Asianet Suvarna News Asianet Suvarna News

ಹಿಂದಿ ಹೇರಿಕೆ: ಕನ್ನಡ ಹೋರಾಟಕ್ಕೆ ಜಯ ಕಟ್ಟಿಟ್ಟ ಬುತ್ತಿ!

ಕೇಂದ್ರೀಯ ನೇಮಕಾತಿ ಪರೀಕ್ಷೆಗಳು ಬ್ರಹ್ಮವಿದ್ಯೆಯೇನೂ ಅಲ್ಲ. ಸಾಮಾನ್ಯ ಗಣಿತ, ಸಾಮಾನ್ಯ ಮನೋಸಾಮರ್ಥ್ಯ ಹಾಗೂ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಈ ಪರೀಕ್ಷೆಗಳಲ್ಲಿರುತ್ತವೆ. ಭಾರತದ ಅರ್ಧಕ್ಕರ್ಧ ಜನರಿಗೆ ಈ ಪರೀಕ್ಷೆಗಳಲ್ಲಿ ಭಾಷೆಯೇ ತೊಡಕು. ನಂತರ ಭಾಷೆ ಗೊತ್ತಿಲ್ಲದವರಿಂದ ಸೇವೆ ಪಡೆಯುವುದು ಜನರಿಗೆ ಕಷ್ಟ.

Karnataka Against Hindi Imposition Language Identity Will Exist In Every Section
Author
Bengaluru, First Published Sep 19, 2019, 3:12 PM IST

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಸುದೀರ್ಘ ಶ್ರೀಮಂತ ಪರಂಪರೆಯಿದೆ. ಕ್ರಿ.ಶ. ಹತ್ತನೆಯ ಶತಮಾನದಲ್ಲಿಯೇ ಆದಿಕವಿ ಪಂಪ ಹಾಗೂ ಶಕ್ತಿಕವಿ ರನ್ನರಂತಹ ಮಹಾಕವಿಗಳಿಗೆ ಕನ್ನಡ ನಾಡು-ಭಾಷೆ ಜನ್ಮ ನೀಡಿದೆ. ಆಗ ಇಂಗ್ಲಿಷ್‌ ಹುಟ್ಟಿಯೇ ಇರಲಿಲ್ಲ. ಹಿಂದಿಯ ಕಥೆ ಏನಾಗಿತ್ತೋ ಗೊತ್ತಿಲ್ಲ.

ಈಗಲೂ ಇಂಗ್ಲಿಷ್‌ ಭಾಷೆಯನ್ನು ಬರೆಯಲು ರೋಮನ್‌ ಲಿಪಿ ಅವಲಂಬಿಸಬೇಕಾಗಿದೆ. ಹಿಂದಿ ಭಾಷೆಯನ್ನು ಬರೆಯಲು ದೇವನಾಗರಿ ಲಿಪಿಯನ್ನು ಅವಲಂಬಿಸಬೇಕಾಗಿದೆ. ಕನ್ನಡ ಭಾಷೆಗೆ ತನ್ನದೇ ಆದ ಲಿಪಿ ಇದೆ. ಆದರೆ ಸ್ವಾತಂತ್ರ್ಯಾನಂತರ ಭಾರತವನ್ನಾಳುವವರ ವರಸೆಯೇ ಬದಲಾಗಿದೆ. ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಎಲ್ಲೂ ಹೇಳಿಲ್ಲ. ಆದರೆ ಹಾಗೆ ನಂಬಿಸಲಾಗುತ್ತಿದೆ. ಆಡಳಿತದಿಂದ ಹಿಡಿದು ಕೇಂದ್ರ ಸರ್ಕಾರದ ನೇಮಕಾತಿಗಳವರೆಗೆ ಹಿಂದಿ ತನ್ನ ಪ್ರಾಬಲ್ಯ ಮೆರೆಯುತ್ತಿದೆ.

ಹಿಂದಿ ಹೇರುವ ಮಾತಾಡಿಲ್ಲ, ಮಾತೃಭಾಷೆ ಆದ್ಯತೆ ಪ್ರತಿಪಾದಿಸಿದ್ದೇನೆ: ಅಮಿತ್ ಶಾ

ರೈಲ್ವೆಯಲ್ಲಿ ಈಗೀಗ ಕನ್ನಡಿಗರು

2011ಕ್ಕಿಂತ ಮೊದಲು ರೈಲ್ವೆ ನೇಮಕಾತಿ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮಾತ್ರ ನಡೆಯುತ್ತಿದ್ದವು. ಆಗ ರೈಲ್ವೆ ಇಲಾಖೆಯಲ್ಲಿ ಹಿಂದಿ ಭಾಷಿಕರೇ ತುಂಬಿ ತುಳುಕುತ್ತಿದ್ದರು. ಉತ್ತರ ಭಾರತದಿಂದ ವಿಶೇಷ ರೈಲುಗಳಲ್ಲಿ ಬಂದು ಕರ್ನಾಟಕದಲ್ಲಿ ರೈಲ್ವೆ ಪರೀಕ್ಷೆಗಳನ್ನು ಬರೆದು ಅವರೇ ಆಯ್ಕೆಯಾಗುತ್ತಿದ್ದರು. ಆಗ ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳು ರೈಲ್ವೆ ಇಲಾಖೆಯಲ್ಲಿ ಕನ್ನಡಿಗರು ಆಯ್ಕೆಯಾಗುತ್ತಿಲ್ಲ ಎಂಬ ವಿಷಯವಾಗಿ ದೇಶದ ಗಮನ ಸೆಳೆದು ಉಗ್ರ ಹೋರಾಟಕ್ಕಿಳಿದವು. ಈ ಹೋರಾಟಕ್ಕೆ ಸಾಹಿತಿಗಳ ಬೆಂಬಲವೂ ದೊರಕಿತು. ಆಗ ಕೇಂದ್ರ ರೈಲ್ವೆ ಮಂತ್ರಿಯಾಗಿದ್ದವರು ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಾಳದಂತಹ ಪ್ರಾದೇಶಿಕ ಹಿನ್ನೆಲೆಯಿಂದ ಬಂದವರು. ಇವರು ಒಂದು ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡರು.

ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯ ಮಾಡಿರುವ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಹಿಂದಿ ಹಾಗೂ ಇಂಗ್ಲಿಷ್‌ ಬರದಿರುವವರೂ ಸಹ ಆಯ್ಕೆಯಾಗಲು ಸಹಕಾರಿಯಾಯಿತು.

ಹಿಂದಿ ಹೇರಿಕೆ; ತಮಿಳು ತಂಟೆಗೆ ಬಂದ್ರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡ್ತೀವಿ ಎಂದ ಕಮಲ್ ಹಾಸನ್

ಈ ಹೋರಾಟ ಪ್ರಾರಂಭವಾಗಿದ್ದು ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ. ಆದರೆ ಪ್ರಯೋಜನ ಭಾರತದ ಹಿಂದಿಯೇತರ ಎಲ್ಲಾ ರಾಜ್ಯಗಳಿಗೂ ಆಯಿತು. ಭಾರತ ಸರ್ಕಾರದ ಪಿ.ಎಫ್‌. ನೀತಿಯನ್ನು ಕೇವಲ ಒಂದೇ ದಿನದಲ್ಲಿ ಬದಲಾಗುವಂತೆ ಮಾಡಿದ್ದು ಕರ್ನಾಟಕದ ಜನ ಎಂಬುದನ್ನು ನಾವು ಹೆಮ್ಮೆಯಿಂದ ಸ್ಮರಿಸಿಕೊಳ್ಳಬೇಕು.

ಆದರೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ..

ಪ್ರಸ್ತುತ ಭಾರತ ಸರ್ಕಾರದ ಅಧೀನದಲ್ಲಿ ನಡೆಯುವ ಬ್ಯಾಂಕಿಂಗ್‌ ಪರೀಕ್ಷೆಗಳು, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌, ಅಖPಈ, ಸೇನಾ ನೇಮಕಾತಿ ಮೊದಲಾದ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರುತ್ತವೆ. ಇದರ ಪರಿಣಾಮವಾಗಿ ಕರ್ನಾಟಕದ ಬ್ಯಾಂಕ್‌ಗಳಲ್ಲಿ ಅನ್ಯಭಾಷಿಕರೇ ತುಂಬಿ ಹೋಗಿದ್ದಾರೆ.

ಕನ್ನಡಿಗರಿಗೆ ಸೇರಿದ ಕರ್ನಾಟಕದ ಪಾಲಿನ ಹುದ್ದೆಗಳನ್ನು ಉತ್ತರ ಭಾರತೀಯರು ದೋಚುತ್ತಿದ್ದಾರೆ. ವರ್ಷಕ್ಕೆ ಲಕ್ಷಕ್ಕಿಂತ ಹೆಚ್ಚು ಹುದ್ದೆಗಳನ್ನು ಸೃಷ್ಟಿಸುವ ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ಕರ್ನಾಟಕದಿಂದ ಆಯ್ಕೆಯಾಗುವವರು ಮೂರಂಕಿಯನ್ನು ದಾಟಬಹುದಷ್ಟೆ.

ಹಿಂದಿ ಹೇರಿಕೆ ಮಾತ್ರವಲ್ಲ ತ್ರಿಭಾಷಾ ಸೂತ್ರವೂ ತೊಲಗಲಿ

ಬ್ಯಾಂಕಿಂಗ್‌ ಕ್ಷೇತ್ರ ಭಾರತದಲ್ಲಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಎಲ್ಲಾ ಭಾರತೀಯರನ್ನು ಬ್ಯಾಂಕಿಂಗ್‌ ಕ್ಷೇತ್ರದೊಳಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಅದು ಪ್ರಶಂಸನೀಯ. ಅದಕ್ಕೆ ಕೇಂದ್ರ ಸರ್ಕಾರದ ಜನಧನ್‌ ಇನ್ನಷ್ಟುವೇಗ ಕೊಟ್ಟಿದೆ. ಸರ್ಕಾರದ ಬಹುತೇಕ ಯೋಜನೆಗಳನ್ನು ಬ್ಯಾಂಕ್‌ಗಳ ಮೂಲಕವೇ ಅನುಷ್ಠಾನಗೊಳಿಸುವ ಚಿಂತನೆಯೂ ಇದೆ. ಅದು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಅತ್ಯಂತ ಹೆಚ್ಚು ಉದ್ಯೋಗಾವಕಾಶಗಳು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತಿವೆ.

ಆ ಹುದ್ದೆಗಳು ಬರೀ ಇಂಗ್ಲಿಷ್‌ ಮತ್ತು ಹಿಂದಿ ಗೊತ್ತಿದ್ದವರ ಪಾಲಾಗುತ್ತಿರುವುದು ಅನ್ಯಾಯದ ಪರಮಾವಧಿ. ಪ್ರಸ್ತುತ ಬ್ಯಾಂಕ್‌ಗಳಲ್ಲಿ ಸಂವಹನದ ಕೊರತೆ ಕಾಡುತ್ತಿದೆ. ಹೆಚ್ಚಿನ ಬ್ಯಾಂಕ್‌ ಸಿಬ್ಬಂದಿಗೆ ಇಲ್ಲಿಯ ಸ್ಥಳೀಯ ಭಾಷೆ ಕನ್ನಡ ಬರುವುದಿಲ್ಲ. ಇಲ್ಲಿನ ಜನರಿಗೆ ಹಿಂದಿ ಬರುವುದಿಲ್ಲ. ಹೀಗಾಗಿ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಬ್ಯಾಂಕ್‌ಗಳು ಜನಸ್ನೇಹಿಯಾಗಿಲ್ಲ. ಹೀಗೆ ಆಡಳಿತಾತ್ಮಕವಾಗಿಯೂ ಬ್ಯಾಂಕ್‌ಗಳು ಜನಮಾನಸದೆಡೆಗೆ ದಿಟ್ಟಹೆಜ್ಜೆಗಳನ್ನಿಡಲು ಸಾಧ್ಯವಾಗಿತ್ತಿಲ್ಲ.

ಹಿಂದಿಯಲ್ಲೇ ಏಕೆ ಪರೀಕ್ಷೆ?

ಅಂದಹಾಗೆ ಬ್ಯಾಂಕಿಂಗ್‌ ಪರೀಕ್ಷೆಗಳೂ ಸೇರಿದಂತೆ ಇತರ ಕೇಂದ್ರೀಯ ನೇಮಕಾತಿ ಪರೀಕ್ಷೆಗಳು ಬ್ರಹ್ಮವಿದ್ಯೆಯೇನೂ ಅಲ್ಲ. ಸಾಮಾನ್ಯ ಗಣಿತ, ಸಾಮಾನ್ಯ ಮನೋಸಾಮರ್ಥ್ಯ ಹಾಗೂ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಈ ಪರೀಕ್ಷೆಗಳಲ್ಲಿರುತ್ತವೆ. ಈ ವಿಷಯಗಳಿಗೆ ಸಂಬಂಧಿಸಿದ ಹಾಗೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಪರೀಕ್ಷೆ ಕೊಡುತ್ತಿದ್ದಾರೆ. ಇದನ್ನೇ ನಾವು ಕನ್ನಡದಲ್ಲಿ ಕೇಳುತ್ತಿರುವುದು.

ಶಿಕ್ಷಕರ ನೇಮಕಾತಿಯೂ ಸೇರಿದಂತೆ ಇನ್ನಿತರೆ ನೇಮಕಾತಿ ಪರಿಕ್ಷೆಗಳಲ್ಲಿ ಕನ್ನಡಿಗರು ಮೇಲಿನ ವಿಷಯಗಳ ಪ್ರಶ್ನೆಗಳಿಗೆ ಕನ್ನಡ ಭಾಷೆಯಲ್ಲಿಯೇ ಮುಖಾಮುಖಿಯಾಗಿದ್ದಾರೆ. ಈ ವಿಷಯವಾಗಿ ಕನ್ನಡದಲ್ಲಿ ವಿಫುಲವಾದ ಕೃತಿಗಳು ಲಭ್ಯ ಇವೆ. ಈ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲೇ ನಡೆಸಬೇಕೆಂಬ ಯಾವ ಕಾನೂನೂ ಇಲ್ಲ. ಹಾಗೆ ನೋಡಿದರೆ ಕನ್ನಡದಲ್ಲಿ ಪರೀಕ್ಷೆಗಳನ್ನು ಕೊಡದಿರುವುದು ಸಹಜ ನ್ಯಾಯಕ್ಕೆ ವಿರುದ್ಧವಾದುದಾಗಿದೆ.

ಕನ್ನಡಿಗರ ಹಕ್ಕುಮಂಡನೆ ಏನು?

ನಮ್ಮ ಹಕ್ಕು ಮಂಡನೆ ಸರಳವಾಗಿದೆ. ಕೇಂದ್ರ ಸರ್ಕಾರ ಯಾವ ಯಾವ ನೇಮಕಾತಿ ಪರೀಕ್ಷೆಗಳನ್ನು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಕೊಡುತ್ತಿದೆಯೋ ಆ ಎಲ್ಲಾ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಕೊಡಬೇಕು. ಸಂವಿಧಾನದಲ್ಲಿ ಮಾನ್ಯ ಮಾಡಿರುವ ಎಲ್ಲಾ ಭಾಷೆಗಳನ್ನು ಪ್ರಭುತ್ವ ಗೌರವಿಸಬೇಕು. ಹಿಂದಿ ಮತ್ತು ಇಂಗ್ಲಿಷ್‌ ಬರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಕನ್ನಡ ಮಾಧ್ಯಮದಲ್ಲಿ ಓದಿ ಜ್ಞಾನ ಗಳಿಸಿದವರು ಈ ನೇಮಕಾತಿಗಳಿಂದ ವಂಚಿತರಾಗುತ್ತಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಓದಿ ಪದವಿ ಗಳಿಸಿದ ಮಕ್ಕಳಿಗೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಬೇಕು. ಇದು ಸರ್ಕಾರವೂ ಸೇರಿದಂತೆ ಸಮಾಜದ ಜವಾಬ್ದಾರಿ. ಕನ್ನಡ ಮಾಧ್ಯಮವನ್ನು ಪ್ರಬಲವಾಗಿ ಪ್ರತಿಪಾದಿಸುವವರು ಇದರ ಹೊಣೆಯನ್ನು ಹೊರಲೇಬೇಕು. ಹಿಂದಿ ಮತ್ತು ಇಂಗ್ಲಿಷ್‌ ಭಾಷೆ ಗೊತ್ತಿರುವ ಕನಿಷ್ಠ ಜ್ಞಾನ ಇರುವ ವ್ಯಕ್ತಿಗಳು ನಮ್ಮ ಕಣ್ಣೆದುರಲ್ಲೇ ಯಾವುದೋ ಹುದ್ದೆಗೆ ಆಯ್ಕೆಯಾಗಿ ಬಿಡುತ್ತಾರೆ. ಅದರೆ ಕನ್ನಡ ಮಾಧ್ಯಮದಲ್ಲಿಯೇ ಓದಿ ಅವರಿಗೂ ಮಿಗಿಲಾದ ಜ್ಞಾನ ಸಂಪಾದಿಸಿದ ಕನ್ನಡಿಗರು ಅಂತಹ ಹುದ್ದೆಗಳಿಂದ ದೂರ ಉಳಿಯುತ್ತಾರೆ. ಅವರ ಬದುಕನ್ನು ಕಟ್ಟಿಕೊಡುವವರು ಯಾರು? ಕೇಂದ್ರೀಯ ನೇಮಕಾತಿಗಳನ್ನು ಸ್ಥಳೀಯ ಭಾಷೆಗಳಲ್ಲಿ ಕೇಳುವುದು ಸಂವಿಧಾನದ ಮೂಲಭೂತ ಹಕ್ಕಿನ ಪ್ರಬಲ ಪ್ರತಿಪಾದನೆಯೇ ಆಗಿದೆ.

ಈ ಹೋರಾಟದಲ್ಲೂ ಗೆಲ್ಲುತ್ತೇವೆ...

ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರತಿ ವರ್ಷ ಲಕ್ಷಗಟ್ಟಲೆ ಉದ್ಯೋಗಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸೃಷ್ಟಿಯಾಗುತ್ತವೆ. ಇವು ಯಾವುವೂ ಸಹ ಕನ್ನಡಿಗರ ಸ್ಪರ್ಧೆಯ ವ್ಯಾಪ್ತಿಗೆ ಬರುತ್ತಿಲ್ಲ. ಅನ್ನದ ಭಾಷೆಯಾಗಿ (ಬದುಕಿನ ಭಾಷೆ) ಕನ್ನಡ ಹೆಚ್ಚು ಹೆಚ್ಚು ಚರ್ಚೆಯಾಗಬೇಕಿದೆ. ನಾವು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಕೇಳುತ್ತಿದ್ದೇವೆ. ಅದು ಸರೋಜಿನಿ ಮಹಿಷಿ ವರದಿಯಲ್ಲೂ ಉಲ್ಲೇಖವಾಗಿದೆ.

ಈ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳೂ ಆಗಿವೆ. ಅದರೆ ಕೇಂದ್ರ ಸರ್ಕಾರದ ವಲಯದಲ್ಲಿಯೇ ಕನ್ನಡಿಗರಿಗೆ ಆದ್ಯತೆ ಇಲ್ಲದಿರುವುದು ದುರಂತ. ಕೇಂದ್ರ ವಲಯದಲ್ಲಿ ಆಯ್ಕೆಯಾಗುವ ಕನ್ನಡಿಗರು ಅತ್ಯಂತ ನಗಣ್ಯ ಸಂಖ್ಯೆಯಲ್ಲಿದ್ದಾರೆ. ಅದು ಚರ್ಚೆಯಾಗದಿರುವುದು ಇನ್ನೂ ದುರಂತ. ಇತ್ತೀಚೆಗೆ ನೀಟ್‌ ಪರೀಕ್ಷೆ ಕನ್ನಡದಲ್ಲಿ ನಡೆಯಬೇಕೆಂದು ದೊಡ್ಡ ಚರ್ಚೆಯಾಯಿತು. ಪರಿಣಾಮ ಯಶಸ್ವಿಯೂ ಆದೆವು. ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎನ್ನುವುದು ಇದರಿಂದಲೇ ತಿಳಿಯುತ್ತದೆ.

ದೇಶಾದ್ಯಂತ ಹಿಂದಿ ಭಾಷೆಯೊಂದೇ ಇಲ್ಲ. ಕನ್ನಡವೂ ಸೇರಿದಂತೆ ಇತರ ದ್ರಾವಿಡ ಭಾಷೆಗಳು ಸಹ ಭಾರತದ ನಕ್ಷೆಯಲ್ಲಿವೆ. ಕನ್ನಡ, ತಮಿಳು ಭಾಷೆಗಳು ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದು ಅಗ್ರಸ್ಥಾನದಲ್ಲಿವೆ. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಪ್ರಾದೇಶಿಕ ಬಲವರ್ಧನೆಯ ಬಗ್ಗೆ ಪದೇ ಪದೇ ಮಾತನಾಡುತ್ತಿರುತ್ತಾರೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ರಾಜಕೀಯವಾಗಿ ಮೇಲೆ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ರಾಜ್ಯದಿಂದ ಆಯ್ಕೆಯಾದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು.

ಈ ವಿಷಯದಲ್ಲಿ ಹೋರಾಡಿ ಜಯಗಳಿಸಿದ್ದೇ ಆದರೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಲಕ್ಷಾಂತರ ಉದ್ಯೋಗಾಕಾಂಕ್ಷಿ ಕನ್ನಡಿಗರಿಗೆ ಭಾಗ್ಯದ ಬಾಗಿಲೇ ತೆರದಂತಾಗುತ್ತದೆ. ಈ ಬಗ್ಗೆ ಶ್ರೀಸಾಮಾನ್ಯರು, ಸಾಹಿತಿಗಳು, ವಿಚಾರವಾದಿಗಳು, ಕನ್ನಡಪರ ಸಂಘಟನೆಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜಕೀಯ ನೇತಾರರು ಧ್ವನಿ ಎತ್ತಿ ಕನ್ನಡವನ್ನು ಬದುಕುವ ಭಾಷೆಯನ್ನಾಗಿ ಮಾಡಬೇಕಾಗಿದೆ. ಇಲ್ಲವಾದರೆ ದ್ರಾವಿಡ ಭಾಷೆಗಳೂ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳು ಅವನತಿಯ ಹಾದಿ ಹಿಡಿಯುತ್ತವೆ.

- ಗಿರೀಶ್ ಎಂ ಬಿ ಚಿತ್ರದುರ್ಗ 

Follow Us:
Download App:
  • android
  • ios