ಚಾರಣವೆಂದರೆ ಅನುಭವಗಳ ಮೂಟೆ. ಇಷ್ಟ ಪಟ್ಟು ಕಷ್ಟ ಪಡುವ ಸುಖ. ಕಷ್ಟ ಪಟ್ಟಿದ್ದು ಸಾರ್ಥಕವೆನಿಸುವ ದೃಶ್ಯಾವಳಿಗಳು, ಪ್ರೀತಿಯ ಧಾರೆ ಹರಿಸಿ ತೊಯ್ದು ತೊಪ್ಪೆ ಮಾಡುವ ನಿಸರ್ಗದ ಮಡಿಲು, ಕನಿಷ್ಠ ವಸ್ತುಗಳಲ್ಲಿ ಬದುಕುವ ಸವಾಲು, ಬೆಟ್ಟಗುಡ್ಡಗಳ ಸಾಲು, ಅಲ್ಲಲ್ಲಿ ಎದುರಾಗುವ ಕಣಿವೆ, ತೊರೆ, ಜಲಧಾರೆಗಳ ಮೇಳ, ನಡೆಯುವ ಹಾದಿಯ ಏರಿಳಿತಗಳು, ಹುಡುಕಿಕೊಂಡು ಬಂದು ಎದುರಿನಲ್ಲೇ ಹುಟ್ಟುವ, ಮುಳುಗುವ ಸೂರ್ಯ.... ಅಬ್ಬಬ್ಬಾ! ಚಾರಣಿಗರ ಸುಖ ಸವಿದೇ ನೋಡಬೇಕು. ಚಾರಣ ನಿಮ್ಮ ಹವ್ಯಾಸವಾದರೆ ಇಲ್ಲಿ ಕೆಲವು ಚಾರಣ ಸ್ಥಳಗಳನ್ನು ನೀಡಲಾಗಿದೆ. ನಿಮ್ಮ ಮುಂದಿನ ಚಾರಣ ಯೋಜನೆಯಲ್ಲಿ ಇವುಗಳಿಗೂ ಭೇಟಿ ನೀಡಿ. 

ಹೈಕಿಂಗ್ ಅಂದ್ರೇನು?

ಹಂಪ್ತಾ ಪಾಸ್ ಟ್ರೆಕ್
ನವದಂಪತಿಗಳ ಸ್ವರ್ಗವೆನಿಸಿರುವ ಮನಾಲಿಯ ದಕ್ಷಿಣ ಭಾಗದಲ್ಲಿದೆ ಹಂಪ್ತಾ ಪಾಸ್. ಸ್ಥಳೀಯರು ಹಾಗೂ ಕುರಿಗಾಹಿಗಳು ಲಾಹಾಲ್ ಸ್ಪಿಟಿ ವ್ಯಾಲಿ ತಲುಪಲು ಈ ಹಾದಿ ಬಳಸುತ್ತಾರೆ. ಇದು ಹಿಮಾಚಲ ಪ್ರದೇಶದ ಟ್ರೆಕ್‌ಗಳಲ್ಲೇ ಸುಲಭದ ಹಾದಿಯಾಗಿರುವುದರಿಂದ ಆರಂಭಿಕ ಚಾರಣಿಗರಿಗೆ ಹೇಳಿ ಮಾಡಿಸಿದ ಟ್ರೆಕ್. ಮನಾಲಿಯಿಂದ ಚಂದ್ರತಾಲ್ ಲೇಕ್‌ವರೆಗಿನ 26 ಕಿಲೋಮೀಟರ್‌ಗಳ ಈ ಟ್ರೆಕ್ಕಿಂಗ್ ಪೂರೈಸಲು ಐದು ದಿನಗಳು ಬೇಕಾಗುತ್ತವೆ. ಪರ್ವತದ ತುದಿ ತಲುಪುವ ಹೊತ್ತಿಗೆ 14,100 ಅಡಿ ಎತ್ತರದಲ್ಲಿರುತ್ತೀರಿ. 
ಮಹಾಭಾರತದ ಪ್ರಕಾರ ಪಾಂಡವರು ಸ್ವರ್ಗಕ್ಕೆ ಹೋಗುವಾಗ ಇದೇ ಹಾದಿಯಲ್ಲಿ ಸಾಗಿದ್ದರು. ಯುಧಿಷ್ಠಿರ ಸಾವಿಗೀಡಾದಾಗ ಇದೇ ದಾರಿಯಲ್ಲಿ ಆತನನ್ನು ಸ್ವರ್ಗಕ್ಕೆ ಕೊಂಡೊಯ್ಯಲಾಗಿತ್ತು ಎಂಬ ನಂಬಿಕೆ ಇದೆ. ಹೀಗಾಗಿ, ಈ ಹಾದಿಯನ್ನು ಯಾತ್ರಿಕರು ಸ್ವರ್ಗದ ಮೆಟ್ಟಿಲು ಎಂದು ಕರೆಯುವುದಿದೆ. ಇಲ್ಲಿ ಟ್ರೆಕ್ ಮಾಡಲು ಮೇ-ಜೂನ್, ಸೆಪ್ಟೆಂಬರ್‌ನಿಂದ ಅಕ್ಟೋಬರ್ ಉತ್ತಮ ಸಮಯ.

ಟ್ರೆಕ್ಕಿಂಗ್‌ಗೆ ಬೆಸ್ಟ್ ಪ್ಲೇಸ್

ರಮ್ಸೋ ಮೊರಿರಿ ಟ್ರೆಕ್
ಲಡಾಕ್ ನೂರಾರು ಟ್ರೆಕಿಂಗ್ ಅವಕಾಶಗಳಿಗಾಗಿಯೇ ಜನಪ್ರಿಯ. ಇಲ್ಲಿನ ರಮ್ಸೋ ಮೊರಿರಿ (Rumtze-tso Moriri)ಟ್ರೆಕ್ ಬಹಳ ಸುಂದರವಾದ ದೃಶ್ಯವೈಭವದಿಂದ ಕೂಡಿದ ಟ್ರೆಕ್. 7 ದಿನಗಳಲ್ಲಿ ಸುಮಾರು 6 ಕಣಿವೆಗಳನ್ನು ದಾಟಿ 5000 ಮೀ. ಆಲ್ಟಿಟ್ಯೂಡ್ ಎತ್ತರದಲ್ಲಿ ಸಂಚರಿಸುವ ಆನಂದವೇ ಬೇರೆ. ಇಡೀ ದಿನ ಟ್ರೆಕ್ ಮಾಡುವ ಮನಸ್ಸಿಲ್ಲದಿದ್ದರೆ ಏಳೂವರೆ ಕಿ.ಮೀ. ಹಸಿರಿನ ಮಧ್ಯೆ ಜೀಪ್‌ನಲ್ಲಿಯೇ ಮೇಲೆ ಸಾಗಬಹುದು. ಇದೂ ಕೂಡಾ ಕಡಿಮೆ ಸಾಹಸವಲ್ಲ. ಬಳಿಕ 1.5 ಕಿ.ಮೀ. ಚಾರಣ ಮಾಡಿದಿರಾದರೆ ಸೀದಾ ಮೋಡಗಳ ನಡುವೆ ನಿಂತ ಅನುಭವ ನಿಮ್ಮದು. ಅದೃಷ್ಟವಿದ್ದರೆ ಇಲ್ಲಿನ ಕೊಲುಕ್ಕುಮಲೈ ಹಿಲ್ಸ್ ಮೇಲೆ 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಪುಷ್ಪ ನೀಲಾಕ್ರುರಿಂಜಿಯನ್ನೂ ನೋಡುವ ಅವಕಾಶ ಸಿಗಬಹುದು. ಇಲ್ಲಿ ಜಗತ್ತಿನಲ್ಲೇ ಅತಿ ಎತ್ತರದಲ್ಲಿ ನಿಂತ ಟೀ ಫ್ಯಾಕ್ಟರಿ, ಟೀ ಎಸ್ಟೇಟ್, ಜಲಪಾತಗಳು ಕೂಡಾ ನಿಮ್ಮ ಹಾದಿಯನ್ನು ಆಸಕ್ತಿಕರವಾಗಿಸುತ್ತವೆ. 

ಆಸ್ಟ್ರೇಲಿಯಾದ ಅತಿ ಎತ್ತರದ ಶಿಖರವೇರಿದ ಕನ್ನಡತಿ

ದುನಗಿರಿ ಟ್ರೆಕ್
ಉತ್ತರಾಖಂಡದ ಅತಿ ಸುಂದರ, ಸುಲಭ ಚಾರಣಗಳಲ್ಲಿ ದುನಗಿರಿಯೂ ಒಂದು. ಶಕ್ತಿ ದೇಗುಲಕ್ಕೆ ಜನಪ್ರಿಯವಾದ ದುನಗಿರಿಯಲ್ಲಿ ಪಾಂಡುಖೊಲಿ ಎಂಬ ಆಶ್ರಮವೂ ಇದೆ.  ಇಲ್ಲಿಯವರೆಗೆ ಟ್ರೆಕ್ ಮುಂದುವರಿಸಬಹುದು. ಹಸಿರಿನಿಂದ ಸುತ್ತುವರಿದ ಮಣ್ಣಿನ ರಸ್ತೆಗಳು, ಕೆಳಗೆ ಕಿಲೋಮೀಟರ್‌ಗಟ್ಟಲೆ ಕಾಣುವ ಹೊಲಗದ್ದೆಗಳು, ಮರದ ಮನೆಗಳು ಎಲ್ಲವೂ ಹಾದಿಯನ್ನು ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ. 

ಕೇದಾರನಾಥ್ ಟ್ರೆಕ್
ಭಾರತದ ಅತಿ ಜನಪ್ರಿಯ ಧಾರ್ಮಿಕ ಸ್ಥಳಗಳಲ್ಲಿ ಕೇದಾರನಾಥವೂ ಒಂದು. ಪರ್ವತರಾಶಿಯ ಮಧ್ಯದಲ್ಲಿ 11755 ಅಡಿ ಎತ್ತರದಲ್ಲಿ ನಿಂತ ಕೇದಾರನಾಥ  ದೇಗುಲ ಬಲು ಪ್ರಸಿದ್ಧ. 18 ಕಿಲೋಮೀಟರ್‌ಗಳ ಈ ಚಾರಣ ಗೌರಿಕುಂಡ್‌ನಲ್ಲಿ ಆರಂಭವಾಗಿ ಕೇದಾರನಾಥ ತಲುಪುತ್ತದೆ. ಆರಂಭದ ಆರೇಳು ಕಿಲೋಮೀಟರ್ ಸುಲಭವೆನಿಸುತ್ತದೆ. ಅಲ್ಲದೆ ಹಸಿರಿನ ಗುಡ್ಡಗಳ ನಡುವೆ ಹಾದು ಹೋಗುವಾಗ  ಅಲ್ಲಲ್ಲಿ ಎದುರಾಗುವ ಶುದ್ಧ ನೀರಿನ ಜಲಪಾತಗಳು ಮನಸಿಗೆ ಮುದ ನೀಡುತ್ತವೆ. ನಂತರ ಹಿಮಚ್ಛಾದಿತ ಪರ್ವತಗಳು ಆರಂಭವಾದಂತೆಲ್ಲ ಹಾದಿಯೂ ಕ್ಲಿಷ್ಟಕರವಾಗುತ್ತಾ ಸಾಗುತ್ತದೆ. ಬಹಳ ಸವಾಲಿನ ಟ್ರೆಕ್ ಇದು. ಇಲ್ಲಿ ಟ್ರೆಕ್ ಮಾಡಲು ಮೇ-ಜೂನ್, ಸೆಪ್ಟೆಂಬರ್‌ನಿಂದ ಅಕ್ಟೋಬರ್ ಉತ್ತಮ ಸಮಯ. ಉಳಿದಂತೆ ಈ ಹಾದಿ ಅತಿಯಾದ ಹಿಮ ಬೀಳುವ ಕಾರಣಕ್ಕೆ ಮುಚ್ಚಿರುತ್ತದೆ. 2013ರಲ್ಲಿ ಪ್ರವಾಹ ಬಂದ ಬಳಿಕ ಹೊಸ ಹಾದಿ ತೆರೆದಿದ್ದು, ಇದು ಮೊದಲಿನದಕ್ಕಿಂತಲೂ ಉದ್ದವಾಗಿಯೂ ಕಷ್ಟಕರವಾಗಿಯೂ ಇದೆ. 

ಝುಕು ವ್ಯಾಲಿ (Dzukou valley)
ಝುಕು ವ್ಯಾಲಿಯ ಚಾರಣದ ಅನುಭವ ಕಲ್ಪನಾ ಲೋಕವೊಂದರಂತೆ ಭಾಸವಾಗಬಹುದು. ನಾಗಾಲ್ಯಾಂಡ್‌ನ ವಿಸ್ವೇಮಾ ಹಾಗೂ ಝಕಾಮಾ ಹಿಲ್ಸ್‌ನಿಂದ ಆರಂಭವಾಗುವ ಈ ಟ್ರೆಕ್, ಎರಡು ದಿನಗಳ ಸಮಯ ತೆಗೆದುಕೊಳ್ಳುತ್ತದೆ. 1 ಗಂಟೆ ಅದೆಷ್ಟು ಕಡಿದಾದ ಎತ್ತರಕ್ಕೆ  ಏರಬೇಕೆಂದರೆ ನಿಮ್ಮ ಉಸಿರ ಬಡಿತ ನಿಮಗೇ ಕೇಳಿಸುತ್ತಿರುತ್ತದೆ. ಆದರೆ ಕಣಿವೆ ಸಿಕ್ಕ ಬಳಿಕದ ದೃಶ್ಯವೈಭವ ನಿಮ್ಮ ಶ್ರಮ ಸಾರ್ಥಕವೆನಿಸುವಂತೆ ಮಾಡುತ್ತದೆ. ಜುಲೈನಿಂದ ಆಗಸ್ಟ್ ಇಲ್ಲಿಗೆ ಭೇಟಿ ನೀಡಲು ಸರಿಯಾದ ಸಮಯ. ಈಶಾನ್ಯ ರಾಜ್ಯಗಳಿಗೆ ಟ್ರಿಪ್ ಯೋಜಿಸಿದರೆ ಝುಕು ವ್ಯಾಲಿಯನ್ನು ನೋಡಿಕೊಂಡು ಬರುವುದು ಮರೆಯಬೇಡಿ.