ಬೆಂಗಳೂರು[ಜೂ. 01] ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಮಹತ್ವದ ರಾಜಕಾರಣದ ಬೆಳವಣಿಗೆಗಳಾಗಿವೆ. ರಾಣಿಬೆನ್ನೂರು ಪಕ್ಷೇತರ ಶಾಸಕ ಆರ್. ಶಂಕರ್ ಮತ್ತು ಮುಳುಬಾಗಿಲು ಪಕ್ಷೇತರ  ಶಾಸಕ ನಾಗೇಶ್ ಅವರಿಗೆ ಸಚಿವ ಸ್ಥಾನ ಬಹುತೇಕ ಪಕ್ಕಾ ಆಗಿದೆ.

ಅತೃಪ್ತ ಶಾಸಕರು, ಪಕ್ಷೇತರ ಶಾಸಕರೊಂದಿಗೆ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದಾರೆ. ರಾಣಿಬೆನ್ನೂರು ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಖುದ್ದು ಕರೆಸಿಕೊಂಡು ಇಬ್ಬರು ನಾಯಕರು ಮಾತನಾಡಿದ್ದಾರೆ.

 ದೆಹಲಿ ಬಿಜೆಪಿಯಿಂದ ಕೃಷ್ಣ ಭೈರೇಗೌಡರ ಬತ್ತಳಿಕೆ ಸೇರಿದ 'ದೋಸ್ತಿ' ಸುದ್ದಿ!

ಈ ವೇಳೆ ಮಂತ್ರಿಗಿರಿ ಮೇಲೆ ಕಣ್ಣಿಟ್ಟಿರುವ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್ ಸಹ ಸಿದ್ದರಾಮಯ್ಯ ಮನೆಗೆ ಆಗಮಿಸಿದ್ದರು. ‘ಬೆಂಗಳೂರಿಗೆ ಬಂದ್ರೆ ಸಿದ್ದರಾಮಯ್ಯ ಮನೆಗೆ ಬಂದೇ ಹೋಗ್ತೀನಿ... ಸಿದ್ದರಾಮಯ್ಯ ಮನೆಗೆ ಕುಮಾರಸ್ವಾಮಿ ಬರ್ತಾರೆ ಅಂತ ಗೊತ್ತಾಯ್ತು.. ಅದಕ್ಕಾಗಿ  ನಾನು ಬಂದಿದ್ದೆ.. ಬಂಜಾರ ಸಮುದಾಯದ ಭವನದ ಬಗ್ಗೆ ಹಣ ಮಂಜೂರು ಆಗ್ಬೇಕಿತ್ತು ಹೀಗಾಗಿ ಸಿಎಂ ಬಳಿ ಸಹಿ ಹಾಕಿಸಿಕೊಳ್ಳಲು ಬಂದಿದ್ದೆ’ ಎಂದರು.

ಸಂಪುಟ ರಚನೆ ಬಗ್ಗೆ ನಂಗೇನೂ ಗೊತ್ತಿಲ್ಲ ಅದ್ರ ಬಗ್ಗೆ ನಾನು ಚರ್ಚಿಸಿಯೂ ಇಲ್ಲ ಎಂದ ಶಾಸಕ ಭೀಮಾ ನಾಯ್ಕ್ ಹೇಳಿ ಹೊರಟರು. ಸಿದ್ದರಾಮಯ್ಯ ಭೇಟಿ ನಂತರ ಕುಮಾರಸ್ವಾಮಿ ಡಿಸಿಎಂ ಪರಮೇಶ್ವರ ಅವರೊಂದಿಗೂ ಮಾತುಕತೆ ನಡೆಸಿದರು. ಇನ್ನೊಬ್ಬ ಪಕ್ಷೇತರ ಶಾಸಕ ಮುಳುಬಾಗಿಲು ನಾಗೇಶ್ ಅವರನ್ನು ಎರಡು ದಿನದ ಹಿಂದೆ ಸಿಎಂ ಮಾತನಾಡಿಸಿದ್ದರು.

ಒಟ್ಟಿನಲ್ಲಿ ಬಿಜೆಪಿಯ ತಂತ್ರಗಾರಿಕೆ ಶುರುವಾಗುವ ಮುನ್ನವೇ ಜೆಡಿಎಸ್ ಮತ್ತು ಕಾಂಗ್ರೆಸ್ ಅದರಲ್ಲೂ ಮುಖ್ಯವಾಗಿ ಸಿಎಂ ಕುಮಾರಸ್ವಾಮಿ ಭದ್ರ ಕೋಟೆ ಕಟ್ಟಿಕೊಂಡು ಸರಕಾರಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಹಠ ತೊಟ್ಟಿದ್ದಾರೆ.