Asianet Suvarna News Asianet Suvarna News

'ನೆಮ್ಮದಿ ಅಪಾರ್ಟ್ಮೆಂಟ್' ಈಗಿನ ಕೌಟುಂಬಿಕ ಮೌಲ್ಯಗಳ ಪ್ರತಿಬಿಂಬ

ನೈಜ ಕಾಡಿನ ನಡುವೆ ಇದ್ದವರಿಗೆ ನಗರದ ಕಾಂಕ್ರೀಟ್ ಆಕರ್ಷಿಸುತ್ತದೆ. ಆದರೆ, ನಗರದಲ್ಲಿ ಬದುಕುತ್ತಿರುವವರಿಗೆ ಇಲ್ಲಿನ ಬವಣೆ ಸಾಕಾಗಿ ಹೋಗಿದೆ. ಸಂಬಂಧಗಳು ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಾಣೇಹಳ್ಳಿ ಶಿವ ಸಂಚಾರದ ನೆಮ್ಮದಿ ಅಪಾರ್ಟ್‌ಮೆಂಟ್ ಎಲ್ಲರ ಕಣ್ಣು ತೆರೆಸುವಂಥ ಒಂದು ನಾಟಕ. 

Sanehalli Shiva Sanchara 2022 Nemmadi Apartment reveals value of family
Author
First Published Nov 6, 2022, 12:26 PM IST

- ಎಚ್.ಎಸ್.ನವೀನಕುಮಾರ್, ಹೊಸದುರ್ಗ

ಮಾನವನ ಬದುಕಿನಲ್ಲಿ ನೆಮ್ಮದಿ ಎಂಬುದು ಒಂದು ಮರೀಚಿಕೆ. ಈ ಬಿಸಿಲು ಕುದುರೆಯ ಹುಡುಕಾಟದಲ್ಲಿ ಬದುಕಿನ ಪಯಣ ಎತ್ತೆತ್ತಲೋ ಸಾಗಿಬಿಡುತ್ತದೆ. ಹಳ್ಳಿಯ ಮಂದಿಗೆ ನಗರ ಜೀವನದಲ್ಲಿ ಸುಖವಿದೆ ಎಂಬ ಪರಿಕಲ್ಪನೆಯಾದರೆ, ಪಟ್ಟಣದ ಕಾಂಕ್ರೀಟ್ ಕಾಡುಗಳಲ್ಲಿ ಸಿಲುಕಿಕೊಂಡವರು ಬಯಸುವುದು ಹಳ್ಳಿಯ ಜೀವನದ ಸುಖವನ್ನು. 

ಈ ನಾಟಕದ ಕೇಂದ್ರಬಿಂದು ಕೇಶವರಾವ್,  ಹಳ್ಳಿಯ ತೋಟ ಮಾರಿ ಅಂತಹ ಒಂದು ಕಾಂಕ್ರೀಟ್ ಕಾಡಾದ "ನೆಮ್ಮದಿ ಅಪಾರ್ಟ್ಮೆಂಟ್" ನ 25ನೇ ಅಂತಸ್ತಿನಲ್ಲಿ ಒಂಟಿಯಾಗಿ ಸಿಲುಕಿಕೊಂಡವರು. ನಾಟಕ ಆರಂಭವಾಗುವುದೇ ಇವರ ಸಾವಿನಿಂದ. ಹೀಗಾಗಿ ಇವರ ಸಾವೇ ಈ ನಾಟಕದ ಪ್ರಮುಖ ಪಾತ್ರ. ಇದ್ದಾಗ ತನ್ನ ವಸ್ತುಗಳನ್ನು 25 ಅಂತಸ್ತುಗಳ ಮೇಲಕ್ಕೆ ಏರಿಸಿದ ಈ ವ್ಯಕ್ತಿ ಈಗ ಬರಿಯ ಬಾಡಿ! ಈಗ ಇವರ ಬಾಡಿಯನ್ನು ಹೇಗೆ ಕೆಳಗೆ ಇಳಿಸುವುದು ಎನ್ನುವುದೇ ಬದುಕಿದ್ದವರ ಜಿಜ್ಞಾಸೆ. ಮಕ್ಕಳನ್ನು ಬೆಳೆಸಿದರೆ ನೆಮ್ಮದಿ ಗ್ಯಾರಂಟಿ ಎಂಬ ಎಲ್ಲರ ಸಹಜ ನಂಬಿಕೆಯಂತೆ ಈ ವ್ಯಕ್ತಿ ಸಹ ಮಕ್ಕಳಿಗೆ ಶಿಕ್ಷಣ ನೀಡಿ, ದೊಡ್ಡವರನ್ನಾಗಿ ಮಾಡಿದ್ದಾರೆ. ಆದರೆ ಇಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಮಕ್ಕಳು ಪೋಷಕರ ಜೊತೆಗೆಲ್ಲಿರುತ್ತಾರೆ? ಅದೇ ಊರಿನ ಇನ್ನೊಂದು ಕಾಂಕ್ರೀಟ್ ಕಾಡಿನಲ್ಲಿ ವಾಸವಾಗಿರುವ ಮಗಳು ಅಳಿಯನಿಗೆ ಅಪ್ಪ ಕೂಡಿಟ್ಟಿರುವ ಗಂಟನ್ನು ಶೀಘ್ರವಾಗಿ ತಮ್ಮ ಮನೆಗೆ ಸಾಗಿಸುವ ಚಿಂತೆ.. ಇನ್ನು ಹೊರದೇಶದಲ್ಲಿರುವ ಮಗನಿಗೆ ಅಪ್ಪನ ಅಂತ್ಯಸಂಸ್ಕಾರಕ್ಕೂ ಬರಲಾಗದಷ್ಟು ಬ್ಯುಸಿ ಶೆಡ್ಯೂಲ್! ಹೀಗೆ ವ್ಯಾವಹಾರಿಕ ಸಂಬಂಧಗಳ ನಡುವೆ ಹೆಣ ಕಾಯಲು ಬಂದವರೆಂದರೆ ಕೇಶವ ರಾಯರ ವಾಕಿಂಗ್ ಸ್ನೇಹಿತ ವರದರಾಜ್, ತನ್ನ ಹೆಂಡತಿ ಮಕ್ಕಳನ್ನು ಕಳೆದುಕೊಂಡು ಅನಾಥವಾಗಿ ಈ ಕಾಂಕ್ರೀಟ್ ಕಾಡಿನ ವಾಚ್ಮನ್ ಆಗಿ ಸೇರಿಕೊಂಡಿರುವ ಕವಿ ಹೃದಯದ ವ್ಯಕ್ತಿ ಹಾಗೂ ಮನೆ ಕೆಲಸದಾಕೆ ಕಮಲ ಮಾತ್ರ! ಹೀಗೆ ಸಾವೊಂದು ಸಂಭವಿಸಿದಾಗ, ಅದರಲ್ಲೂ ರಾಜಕೀಯ ಲಾಭದ ಲೆಕ್ಕಾಚಾರ ಹಾಕುವ ರಾಜಕಾರಣಿ, ಸಂಶಯದ ವಾಸನೆ ಹಿಡಿದು ಅದರಲ್ಲೇನು ಸಿಕ್ಕೀತೆಂದು ಯೋಚಿಸುವ ಪೊಲೀಸ್ ಮುಂತಾದ ಪಾತ್ರಗಳ ಪ್ರವೇಶ ಕೂಡ ಆಗಿ ಪ್ರೇಕ್ಷಕರನ್ನು ರಂಜಿಸುತ್ತವೆ. ಕೊನೆಗೆ ಕೇಶವರಾಯರ ಲಾಯರ್ ಓದುವ ವಿಲ್‌ನಲ್ಲಿ ಎಲ್ಲಾ ಆಸ್ತಿ  ಅನಾಥಾಶ್ರಮಕ್ಕೆ ಸೇರಿದ್ದು ಎಂಬ ವಿಷಯ ಹೊರ ಬಿದ್ದಾಗ, ಮಗಳು ಅಳಿಯ ಸತ್ತವರು ಯಾರೋ ಎಂಬಂತೆ ಅಲ್ಲಿಂದ ನಿರ್ಗಮಿಸುತ್ತಾರೆ. ಅಂತ್ಯಸಂಸ್ಕಾರಕ್ಕೂ ಬರಲಾರದ ಮಗ, ವಿದೇಶದಿಂದಲೇ ಅನ್ಯಾಯ ಎಂದು ಬೊಬ್ಬಿಡುತ್ತಾನೆ. ಇವು ಸಂಬಂಧಗಳ ತೆಳುವಾದ ವಾಸ್ತವವನ್ನು ತೆರೆದಿಡುತ್ತವೆ. ಆದರೆ ಅಂತ್ಯದಲ್ಲಿ ಕೇಶವರಾವ್ ಸತ್ತೇ ಇರೋದಿಲ್ಲ! ತನ್ನ  ಆಸ್ತಿಯನ್ನೆಲ್ಲಾ ಮಾರಿ, ಆ ಹಣವನ್ನು ಅನಾಥಾಲಯಕ್ಕೆ ನೀಡಿ ದೂರದ ಹಳ್ಳಿಯಲ್ಲಿ ಹಂಚಿನ ಮನೆಗೆ ಮತ್ತೆ ನೆಮ್ಮದಿಯನ್ನು ಹುಡುಕಿ ತೆರಳುತ್ತಾರೆ..

20 ಸಾವಿರ ನಾಟಕಗಳ ಒಡತಿ ಇಂಡಿಯ ಪ್ರತಿಭೆಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ

ಇಂದಿನ ಸಮಾಜದಲ್ಲಿ (Society) ಕಾಣೆಯಾಗುತ್ತಿರುವ ಕೌಟುಂಬಿಕ ಮೌಲ್ಯಗಳನ್ನು (Family Values), ಇಂದು ನಗರ ಜೀವನದ ಪ್ರಮುಖ ಸಂಕೇತವಾಗಿರುವ ಅಪಾರ್ಟ್ಮೆಂಟ್ ಸಂಸ್ಕೃತಿಯ ಹಿನ್ನೆಲೆಯಲ್ಲಿ ಕಟ್ಟಿ ಕೊಡುವ ಪ್ರಯತ್ನ ಈ ನಾಟಕದಲ್ಲಿದೆ. ಪ್ರಸ್ತುತ ವಿಷಯವನ್ನು ಆಧರಿಸಿದ ನಾಟಕವಾದ್ದರಿಂದ ಇದು ನೋಡುಗರಿಗೆ ಆಪ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಟಕ ಜನಪ್ರಿಯತೆಗೆ ಹೆಚ್ಚು ಒತ್ತು ಕೊಟ್ಟಂತೆ ಭಾಸವಾಗುತ್ತದೆ. ಇದಕ್ಕಾಗಿ ಅಗತ್ಯಕ್ಕಿಂತ ಹೆಚ್ಚು ದ್ವಂದ್ವಾರ್ಥ ಸಂಭಾಷಣೆಗಳು, ನಾಟಕದಲ್ಲಿ (Drama) ನುಸುಳಿ ನಾಟಕದ ಗಾಂಭೀರ್ಯತೆಯನ್ನು ಕಡಿಮೆ ಮಾಡುತ್ತವೆ. ಒಟ್ಟಾರೆ ಎಲ್ಲಾ ಸನ್ನಿವೇಶಗಳ ವಿಶ್ಲೇಷಕರಾದ ಸ್ನೇಹಿತ ವರದರಾಜ್ ಪಾತ್ರಧಾರಿಯ ಅಭಿನಯ ತೂಕವಾಗಿದ್ದರೆ, ಯಾವುದೋ ಪ್ರತಿಭೆ ಎಲ್ಲೋ ಹೂತು ಹೋಗಿರುವುದರ ಪ್ರತೀಕವಾದ ವಾಚ್ ಮ್ಯಾನ್ ಪಾತ್ರಧಾರಿಯ ಅಭಿನಯ ಸಹ ಗಮನ ಸೆಳೆಯುತ್ತದೆ. ಫೈರ್ ಮ್ಯಾನ್, ರಾಜಕಾರಣಿ, ಪೊಲೀಸ್ ಎಲ್ಲರೂ ಚಟುವಟಿಕೆಯಿಂದ ನಟಿಸಿದ್ದಾರಾದರೂ, ಪ್ರೇಕ್ಷಕರನ್ನ ಸೆಳೆಯುವ ಸಲುವಾಗಿ ಅವರ ಆಂಗಿಕ ಅಭಿನಯ ಸ್ವಲ್ಪ ಜಾಸ್ತಿ ಎನಿಸುವಂತಿತ್ತು. ಇದು ನಾಟಕದ ಬಿಗುವನ್ನು ಕಡಿಮೆಗೊಳಿಸಿದಂತೆ ಭಾಸವಾಗುತ್ತಿತ್ತು..

ನಾಲ್ಕು ದಿನದ ಈ ಬಾಳಿನಲ್ಲಿ ನೆಮ್ಮದಿಯನ್ನು ಹುಡುಕುತ್ತಲೇ ಬಾಡಿಯಾಗಿ ಬಿಡುವ ಮಾನವನ ಬದುಕಿನ ಪರಿಪಾಟಲು ರಂಗಮಾಧ್ಯಮದಲ್ಲಿ (Theatre Media) 'ನೆಮ್ಮದಿ ಅಪಾರ್ಟ್ಮೆಂಟ್' ಆಗಿ, ಮೂಡಿಬಂದು, ಕೌಟುಂಬಿಕ ಜೀವನ (Family Life), ಸಂಬಂಧಗಳ ಮಹತ್ವದ ಕುರಿತಾಗಿ ಒಳ್ಳೆಯ ಸಂದೇಶವನ್ನು ನೀಡುತ್ತದೆ..

Mukhyamantri Chandru @ 70; ಬಡ ಹುಡುಗ ಚಂದ್ರಶೇಖರ್‌ ಮುಖ್ಯಮಂತ್ರಿ ಚಂದ್ರು ಆದೆ!

Follow Us:
Download App:
  • android
  • ios