ಬೆಂಗಳೂರು[ಫೆ.18]: ನಟ ದರ್ಶನ್‌ ಹುಟ್ಟುಹಬ್ಬ ಆಚರಣೆ ವೇಳೆ ರಾಜರಾಜೇಶ್ವರಿ ನಗರ ಐಡಿಯಲ್‌ ಹೋಂ ಲೇಔಟ್‌ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೇಬಲ್‌ ಮೇಲೆ ದರ್ಶನ್‌ ಅಭಿಮಾನಿ ಎನ್ನಲಾದವರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಜ್ಞಾನಭಾರತಿ ಠಾಣೆ ಕಾನ್‌ಸ್ಟೇಬಲ್‌ ದೇವರಾಜ್‌ ಹಲ್ಲೆಗೊಳಗಾಗಿದ್ದು, ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ದರ್ಶನ್‌ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದ ವ್ಯವಸ್ಥಾಪಕರು ಹಾಗೂ ಅಪರಿಚಿತ ಅಭಿಮಾನಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದರ್ಶನ್‌ ಹುಟ್ಟುಹಬ್ಬ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅವರ ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್‌ ಲೇಔಟ್‌ನ ನಿವಾಸದ ಎದುರು ದೇವರಾಜ್‌ ಸೇರಿದಂತೆ ಹಲವರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಕಾರ್ಯಕ್ರಮ ಸ್ಥಳದಲ್ಲಿ ಅಭಿಮಾನಿಗಳು ಸರದಿಯಲ್ಲಿ ಹೋಗಲು ಆಯೋಜಕರು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ, ನೂಕುನುಗ್ಗಲು ಉಂಟಾಗಿತ್ತು.

ನೂಕುನುಗ್ಗಲು ನಿಯಂತ್ರಿಸುವ ಕೆಲಸದಲ್ಲಿ ನಿರತರಾಗಿದ್ದ ದೇವರಾಜ್‌ಗೆ ಯಾರೋ ಮೂಗಿಗೆ ಪಂಚ್‌ ಮಾಡಿದ್ದರು. ಅಲ್ಲದೆ, ಕಣ್ಣಿನ ಮೇಲೆ ಗುದ್ದಿದ್ದರು. ತೀವ್ರ ರಕ್ತಸ್ರಾವವಾಗುತ್ತಿದ್ದ ಗಾಯಾಳುವನ್ನು ಸಹೋದ್ಯೋಗಿ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದರು.