ಕೃಷ್ಣಮೂರ್ತಿಗೆ ನ್ಯಾಯ ಕೊಡಿ, ಇಲ್ಲಾ ಹೋರಾಟ ಎದುರಿಸಿ.. ಅಕಾಡೆಮಿಗೆ ಚಿಂತಕರ ಪತ್ರ

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ನ್ಯಾಯ ಕಲ್ಪಿಸಿ/ ತಡೆಹಿಡಿದಿರುವ ಸವಲತ್ತುಗಳನ್ನು ನೀಡಿ/ ಕಂಬಾರರಿಗೆ ಸಾಹಿತಿಗಳ ಪತ್ರ/ ನ್ಯಾಯ ಸಿಗದಿದ್ದರೆ ಪ್ರತಿಭಟನೆ ಎಚ್ಚರಿಕೆ

Kannada Writers Slam Kendra Sahitya Akademi Demand Justice For Agrahara Krishnamurthy

ಬೆಂಗಳೂರು(ಸೆ. 19)  ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಅಗ್ರಹಾರ ಕೃಷ್ಣಮೂರ್ತಿ ಅವರ ವಿರುದ್ಧ ಅಕಾಡೆಮಿ ದ್ವೇಷಕಾರುತ್ತಿದ್ದು, ನಿವೃತ್ತಿ ಸೌಲಭ್ಯ ಸಿಗದೆ ಪರದಾಡಿದ್ದ ಅಗ್ರಹಾರ ಕೃಷ್ಣಮೂರ್ತಿ ವಿರುದ್ಧ ದ್ವಿಸದಸ್ಯ ಪೀಠಕ್ಕೆ ಅಕಾಡೆಮಿ ಮೇಲ್ಮನವಿ ಸಲ್ಲಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯದ ಸಾಹಿತಿಗಳು, ಚಿಂತಕರು ಪತ್ರಿಕಾ ಪ್ರಕಟಣೆ ಹೊರಡಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಕನ್ನಡದ ಸಾಹಿತಿ, ಚಿಂತಕ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅಗ್ರಹಾರ ಕೃಷ್ಣಮೂರ್ತಿರವರು ಈಗ್ಗೆ ಏಳು ವರ್ಷಗಳ ಹಿಂದೆ ನಿವೃತ್ತಿ ಆಗುವ ಸಂದರ್ಭದಲ್ಲಿ ಅಕಾಡೆಮಿಯು ಅವರ ಮೇಲೆ ಕೆಲ ಆರೋಪಗಳನ್ನು ಹೊರಿಸಿ ನಿವೃತ್ತಿಯ ಸೌಲಭ್ಯಗಳನ್ನು ತಡೆಹಿಡಿದಿತ್ತು.

ಚಿಂತಕರು ಬರೆದ ಪತ್ರದ ಪೂರ್ಣ ವಿವರ?
ಕೃಷ್ಣಮೂರ್ತಿ ಅವರು ಅಕಾಡೆಮಿಯ ಆರೋಪಗಳನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ನ್ಯಾಯಾಂಗ ಹೋರಾಟದಲ್ಲಿ ಉಚ್ಚ ನ್ಯಾಯಾಲಯವು ಕೃಷ್ಣಮೂರ್ತಿಯವರ ಮೇಲಿದ್ದ ಆಪಾದನೆಗಳನ್ನು ತಳ್ಳಿಹಾಕಿತ್ತು. ಇದರ ಅರ್ಥ ಕೃಷ್ಣಮೂರ್ತಿಯವರು ದೋಷಮುಕ್ತರಾಗಿದ್ದರು.

ಹಿಂದಿ ಹೇರಿಕೆ: ಕನ್ನಡ ಹೋರಾಟಕ್ಕೆ ಜಯ ಕಟ್ಟಿಟ್ಟ ಬುತ್ತಿ!

ಆರೋಪಗಳು ಕೇಳಿಬಂದಿದ್ದರಿಂದ ಕೃಷ್ಣಮೂರ್ತಿ ಅವರು ಏಳು ವರ್ಷಗಳ ಕಾಲ ಮಾನಸಿಕವಾಗಿ ಬಹಳ ನೋವು ಅನುಭವಿಸಿದ್ದರು. ಆರೋಗ್ಯವೂ ಕೆಟ್ಟು ಜರ್ಜರಿತರಾದರು. ನಿವೃತ್ತಿಯ ಸೌಲಭ್ಯಗಳು ಬಾರದೆ ಆರ್ಥಿಕವಾಗಿಯೂ ಸಂಕಷ್ಟ ಅನುಭವಿಸಿದರು. ಸಾಹಿತ್ಯ ಅಕಾಡೆಮಿಯ ಉನ್ನತ ಹುದ್ದೆಯಲ್ಲಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರ ಮೇಲಿದ್ದ ಆರೋಪದ ಕಾರಣ ನಿವೃತ್ತಿಯ ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಗಳಿಗೆ ತಮ್ಮ ಸೇವೆ ಮುಂದುವರೆಸಲು ನೇಮಕಗೊಳ್ಳಬಹುದಾದ ಬಹುದೊಡ್ಡ ಅವಕಾಶಗಳಿಂದಲೂ ವಂಚಿತರಾದರು.

ಇಷ್ಟೆಲ್ಲಾ ನೋವುಂಡು ಇದೀಗ ನ್ಯಾಯ ಸಿಕ್ಕಿದ ಸಂಭ್ರಮವೂ ಅವರ ಪಾಲಿಗೆೆ ಇಲ್ಲವಾಗುವ ಸೂಚನೆಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದೆ.  ಉಚ್ಚ ನ್ಯಾಯಾಲಯದ ತೀರ್ಪಿನಂತೆ ಕೇಂದ್ರ ಸಾಹಿತ್ಯ ಅಕಾಡೆಮಿಯು ಅವರ ನಿವೃತ್ತಿ ಸೌಲಭ್ಯಗಳನ್ನು ನೀಡಬೇಕಾಗಿತ್ತು. ಆದರೆ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿರುವುದು ವಿಷಾದನೀಯ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಹಿರಿಯರೂ, ಕನ್ನಡಿಗರೇ ಆದ ಡಾ.ಚಂದ್ರಶೇಖರ ಕಂಬಾರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ. ಇಂತಹ ಮಹನೀಯರು ಸದರಿ ಅಕಾಡೆಮಿಯ ಅಧ್ಯಕ್ಷರಾಗಿದ್ದು ಮೇಲ್ಮನವಿ ಸಲ್ಲಿಸಿರುವುದರಿಂದ ಮತ್ತೊಬ್ಬ ಸಾಧಕರೂ, ಹಿರಿಯರೂ ಆಗಿರುವ ಶ್ರೀಯುತ ಅಗ್ರಹಾರ ಕೃಷ್ಣಮೂರ್ತಿಯವರಿಗೆ ತುಂಬಾ ನೋವು ಹಾಗೂ ಅನಾನುಕೂಲಗಳನ್ನು ಉಂಟುಮಾಡಿದೆ.

ಮಂಗಳೂರಿನಲ್ಲಿ ಜೋಗಿ 'ಎಲ್’ ಕಾದಂಬರಿ ಸಾಹಿತ್ಯ ಸಲ್ಲಾಪ

ಕಂಬಾರರು ಹಾಗೂ ಅವರ ಸದಸ್ಯ ವರ್ಗ ಮೇಲ್ಮನವಿ ಸಲ್ಲಿಸಿರುವ ವಿಷಯದ ಬಗ್ಗೆ ಮಾನವೀಯತೆಯ ಹಿನ್ನೆಲೆಯಲ್ಲಿ ಸತ್ಯಸಂಗತಿಗಳ ಆಧಾರದಲ್ಲಿ ಮೇಲ್ಮನವಿಯನ್ನು ಹಿಂಪಡೆದು ಅಗ್ರಹಾರ ಕೃಷ್ಣಮೂರ್ತಿಯವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಬೇಕೆಂದು ನಾವುಗಳು ಈ ಮೂಲಕ ಕಳಕಳಿಯಿಂದ ವಿನಂತಿಸುತ್ತೇವೆ.

ಇಲ್ಲವಾದಲ್ಲಿ ಕರ್ನಾಟಕ ರಾಜ್ಯದ ಸಾಹಿತಿಗಳು ಮತ್ತು ಚಿಂತಕರು ತಾತ್ವಿಕ ಆಕ್ರೋಶ ಹಾಗೂ ಶಾಂತಿಯುತ ಪ್ರತಿಭಟನೆ ಮಾಡಬೇಕಾಗುತ್ತದೆ. ಶ್ರೀಯುತ ಕಂಬಾರರು ಈ ವಿಷಯವನ್ನು ಮರುಪರಿಶೀಲಿಸಿ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆಂಬ ನಂಬಿಕೆ ಮತ್ತು ಭರವಸೆ ನಮಗಿದೆ. ಈ ಕೆಳಗೆ ಪಟ್ಟಿ ಮಾಡಿರುವ ಎಲ್ಲ ಲೇಖಕರು, ಚಿಂತಕರು, ನಾಟಕಕಾರರು ಹಾಗೂ ಕವಿಗಳ ಸಹಿಗೆ ಅನುಮತಿಯನ್ನು ದೂರವಾಣಿಯ ಮುಖೇನ ಪಡೆಯಲಾಗಿದೆ. 

ಕಂಬಾರರು ಈ ವಿಷಯವನ್ನು ಮರುಪರಿಶೀಲಿಸಿ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆಂಬ ನಂಬಿಕೆ ಮತ್ತು ಭರವಸೆ ನಮಗಿದೆ ಎಂದು ಸಾಹಿತಿಗಳಾದ ಜಿ.ಕೆ ಗೋವಿಂದರಾವ್, ಡಾ. ವಿಜಯಮ್ಮ, ಪ್ರೊ. ಎಚ್ ಎಸ್ ಶಿವಪ್ರಕಾಶ್, ದೇವನೂರು ಮಹಾದೇವ, ಎಸ್ ಜಿ ಸಿದ್ದರಾಮಯ್ಯ, ಕಾಳೇಗೌಡ ನಾಗಾವರ, ಪ್ರೊ. ರಾಜೇಂದ್ರ ಚನ್ನಿ, ಡಾ. ಎಲ್ ಹನುಮಂತಯ್ಯ, ಕುಂ. ವೀರಭದ್ರಪ್ಪ, ಅರವಿಂದ ಮಾಲಗತ್ತಿ, ಸಿ ಬಸವಲಿಂಗಯ್ಯ, ಎಲ್ ಎನ್ ಮುಕುಂದರಾಜ್, ಡಾ. ಎಚ್ ಆರ್ ಸ್ವಾಮಿ, ಕೋಟಿಗಾನಹಳ್ಳಿ ರಾಮಯ್ಯ, ಕೆ ಷರೀಫಾ, ಡಿ ಉಮಾಪತಿ, ಎಂ.ಎನ್ ಆಶಾದೇವಿ, ಆರ್. ಜಿ ನಾಗರಾಜ್, ಸುರೇಶ್ ಆನಗಳ್ಳಿ, ಕವಿತಾ ಲಂಕೇಶ್, ಕೆ ನೀಲಾ, ದು. ಸರಸ್ವತಿ, ಬಸವರಾಜು ಮುಂತಾದವರು ಮನವಿ ಮಾಡಿಕೊಂಡಿದ್ದಾರೆ.


 

Latest Videos
Follow Us:
Download App:
  • android
  • ios