ಹಾಲಿವುಡ್‌ನ ಲಾಸ್ ಏಂಜಲೀಸ್‌ನಲ್ಲಿ ನಡೆದ ರಾಮಾಯಣ ಗ್ಲೋಬಲ್ ಪ್ರೀಮಿಯರ್‌ನಲ್ಲಿ ರಾವಣನಾಗಿ ನಟ ಯಶ್ ಮಿಂಚಿದರು. ಚಿನ್ನದ ಬ್ರೂಚ್, ಕನ್ನಡದ ಬಗ್ಗೆ ಅವರ ಹೆಮ್ಮೆಯ ಮಾತುಗಳು ಮತ್ತು ನಮಿತ್ ಮಲ್ಹೋತ್ರಾ ಹೇಳಿದ್ದೇನು?

ಯಶ್ ರಾವಣನಾಗಿ ನಟಿಸುತ್ತಿರುವ ಅದ್ದೂರಿ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾದ ಜಾಗತಿಕ ಪ್ರೀಮಿಯರ್ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಪ್ರತಿಷ್ಠಿತ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನ ಡೇವಿಡ್ ಗೆಫೆನ್ ಥಿಯೇಟರ್‌ನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಹಾಲಿವುಡ್ ತಾರೆಯರು, ಅಂತರರಾಷ್ಟ್ರೀಯ ಚಿತ್ರನಿರ್ಮಾಪಕರು ಹಾಗೂ ಜಾಗತಿಕ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ರೆಡ್ ಕಾರ್ಪೆಟ್ ಮೇಲೆ ಆಗಮಿಸಿದ ಅತಿಥಿಗಳಿಗೆ ಭಾರತೀಯ ಸಾಂಪ್ರದಾಯಿಕ ಉಡುಗೆಯ ಡ್ರೆಸ್‌ಕೋಡ್ ನಿಗದಿಪಡಿಸಿದ್ದು ಕಾರ್ಯಕ್ರಮಕ್ಕೆ ಅಪ್ಪಟ ದೇಸಿ ಕಳೆಯನ್ನು ತಂದುಕೊಟ್ಟಿತ್ತು. ಮಂಗಳವಾರ ರಾತ್ರಿ ನಡೆದ ಈ ಗಾಲಾ ಈವೆಂಟ್‌ನಲ್ಲಿ ಶ್ರೀರಾಮನಾಗಿ ನಟಿಸಿರುವ ರಣಬೀರ್ ಕಪೂರ್, ಸೀತೆಯ ಪಾತ್ರಧಾರಿ ಸಾಯಿ ಪಲ್ಲವಿ, ರಾವಣನ ಪಾತ್ರದಲ್ಲಿ ಅಬ್ಬರಿಸುವುದರ ಜತೆಗೆ ಸಹ-ನಿರ್ಮಾಪಕರೂ ಆಗಿರುವ ರಾಕಿಂಗ್ ಸ್ಟಾರ್ ಯಶ್, ಅವರ ಪತ್ನಿ ರಾಧಿಕಾ ಪಂಡಿತ್, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಪಾಲ್ಗೊಂಡಿದ್ದರು.

ಕನ್ನಡದ ಬೇರು ಮರೆಯದ ರಾಕಿಂಗ್ ಸ್ಟಾರ್

ಸಾಂಪ್ರದಾಯಿಕ ಶೈಲಿಯಲ್ಲಿ ‘ನಮಸ್ಕಾರ’ ಎನ್ನುತ್ತಲೇ ಮಾತು ಆರಂಭಿಸಿದ ಯಶ್, ಜಾಗತಿಕ ವೇದಿಕೆಯಲ್ಲೂ ಕನ್ನಡದ ಬೇರುಗಳನ್ನು ಹೆಮ್ಮೆಯಿಂದ ಸ್ಮರಿಸಿಕೊಂಡರು. ‘ನೀವು ಎಲ್ಲಿಂದ ಪ್ರಯಾಣ ಆರಂಭಿಸುತ್ತೀರಿ ಎಂಬುದು ನೀವು ಎಷ್ಟು ದೂರ ಸಾಗುತ್ತೀರಿ ಎಂಬುದನ್ನು ನಿರ್ಧರಿಸುವುದಿಲ್ಲ. ಇಂದು ಕನ್ನಡ ಚಿತ್ರರಂಗದ ಪ್ರತಿನಿಧಿಯಾಗಿ, ನಮ್ಮ ನೆಲದ ಮಹಾನ್ ಕತೆಯನ್ನು ಜಗತ್ತಿಗೆ ಹೇಳುವುದಕ್ಕೆ ನನಗೆ ಅಪಾರ ಹೆಮ್ಮೆಯಿದೆ. ಭಾರತದಲ್ಲಿ ನಾವು ರಾಮಾಯಣವನ್ನು ಕೇವಲ ಕಥೆಯಾಗಿ ಹೇಳುವುದಿಲ್ಲ, ಅದನ್ನು ಸ್ಮರಿಸುತ್ತೇವೆ ಮತ್ತು ಮುಂದಿನ ತಲೆಮಾರುಗಳಿಗೆ ದಾಟಿಸುತ್ತೇವೆ. ಸಹಸ್ರಾರು ವರ್ಷಗಳಿಂದ ಸಂಚರಿಸಿರುವ ಈ ಮಹಾಕಾವ್ಯವನ್ನು ವಿಶ್ವದ ಮುಂದೆ ಪ್ರಸ್ತುತಪಡಿಸುತ್ತಿರುವುದು ನಮಗೆ ಹೆಮ್ಮೆಯ ಕ್ಷಣ’ ಎಂದರು.

ಯಶ್ ಇಲ್ಲದಿದ್ದರೆ ‘ರಾಮಾಯಣ’ ಸಾಧ್ಯವೇ ಇರುತ್ತಿರಲಿಲ್ಲ: ನಮಿತ್ ಮಲ್ಹೋತ್ರಾ

ನಿರ್ಮಾಪಕ ನಮಿತ್ ಮಲ್ಹೋತ್ರಾ, ರಾಕಿಂಗ್ ಸ್ಟಾರ್ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ‘ಯಶ್ ಕೇವಲ ಈ ಚಿತ್ರದ ಸೂಪರ್‌ಸ್ಟಾರ್ ಮಾತ್ರವಲ್ಲ, ನನ್ನ ಪ್ರಮುಖ ಸಹ-ನಿರ್ಮಾಪಕ. ಅವರು ಜತೆಗಿಲ್ಲದಿದ್ದರೆ ಈ ಬೃಹತ್ ಪ್ರಾಜೆಕ್ಟ್ ಕಾರ್ಯರೂಪಕ್ಕೆ ಬರಲು ಸಾಧ್ಯವೇ ಇರುತ್ತಿರಲಿಲ್ಲ. ನಾವು ಮೊದಲ ದಿನ ಲಾಸ್ ಏಂಜಲೀಸ್‌ನಲ್ಲಿ ಭೇಟಿಯಾದ ಕ್ಷಣದಿಂದಲೇ ಅವರ ಅದಮ್ಯ ವಿಶ್ವಾಸ ಹಾಗೂ ನನ್ನ ದೂರದೃಷ್ಟಿ ಒಂದಾಗಿ ಇಷ್ಟೆಲ್ಲವನ್ನೂ ಸಾಧ್ಯವಾಗಿಸಿತು’ ಎಂದರು.

ಚಿನ್ನದ ದಶಮುಖ ರಾವಣನನ್ನು ಧರಿಸಿ ಮಿಂಚಿದ ಯಶ್

ಯಶ್ ಈ ಸಂದರ್ಭದಲ್ಲಿ ಕಡುಗಪ್ಪು ಬಣ್ಣದ ಸೂಟ್‌ನಲ್ಲಿ ಕಂಗೊಳಿಸಿದರು. ಈ ಸೂಟಿನ ಮೇಲೆ ಅವರು ಧರಿಸಿದ್ದ ರಾವಣನ ಹತ್ತು ತಲೆಗಳ ವಿನ್ಯಾಸದ, ಚಿನ್ನದ ಸರಗಳು ನೇತಾಡುವ ಆಕರ್ಷಕ ಚಿನ್ನದ ಬ್ರೂಚ್ ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ಡಾರ್ಕ್ ಸನ್‌ಗ್ಲಾಸ್, ಕಿವಿಯಲ್ಲಿ ಹೂಪ್ ಇಯರಿಂಗ್ಸ್ ಧರಿಸಿ ಆಕರ್ಷಕವಾಗಿ ಕಂಡುಬಂದರು. ಈ ವೇಳೆ ಯಶ್ ಅವರಿಗೆ ಪತ್ನಿ ರಾಧಿಕಾ ಪಂಡಿತ್ ಸಾಥ್ ನೀಡಿದರು.

4,000 ಕೋಟಿ ರೂ. ಬಜೆಟ್‌

ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾದ ಒಟ್ಟು ಬಜೆಟ್ ಬರೋಬ್ಬರಿ 4000 ಕೋಟಿ ರೂಪಾಯಿಗಳಿಗೂ ಅಧಿಕವಾಗಿದ್ದು, ಈ ಚಿತ್ರದ ಮೊದಲ ಭಾಗ ಭಾರತದಲ್ಲಿ ನವೆಂಬರ್ 5ರಂದು ಬಿಡುಗಡೆಯಾಗುತ್ತಿದೆ.