ ಎಂಬ ಜೀವನದ ಸುಮಧುರ ವಿಚಾರದ ಜೊತೆಗೆ, ಕಾಳಿದಾಸ ತನ್ನ ಕಾವ್ಯದಲ್ಲಿ ಮಾಡುವ ಭರತವರ್ಷದ ಅದ್ಭುತ ವರ್ಣನೆ ದೃಶ್ಯ ರೂಪಕದಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ. ನಾಟಕದ ನಾಯಕ ಮಣಿಕಂಠನೆಂಬ ಯಕ್ಷ, ತನ್ನ ಅತ್ಯಂತ ಪ್ರೀತಿಯ ಪತ್ನಿ ಮಾಲೆಯೊಂದಿಗೆ ದಾಂಪತ್ಯದ ರಸನಿಮಿಷಗಳನ್ನು ಸವಿಯುತ್ತಿರುವ ಸಂದರ್ಭದಲ್ಲಿ, ಅವನು ನೋಡಿಕೊಳ್ಳುತ್ತಿದ್ದ ಕುಬೇರನ ತೋಟವನ್ನು ಇಂದ್ರನ ಐರಾವತ ಹಾಳುಗೆಡವುತ್ತದೆ. ಪ್ರೀತಿಯಲ್ಲಿ ಮೈಮರೆತು ಕರ್ತವ್ಯ ಭ್ರಷ್ಟನಾದನೆಂದು ಕುಬೇರ, ಮಣಿಕಂಠನಿಗೆ ತನ್ನ ಪ್ರಿಯ ಪತ್ನಿಯಿಂದ ಒಂದು ವರ್ಷಗಳ ಕಾಲ ದೂರ ಇರುವಂತೆ ಅತ್ಯಂತ ಕಠೋರವಾದ ಶಾಪವನ್ನು ನೀಡುತ್ತಾನೆ. ಈ ಶಾಪದ ನೆಲೆಯಲ್ಲಿ ಉತ್ತರದ ತನ್ನ ಸುಂದರ ನೆಲದಿಂದ ದೂರದ ವಿಂಧ್ಯ ಪರ್ವತದ ರಾಮಗಿರಿಗೆ ತೆರಳುವ ಮಣಿಕಂಠ, ಅಲ್ಲಿ ವಿರಹ ಪೀಡಿತನಾಗಿ ಎಲ್ಲಾ ತರುಲತೆ ಶಿಲೆಗಳಲ್ಲಿ ತನ್ನ ಪತ್ನಿಯ ರೂಪವನ್ನು ಕಾಣುತ್ತಿರುತ್ತಾನೆ. ಆಗ ರಾಮಗಿರಿಯ ಶಿಖರಕ್ಕೆ ಬಂದು ಮುತ್ತಿಕ್ಕುವ ಮೇಘದ ಮೂಲಕ, ದೂರದಲ್ಲಿರುವ ತನ್ನ ಪತ್ನಿಗೆ ತನ್ನ ಸಂದೇಶವನ್ನು ಕಳಿಸುವ ಆಲೋಚನೆಯನ್ನು ಮಾಡುತ್ತಾನೆ. ಆಗ ಆ ಮೇಘದೂತನಿಗೆ, ವಿಂಧ್ಯ ಪರ್ವತದಿಂದ ಭಾರತ ವರ್ಷದ ಬಹಳ ಸುಂದರ ಭೌಗೋಳಿಕ ವಿವರಣೆಯನ್ನು ನೀಡುತ್ತಾನೆ. ಅಲ್ಲಿ ಮಧ್ಯದಲ್ಲಿ ಸಿಗುವ ಮಾವಿನ ತೋಪುಗಳ ಆಮ್ರಕೂಟ, ರಕ್ತಸಿಕ್ತವಾದ ಚಂಬಲ್ ಕಣಿವೆ, ಮಹಾ ಕಾಲನ ನಿವಾಸವಾದ ಉಜ್ಜಯಿನಿ, ಹಿಮಾಲಯ ಪ್ರದೇಶದ ನದಿ, ಜಲಪಾತಗಳ ಅತ್ಯಂತ ಸುಂದರ ವರ್ಣನೆ, ಆ ಭಾಗಗಳಲ್ಲಿ ಬರುವ ವಿಭಿನ್ನ ಜನಪದ ಜೀವನ (Folk Life) ಇವೆಲ್ಲವನ್ನು ಮಣಿಕಂಠನ ಮೂಲಕ ಕಾಳಿದಾಸ ಬಹಳ ಅದ್ಭುತವಾಗಿ ಕಟ್ಟಿಕೊಡುತ್ತಾನೆ. ಇಲ್ಲಿ ಕಾಳಿದಾಸನ ಮೂಲಪರಿಕಲ್ಪನೆಯ ಜೊತೆಗೆ ದೇಸಿಯ ಸೊಗಡನ್ನು ಕಟ್ಟಿಕೊಡುವ ಸೃಜನಶೀಲ ಪ್ರಯತ್ನವನ್ನು ನಿರ್ದೇಶಕ ಮಾಲತೇಶ್ ಬಡಿಗೇರ್ ಸಮರ್ಥವಾಗಿ ಮಾಡಿದ್ದಾರೆ. ಕಾಳಿದಾಸನ ಸೃಷ್ಟಿ ಶೀಲತೆಯಲ್ಲಿ ನಿರ್ಜೀವ ಮೋಡ ಕೂಡ ಒಂದು ಜೀವಂತ ಪಾತ್ರ. ನಾಯಕನ ಗೆಳೆಯನಾದ ಈ ಮೇಘದೂತ ನಾಯಕನ ಸಂದೇಶವನ್ನು ಅವನ ಪ್ರಿಯತಮೆಗೆ ತಲುಪಿಸುವುದರೊಂದಿಗೆ ನಾಟಕ ಅಂತ್ಯಗೊಳ್ಳುತ್ತದೆ.
'ನೆಮ್ಮದಿ ಅಪಾರ್ಟ್ಮೆಂಟ್' ಈಗಿನ ಕೌಟುಂಬಿಕ ಮೌಲ್ಯಗಳ ಪ್ರತಿಬಿಂಬ
ಅತ್ಯಂತ ವಿಶಾಲವಾದ ಕಲ್ಪನಾಶೀಲತೆಯುಳ್ಳ, ಪ್ರೇಮ ದಾಂಪತ್ಯದ ಹಿನ್ನೆಲೆಯಲ್ಲಿ ಜೀವನದ ವಿಭಿನ್ನ ಸ್ವರೂಪಗಳ ಚಿತ್ರಣ ನೀಡುವ, ಈ ಪ್ರಸಂಗಕ್ಕೆ ಪೌರಾಣಿಕ ಭೌಗೋಳಿಕ ಆಯಾಮಗಳಿವೆ. ಈ ಅದ್ಭುತ ಕಾವ್ಯವನ್ನು ಕನ್ನಡೀಕರಿಸಿ, ರಂಗದ ಮೇಲೆ ಅತ್ಯಂತ ಶ್ರೀಮಂತ ರಂಗಪರಿಕರಗಳೊಂದಿಗೆ, ಗುಣಮಟ್ಟದ ಪ್ರಸಾಧನದೊಂದಿಗೆ, ಸಮರ್ಥ ಅಭಿನಯದೊಂದಿಗೆ ಕಟ್ಟಿಕೊಟ್ಟಿರುವುದು ಕನ್ನಡ ರಂಗಭೂಮಿಯಲ್ಲಿ (Kannada Theater) ಒಂದು ವಿಶೇಷ ಪ್ರಯೋಗವೆಂದೇ ಹೇಳಬಹುದು. ಕಥಾ ನಾಯಕ ಮಣಿಕಂಠನ ಪಾತ್ರಧಾರಿ ಸಂಜಯ್ ಶೃಂಗೇರಿ ಅವರ ಅಭಿನಯ, ಸ್ಪಷ್ಟ ಉಚ್ಚಾರಣೆ ಉಲ್ಲೇಖನೀಯ. ಹಾಗೇ ನಾಯಕಿಯ ಪಾತ್ರದಲ್ಲಿ ಅನುಷಾರವರ ಅಭಿನಯ ಕೂಡ ಉತ್ತಮವಾಗಿ ಮೂಡಿ ಬಂದಿದೆ. ಇಲ್ಲಿ ಮೋಡ, ಬೆಟ್ಟ ಗುಡ್ಡ, ಶಿಲೆ ಬಳ್ಳಿ, ಹೂವು, ಕ್ರೌಂಚ ಪಕ್ಷಿ, ನವಿಲು, ಮೈನಾ ಹಕ್ಕಿ ಎಲ್ಲವೂ ಜೀವಂತಿಕೆಯನ್ನು ಸ್ಫುರಿಸುವ ಪಾತ್ರಗಳೇ.ಈ ಪಾತ್ರಗಳಲ್ಲಿ ನಟಿಸಿರುವ ಎಲ್ಲ ಸಹ ನಟರ ಅಭಿನಯ, ನೃತ್ಯಗಳೆಲ್ಲವೂ ಅತ್ಯಂತ ತನ್ಮಯತೆಯಿಂದ ಮೂಡಿ ಬಂದಿರುವುದು ನಾಟಕದ ಯಶಸ್ವಿಗೆ ಕಾರಣವಾಗುತ್ತದೆ.
ಹೀಗೆ ಪ್ರಸ್ತುತ ಸಾಮಾಜಿಕ ಸಮಸ್ಯೆಗಳು ಬಿಂಬಿಸುವ ಪ್ರಹಸನಗಳು, ಶಿವಶರಣರ ಜೀವನಾಧಾರಿತ ವಚನ ಸಾಹಿತ್ಯದ ಉನ್ನತ ಮೌಲ್ಯಗಳನ್ನು ಬಿಂಬಿಸುವ ನಾಟಕಗಳ ಜೊತೆಯಲ್ಲೇ, ನಮ್ಮ ದೇಶದ ಅಗಾಧ ವೈವಿಧ್ಯತೆಯನ್ನು ಬಿಂಬಿಸುವ ಕಾಳಿದಾಸನಂತಹ ಅಭಿಜಾತ ಪ್ರತಿಭೆಗಳ ಸಮೃದ್ಧ ಸಾಹಿತ್ಯವನ್ನು ರಂಗ ರೂಪದಲ್ಲಿ ನೀಡಿರುವ ನಾಟಕಗಳನ್ನೂ ನೀಡಿ ಪ್ರೋತ್ಸಾಹಿಸುತ್ತಿರುವ, ನಮ್ಮ ನಾಡಿನ ಸಾಂಸ್ಕೃತಿಕ ಸಾಕ್ಷಿ ಪ್ರಜ್ಞೆಗೆ ಪ್ರತೀಕವಾಗಿರುವ ಸಾಣೇಹಳ್ಳಿಯ ನಾಟಕೋತ್ಸವಕ್ಕೆ ಎಲ್ಲ ರಂಗಾಸಕ್ತ ಪರವಾಗಿ ವಿಶೇಷ ಧನ್ಯವಾದಗಳು.
Yash ದಕ್ಷಿಣ ಸಿನಿಮಾ ದಿಕ್ಕು ಬದಲಿಸಿದ್ದು ಬಾಹುಬಲಿ: ಯಶ್