ಟ್ರೆಕ್ಕಿಂಗ್ ಪ್ರಿಯರಿಗೆ ಸಿಹಿಸುದ್ದಿ: ‘ಎತ್ತಿನಭುಜ’ಕ್ಕೆ ಅಧಿಕೃತ ಚಾರಣ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿರುವ ‘ಎತ್ತಿನ ಭುಜ’ ಬೆಟ್ಟಕ್ಕೆ ಅರಣ್ಯ ಇಲಾಖೆ ಅಧಿಕೃತವಾಗಿ ಚಾರಣ ಪ್ರಾರಂಭಿಸಿದೆ. ಎತ್ತಿನ ಭುಜಕ್ಕೆ ಚಾರಣ ಹಮ್ಮಿಕೊಳ್ಳಲು ಮೈ-ಎಕೋಟ್ರಿಪ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕೆ ಅರಣ್ಯ ಇಲಾಖೆ ಅವಕಾಶ ಕಲ್ಪಿಸಿದೆ. ವಯಸ್ಕರಿಗೆ 250, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ 125 ರು.ಗಳನ್ನು ನಿಗದಿ ಪಡಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾಲುಬೆಟ್ಟಗಳ ಸಾಲಿನಲ್ಲಿರುವ ‘ಎತ್ತಿನ ಭುಜ’ ಬೆಟ್ಟಕ್ಕೆ ಅರಣ್ಯ ಇಲಾಖೆ ಅಧಿಕೃತವಾಗಿ ಚಾರಣ ಪ್ರಾರಂಭಿಸಿದೆ. ಈವರೆಗೂ ನಡೆಯುತ್ತಿದ್ದ ಅನಧಿಕೃತವಾಗಿ ಕಾನೂನು ಬಾಹಿರ ಚಾರಣಕ್ಕೆ ಕಡಿವಾಣ ಹಾಕುವ ಸಲುವಾಗಿ ಅರಣ್ಯ ಇಲಾಖೆಯಿಂದಲೇ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜಧಾನಿ ಬೆಂಗಳೂರು ನಗರದಿಂದ ಸುಮಾರು 276 ಕಿ.ಮೀ. ದೂರದಲ್ಲಿರುವ ಎತ್ತಿನಭುಜ ಬೆಟ್ಟಕ್ಕೆ ಪ್ರತಿ ದಿನ ಹಲವು ಜನ ಬರುತ್ತಾರೆ. ಅಲ್ಲದೆ, ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ನೂರಾರು ಜನ ಭೇಟಿ ನೀಡುತ್ತಿದ್ದು, ಬೆಳಗಿನ ಜಾವ 4 ಗಂಟೆಯಿಂದ ಯಾವುದೇ ಮಾರ್ಗದರ್ಶಕರ (ಗೈಡ್) ನೆರವು ಇಲ್ಲದೆ ಅಕ್ರಮವಾಗಿ ಚಾರಣ ಹಮ್ಮಿಕೊಳ್ಳುತ್ತಿದ್ದರು.
8 ಜನ ಮಾರ್ಗದರ್ಶಕರು:
ಇದೀಗ ಅರಣ್ಯ ಇಲಾಖೆ ವತಿಯಿಂದ ಅಧಿಕೃತವಾಗಿ ಚಾರಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಸ್ಥಳೀಯ ಎಂಟು ಜನ ಯುವಕರಿಗೆ ಮಾರ್ಗದರ್ಶಕರಾಗಿ ತರಬೇತಿ ನೀಡಿದ್ದು, ನೇಮಕ ಮಾಡಲಾಗಿದೆ. ಈ ತರಬೇತುದಾರರು ಚಾರಣಗರಿಗೆ ನೆರವಾಗಲಿದ್ದಾರೆ ಎಂದು ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ತಿಳಿಸಿದ್ದಾರೆ.
ಎತ್ತಿನ ಭುಜ ಬೆಟ್ಟದ ವಿಶೇಷ:
ಹಸಿರು ಬೆಟ್ಟಗಳ ನಡುವಿನ ದಟ್ಟವಾದ ಹುಲ್ಲುಗಾವಲಿನಲ್ಲಿ ಎತ್ತಿನ ಭುಜ ಬೆಟ್ಟದವಿದೆ. ಈ ಬೆಟ್ಟದ ಮೇಲೆ ನಿಂತಲ್ಲಿ ಸುತ್ತಮುತ್ತಲಿನ ಹಚ್ಚ ಹಸರಿನಿಂದ ಕೂಡಿರುವ ಸಾಲು ಸಾಲು ಬೆಟ್ಟಗಳ ರಮಣೀಯ ದೃಶ್ಯ ಕಾಣಬಹುದಾಗಿದೆ. ಬೆಟ್ಟದ ತಪ್ಪಲಿನಿಂದ ಸುಮಾರು ನಾಲ್ಕು ಕಿ.ಮೀ. ದೂರ ಕ್ರಮಿಸಿದರೆ ನಾಣ್ಯ ಭೈರವೇಶ್ವರ ದೇವಾಲಯವಿದೆ. ಈ ದೇಗುಲದ ಬಳಿ ನಾಣ್ಯಗಳನ್ನು ಟಂಕಿಸುವ ಟಂಕಶಾಲೆಯೂ ಇತ್ತು. ಹಾಗಾಗಿ ಇದಕ್ಕೆ ಟಂಕ ಭೈರವೇಶ್ವರ ಎಂಬ ಹೆಸರು ಇದೆ ಎಂಬ ಪ್ರತೀತಿಯಿದೆ. ಅಲ್ಲದೆ, ಮೇಲೆ ಎಲ್ಲಿ ನೋಡಿದರೂ ಮಂಜು ಮತ್ತು ಬೀಸುವ ಗಾಳಿಯ ನಡುವೆ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಬಹುದು.
ಚಾರಣಿಗರು ಮಿಸ್ ಮಾಡಬಾರದ ಟ್ರೆಕ್ಕಿಂಗ್ ತಾಣಗಳಿವು
ವೆಬ್‌ಸೈಟ್ ಮೂಲಕ ನೋಂದಣಿ:
ಎತ್ತಿನ ಭುಜಕ್ಕೆ ಚಾರಣ ಹಮ್ಮಿಕೊಳ್ಳಲು ಮೈ-ಎಕೋಟ್ರಿಪ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕೆ ಅರಣ್ಯ ಇಲಾಖೆ ಅವಕಾಶ ಕಲ್ಪಿಸಿದೆ. ವಯಸ್ಕರಿಗೆ 250, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ 125 ರು.ಗಳನ್ನು ನಿಗದಿ ಪಡಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.