ಬೆಂಗಳೂರು(ಜು.04); ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಅಗಲಿಕೆಯಿಂದ ಮಾನಸಿಕವಾಗಿ ಕುಗ್ಗಿರುವ ಸಹೋದರ ಧ್ರುವ ಸರ್ಜಾ ಚಿಕಿತ್ಸೆ ಪಡೆದಿದ್ದು, ಇನ್ನು ಸ್ವಲ್ಪ ದಿನದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳು ಧ್ರುವ ಅಥವಾ ಸರ್ಜಾ ಕುಟುಂಬದ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಜಾ ಕುಟುಂಬದ ಆಪ್ತರು ತಿಳಿಸಿದ್ದಾರೆ.

ಚಿರಂಜೀವಿ ಸರ್ಜಾ ಜೊತೆ ಧ್ರುವ ಪತ್ನಿ ಡ್ಯಾನ್ಸ್‌; ತಮಾಷೆಗೆ ಮಾಡಿದ ವಿಡಿಯೋ ವೈರಲ್!

ಚಿರು ಅಗಲಿಕೆಯಿಂದ (ಜೂ.7) ಮಾನಸಿಕವಾಗಿ ಕುಗ್ಗಿದ್ದ ಸಹೋದರ ಧ್ರುವ ಸರ್ಜಾ ನಗರದ ಅಪೊಲೋ ಆಸ್ಪತ್ರೆಗೆ ಇತ್ತೀಚೆಗೆ ದಾಖಲಾಗಿ ಎರಡು ದಿನ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಆದರೆ ಅವರು ಒಂಟಿಯಾಗಿರಲು ಬಯಸುತ್ತಿದ್ದಾರೆ. ಗೆಳೆಯನಂತಿದ್ದ ಪ್ರೀತಿಯ ಅಣ್ಣ ಚಿರು ನಿಧನದ ಬಳಿಕ ಧ್ರುವ ಮಾನಸಿಕವಾಗಿ ಕುಗ್ಗಿದ್ದರು. ಊಟ, ತಿಂಡಿ ಸರಿಯಾಗಿ ಮಾಡದ್ದರಿಂದ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಆದ್ದರಿಂದ ಅಪೊಲೋದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದು, ಗುಣಮುಖರಾಗಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಮೊದಲಿನಂತಾಗಿ ಅಭಿಮಾನಿಗಳಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಾಗಿ ನಟ ಧ್ರುವ ಅವರೇ ತಿಳಿಸಿದ್ದು, ಯಾರೂ ಕೂಡ ಅವರ ಮನೆ ಬಳಿ ಬಂದು ತೊಂದರೆ ಕೊಡಬಾರದು ಎಂದು ಧ್ರುವ ಸ್ನೇಹಿತ ಮಹೇಶ ಕೋರಿದ್ದಾರೆ.

ಅಣ್ಣನಿಗೆ ಏನೂ ಆಗದಿರಲಿ ಎಂದು ಪುಣ್ಯ ಭೂಮಿಗೆ ಮಂಟಪ ಕಟ್ಟಿಸಿದ ಧ್ರುವಾ ಸರ್ಜಾ!

ನಟ ಧ್ರುವ ಅನಾರೋಗ್ಯ ಕಾರಣ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದ ವಿಷಯ ತಿಳಿದು ಮಾವ ಅರ್ಜುನ್‌ ಸರ್ಜಾ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಸದ್ಯ ಅಳಿಯ ಧ್ರುವ ಹಾಗೂ ಆತನ ಪೋಷಕರಿಗೆ ಜೊತೆಯಲ್ಲಿದ್ದುಕೊಂಡು ಅರ್ಜುನ್‌ ಸರ್ಜಾ ಧೈರ್ಯ ತುಂಬಿದ್ದಾರೆ. ಸದ್ಯ ಅವರು ಬೆಂಗಳೂರಿನಲ್ಲೇ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ಚಿರು ಪತ್ನಿ ಮೇಘನಾ ರಾಜ್‌ ಕೂಡ ಪತಿಯ ಅಗಲಿಕೆಯ ನೋವಿನಲ್ಲಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಟ ಧ್ರುವ ಸರ್ಜಾ, ನಾನು ಆರೋಗ್ಯವಾಗಿದ್ದೇನೆ. ಆದರೆ ಅಣ್ಣ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಹೊರ ಬರಲು ಆಗುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಏನನ್ನೂ ಹೇಳಲು ಆಗುತ್ತಿಲ್ಲ. ದಿನಗಳೆದಂತೆ ಎಲ್ಲವೂ ಸರಿಹೋಗುತ್ತದೆ. ಸ್ವಲ್ಪ ದಿನ ಒಂಟಿಯಾಗಿದ್ದು, ನಂತರ ನಾನೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತೇನೆ. ಅಲ್ಲಿವರೆಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.