ಮುಂಬೈ(ಸೆ.01): ಜಗತ್ತಿನ ಪ್ರಸಿದ್ಧ ಟೀವಿ ಸಾಹಸ ಕಾರ್ಯಕ್ರಮವಾದ ಡಿಸ್ಕವರಿ ಚಾನಲ್‌ನ ‘ಇಂಟು ದಿ ವೈಲ್ಡ್‌$್ಸ ವಿತ್‌ ಬೇರ್‌ ಗ್ರಿಲ್ಸ್‌’ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಸೂಪರ್‌ಸ್ಟಾರ್‌ ರಜನೀಕಾಂತ್‌ ನಂತರ ಇದೀಗ ಬಾಲಿವುಡ್‌ನ ಪ್ರಸಿದ್ಧ ನಟ ಅಕ್ಷಯ್‌ ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಿಸಿದ ಈ ವಿಶೇಷ ಸಂಚಿಕೆಯೀಗ ಪ್ರದರ್ಶನಕ್ಕೆ ಸಿದ್ಧವಾಗಿದ್ದು, ಸೋಮವಾರ ಪ್ರೋಮೋ ಬಿಡುಗಡೆಯಾಗಿದೆ.

ತಮ್ಮ ಆ್ಯಕ್ಷನ್‌ ಚಿತ್ರಗಳಿಂದ ಹೆಸರಾದ ಅಕ್ಷಯ್‌ ಕುಮಾರ್‌ ಈ ಪ್ರೋಮೋದಲ್ಲಿ ಬೇರ್‌ ಗ್ರಿಲ್ಸ್‌ ಜೊತೆಗೆ ಆನೆ ಲದ್ದಿಯ ಚಹಾ ಕುಡಿಯುವ ದೃಶ್ಯವಿದೆ. ಜೊತೆಗೆ ಇಬ್ಬರೂ ಕಾಡಿನಲ್ಲಿ ಹಲವು ಸಾಹಸಗಳನ್ನು ನಡೆಸಿದ ದೃಶ್ಯಗಳಿವೆ. ತಾನು ರೀಲ್‌ ಸ್ಟಾರ್‌ ಆಗಿದ್ದರೆ ಬೇರ್‌ ಗ್ರಿಲ್ಸ್‌ ರಿಯಲ್‌ ಸ್ಟಾರ್‌ ಎಂದು ಅಕ್ಷಯ್‌ ಕುಮಾರ್‌ ಹೊಗಳುತ್ತಾರೆ.

ದೇಶದ ಅರೆಸೇನಾ ಪಡೆಗಳಿಗೆ ನಿಧಿ ಸಂಗ್ರಹಿಸುವ ಕೇಂದ್ರ ಸರ್ಕಾರದ ಗೃಹ ಇಲಾಖೆಯ ‘ಭಾರತ್‌ ಕೆ ವೀರ್‌’ ಕಾರ್ಯಕ್ರಮದ ಭಾಗವಾಗಿ ಅಕ್ಷಯ್‌ ಕುಮಾರ್‌ ಈ ಸಾಹಸದಲ್ಲಿ ಪಾಲ್ಗೊಂಡಿದ್ದಾರೆ. ಸೆ.11ರ ರಾತ್ರಿ 8 ಗಂಟೆಗೆ ಡಿಸ್ಕವರಿ ಆ್ಯಪ್‌ನಲ್ಲಿ ಹಾಗೂ ಸೆ.14ರಂದು ಡಿಸ್ಕವರಿ ಚಾನಲ್‌ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಹಿಂದಿ, ಕನ್ನಡ, ತಮಿಳು, ಮಲೆಯಾಳಂ, ತೆಲುಗು, ಬಂಗಾಳಿ ಹಾಗೂ ಇಂಗ್ಲಿಷ್‌ನಲ್ಲಿ ಕಾರ್ಯಕ್ರಮ ಲಭ್ಯವಿದೆ.