ಬೆಂಗಳೂರು (ಏ.14): ಹೊಸತನ್ನು ಏನಾದರೂ ಮಾಡಬೇಕೆಂಬ ತುಡಿತ ಇರುವ ಕನ್ನಡ ಗಾಯಕಿ ನಾಗಚಂದ್ರಿಕಾ ಭಟ್ ಮತ್ತೊಂದು ಹೊಸ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ವಿಶು ಆಚರಣೆಯ ಈ ಶುಭ ಸಂದರ್ಭದಲ್ಲಿ ತಮ್ಮ ಸಂಗೀತ ಶಾಲೆ ಗಾನಚಂದ್ರಿಕಾ ಕಲ್ಚರಲ್ ಫೌಂಡೇಷನ್ ವಿದ್ಯಾರ್ಥಿಗಳೊಂದಿಗೆ 'ತೆರೆ ಕಿಟಕಿಯ ಬಾಗಿಲ' ಎಂಬ ಗೀತ ಚಿತ್ರವೊಂದನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. 

ಓಡಿ ಹೋಗು ಕೊರೋನಾ ವೀಡಿಯೋ ವೈರಲ್

ವಿದೇಶಿ ವೈರಸ್‌ವೊಂದರಿಂದ ಜನರೆಲ್ಲರೂ ತಲ್ಲಣಗೊಂಡ ಈ ಸಂದರ್ಭದಲ್ಲಿ ಹೊಸ ವರ್ಷ ಕಾಲಿಟ್ಟಿದೆ. ಭರವಸೆಯ ಬೆಳಕು ಮೂಡಿದೆ. ಆದರೆ, ಮನುಷ್ಯನಿಗೆ ಪ್ರಕೃತಿಯಿಂದ ಹಿಡಿದು ಪ್ರತಿಯೊಂದೂ ವಿಷಯಗಳ ಬಗ್ಗೆ ಅಗತ್ಯ ಅರಿವು ಮೂಡದ ಹೊರತು ನಿಸರ್ಗವೂ ಮನುಷ್ಯನ ಕೈ ಹಿಡಿಯೋದು ಕಷ್ಟ. ಮನಸ್ಸೆಂಬ ಕಿಟಕಿಯ ಬಾಗಿಲು ತೆರೆದುಕೋ. ಹೊಸ ಗಾಳಿ ಬರಲಿ, ಹೊಸ ದಾರಿಯು ಮೂಡಲಿ, ಹೊಸ ಬಾಳಿಗೆ ಬಲವನ್ನು ತುಂಬಲಿ ಎಂಬ ಆಶಯದೊಂದಿಗೆ ಕವಿ ವೈ.ವೆಂ.ಸೀತಾರಾಮಯ್ಯ ಅವರ ಗೀತೆಯನ್ನು ಫೌಂಡೇಷನ್ ವಿದ್ಯಾರ್ಥಿಗಳು, ಗಾಯಕಿ ನಾಗಚಂದ್ರಿಕಾ ಅವರೊಂದಿಗೆ ಹಾಡಿದ್ದಾರೆ. 

ನಾಗಚಂದ್ರಿಕಾ ಅವರ ಸಂಗೀತ, ನಿರ್ದೇಶನ ಮತ್ತು ಪರಿಕಲ್ಪನೆಯಲ್ಲಿ ಮೂಡಿ ಬಂದ ಈ ಗೀತ ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ. ಶ್ರೀನಿಧಿ ಎಂ. ಚಿತ್ರೀಕರಿಸಿದ್ದು, ಪೃತ್ವಿಶ್ ಅದ್ಭುತವಾಗಿ ಎಡಿಟಿಂಗ್ ಮಾಡಿದ್ದಾರೆ. ಒಟ್ಟಿನಲ್ಲಿ ಹೊಸ ವರುಷದಲ್ಲಿ, ನೊಂದ ಮನಸ್ಸುಗಳಿಗೆ ಚೈತನ್ಯ ತುಂಬುವಂಥ ಅದ್ಭುತ ಗೀತೆಯೊಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ನೋಡಿ, ಮನಸ್ಸನ್ನು ಮುದಗೊಳಿಸಿಕೊಳ್ಳಿ. 

ಗಾನಚಂದ್ರಿಕಾ ಭಟ್ ಯೂಟ್ಯೂಬ್ ಚಾನೆಲ್ ಆರಂಭ

ಕಳೆದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿಯೇ ಗಾನಚಂದ್ರಿಕಾ ಕಲ್ಚರಲ್ ಫೌಂಡೇಷನ್ ತನ್ನ ಯೂಟ್ಯೂಬ್ ಚಾನೆಲ್ ಆರಂಭಿಸಿದೆ. ಈಗಾಗಲೇ ಆನ್‌ಲೈನ್ ಮೂಲಕ ಹಲವರಿಗೆ ಸಂಗೀತವನ್ನೂ ಈ ಶಾಲೆ ಹೇಳಿ ಕೊಡುತ್ತಿದೆ. ನೊಂದ ಮನಸ್ಸಿಗೆ ಚೈತನ್ಯ ತುಂಬುವ ಮತ್ತಷ್ಟು ಹಾಡುಗಳು ಮೂಡಲೆಂಬುವುದು ನಮ್ಮ ಆಶಯ.