ಮಲ್ಟಿಪ್ಲೆಕ್ಸ್ ಪ್ರವೇಶ ದ್ವಾರವನ್ನು ಗ್ರಾಹಕರಿಂದ ಹೆಚ್ಚು ಹಣ ಖರ್ಚು ಮಾಡಿಸಲು 'ಹ್ಯಾಲೋ ಎಫೆಕ್ಟ್' ತಂತ್ರದಡಿ ಐಷಾರಾಮಿಯಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಸಿನಿಮಾ ಮುಗಿದ ತಕ್ಷಣ ಪ್ರೇಕ್ಷಕರನ್ನು ಬೇಗನೆ ಹೊರಕಳುಹಿಸಲು ಎಕ್ಸಿಟ್ ದಾರಿಯನ್ನು ಕಿರಿದಾಗಿ ಮತ್ತು ಕತ್ತಲೆಯಿಂದ ಕೂಡಿರುವಂತೆ ಮಾಡಲಾಗುತ್ತದೆ.

ಬೆಂಗಳೂರು (ಅ.29): ನೀವು ಎಂದಾದರೂ ಮಲ್ಟಿಪ್ಲೆಕ್ಸ್ ಅಥವಾ ಸಿನೆಮಾ ಹಾಲ್‌ಗಳಿಗೆ ಹೋದಾಗ ಒಂದು ವಿಷಯವನ್ನು ಗಮನಿಸಿದ್ದೀರಾ? ಥಿಯೇಟರ್ ಒಳಗೆ ಹೋಗುವ ದಾರಿಯುದ್ದಕ್ಕೂ ಕಣ್ಣು ಕೋರೈಸುವ ಗೋಲ್ಡನ್ ಲೈಟ್‌ಗಳು, ನಮ್ಮ ಕಾಲುಗಳಿಗೆ ನೋವೇ ಆಗದ ಮಾದರಿಯ 'ರೆಡ್ ಕಾರ್ಪೆಟ್' (Red Carpet) ಹಾಗೂ ಮೂಗಿಗೆ ಮತ್ತು ತರಿಸುವಂಥ ಪಾಪ್‌ಕಾರ್ನ್‌ ಫ್ಲೇವರ್‌ಗಳು ಇರುತ್ತದೆ. ಆದರೆ, ಸಿನಿಮಾ ಮುಗಿದ ತಕ್ಷಣ ನಿಮ್ಮನ್ನು ಕರೆದೊಯ್ಯುವ 'ಎಕ್ಸಿಟ್' (Exit) ದಾರಿ ಮಾತ್ರ ಅತ್ಯಂತ ಕಿರಿದಾದ, ದೀಪಗಳಿಲ್ಲದ, ಉಸಿರು ಕಟ್ಟುವ ಹಾಗೂ ಗಿಜಿಗಿಜಿ ಎನ್ನುವ ಕಾಂಕ್ರೀಟ್ ಮೆಟ್ಟಿಲುಗಳಿಂದ ಕೂಡಿರುತ್ತದೆ!

ಇದು ಕೇವಲ ಕಟ್ಟಡ ನಿರ್ಮಾಣದ ದೋಷ ಅಥವಾ ವೆಚ್ಚ ಕಡಿಮೆ ಮಾಡಲು ಮಾಡಿದ ವಿನ್ಯಾಸ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಭ್ರಮೆ. ಪ್ರೇಕ್ಷಕರ ಮೆದುಳನ್ನು ನಿಯಂತ್ರಿಸಿ ಜೇಬಿನಿಂದ ಹಣ ಕೀಳಲು ಮತ್ತು ಸಿನಿಮಾ ಮುಗಿದ ಮೇಲೆ ತಕ್ಷಣ ಹೊರಗಟ್ಟಲು ಥಿಯೇಟರ್ ಮಾಲೀಕರು ಸೈಕಾಲಜಿ ಆಧಾರದ ಮೇಲೆ ರೂಪಿಸಿರುವ ಮಾಸ್ಟರ್ ಪ್ಲಾನ್ ಇದು!

ಏನಿದು ‘ಹ್ಯಾಲೋ ಎಫೆಕ್ಟ್’ (Halo Effect) ತಂತ್ರಜ್ಞಾನ?

ನೀವು ಥಿಯೇಟರ್ ಒಳಗೆ ಹೆಜ್ಜೆ ಇಡುತ್ತಿದ್ದಂತೆಯೇ ಅಲ್ಲಿರುವ ಕಾಸ್ಟ್ಲಿ ಲೈಟಿಂಗ್ಸ್ ಮತ್ತು ಆಡಂಬರದ ವಾತಾವರಣವನ್ನು ನೋಡಿ ನಿಮ್ಮ ಮೆದುಳು (Brain) ಮೊದಲ ನೋಟದಲ್ಲೇ "ಇಲ್ಲಿರುವ ಪ್ರತಿಯೊಂದೂ ಅತ್ಯಂತ ಪ್ರೀಮಿಯಂ ಹಾಗೂ ಐಷಾರಾಮಿ" ಎಂಬ ತೀರ್ಮಾನಕ್ಕೆ ಬಂದುಬಿಡುತ್ತದೆ. ಮನೋವಿಜ್ಞಾನದ ಭಾಷೆಯಲ್ಲಿ ಇದನ್ನು ‘ಹ್ಯಾಲೋ ಎಫೆಕ್ಟ್’ (Halo Effect) ಎಂದು ಕರೆಯಲಾಗುತ್ತದೆ.

ಅಂದರೆ, ಒಂದು ವಾತಾವರಣ ಅತ್ಯಂತ ಬೆಲೆಬಾಳುವಂತದ್ದು ಎಂದು ನಿಮ್ಮ ಮೆದುಳು ನಂಬಿದ ತಕ್ಷಣ, ಅಲ್ಲಿ ಸಿಗುವ ಪ್ರತಿಯೊಂದು ವಸ್ತುವಿನ ಬೆಲೆಯನ್ನೂ ನಿಮ್ಮ ಮೆದುಳು ಸಮರ್ಥಿಸಿಕೊಳ್ಳಲು ಆರಂಭಿಸುತ್ತದೆ. ಇದೇ ಕಾರಣಕ್ಕೆ ನೀವು ಹೊರಗೆ ಕೇವಲ ₹30-₹40 ಕ್ಕೆ ಸಿಗುವ ಪಾಪ್‌ಕಾರ್ನ್‌ ಥಿಯೇಟರ್ ಒಳಗೆ ₹700 ಹಾಗೂ ಕೇವಲ ₹20 ರ ಕೂಲ್ ಡ್ರಿಂಕ್ಸ್‌ಗೆ ₹500 ಇರುತ್ತದೆ. ಆಗ ಯೋಚನೆಯೇ ಮಾಡದೇ ಅತ್ಯಂತ ಖುಷಿಯಿಂದ ಜೇಬಿನಿಂದ ಹಣ ತೆಗೆದು ಕೊಡುತ್ತೀರಿ. ನಿಮ್ಮನ್ನು ಆ ರೀತಿ ಯೋಚಿಸುವಂತೆ ಮಾಡಲು ಆ ಅದ್ದೂರಿ ಎಂಟ್ರಿ ವಿನ್ಯಾಸಗೊಂಡಿರುತ್ತದೆ.

ಸಿನಿಮಾ ಮುಗಿದ ತಕ್ಷಣ ನೀವು 'ಫೈನಾನ್ಷಿಯಲ್ ವೇಸ್ಟ್'!

ಆದರೆ, ಒಮ್ಮೆ ಸಿನಿಮಾ ಮುಗಿದು ಎಂಡ್ ಕ್ರೆಡಿಟ್ಸ್ ಬೀಳುತ್ತಿದ್ದಂತೆಯೇ, ಆ ಥಿಯೇಟರ್ ಆಡಳಿತ ಮಂಡಳಿಗೆ ನಿಮ್ಮಿಂದ ಸಿಗಬೇಕಾದ ಹಣವೆಲ್ಲಾ ಬಂದಾಗಿರುತ್ತದೆ. ಅಂದರೆ, ಆ ಕ್ಷಣದಿಂದ ನೀವು ಆ ಥಿಯೇಟರ್‌ಗೆ ಆರ್ಥಿಕವಾಗಿ ಯಾವುದೇ ಲಾಭವಿಲ್ಲದ ಪ್ರೇಕ್ಷಕ (Financially Useless) ಅಷ್ಟೇ. ಸಿನಿಮಾ ಮುಗಿದ ಮೇಲೆ ಅದೇ ಆಡಂಬರದ ದಾರಿಯಲ್ಲಿ ನಿಮ್ಮನ್ನು ಕಳುಹಿಸಿದರೆ ನೀವು ಅಲ್ಲೇ ನಿಂತು ಫೋಟೋ ತೆಗೆದುಕೊಳ್ಳುತ್ತಾ ಸಮಯ ವ್ಯರ್ಥ ಮಾಡುತ್ತೀರಿ. ಇದರಿಂದ ಮುಂದಿನ ಶೋಗೆ ಬರುವ ಹೊಸ ಬ್ಯಾಚ್ ಗ್ರಾಹಕರಿಗೆ ತೊಂದರೆಯಾಗುತ್ತದೆ. ಇದಕ್ಕಾಗಿಯೇ, ನಿಮ್ಮನ್ನು ತಕ್ಷಣ ಹೊರಗಟ್ಟಲು ಅತ್ಯಂತ ಕಿರಿಕಿರಿಯುಂಟು ಮಾಡುವ ಕಾಂಕ್ರೀಟ್ ಮೆಟ್ಟಿಲುಗಳು, ಕೆಟ್ಟ ಬೆಳಕು ಹಾಗೂ ಸಹ್ಯವಲ್ಲದ ವಾತಾವರಣವಿರುವ 'ಎಕ್ಸಿಟ್' ಹಾದಿಯಲ್ಲಿ ಕಳುಹಿಸಲಾಗುತ್ತದೆ.

ಈ ಕಿರಿಕಿರಿಯ ಜಾಗದಿಂದ ನಿಮ್ಮ ಮೆದುಳು ಎಷ್ಟು ಸಾಧ್ಯವೋ ಅಷ್ಟು ಬೇಗ ಹೊರಬರಲು ಬಯಸುತ್ತದೆ. ಪರಿಣಾಮವಾಗಿ, ನೂರಾರು ಜನರಿರುವ ಇಡೀ ಪ್ರೇಕ್ಷಕರ ಗುಂಪು ಕೇವಲ ಕೆಲವೇ ಸೆಕೆಂಡುಗಳಲ್ಲಿ ಥಿಯೇಟರ್‌ನಿಂದ ಹೊರಗೆ ಓಡಿಬರುತ್ತದೆ! ಥಿಯೇಟರ್ ಕೂಡ ತಕ್ಷಣವೇ ಮುಂದಿನ ಬ್ಯಾಚ್‌ನಿಂದ ಹಣ ಪೀಕಲು ಸಿದ್ಧವಾಗುತ್ತದೆ. ಸರಳವಾಗಿ ಹೇಳಬೇಕೆಂದರೆ; ಸಿನೆಮಾ ಹಾಲ್‌ನ ಎಂಟ್ರಿಯನ್ನು ನಿಮ್ಮ ಜೇಬಿನಿಂದ ಹಣ ಹೊರತೆಗೆಯಲು ವಿನ್ಯಾಸಗೊಳಿಸಿದ್ದರೆ, ಎಕ್ಸಿಟ್ ಅನ್ನು ನಿಮ್ಮನ್ನು ಬಯಲಿಗೆ ಅಟ್ಟಲು ವಿನ್ಯಾಸಗೊಳಿಸಲಾಗಿದೆ.