*  ಕರಾಳ ಇತಿಹಾಸ ತೆರೆದಿಡುವ ಚಿತ್ರ: ಖ್ಯಾತ ನಟ ಬಣ್ಣನೆ*  ಹೇಳಿಕೆಗೆ ಕೆಲವರ ಸ್ವಾಗತ, ಕೆಲವರಿಂದ ವ್ಯಂಗ್ಯ*  ಚಿತ್ರದ ಕುರಿತು ರಾಜಕೀಯವಾಗಿ, ಧಾರ್ಮಿಕವಾಗಿ ಪರ-ವಿರೋಧ ಅಭಿಪ್ರಾಯ  

ನವದೆಹಲಿ(ಮಾ.22): ಕಾಶ್ಮೀರಿ ಪಂಡಿತರ(Kashmiri Pandits) ನರಮೇಧದ ನೈಜ ಕಥಾನಕ ಒಳಗೊಂಡಿರುವ, ದೇಶಾದ್ಯಂತ ಭಾರೀ ಸದ್ದು ಮಾಡಿರುವ ‘ಕಾಶ್ಮೀರ್‌ ಫೈಲ್ಸ್‌’(The Kashmir Files) ಸಿನಿಮಾವನ್ನು ಪ್ರತಿಯೊಬ್ಬರೂ ನೋಡಬೇಕು ಎಂದು ಬಾಲಿವುಡ್‌ ನಟ ಅಮೀರ್‌ ಖಾನ್‌(Aamir Khan) ಸಲಹೆ ನೀಡಿದ್ದಾರೆ. 

ಚಿತ್ರದ ಕುರಿತು ರಾಜಕೀಯವಾಗಿ, ಧಾರ್ಮಿಕವಾಗಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ, ಅಮೀರ್‌ ನೀಡಿರುವ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅಮೀರ್‌ ಹೇಳಿಕೆ ಸ್ವಾಗತಿಸಿದ್ದರೆ, ಇನ್ನು ಕೆಲವರು ಈ ಹೇಳಿಕೆ ಹಿಂದೆ ಶೀಘ್ರವೇ ಬಿಡುಗಡೆಯಾಗಲಿರುವ ಅಮೀರ್‌ರ ಹೊಸ ಚಿತ್ರ ಲಾಲ್‌ಸಿಂಗ್‌ ಛಡ್ಡಾದ ನೆರಳಿದೆ ಎಂದಿದ್ದಾರೆ.

7 ದಿನದಲ್ಲಿ ₹100 ಕೋಟಿ ಗಳಿಸಿದ ‘The Kashmir Files’: ₹15 ಕೋಟಿ ವೆಚ್ಚದ ಚಿತ್ರ ಈಗ ಬ್ಲಾಕ್‌ಬಸ್ಟರ್‌!

ರಾಜಮೌಳಿ(SS Rajamouli) ನಿರ್ದೇಶನದ ಆರ್‌ಆರ್‌ಆರ್‌(RRR) ಸಿನಿಮಾದ ಪತ್ರಿಕಾಗೋಷ್ಠಿ ಸೋಮವಾರ ಮುಂಬೈನಲ್ಲಿ ಆಯೋಜನೆಗೊಂಡಿತ್ತು. ಈ ವೇಳೆ ಪತ್ರಕರ್ತರು ಅಮೀರ್‌ಗೆ ‘ದ ಕಾಶ್ಮೀರ್‌ ಫೈಲ್ಸ್‌’ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿದರು. ಈ ವೇಳೆ ಅಮೀರ್‌, ‘ನಾನಿನ್ನೂ ಚಿತ್ರ ನೋಡಿಲ್ಲ, ಆದರೆ ಖಂಡಿತವಾಗಿಯೂ ಶೀಘ್ರವೇ ಚಿತ್ರವನ್ನು ವೀಕ್ಷಿಸಲಿದ್ದೇನೆ. ಕಾಶ್ಮೀರಿ ಪಂಡಿತರ ಮೇಲೆ ಏನೇನು ದೌರ್ಜನ್ಯ ನಡೆದಿದೆಯೋ ಅದು ನಿಜಕ್ಕೂ ನೋವಿನ ವಿಷಯ. ನಮ್ಮ ಇತಿಹಾಸದ ಕರಾಳ ಪುಟಗಳನ್ನು ತೆರೆದಿಡುವ ಚಿತ್ರ ಇದೀಗ ನಮ್ಮ ಮುಂದಿದೆ. ದೇಶದ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಇದು. ಮನುಷ್ಯತ್ವದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರನ್ನೂ ಈ ಸಿನಿಮಾ(Movie) ಕಾಡುತ್ತದೆ. ಚಿತ್ರ ಯಶಸ್ಸಾಗಿರುವುದು ಅತ್ಯಂತ ಸಂತಸ ನೀಡಿದೆ’ ಎಂದು ಹೇಳಿದ್ದಾರೆ.

ಭಾರೀ ಚರ್ಚೆ:

ಈ ನಡುವೆ ಅಮೀರ್‌ ಖಾನ್‌ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ(Social Media) ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ದ್ವೇಷ ಸಾರುವ, ರಾಜಕೀಯ ಅಜೆಂಡಾ ಹೊಂದಿರುವ ಸಿನಿಮಾವನ್ನು ಅಮೀರ್‌ ಖಾನ್‌ ಬೆಂಬಲಿಸಿದ್ದಾರೆ. ಅವರಿಗೆ ಹಿಂದೂಫೋಬಿಯಾ ಕಾಡುತ್ತಿದೆ ಎಂದು ಕೆಲವರು ಹೇಳಿದರೆ, ಭಾರತದ ಜಾತ್ಯತೀತ ತತ್ವಗಳನ್ನು ಖಾನ್‌ ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಕೆಲ ನೆಟ್ಟಿಗರು ಪ್ರಶಂಸಿಸಿದ್ದಾರೆ. ಇನ್ನು ಕೆಲವರು ಶೀಘ್ರವೇ ಅಮೀರ್‌ ಅವರ ಬಹುನಿರೀಕ್ಷಿತ ಲಾಲ್‌ಸಿಂಗ್‌ ಛಡ್ಡಾ ಸಿನೆಮಾ ಬಿಡುಗಡೆಯಾಗುತ್ತಿದೆ. ಅದಕ್ಕೆ ಯಾವುದೇ ಅಡ್ಡಿಯಾಗದಿರಲಿ ಎಂದು ಅಮೀರ್‌ ದ ಕಾಶ್ಮೀರ್‌ ಫೈಲ್ಸ್‌ ಚಿತ್ರ ಹೊಗಳಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮನುಷ್ಯತ್ವದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರನ್ನೂ ಈ ಸಿನಿಮಾ ಕಾಡುತ್ತಿದೆ. ದೇಶದ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಇದು. ನಾನಿನ್ನೂ ಚಿತ್ರ ನೋಡಿಲ್ಲ, ಶೀಘ್ರ ವೀಕ್ಷಿಸುತ್ತೇನೆ. ಕಾಶ್ಮೀರಿ ಪಂಡಿತರ ಮೇಲೆ ನಡೆದಿರುವ ದೌರ್ಜನ್ಯ ನೋವಿನ ಸಂಗತಿ ಅಂತ ಖ್ಯಾತ ನಟ ಅಮೀರ್‌ ಖಾನ್‌ ತಿಳಿಸಿದ್ದಾರೆ.

The Kashmir Files 70 ಉಗ್ರರ ರಿಲೀಸ್‌ಗೆ ಆದೇಶಿಸಿದ್ದ ಫಾರೂಖ್ ಅಬ್ದುಲ್ಲಾ, ಓಮರ್ ಆರೋಪಕ್ಕೆ ಬಿಜೆಪಿ ತಿರುಗೇಟು!

ನೆಟ್ಟಿಗರ ಕೋಪಕ್ಕೆ ಗುರಿಯಾದ ಪ್ರಕಾಶ್ ರಾಜ್ ಟ್ವೀಟ್

ಕಾಶ್ಮೀರ್‌ ಫೈಲ್ಸ್‌ ಸಿನಿಮಾದ ಬಗ್ಗೆ ನಟ ಪ್ರಕಾಶ್ ರಾಜ್(Prakash Raj) ವ್ಯಂಗ್ಯವಾಡಿದ್ದಾರೆ. ಸಿನಿಮಾದ ಪ್ರದರ್ಶನ ವೇಳೆಯ ವಿಡಿಯೋ ತುಣುಕೊಂದನ್ನು ಶೇರ್ ಮಾಡಿರುವ ಪ್ರಕಾಶ್ ರಾಜ್ ಈ ಸಿನಿಮಾ ಹಳೆಯ ಗಾಯವನ್ನು ವಾಸಿ ಮಾಡಿದೆಯಾ ಅಥವಾ ಕೆದಕಿದಿಯಾ ಎಂದು ಪ್ರಶ್ನೆ ಕೇಳಿದ್ದಾರೆ. 'ಇದೊಂದು ಪ್ರಚಾರದ ಸಿನಿಮಾವಾಗಿದೆ. ಈ ಸಿನಿಮಾ ಗಾಯವನ್ನು ಗುಣಪಡಿಸಿದೆಯೋ ಅಥವಾ ಕೆದಕಿದಿಯೋ ಇಲ್ಲಾ ದ್ವೇಷದ ಬೀಜವನ್ನು ಬಿತ್ತುತ್ತಿದಿಯಾ' ಎಂದು ಪ್ರಶ್ನೆ ಮಾಡಿದ್ದಾರೆ. 

ಪ್ರಕಾಶ್ ರಾಜ್ ಪೋಸ್ಟ್ ಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಯಾವಾಗಲು ಹಿಂದೂಗಳ ವಿರುದ್ಧ ಮಾತನಾಡುತ್ತಿರುತ್ತೀರಿ ಎಂದು ಅನೇಕರು ತರಾಟೆ ತೆಗೆದುಕೊಂಡಿದ್ದಾರೆ. ಪ್ರಕಾಶ್ ರಾಜ್ ವಿರುದ್ಧ ಬಾಯಿಬಂದಹಾಗೆ ಕಾಮೆಂಟ್ ಮಾಡಿ ಬೈಯುತ್ತಿದ್ದಾರೆ. ಟ್ರೋಲ್ ಮತ್ತು ಆಕ್ರೋಶಗಳು ಪ್ರಕಾಶ್ ರಾಜ್ ಅವರಿಗೆ ಹೊಸದೇನಲ್ಲ. ಯಾವುದೇ ಹೇಳಿಕೆ ನೀಡಿದರು ಪ್ರಕಾಶ್ ವಿರುದ್ಧ ನೆಟ್ಟಿಗರು ಕೆಂಡಕಾರುತ್ತಿರುತ್ತಾರೆ. ಇದೀಗ ದಿ ಕಾಶ್ಮೀರ್ ಫೈಲ್ಸ್ ವಿಚಾರದಲ್ಲೂ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡ ಚಿತ್ರದ ಬಗ್ಗೆ ವ್ಯಂಗ್ಯವಾಡಿ ಟ್ರೋಲಿಗೆ ಗುರಿಯಾಗಿದ್ದರು.