ಕಮಲ್ ಹಾಸನ್ ಅವರ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆ ಬಗ್ಗೆ ಭಾಷಾಶಾಸ್ತ್ರ, ಐತಿಹಾಸಿಕ ಪುರಾವೆಗಳು ಮತ್ತು ವಿದ್ವಾಂಸರ ಅಭಿಪ್ರಾಯಗಳನ್ನು ಬಳಸಿಕೊಂಡು, ಕನ್ನಡ ಮತ್ತು ತಮಿಳು ಎರಡೂ ಸ್ವತಂತ್ರ ದ್ರಾವಿಡ ಭಾಷೆಗಳಾಗಿದ್ದು, ಸಾಮಾನ್ಯ ಪೂರ್ವಜ ಭಾಷೆಯನ್ನು ಹಂಚಿಕೊಂಡಿವೆ ಎಂದು ವಾದಿಸುತ್ತದೆ.

ಮಿಳಿನಿಂದ ಕನ್ನಡ ಹುಟ್ಟಿದ್ದು ಎನ್ನುವ ಕಮಲ್ ಹಾಸನ್ ಅವರ ಹೇಳಿಕೆಯನ್ನ ತಿಳುವಳಿಕೆಯ ಕೊರತೆ, ಅಜ್ಞಾನದ ಪರಾಮವಧಿ ಎಂದು ಭಾವಿಸಬೇಕಿಲ್ಲ. ಕಮಲ್ ಹಾಸನ್ ಉದ್ದೇಶಪೂರ್ವಕವಾಗಿಯೇ ಈ ಮಾತು ಹೇಳಿದ್ದಾರೆ. ಯಾಕಂದ್ರೆ ಭಾಷೆಯ ವಿಷಯದಲ್ಲಿ ತಮಿಳರ ಅಭಿಮಾನ ಎಷ್ಟಿದೆಯೋ ಅದರ ನೂರು ಪಟ್ಟು ದುರಭಿಮಾನ ಇದೆ. ಇದೇ ಕಾರಣಕ್ಕೆ ತಮಿಳೇ ಮೊದಲು, ತಮಿಳಿನ ನಂತರವೇ ಎಲ್ಲವೂ ಎನ್ನೋ ಶ್ರೇಷ್ಠತೆಯ ವ್ಯಸನ ಅವರಿಗಿದೆ. ಅದರ ಮುಂದುವರಿದ ಭಾಗವೇ ಕಮಲ್ ಹಾಸನ್ ಅವರ ಈ ಹಸೀ ಸುಳ್ಳಿನ ಹೇಳಿಕೆ. ಒಂದು ಸುಳ್ಳನ್ನ ನೂರು ಬಾರಿ ಹೇಳಿದ್ರೆ ಸತ್ಯ ಆಗುತ್ತೆ ಅನ್ನೋ ಗೋಬೆಲ್ಸ್ ಥಿಯರಿಯನ್ನ ದುರಭಿಮಾನಿ ತಮಿಳರು ಅಕ್ಷರಶಃ ಪಾಲಿಸುತ್ತಿದ್ದಾರೆ. ರಾಜಕಾರಣದ ಲಾಭಕ್ಕಾಗಿ ಹುಟ್ಟಿಕೊಂಡ ತಮಿಳೇ ಶ್ರೇಷ್ಠ, ಹಿಂದೂ ಸಂಸ್ಕೃತಿಯೇ ಬೇರೆ ದ್ರಾವಿಡ ಸಂಸ್ಕೃತಿಯೇ ಬೇರೆ, ನಮ್ಮದು ಭರತ ಖಂಡವಲ್ಲ, ಕುಮರಿ ಖಂಡ ಎಂಬ ವಾದಗಳ ಮುಂದುವರಿದ ಭಾಗ ಇದು.

ಒಂದು ಭಾಷೆ ಹಳೆಯದ್ದು ಅಂತ ಪರಿಗಣಿಸೋದಕ್ಕೆ ಏನೆಲ್ಲಾ ಆಧಾರ ಬೇಕು..? ಗ್ರಂಥ ಅಥವಾ ಕಾವ್ಯ ರಚನೆಗಳು, ಶಿಲಾ ಶಾಸನಗಳು ಮತ್ತು ಭಾಷೆಯ ಬಳಕೆ. ಭಾಷೆಯ ವರ್ಗೀಕರಣದಲ್ಲಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಅನ್ನ ದ್ರಾವಿಡ ಭಾಷೆಗಳು. ಇಂಥಾ 80 ಭಾಷೆಗಳು ದ್ರಾವಿಡ ಭಾಷಾ ವರ್ಗೀಕರಣದ ಅಡಿಯಲ್ಲಿ ಬರುತ್ವೆ. ಈ ನೆಲದ ಮೂಲ ಪ್ರಾಚೀನ ಭಾಷೆಗಳನ್ನ ದ್ರಾವಿಡ ಭಾಷೆಗಳ ಕುಟುಂಬ ಎಂದು ಕರೆಯಲಾಗುತ್ತದೆ. ಈ ಭಾಷೆಗಳು ಕೇವಲ ದಕ್ಷಿಣ ಭಾರತದಲ್ಲಷ್ಟೇ ಇಲ್ಲ.. ಉತ್ತರ ಭಾರತ, ಇವತ್ತಿನ ಪಾಕಿಸ್ತಾನದಲ್ಲಿರೋ ಕೆಲ ಬುಡಕಟ್ಟು ಭಾಷೆಗಳು ಕೂಡ ದ್ರಾವಿಡ ಭಾಷೆಗಳ ವ್ಯಾಪ್ತಿಯಲ್ಲೇ ಬರುತ್ತವೆ. ಗ್ರಂಥ, ಬರವಣಿಗೆ, ಶಾಸನಗಳ ಆಧಾರದ ಮೇಲೆ ಭಾಷೆಯ ಕಾಲಮಾನ ಅಂದಾಜಿಸುವಾಗ ಲಿಪಿಯ ಬಳಕೆ ಆಗಿದ್ದು ಯಾವಾಗಿನಿಂದ ಎಂಬುದನ್ನ ಪರಿಗಣಿಸಲಾಗುತ್ತೆ. ಬ್ರಾಹ್ಮಿ ಲಿಪಿಯೇ ಕನ್ನಡ ಮತ್ತು ತಮಿಳು ಭಾಷೆಗಳ ಮೂಲ ಲಿಪಿ. ಕ್ರಿಸ್ತಪೂರ್ವ 6-7ನೇ ಶತಮಾನದಿಂದ ಭಾರತದಲ್ಲಿ ಬರವಣಿಗೆಯ ವ್ಯವಸ್ಥೆಯಿದ್ದದ್ದು ಬ್ರಾಹ್ಮಿ ಲಿಪಿಯಲ್ಲೇ. ಭಾರತದ ಪ್ರಾಚೀನ ಭಾಷೆಗಳಾದ ಪ್ರಾಕೃತ, ಪಾಳಿ, ದೇವನಾಗಿರಿ ಭಾಷೆಗಳನ್ನೂ ಬ್ರಾಹ್ಮಿ ಲಿಪಿಯಲ್ಲೇ ಬರೆಯಲಾಗ್ತಿತ್ತು. ಇವತ್ತಿಗೂ ಇಂಗ್ಲಿಷ್ ಸೇರಿ ಹಲವು ಯೂರೋಪಿಯನ್ ಭಾಷೆಗಳಿಗೆ ಸ್ವಂತ ಲಿಪಿಯಿಲ್ಲ. ಲ್ಯಾಟಿನ್ ಅಥವಾ ರೋಮನ್ ಲಿಪಿಗಳನ್ನ ಬಳಸಲಾಗುತ್ತೆ. ಅಷ್ಟೇ ಯಾಕೆ, ನಮ್ಮದೇ ದೇಶದ ಹಿಂದಿ ಭಾಷೆಗೆ ಸ್ವಂತವಾದ ಲಿಪಿಯಿಲ್ಲ, ದೇವನಾಗಿರಿ ಲಿಪಿಯಲ್ಲಿ ಹಿಂದಿಯನ್ನ ಬರೆಯಲಾಗುತ್ತೆ.

ಮೌರ್ಯರ ಕಾಲದಲ್ಲಿ ಬ್ರಾಹ್ಮಿ ಲಿಪಿಯ ಬಳಕೆ ಹೆಚ್ಚು ಪ್ರಮಾಣದಲ್ಲಿ ಚಾಲ್ತಿಗೆ ಬಂತು. ಅಂದ್ರೆ ಕ್ರಿಸ್ತಪೂರ್ವ ಮೂರನೇ ಶತಮಾನದ ನಂತರ. ಮೌರ್ಯ ಸಾಮ್ರಾಜ್ಯದ ರಾಜ ಅಶೋಕ ತನ್ನ ಸಾಮ್ರಾಜ್ಯ, ಆಡಳಿತ ಮತ್ತು ಬೌದ್ಧ ಧರ್ಮದ ಬಗ್ಗೆ ದೇಶಾದ್ಯಂತ ಶಾಸನಗಳನ್ನ ಬರೆಸಲು ಗಾಂಧಾರದಿಂದ ಲಿಪಿಕಾರರನ್ನ ಕರೆಸಿದ್ದ. ಆ ಲಿಪಿಕಾರರನ್ನ ಚಪದಾ ಎಂದು ಕರೆಯಲಾಗ್ತಿತ್ತು. 2300 ವರ್ಷಗಳ ಹಿಂದೆ ಕಲ್ಲುಗಳ ಮೇಲೆ ಕೆತ್ತನೆ ಮೂಲಕ ಶಾಸನಗಳನ್ನ ಬರೆಸಲಾಯ್ತು. ಕನ್ನಡ, ತಮಿಳು ಸೇರಿದಂತೆ ಈ ದೇಶದ ಪ್ರಾಚೀನ ಭಾಷೆಗಳ ಲಿಪಿಗೆ ಬ್ರಾಹ್ಮಿ ಲಿಪಿಯೇ ಆಧಾರ. ಬ್ರಾಹ್ಮಿ ಲಿಪಿ ಕಾಲಾಂತರದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ರೂಪಾಂತರಗೊಂಡು ಪ್ರತ್ಯೇಕ ಲಿಪಿಗಳಾಗಿ ಬೆಳವಣಿಗೆ ಕಂಡಿವೆ. ಬ್ರಾಹ್ಮಿ ಲಿಪಿಯ ಮೂಲಕವೇ ಕನ್ನಡದ ಕದಂಬ ಲಿಪಿ ಹುಟ್ಟಿದ್ದು. ಕದಂಬರು ಬಳಸುತ್ತಿದ್ದ ಕನ್ನಡ ಲಿಪಿಯನ್ನ ಕದಂಬ ಲಿಪಿ ಎನ್ನಲಾಗುತ್ತೆ, ಇದೇ ಲಿಪಿಯನ್ನ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ತೆಲುಗಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಬ್ರಾಹ್ಮಿ ಲಿಪಿಯಿಂದ ಹುಟ್ಟುಕೊಂಡ ತಮಿಳು ಲಿಪಿಯನ್ನ ‘ವಟ್ಟೆಲುಟ್ಟು’ ಎಂದು ಕರೆಯಲಾಗುತ್ತದೆ. ಈ ‘ವಟ್ಟೆಲುಟ್ಟು’ ತಮಿಳು ಲಿಪಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಮಲೆಯಾಳಂನಲ್ಲಿ ಅಳವಡಿಸಿಕೊಳ್ಳಲಾಗಿದೆ. ಲಿಪಿಯ ಮೂಲ, ಆಧಾರ, ಬೆಳವಣಿಗೆಯನ್ನ ನೋಡಿದ್ರೆ ತಮಿಳಿನಿಂದ ಕನ್ನಡ ಹುಟ್ಟಿತು ಅನ್ನುವ ಮಾತಿಗೆ ಯಾವ ಆಧಾರವೂ ಇಲ್ಲ ಎನ್ನುವುದು ಸ್ಪಷ್ಟವಾಗುತ್ತೆ.

ಶಾಸನಗಳು, ಹಸ್ತಪ್ರತಿಗಳ ಕಾಲಮಾನದ ಆಧಾರದ ಮೇಲಷ್ಟೇ ಯಾವುದೇ ಭಾಷೆಯ ಪ್ರಾಚೀನತೆ ನಿರ್ಧಾರವಾಗಲ್ಲ. ಭಾಷೆಯ ಮೇಲಿನ ನಿರಂತರ ಅಧ್ಯಯನ, ಸಂಶೋಧನೆಯಿಂದ ಅದು ನಿರ್ಧಾರವಾಗುತ್ತೆ. ಕನ್ನಡ-ತಮಿಳು ಎರಡೂ ದ್ರಾವಿಡ ಭಾಷೆಗಳು, ಸೋದರ ಭಾಷೆಗಳು. ಎರಡೂ ಭಾಷೆಗಳ ಮೂಲ ಭಾಷೆ ಒಂದೇ. ಕನ್ನಡ ಮತ್ತು ತಮಿಳಿನ ಮೂಲ ಭಾಷೆಯನ್ನ Tamil-Kannada proto-language ಎಂದು ಕರೆಯಲಾಗುತ್ತೆ. ಅಂದ್ರೆ ಯಾವುದೋ ಒಂದು ಭಾಷೆ ಕನ್ನಡ ಮತ್ತು ತಮಿಳಿನ ಮೂಲ ಭಾಷೆಯಾಗಿತ್ತು. ಅದರ ಅವಸಾನದ ನಂತರ ಕನ್ನಡ ಮತ್ತು ತಮಿಳು ಕವಲೊಡೆದು ಬೇರೆ ಬೇರೆ ಭಾಷೆಗಳಾದವು ಎನ್ನುತ್ತವೆ ಹಲವು ಅಧ್ಯಯನ. ಕ್ರಿಸ್ತಪೂರ್ವ 1500-300ರ ಅವಧಿಯಲ್ಲಿ ಮೂಲ ಭಾಷೆಯಿಂದ ಕನ್ನಡ-ತಮಿಳು ಬೇರೆ ಬೇರೆಯಾಗಿವೆ ಎಂದು ಅಂದಾಜಿಸಲಾಗಿದೆ. ಭಾಷೆಗಳ ಮೇಲೆ ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಸಂಶೋಧನೆ ಮಾಡಿದ ಮಹಾನ್ ಭಾಷಾ ತಜ್ಞ, ವಿದ್ವಾಂಸ ಐರಾವತಂ ಮಹದೇವನ್ ಕನ್ನಡ ಮತ್ತು ತಮಿಳು ಭಾಷೆಗಳ ಮಧ್ಯೆ ಸಂಬಂಧದ ಬಗ್ಗೆ ಬರೆದಿದ್ದಾರೆ. ತಮಿಳುನಾಡಿನವರೇ ಆದ ಐರಾವತಂ ಮಹದೇವನ್ ಪ್ರಕಾರ ತಮಿಳಿಗಿಂತ ಕನ್ನಡವೇ ಹಳೆಯ ಭಾಷೆ. ಐರಾವತಂ ಮಹದೇವನ್ ಪ್ರಕಾರ ಕ್ರಿಸ್ತಪೂರ್ವ 3ನೇ ಶತಮಾನಕ್ಕೂ ಮುನ್ನವೇ ಕನ್ನಡ ವ್ಯಾಪಕವಾಗಿ ಬಳಕೆಯಲ್ಲಿತ್ತು. ಮಹಾದೇವನ್ ಅವರು ಬರೆದಿರೋ ಅಧ್ಯಯನ ಗ್ರಂಥ ‘The Indus script- Texts, concordance and tables’ ನಲ್ಲಿ ಪೂರ್ಣ ಪ್ರಮಾಣದ ಭಾಷೆಯಾಗಿ ಕನ್ನಡ ಬಳಕೆಯಲ್ಲಿತ್ತು ಎಂಬುದಕ್ಕೆ ಸಾಕ್ಷಿಗಳಿವೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಪ್ರಾಕೃತ ಮತ್ತು ತಮಿಳಿನ ಶಾಸನಗಳಲ್ಲಿ ಕನ್ನಡದ ಪದಗಳು ಬಳಕೆಯಲ್ಲಿವೆ. ತಮಿಳಿಗಿಂತಲೂ ಮೊದಲು ಕನ್ನಡವನ್ನು ದೊಡ್ಡ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯ ಜನ ಮಾತನಾಡುತ್ತಿದ್ದರು ಎಂದು ಬರೆದಿದ್ದಾರೆ.

ಕನ್ನಡ v/s ತಮಿಳು ಅನ್ನೋ ಇವತ್ತಿನ ಮನಸ್ಥಿತಿ ತೆಗೆದು ನೋಡಿದರೆ ನಾ ಮೊದಲಾ..? ನೀ ಮೊದಲಾ..? ಅನ್ನೋ ಜಿದ್ದಾಜಿದ್ದಿಗೆ ಅವಕಾಶವೇ ಇರೋದಿಲ್ಲ. ಭಾಷೆಗಳ ಮೂಲ, ಪ್ರಾಚೀನತೆ ವಿಷಯದಲ್ಲಿ ಎಷ್ಟೇ ಅಧ್ಯಯನ, ಐತಿಹಾಸಿಕ ದಾಖಲೆ ಏನೇ ಪರಿಗಣಿಸಿದರೂ ಕಾಲಮಾನವನ್ನ ಕೇವಲ ಅಂದಾಜಿಸಲಾಗುತ್ತದೆ ಅಷ್ಟೇ. ಇದಮಿತ್ಥಂ ಎಂದು ಹೇಳಲು ಸಾಧ್ಯವಿಲ್ಲ...