GGVV Movie Controversy: ಸಿನಿಮಾದಲ್ಲಿ ‘ಜಾನಪದದ ಹಾಡು ಹೀಗೆ ಬಳಸಬಾರದು’ ಎಂಬಂತಹ ಅಪ್ಪಣೆ ಅಪಾಯಕಾರಿ

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಆಧ್ಯಾತ್ಮದ ಕುರಿತು ತುಂಬಾ ಗೊಂದಲ ಉಂಟಾಗಿದೆ. ಹಿಂದೆ ಯಾರಿಗೂ ಬಾರದ ಸಂಶಯಗಳು, ಆತಂಕಗಳು ಈಗ ಬರತೊಡಗಿವೆ.

Lord Shiva Song in Murder Scene Author Prathibha Nandakumar Flays At Critics hls

ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ‘ಕನ್ನಡಪ್ರಭ’ದಲ್ಲಿ ಆತಂಕ ವ್ಯಕ್ತಪಡಿಸಿ ಬರೆದ ಲೇಖನದಲ್ಲಿ ಸಿನಿಮಾ ನಿರ್ದೇಶಕರ ಮಾರುಕಟ್ಟೆಆಧಾರಿತ ಚಿಂತನೆ, ಅನಿವಾರ್ಯತೆ, ಸಂಬಂಧವಿಲ್ಲದ ಸತರ್ಕವಿಲ್ಲದ ಇತ್ಯಾದಿ ಸಂಶಯಗಳನ್ನು ವ್ಯಕ್ತಪಡಿಸಿ ಕೊನೆಗೆ ಕೊಲೆಗೆ ರೂಪಕವಾಗಿ ದೇವರ ಹಾಡನ್ನು, ದುರ್ಗಾ ಸ್ತುತಿಯನ್ನು ಬಳಸುವುದು ತುಂಬಾ ಹಳೆಯ ತಂತ್ರ. ಹಲವು ಟೀವಿ ಸೀರಿಯಲ್‌ಗಳಲ್ಲಿ ಹೀಗೆ ಮಾಡಿದ್ದಾರೆ ಎಂದು ಕೇಳಿದ್ದೇವೆ. ಇಂತಹ ಚರ್ವಿತಚರ್ವಣ ಸಿದ್ಧಮಾದರಿಗಳನ್ನು ಮೀರುವ ಸೃಜನಶೀಲತೆ ಇವರಿಗೆಲ್ಲ ಒದಗಲಿ ಎಂದು ಹಾರೈಸಿದ್ದಾರೆ. ಅಂದರೆ ಅವರು ವಿರೋಧಿಸುತ್ತಿರುವ ವಿಷಯ ಹೊಸತೇನೂ ಅಲ್ಲ, ಹಳೆಯದು ಎನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಇರಲಿ.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಆಧ್ಯಾತ್ಮದ ಕುರಿತು ತುಂಬಾ ಗೊಂದಲ ಉಂಟಾಗಿದೆ. ಹಿಂದೆ ಯಾರಿಗೂ ಬಾರದ ಸಂಶಯಗಳು, ಆತಂಕಗಳು ಈಗ ಬರತೊಡಗಿವೆ. ಮೂವತ್ತು ವರ್ಷಗಳ ಹಿಂದೆ ನಳಿನಿ ದೇಶಪಾಂಡೆ ಎನ್ನುವ ಹೆಸರಿನಲ್ಲಿ (ಪೂರ್ಣಚಂದ್ರ ತೇಜಸ್ವಿ ಬರೆದದ್ದೆಂಬ ಸಂಶಯವಿರುವ) ಲ್ಯಾಂಬ್ರೆಟಾ ವೆಸ್ಪಾ ಕವನದಲ್ಲಿ ‘ಜಾತಕ ಚಾತಕ ನಾನಾಗಿಲ್ಲ ತುಳಸಿಕಟ್ಟೆಯ ಸುತ್ತೆ ಸುತ್ತುವ ಹೆಡ್ಡ ಜೋಯಿಸಾ ನಿಲ್ಲಿಸು ಪ್ರವರ... ಸುಟ್ಟೇ ಹೋಗಲಿ ಹಿಂದೂ ಧರ್ಮ’ ಎಂದು ಬರೆದಾಗ ಯಾರಿಗೂ ಅದು ಹಿಂದೂ ಧರ್ಮಕ್ಕೆ ಕೇಡು ತರುವ ಅಪಾಯಕಾರಿ ಸಾಲು ಎಂದು ಭಯವಾಗಲಿಲ್ಲ. ಬದಲಿಗೆ ನಮ್ಮ ಧರ್ಮದ ಕರ್ಮಠತನಕ್ಕೆ ಹಿಡಿದ ಕನ್ನಡಿ ಅನ್ನಿಸಿತ್ತು.

GGVV Movie Controvery: ಕೊಲೆಯ ಸಂಭ್ರಮಕ್ಕೆ ಮಾದೇವನ ಸ್ತುತಿ ಅಕ್ಷಮ್ಯ

ಕಟ್ಟರ್‌ ಚಿಂತನೆ ಉಳಿಯುವುದಿಲ್ಲ

ವೈದಿಕ ಚಿಂತನೆ ತುಂಬಾ ನಿಷ್ಠುರಿ. ಮಂತ್ರಗಳನ್ನು ನಿಶ್ಚಿತ ಧಾಟಿಯಲ್ಲಿ ಮಾತ್ರೆಗಳಲ್ಲಿ ಹೆಚ್ಚುಕಡಿಮೆ ಇಲ್ಲದೇ ಉಚ್ಚರಿಸಬೇಕು ಎನ್ನುವ ಕಟ್ಟಳೆಯನ್ನು ಅದು ವಿಧಿಸುತ್ತದೆ. ಸಂಸ್ಕೃತ ಮೃತ ಭಾಷೆ ಅನ್ನಿಸಿಕೊಳ್ಳಲು ಮುಖ್ಯ ಕಾರಣವೇ ಅದರ ರಿಜಿಡ್‌ - ಸ್ಥಾವರ ಸ್ಥಿತಿ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಅನ್ನುವುದು ಜನಪರ ಚಿಂತನೆ. ಜಾನಪದ ಜೀವನಪರ. ಕಾಲಕಾಲಕ್ಕೆ ಜಾನಪದ ನಂಬಿಕೆಗಳನ್ನು ಬದಲಿಸಿಕೊಳ್ಳುವ ಸ್ವಾತಂತ್ರ್ಯ ನೀಡುತ್ತದೆ. ವೈದಿಕ ಸಂಸ್ಕೃತಿಯಲ್ಲಿ ಪತಿವ್ರತೆಯರು ಪತಿಯನ್ನು ಬೈಯುವಂತಿಲ್ಲ. ಆದರೆ ಜಾನಪದದಲ್ಲಿ ಅವುಂಗೆ ಹಾವಾದ್ರೂ ಕಚ್ಚಬಾರ್ದಾ, ಚೇಳಾದ್ರು ಚುಚ್ಚಬಾರ್ದಾ, ಹೊಟ್ಟೆಯ ನೋವು ಬಂದು ಹಟ್ಟಿಯ ಹಿಡಿಯಬಾರ್ದಾ, ನಾಕಾರ ಜ್ವರ ಬಂದು ಸಾಯಬಾರ್ದಾ ಎಂದು ಹೆಣ್ಣುಮಕ್ಕಳು ಧಾರಾಳವಾಗಿ ಶಾಪ ಹಾಕಲು ಸ್ವಾತಂತ್ರ್ಯವಿದೆ.

ಹಿಂದೆ ಇಲ್ಲದ ಸಮಸ್ಯೆ ಈಗೇಕೆ?

ಕನ್ನಡ ಚಿತ್ರಗಳಲ್ಲಿ ಸದಾ ಹಳೆಯ ಸಾಂಪ್ರದಾಯಿಕ ಕೀರ್ತನೆಗಳನ್ನು ಹೊಸ ರೀತಿಗಳಲ್ಲಿ ಬಳಸಿಕೊಂಡಿದ್ದಾರೆ. ಆಯಾ ಸನ್ನಿವೇಶಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡಿದ್ದಾರೆ. ಒಂದು ಕ್ಲಬ್‌ ಹಾಡಿಗೆ ‘ಕಮಲಾಕುಚ ಚೂಚುಕ ಕುಂಕುಮತೋ..’ ಬಳಸಿಕೊಂಡಾಗ ಜನ ನಕ್ಕರೇ ಹೊರತು ಅದರಿಂದ ಅಪಚಾರವಾಯಿತು ಎಂದು ಕಂಗೆಡಲಿಲ್ಲ. ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಚಿತ್ರದ ‘ಮಾದೇವ’ ಹಾಡು ರಾಷ್ಟ್ರಮಟ್ಟದಲ್ಲಿ ವೈರಲ… ಆದಾಗ ಅದು ಅಪಚಾರ ಅನ್ನಿಸಲಿಲ್ಲ. ಅದು ನಾಯಕನನ್ನು ನಾಲ್ಕು ಹುಡುಗರು ಕೊಚ್ಚಿ ಕೊಚ್ಚಿ ತುಂಡರಿಸುವಾಗ ಹಿನ್ನೆಲೆಯಲ್ಲಿ ಬಳಸಿದ ಹಾಡು. ಆ ಹಾಡಿನಿಂದ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಗೆ ಧಕ್ಕೆಯೂ ಉಂಟಾಗಲಿಲ್ಲ. ಅದಿಲ್ಲದೆಯೂ ಇಂದಿನ ಸಮಾಜದಲ್ಲಿ ಕ್ರೌರ್ಯ ಇದೆ.

ಇವೆಲ್ಲಾ ವಾದಗಳು ಒತ್ತಟ್ಟಿಗಿರಲಿ. ಹೀಗೆ ಉದಾಹರಣೆ ಕೊಟ್ಟು ಇಂದಿನ ಕ್ರೌರ್ಯವನ್ನು ಸಮರ್ಥಿಸಿಕೊಳ್ಳುವ ಅಗತ್ಯ ಖಂಡಿತ ಇಲ್ಲ.

ಫ್ಲೆಕ್ಸಿಬಿಲಿಟಿಯೇ ಹಿಂದೂ ಧರ್ಮದ ಸೌಂದರ‍್ಯ

ಈ ಪ್ರತಿಕ್ರಿಯೆಯ ಉದ್ದೇಶವೇನೆಂದರೆ ಹಿಂದೂ ಧರ್ಮದ ತಳಪಾಯವೇ ಆಪದ್ಧರ್ಮ. ಹೀಗೆ ಮಾಡಿ, ಆಗದಿದ್ದರೆ ಹೀಗೆ ಮಾಡಿ ಎಂದು ಪರ್ಯಾಯಗಳನ್ನೂ ಕೊಡುವುದೇ ಹಿಂದೂ ಧರ್ಮದ ಸೌಂದರ್ಯ. ತಿನ್ನಬಾರದ್ದು ತಿಂದಾಗ, ಮಾಡಬಾರದ್ದು ಮಾಡಿದಾಗ ಅದಕ್ಕೆ ಪರಿಹಾರವನ್ನು ಹೇಳಿ ಬದುಕನ್ನು ಸರಳಗೊಳಿಸಿದ್ದಾರೆ. ಅದೇ ಇಷ್ಟುಸಾವಿರ ವರ್ಷಗಳ ಕಾಲ ಧರ್ಮವನ್ನು ಕಾಪಾಡಿಕೊಂಡು ಬಂದಿರುವುದು. ಎಲ್ಲಾ ಧರ್ಮಗಳ ತಿರುಳನ್ನು ತನ್ನೊಳಗೆ ಸಮೀಕರಿಸಿಕೊಂಡಿರುವುದೇ ಅದರ ಹೆಚ್ಚುಗಾರಿಕೆ.

ಹಾಗೆ ಫ್ಲೆಕ್ಸಿಬಲ್ ಅಲ್ಲದ ಧರ್ಮಗಳು ತಾವಾಗಿ ಕೊನೆ ಉಸಿರೆಳೆಯುತ್ತವೆ. ಎಲ್ಲೆಲ್ಲಿ ತಾಲಿಬಾನಿಗಳು ತಮ್ಮ ವಜ್ರಮುಷ್ಟಿಯಲ್ಲಿ ಜನಗಳನ್ನು ಹಿಡಿದು ಅವರ ಉಸಿರು ಬಿಗಿ ಹಿಡಿಯುತ್ತಾರೋ ಅಲ್ಲೆಲ್ಲ ಜನ ದಂಗೆ ಏಳುತ್ತಾರೆ ಮತ್ತು ಅವರನ್ನು ಮುಗಿಸುತ್ತಾರೆ. ಹಿಂದೂ ಧರ್ಮ ಯಾವತ್ತೂ ಅಂತಹ ತೀವ್ರ ಜನವಿರೋಧಿ ನಂಬಿಕೆಗಳನ್ನು ಹೇರುವುದಿಲ್ಲ. ಹಾಗೆ ಹೇರಿದಾಗಲೆಲ್ಲ ದಂಗೆಗಳಾಗಿವೆ ಅನ್ನುವದು ಚರಿತ್ರೆಯಲ್ಲಿ ದಾಖಲಾದ ಸಂಗತಿ. ಶೈವರು-ವೈಷ್ಣವರ ಜಗಳಗಳು ಜಗತ್ಪ್ರಸಿದ್ಧ. ಅಸ್ಪೃಶ್ಯತೆಯ ಆಚರಣೆಯ ಅನಾಹುತಗಳು ರಾಶಿ ರಾಶಿ. ಹೀಗಿರುವಾಗ ಚಲನಚಿತ್ರದಲ್ಲಿ ಜಾನಪದ ಹಾಡನ್ನು ಹಾಗೆ ಬಳಸಬೇಡಿ, ಹೀಗೆ ಬಳಸಿ ಎಂದು ಅಪ್ಪಣೆ ಕೊಡಿಸುವುದು ಶ್ರೇಯಸ್ಸಲ್ಲ.

Garuda Gamana Vrishabha Vahana: ಕೊಲೆಯ ವೇಳೆ ಶ್ಲೋಕಗಳೇಕೆ? ಸಿನಿಮಾಗೆ ವಿರೋಧ

ಪುರಾಣಗಳಲ್ಲಿ ಹಿಂಸೆ ಇಲ್ಲವೇ?

ಮತ್ತೊಂದು ದೃಷ್ಟಿಯಿಂದ ನೋಡುವುದಾದರೆ ನಮ್ಮ ಪುರಾಣಗಳಲ್ಲಿ ಸಾಕಷ್ಟುಹಿಂಸೆಯಿದೆ. ದೇವತೆಗಳು ರಾಕ್ಷಸರನ್ನು ಕೊಲ್ಲುವುದೇ ಪುರಾಣಗಳ ಕೇಂದ್ರ ಬಿಂದು. ಈ ಯುದ್ಧಗಳಲ್ಲಿ ದೇವತೆಗಳು ರಾಕ್ಷಸರನ್ನು ಹೇಗೆ ಹೇಗೆ ಕೊಂದರು ಎನ್ನುವ ವರ್ಣನೆಗಳನ್ನು ನೋಡಿದರೆ ಇವತ್ತಿನ ಆಧುನಿಕ ಕ್ರೈಮ್‌ ನಿಮಾಗಳು ಅವುಗಳ ಅಂಚಿಗೂ ಬರುವುದಿಲ್ಲ, ಅಷ್ಟುಭೀಕರವಾಗಿವೆ. ಹೀಗಿರುವಾಗ ಚಲನಚಿತ್ರದ ಒಂದು ಸನ್ನಿವೇಶದಲ್ಲಿ ಜಾನಪದದ ದೇವರ ಹಾಡು ಹಿನ್ನೆಲೆಯಲ್ಲಿ ಬಳಸಿದರೆ ಅದಕ್ಕೆ ಕಾರಣ ಮತ್ತು ಸಮರ್ಥನೆಗಳನ್ನು ಸ್ವಾಮಿಗಳು ಯಾಕೆ ಕೇಳುತ್ತಿದ್ದಾರೆ? ಹಾಗೆ ನೋಡಿದರೆ ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಉದ್ದಕ್ಕೂ ಸಾಂಪ್ರದಾಯಿಕ ಹಾಡುಗಳನ್ನು ಬಳಸಿದ್ದಾರೆ. ರಾಮ ವಿಷ್ಣು ಶಿವ ಇವರುಗಳ ಬಗ್ಗೆ ಬಳಸಿದ ಹಾಡುಗಳಿಗೆ ತಕರಾರಿಲ್ಲ,

ಮಾದೇವನ ಹಾಡಿಗೆ ಮಾತ್ರ ಯಾಕೆ ತಕರಾರು? ಟೀವಿ ಸೀರಿಯಲ್‌ಗಳಲ್ಲಿ ದುರ್ಗಾ ಸ್ತುತಿಯನ್ನು ಬಳಸುವ ಬಗ್ಗೆ ಕನ್ಸೆಷನ್‌ ತೋರಿಸುವ, (ಅಂದರೆ ಅದು ಹಳೆಯ ತಂತ್ರ, ಚರ್ವಿತ ಚರ್ವಣವಾಗಿರುವ ಸಿದ್ಧ ಮಾದರಿ, ಆದುದರಿಂದ ಅದರ ಬದಲಿಗೆ ಹೊಸ ಸೃಜನಶೀಲತೆಯನ್ನು ಅಪೇಕ್ಷಿಸಿದ್ದಾರೆ. ಆ ದೃಷ್ಟಿಯಿಂದ ನೋಡಿದರೆ ಸೋಜಿಗದ ಸೂಜಿಮಲ್ಲಿಗೆ ಬಳಸಿರುವುದೇ ಹೊಸತಲ್ಲವೇ?!), ‘ಗರುಡ ಗಮನ...’ದಲ್ಲಿ ಸೋಜಿಗದ ಹಾಡನ್ನು ಬಳಸಿರುವ ಬಗ್ಗೆ ಕೇಳಿ ಮಾತ್ರ ಗೊತ್ತಿರುವ ಸ್ವಾಮಿಗಳು ಸಮಾಜಪರ ಕಾಳಜಿ ತೋರಿಸಬೇಕಿದ್ದರೆ ಆ ಚಿತ್ರವನ್ನು ನೋಡಿ ಅದು ಒಟ್ಟಾರೆ ಅಭಿವ್ಯಕ್ತಿಸುತ್ತಿರುವ ಸಮಾಜದ ಕ್ರೂರ ಮುಖವನ್ನು ಕುರಿತು ಚಿಂತಿಸಬಹುದಾಗಿತ್ತು. ಚಲನಚಿತ್ರದ ಮಾರುಕಟ್ಟೆಚಿಂತನೆ ಬಗ್ಗೆ ಯಾಕೆ ಕಳವಳ ವ್ಯಕ್ತಪಡಿಸುತ್ತಿದ್ದಾರೋ ತಿಳಿಯದು.

ಅಶ್ಲೀಲ ಹಾಡು, ದೃಶ್ಯ ಕೆಟ್ಟದ್ದಲ್ಲವೆ?

ನಿಜವಾಗಿ ನೋಡಿದರೆ ಕನ್ನಡ ಚಿತ್ರಗಳಲ್ಲಿ ನಾಯಕಿಯರನ್ನು ಹಿಗ್ಗಾಮುಗ್ಗಾ ಎಳೆದೆಳೆದು ಕೀಳಾಗಿ ಮಾತನಾಡಿಸುವ ಹಾಡುಗಳ ಬಗ್ಗೆ ಈ ಮಟ್ಟದ ಚರ್ಚೆ ಆಗಬೇಕಿತ್ತು. ಸಕಲ ಹೆಣ್ಣುಕುಲವೇ ಛೀ ಥೂ ಎಂದು ಉಗಿದು ತಿರಸ್ಕರಿಸಿದ ಒಂದು ಹಾಡಿನ ಬಗ್ಗೆ ಯಾರೂ ಧ್ವನಿ ಎತ್ತಲಿಲ್ಲ. ಸಮಾಜದ ಸ್ವಾಸ್ಥ್ಯ ಕೆಡುವುದು ಕೇವಲ ಮಾದೇವನ ಹಾಡನ್ನು ಕೊಲೆ ಸಂದರ್ಭಕ್ಕೆ ಹಿನ್ನೆಲೆಯಾಗಿ ಬಳಸಿದರೆ ಮಾತ್ರ ಏನು? ನೇರಾನೇರ ಕನ್ನಡ ಚಿತ್ರಗಳಲ್ಲಿ ತೋರಿಸುತ್ತಿರುವ ಅಸಂಬದ್ಧಗಳನ್ನು ಯಾರಾದರೂ ವಿರೋಧಿಸಿದ್ದಾರಾ?

Garuda Gamana Vrishabha Vahana: ಕಡಲಂಚಿನ ಲಡಾಯಿನ ಕಲಾಪೂರ್ಣ ಕಥಾನಕ!

ಚಂದನ್‌ ಶೆಟ್ಟಿಜಾನಪದ ಹಾಡಿನಲ್ಲಿ ಶರಣೆ ಸಂಕೆಣ್ಣೆಯನ್ನು ಮರ್ಯಾದೆಯಾಗಿ ಮಹಾಸತಿಯಂತೆ ತೋರಿಸಲಿಲ್ಲ ಎನ್ನುವ ಕಾರಣಕ್ಕೆ ಆ ಹಾಡನ್ನು ಹಿಂತೆಗೆಸಿದವರು ಇತರ ಎಲ್ಲ ಚಿತ್ರಗಳಲ್ಲಿ ನಾಯಕಿಯನ್ನು ಮರ್ಯಾದೆಯಾಗಿ ತೋರಿಸುತ್ತಿಲ್ಲ ಎನ್ನುವ ಕಳವಳ ವ್ಯಕ್ತಪಡಿಸಿದ್ದಾರಾ? ಹೀರೋ ಒಬ್ಬ ಒಂದು ಅರೆಬೆತ್ತಲೆ ಹೆಣ್ಣಿನ ಜೊತೆ ನರ್ತಿಸುತ್ತಾ ‘ಬಜಾರು ನಂದಾ ಇವತ್ತು ಬಾ’ ಎಂದು ದುಡ್ಡಿಗೆ ಕರೆದಾಗ ಸಮಾಜದ ಸ್ವಾಸ್ಥ್ಯಕ್ಕೇನಾಯಿತು? ಅದನ್ನು ನೋಡಿ ಕಂಡ ಕಂಡ ‘ನಾಯಕರು’ ತಾವೇನು ಕಮ್ಮಿ ಎನ್ನುವಂತೆ ಅರೆಬೆತ್ತಲೆ ನಾಯಕಿಯ ಜೊತೆ ಸೊಂಟ ಮುಂದಕ್ಕೆ ತಳ್ಳುತ್ತಾ ಅಶ್ಲೀಲವಾಗಿ ಕುಣಿಯುವಾಗ ಅದನ್ನು ಕೆಟ್ಟದು ಅಂದವರು ಯಾರೂ ಇಲ್ಲ. ಹಾಗಿರುವಾಗ ಒಂದು ಜಾನಪದ ಹಾಡಿನ ಬಳಕೆಗೆ ಇಷ್ಟೊಂದು ಚಿಂತೆಯೇ?

ಜಾನಪದಕ್ಕೆ ಮಡಿಯ ಚೌಕಟ್ಟು ಬೇಡ

ವಾಸ್ತವವಾಗಿ ಸೆನ್ಸಾರನ್ನೇ ತೆಗೆದುಹಾಕಬೇಕು ಎನ್ನುತ್ತಿರುವ ಕಾಲದಲ್ಲಿ ಸಮಾಜದ ನೀತಿ ಸೆನ್ಸಾರಿಂಗ್‌/ ಮಾರಲ್ ಪೊಲೀಸಿಂಗ್‌ ಉಂಟುಮಾಡುವ ಪರಿಣಾಮಗಳು ಅಪಾಯಕಾರಿ. ಚಿತ್ರದಲ್ಲಿ ಇದೇ ಇರಬೇಕು, ಇದಿರಬಾರದು ಎಂದು ಕಟ್ಟುಪಾಡು ಹೇರುವುದು ಅಪಾಯಕಾರಿ. ಚಿತ್ರಗಳಲ್ಲಿ ಹಲವು ಹತ್ತು ಕಡೆಗಳಿಂದ ಸ್ಫೂರ್ತಿ ಪಡೆದು ಅದಕ್ಕೊಂದು ಹೊಸ ರೂಪವನ್ನು ಕೊಡುವುದು ತಪ್ಪಲ್ಲ.

ಚಿತ್ರದಲ್ಲಿ ಸೋಜಿಗದ ಸೂಜಿಮಲ್ಲಿಗೆ ಹಾಡು ಬಳಸಿದಾಕ್ಷಣ ಮಾದೇವನ ಮಹಿಮೆ ಕಡಿಮೆಯಾಗುವುದಿಲ್ಲ. ಚಿತ್ರದಲ್ಲಿ ಅದರ ಬದಲಿಗೆ ಬೇರೆ ಹಾಡು ಬಳಸಿದ್ದರೂ ಆ ದೃಶ್ಯದ ತೀವ್ರತೆ ಕಡಿಮೆಯಾಗುತ್ತಿರಲಿಲ್ಲ. ತೊಂದರೆ ಇರುವುದು ಎಲ್ಲದಕ್ಕೂ ಪ್ರತಿಭಟನೆ ತೋರುತ್ತಾ ಅಪ್ಪಣೆ ಕೊಡಿಸುವುದರಲ್ಲಿ. ಸಾವಿರಾರು ವರ್ಷಗಳಿಂದ ಜಾನಪದ ಹಾಡುಗಳು ನೂರಾರು ಮಜಲುಗಳನ್ನು ದಾಟಿಕೊಂಡು ಬಂದಿವೆ. ಅವನ್ನು ನಾವು ಹೊಸ ಅರ್ಥಗಳಲ್ಲಿ ಬಳಸಿ ನವೀಕರಿಸಿದಾಗ ಮಾತ್ರ ಅವು ಜೀವಂತವಾಗಿರುತ್ತವೆ ಮತ್ತು ನಮ್ಮ ನಿತ್ಯಜೀವನದ ಅಂಗವಾಗುತ್ತವೆ. ಇಲ್ಲದಿದ್ದಲ್ಲಿ ಮಡಿ ಮಡಿ ಎಂದು ಅವನ್ನು ಭದ್ರ ಚೌಕಟ್ಟಿನೊಳಗೆ ಬಂಧಿಸಿಡಲು ಹೋದರೆ ಉಸಿರುಗಟ್ಟಿ ಸಾಯುತ್ತವೆ.

- ಪ್ರತಿಭಾ ನಂದಕುಮಾರ್‌, ಲೇಖಕಿ

 

Latest Videos
Follow Us:
Download App:
  • android
  • ios