ರಜನಿಗೆ 1 ವಾರ ಬೆಡ್‌ರೆಸ್ಟ್, ಹೊಸ ಪಕ್ಷ ಘೋಷಿಸ್ತಾರಾ?
ಆಸ್ಪತ್ರೆಯಿಂದ ರಜನಿ ಬಿಡುಗಡೆ| ಒಂದು ವಾರ ಬೆಡ್‌ರೆಸ್ಟ್‌ಗೆ ಸಲಹೆ| ಡಿ.31ಕ್ಕೆ ಪಕ್ಷ ಸ್ಥಾಪನೆ ಘೋಷಿಸುತ್ತಾರಾ ನಟ?
ಹೈದರಾಬಾದ್(ಡಿ.28): ರಕ್ತದೊತ್ತಡ ಹೆಚ್ಚಳದಿಂದ ಅಸ್ವಸ್ಥಗೊಂಡಿದ್ದ ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ಅವರು ಗುಣಮುಖರಾಗಿದ್ದಾರೆ. ಭಾನುವಾರ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ಆದರೆ, ಅವರಿಗೆ ಇನ್ನೂ 1 ವಾರ ಸಂಪೂರ್ಣ ವಿಶ್ರಾಂತಿ (ಬೆಡ್ ರೆಸ್ಟ್) ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದಾಗಿ ರಾಜಕೀಯ ಪಕ್ಷ ಸ್ಥಾಪಿಸಿ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಧುಮುಕುವ ಉಮೇದಿಯಲ್ಲಿದ್ದ ಅವರು ಏನು ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಡಿ.31ರಂದು ತಮ್ಮ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡುವುದಾಗಿ ರಜನೀಕಾಂತ್ ಕೆಲವು ವಾರಗಳ ಹಿಂದೆ ತಿಳಿಸಿದ್ದರು.
ರಕ್ತದೊತ್ತಡ ಸಹಜ:
‘ರಜನೀಕಾಂತ್ ಅವರ ಆರೋಗ್ಯ ತಪಾಸಿಸಲಾಗಿದೆ. ವರದಿಯಲ್ಲಿ ಯಾವುದೇ ಆತಂಕಕಾರಿ ವಿಷಯಗಳು ಕಂಡುಬಂದಿಲ್ಲ. ರಕ್ತದೊತ್ತಡ (ಬಿ.ಪಿ.) ಸಹಜ ಸ್ಥಿತಿಗೆ ಬಂದಿದ್ದು, ಮೊದಲಿಗಿಂತ ಅವರು ಆರಾಮವಾಗಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಡಿಸ್‌ಚಾಜ್‌ರ್ ಮಾಡಲಾಗಿದೆ’ ಎಂದು ಆಸ್ಪತ್ರೆಯ ಪ್ರಕಟಣೆ ಭಾನುವಾರ ಸಂಜೆ ತಿಳಿಸಿದೆ.
70ರ ಹರೆಯದ ರಜನಿ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ‘ಅಣ್ಣಾಟ್ಟೆ’ ಎಂಬ ತಮಿಳು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಆಗ ಚಿತ್ರತಂಡದ ನಾಲ್ವರಿಗೆ ಕೊರೋನಾ ದೃಢಪಟ್ಟಿತ್ತು. ಆಗ ರಜನೀಕಾಂತ್ ಅವರನ್ನೂ ಪರೀಕ್ಷೆಗೆ ಒಳಪಡಿಸಿದಾಗ ‘ನೆಗೆಟಿವ್’ ವರದಿ ಬಂದಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ಅವರು ಸ್ವಯಂ ಐಸೋಲೇಶನ್‌ಗೆ ಒಳಪಟ್ಟಿದ್ದರು. ಇದರ ನಡುವೆಯೇ ರಕ್ತದೊತ್ತಡ ಅಧಿಕಗೊಂಡ ಕಾರಣ ಶುಕ್ರವಾರ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.