ಸಲ್ಮಾನ್ ಖಾನ್ ಈ ಮನವಿಗೆ ಪ್ರತಿಕ್ರಿಯಿಸುತ್ತಾರೆಯೇ? ದೇವಸ್ಥಾನಕ್ಕೆ ಭೇಟಿ ನೀಡುವ ನಿರ್ಧಾರ ಕೈಗೊಳ್ಳುತ್ತಾರೆಯೇ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸದ್ಯ ಈ ಬೆಳವಣಿಗೆ ಬಾಲಿವುಡ್ ಹಾಗೂ ಬಿಷ್ಣೋಯ್ ಸಮುದಾಯದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಏನ್ ಹೇಳ್ತಾರೆ? ನೋಡಿ..

ಸಲ್ಮಾನ್ ಖಾನ್‌ಗೆ ಮತ್ತೆ ಕ್ಷಮೆಯಾಚನೆಗೆ ಮನವಿ; ‘ಮುಕಾಮ್ ದೇವಸ್ಥಾನಕ್ಕೆ ಬನ್ನಿ, ಕ್ಷಮೆ ಕೇಳಿದರೆ ಸಾಕು’ ಎಂದ ರಮೇಶ್ ಬಿಷ್ಣೋಯ್!

ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಮತ್ತು ಬಿಷ್ಣೋಯ್ (Lawrence Bishnoi) ಸಮುದಾಯದ ನಡುವಿನ ಕೃಷ್ಣಮೃಗ ಬೇಟೆ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಸುಮಾರು 28 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣದ ಕಿಡಿ ಇನ್ನೂ ಆರಿಲ್ಲ. ಇದೀಗ ಲಾರೆನ್ಸ್ ಬಿಷ್ಣೋಯ್ ಅವರ ಸಂಬಂಧಿ ರಮೇಶ್ ಬಿಷ್ಣೋಯ್ ಅವರು ಸಲ್ಮಾನ್ ಖಾನ್‌ಗೆ ಮತ್ತೊಮ್ಮೆ ಕ್ಷಮೆಯಾಚಿಸುವಂತೆ ಮನವಿ ಮಾಡಿದ್ದಾರೆ. ಬಿಕಾನೇರ್‌ನಲ್ಲಿರುವ ಬಿಷ್ಣೋಯ್ ಸಮುದಾಯದ ಪವಿತ್ರ ಮುಕಾಮ್ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆ ಕೇಳಿದರೆ ಸಾಕು ಎಂದು ಅವರು ಹೇಳಿದ್ದಾರೆ.

ಬಿಷ್ಣೋಯ್ ಸಮಾಜದ 542ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್, ಸಲ್ಮಾನ್ ಖಾನ್ ಅವರಿಗೆ ದೇವಸ್ಥಾನಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಅಷ್ಟೇ ಅಲ್ಲದೆ, ನಟನಿಗೆ ಸಂಪೂರ್ಣ ಸುರಕ್ಷತೆಯ ಭರವಸೆಯನ್ನೂ ನೀಡಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ವಿವಾದದ ಕೇಂದ್ರವಾಗಿರುವ ಪ್ರಕರಣವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ.

‘ಸಲ್ಮಾನ್ ಬಂದು ಕ್ಷಮೆ ಕೇಳಿದರೆ ಸಾಕು’

ದಿ ಟ್ರಿಬ್ಯೂನ್ ಜೊತೆ ದೂರವಾಣಿ ಮೂಲಕ ಮಾತನಾಡಿದ ರಮೇಶ್ ಬಿಷ್ಣೋಯ್, ಸಲ್ಮಾನ್ ಖಾನ್ ಬಿಕಾನೇರ್‌ನಲ್ಲಿರುವ ಮುಕ್ತಿ ಧಾಮ್ ಮುಕಾಮ್ ದೇವಸ್ಥಾನಕ್ಕೆ ಭೇಟಿ ನೀಡಿ ಬಿಷ್ಣೋಯ್ ಸಮುದಾಯದ ಬಳಿ ಕ್ಷಮೆ ಕೇಳಬಹುದು ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಅಥವಾ ಅವರ ಕುಟುಂಬದವರ ಮೇಲೆ ವೈಯಕ್ತಿಕ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸಮುದಾಯದಲ್ಲಿ ಉಳಿದಿರುವ ಅಸಮಾಧಾನವನ್ನು ಮಾತುಕತೆಯ ಮೂಲಕ ಪರಿಹರಿಸಬೇಕಿದೆ ಎಂದಿದ್ದಾರೆ. "ಇದು ಕೊನೆಗೊಳ್ಳಬೇಕು. ಕ್ಷಮೆ ಕೇಳಿದರೆ ಸಾಕು. ಈ ವಿವಾದ ಬಹಳ ದೀರ್ಘವಾಗಿದೆ" ಎಂಬುದು ಅವರ ಮನವಿಯ ಸಾರವಾಗಿದೆ.

ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮಗನ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರೆ, ರಮೇಶ್ ಅದಕ್ಕೆ ಪ್ರತಿಕ್ರಿಯೆಯಾಗಿ ವೈಯಕ್ತಿಕವಾಗಿ ಸುರಕ್ಷತೆಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಹಿಂಸಾಚಾರಕ್ಕೆ ಬೆಂಬಲವಿಲ್ಲ ಎಂದ ರಮೇಶ್

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್‌ಗೆ ಎದುರಾಗಿರುವ ಬೆದರಿಕೆಗಳ ನಡುವೆಯೇ ರಮೇಶ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ನಟನ ವಿರುದ್ಧ ಯಾವುದೇ ದಾಳಿ ಅಥವಾ ಹತ್ಯೆಯ ಬೆದರಿಕೆಯನ್ನು ತಾವು ಬೆಂಬಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಲಾರೆನ್ಸ್ ಗುಂಪಿನಿಂದ ಸಲ್ಮಾನ್ ಅಥವಾ ಅವರೊಂದಿಗೆ ಸಂಬಂಧ ಹೊಂದಿರುವ ಯಾರ ಮೇಲಾದರೂ ನಡೆಯುವ ಕೊಲೆ ಅಥವಾ ದಾಳಿಯನ್ನು ನಾನು ಬೆಂಬಲಿಸುವುದಿಲ್ಲ" ಎಂದು ರಮೇಶ್ ಹೇಳಿದ್ದಾರೆ. ಲಾರೆನ್ಸ್ ಹಾಗೂ ಇತರರನ್ನು ಹಿಂಸಾಚಾರದಿಂದ ದೂರವಿರಲು ಹಲವು ಬಾರಿ ಒತ್ತಾಯಿಸಿದ್ದೇನೆ ಎಂದೂ ತಿಳಿಸಿದ್ದಾರೆ. ಸಮುದಾಯದ ಕೋಪವನ್ನು ಹಿಂಸೆಯ ಮೂಲಕವಲ್ಲ, ಸಂವಾದ ಮತ್ತು ಕ್ಷಮೆಯಾಚನೆಯ ಮೂಲಕ ಪರಿಹರಿಸಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

1998ರ ಕೃಷ್ಣಮೃಗ ಬೇಟೆ ಪ್ರಕರಣವೇ ವಿವಾದದ ಮೂಲ

ಈ ವಿವಾದದ ಹಿನ್ನೆಲೆ 1998ರ ಅಕ್ಟೋಬರ್ ತಿಂಗಳಿಗೆ ಸೇರಿದೆ. ಜೋಧ್‌ಪುರ ಸಮೀಪದ ಕಂಕಣಿ ಗ್ರಾಮದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣವು ಬಿಷ್ಣೋಯ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಲಾಗುತ್ತದೆ.

ವನ್ಯಜೀವಿಗಳು ಮತ್ತು ಮರಗಳ ಸಂರಕ್ಷಣೆಗೆ ವಿಶೇಷ ಮಹತ್ವ ನೀಡುವ ಬಿಷ್ಣೋಯ್ ಸಮುದಾಯಕ್ಕೆ ಕೃಷ್ಣಮೃಗಗಳು ಅತ್ಯಂತ ಪವಿತ್ರ ಹಾಗೂ ಮಹತ್ವದ ಪ್ರಾಣಿಗಳಾಗಿವೆ. ಗುರು ಜಂಭೇಶ್ವರರು 15ನೇ ಶತಮಾನದಲ್ಲಿ ಸ್ಥಾಪಿಸಿದ 29 ತತ್ವಗಳನ್ನು ಸಮುದಾಯದವರು ಅನುಸರಿಸುತ್ತಾರೆ. ರಾಜಸ್ಥಾನದ ಬಿಕಾನೇರ್, ಜೋಧ್‌ಪುರ, ನಾಗೌರ್, ಬಾರ್ಮರ್ ಸೇರಿದಂತೆ ಹರಿಯಾಣ ಮತ್ತು ಪಂಜಾಬ್‌ನ ಹಲವು ಪ್ರದೇಶಗಳಲ್ಲಿ ಈ ಸಮುದಾಯದ ಜನರು ನೆಲೆಸಿದ್ದಾರೆ.

2018ರಲ್ಲಿ ಜೋಧ್‌ಪುರ ವಿಚಾರಣಾ ನ್ಯಾಯಾಲಯವು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಘೋಷಿಸಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರಿಗೆ ಜಾಮೀನು ದೊರಕಿತ್ತು. ಪ್ರಕರಣದಲ್ಲಿ ಸಹ-ಆರೋಪಿಗಳಾಗಿದ್ದ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ ಮತ್ತು ನೀಲಂ ಅವರನ್ನು ಖುಲಾಸೆಗೊಳಿಸಲಾಗಿತ್ತು.

ಸಲ್ಮಾನ್ ಖಾನ್‌ಗೆ ಭದ್ರತಾ ಆತಂಕ; ಮತ್ತೆ ಚರ್ಚೆಗೆ ಬಂದ ಗ್ಯಾಂಗ್ ಬೆದರಿಕೆ!

ಕೃಷ್ಣಮೃಗ ಬೇಟೆ ಪ್ರಕರಣದ ಬಳಿಕ ಸಲ್ಮಾನ್ ಖಾನ್ ವಿರುದ್ಧ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಹಲವು ಬಾರಿ ಬೆದರಿಕೆಗಳು ಬಂದಿರುವುದಾಗಿ ವರದಿಯಾಗಿದೆ. 2024ರ ಏಪ್ರಿಲ್‌ನಲ್ಲಿ ಮುಂಬೈನಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಿಂದ ನಟನ ಭದ್ರತೆಯ ಬಗ್ಗೆ ದೊಡ್ಡ ಮಟ್ಟದ ಆತಂಕ ವ್ಯಕ್ತವಾಗಿತ್ತು.

ಬಾಲಿವುಡ್‌ನ ಇತರ ಗಣ್ಯರಿಗೂ ಈ ಗ್ಯಾಂಗ್‌ನಿಂದ ಬೆದರಿಕೆಗಳು ಬಂದಿರುವ ಆರೋಪಗಳಿವೆ. ಹೀಗಾಗಿ ಸಲ್ಮಾನ್ ಖಾನ್ ಮತ್ತು ಬಿಷ್ಣೋಯ್ ಸಮುದಾಯದ ನಡುವಿನ ವಿವಾದವು ಕೇವಲ ಹಳೆಯ ಪ್ರಕರಣಕ್ಕೆ ಸೀಮಿತವಾಗದೆ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯ ವಿಚಾರವಾಗಿಯೂ ಗಮನ ಸೆಳೆಯುತ್ತಿದೆ.

ವಿವಾದಕ್ಕೆ ಅಂತ್ಯ ಸಿಗುತ್ತಾ?

ರಮೇಶ್ ಬಿಷ್ಣೋಯ್ ಅವರ ಇತ್ತೀಚಿನ ಮನವಿಯು ಹಲವು ವರ್ಷಗಳಿಂದ ಮುಂದುವರಿದಿರುವ ಈ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನವೆಂದು ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ಮುಕಾಮ್ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆ ಕೇಳಿದರೆ ಸಮುದಾಯದ ಅಸಮಾಧಾನ ಕಡಿಮೆಯಾಗಬಹುದು ಎಂಬುದು ಅವರ ಅಭಿಪ್ರಾಯ.

ಆದರೆ, ಸಲ್ಮಾನ್ ಖಾನ್ ಈ ಮನವಿಗೆ ಪ್ರತಿಕ್ರಿಯಿಸುತ್ತಾರೆಯೇ? ದೇವಸ್ಥಾನಕ್ಕೆ ಭೇಟಿ ನೀಡುವ ನಿರ್ಧಾರ ಕೈಗೊಳ್ಳುತ್ತಾರೆಯೇ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸದ್ಯ ಈ ಬೆಳವಣಿಗೆ ಬಾಲಿವುಡ್ ಹಾಗೂ ಬಿಷ್ಣೋಯ್ ಸಮುದಾಯದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.