ಬಾಲಿವುಡ್ ಛಾಯಾಗ್ರಾಹಕ ಕನ್ನಡಿಗ ಈರಣ್ಣ ಬಿದರಿ ಇನ್ನಿಲ್ಲ
ಹೃದಯಾಘಾತದಿಂದ ಈರಣ್ಣ ಬಿದರಿ ನಿಧನ| ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬಿದರಿ| ಬಾಲಿವುಡ್ ಚಿತ್ರವೊಂದರ ಸಂದರ್ಭ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರುವ ಛಾಯಾಗ್ರಹಣ ಸೆರೆ ಹಿಡಿಯುವಲ್ಲಿ ವಿಶೇಷತೆ ಮೆರೆದು ಪ್ರಶಸ್ತಿ ಪಡೆದುಕೊಂಡಿದ್ದ ಕನ್ನಡಿಗ|
ರಬಕವಿ-ಬನಹಟ್ಟಿ(ಡಿ.28): ಹಿಂದಿ, ಮರಾಠಿ, ಕೊಂಕಣಿ ಹಾಗೂ ಗುಜರಾತಿ ಚಿತ್ರರಂಗದ ಹಿರಿಯ ಛಾಯಾಗ್ರಾಹಕರಾದ ಈರಣ್ಣ (ಈಶ್ವರಲಾಲ್) ಬಸಲಿಂಗಪ್ಪ ಬಿದರಿ(87) ಭಾನುವಾರ ಬೆಳಗಿನ ಜಾವ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
1933ರಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಜನಿಸಿದ ಇವರು ಛಾಯಾಗ್ರಹಣ ಸಲುವಾಗಿ ವ್ಯಾಸಂಗ ಮಾಡಲು ಬೆಂಗಳೂರಿಗೆ ಅಲ್ಲಿಂದ ಹೆಚ್ಚಿನ ವ್ಯಾಸಂಗಕ್ಕೆ ಮುಂಬೈಗೆ 1960ರಲ್ಲಿ ಹೋಗಿದ್ದರು. ನಂತರ ಮೈಸೂರಿನವರಾದ ಹೆಸರಾಂತ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರೊಂದಿಗೆ ಹಲವಾರು ಹಿಂದಿ ಚಿತ್ರಗಳಿಗೆ ಸಹಾಯಕ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿ, ನಂತರ ಹಿಂದಿ ಚಿತ್ರಗಳಾದ ಲಲಕಾರ, ದಾಮಿ, ಗುಲಾಮಿ, ಪ್ಯಾರ್ ಕಾ ಮೋಸಂ, ಜಂಗ್, ಬಾರ್ಡರ್ ಸೇರಿದಂತೆ 70ಕ್ಕೂ ಅಧಿಕ ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದಾರೆ.
ರಜನಿಗೆ 1 ವಾರ ಬೆಡ್‌ರೆಸ್ಟ್, ಹೊಸ ಪಕ್ಷ ಘೋಷಿಸ್ತಾರಾ?
ಬಾಲಿವುಡ್ ಚಿತ್ರವೊಂದರ ಸಂದರ್ಭ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರುವ ಛಾಯಾಗ್ರಹಣ ಸೆರೆ ಹಿಡಿಯುವಲ್ಲಿ ವಿಶೇಷತೆ ಮೆರೆದು ಪ್ರಶಸ್ತಿ ಪಡೆದುಕೊಂಡಿದ್ದರು. ಇವರಿಗೆ ಫಿಲಂ ಫೇರ್ ಸೇರಿದಂತೆ ಅನೇಕ ಪ್ರಶಸ್ತಿಗಳು ಕೂಡ ಒಲಿದುಬಂದಿವೆ. ಇವರ ಅಂತ್ಯಕ್ರಿಯೆಯು ಭಾನುವಾರ ಸಂಜೆ ವಿಜಯಪುರದಲ್ಲಿ ಜರುಗಿತು.