ಮುಂಬೈ (ಫೆ.12):  ಸಿನಿಮಾ ಪ್ರದರ್ಶನ ವೇಳೆ ಬಿತ್ತರಿಸಲಾಗುವ ಶೀರ್ಷಿಕೆ, ನಟರ ಹೆಸರು, ಶ್ರೇಯ ಸಲ್ಲಿಕೆಯಂತಹ ವಿವರಗಳು ಚಲನಚಿತ್ರದ ಸಂಭಾಷಣೆ ಯಾವ ಭಾಷೆಯಲ್ಲಿರುತ್ತದೋ ಅದೇ ಭಾಷೆಯಲ್ಲಿ ಇರಬೇಕು ಎಂದು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅರ್ಥಾತ್‌ ಸೆನ್ಸಾರ್‌ ಮಂಡಳಿಯು ಸಿನಿಮಾ ನಿರ್ದೇಶಕರು, ನಿರ್ಮಾಪಕರಿಗೆ ಸೂಚನೆ ನೀಡಿದೆ.

ಹಿಂದಿ ಹಾಗೂ ದಕ್ಷಿಣ ಭಾರತ ಹೊರತುಪಡಿಸಿ ಇನ್ನಿತರೆ ಚಿತ್ರರಂಗಗಳಲ್ಲಿ ಸಿನಿಮಾ ಟೈಟಲ್‌ ಕಾರ್ಡ್‌ ಅನ್ನು ಆ ಸಿನಿಮಾದಲ್ಲಿರುವ ಭಾಷೆ ಬದಲು ಇಂಗ್ಲಿಷ್‌ನಲ್ಲಿ ಬಿತ್ತರಿಸಲಾಗುತ್ತಿದೆ. ಅಂತಹ ಕಡೆ ಈಗ ಸ್ಥಳೀಯ ಭಾಷೆಗಳಿಗೂ ಮನ್ನಣೆ ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವ್ಯಾಲೆಂಟೈನ್ಸ್ ಡೇ ದಿನ ಪೊಗರು ತಂಡದಿಂದ ಬಿಗ್ ಸರ್ಪೈಸ್ ...

ಸಿನಿಮಾಟೋಗ್ರಾಫ್‌ (ಪ್ರಮಾಣೀಕರಣ) ನಿಯಮ 1983ರ 22ನೇ ಅಧಿನಿಯಮಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ, ಯಾವ ಭಾಷೆಯಲ್ಲಿ ಸಂಭಾಷಣೆ ಇರುತ್ತದೋ ಅದೇ ಭಾಷೆಯಲ್ಲಿ ಸಿನಿಮಾದ ಶೀರ್ಷಿಕೆ, ನಟರ ಹೆಸರು, ಶ್ರೇಯವನ್ನು ಬಿತ್ತರಿಸಬೇಕು. ಇದರೆ ಜತೆಗೆ ನಿರ್ಮಾಪಕರು ಬೇರೆ ಭಾಷೆಯನ್ನೂ ಬಳಕೆ ಮಾಡಿಕೊಳ್ಳಬಹುದು ಎಂದು ಸಿಬಿಎಫ್‌ಸಿ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ರವೀಂದರ್‌ ಭಕರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.