ಬೆಂಗಳೂರು ತನ್ನ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅನಿಲ್ ಕಪೂರ್ ಹೇಳಿದ್ದಾರೆ. ತಮ್ಮ ಮೊದಲ ಗರ್ಲ್‌ಫ್ರೆಂಡ್‌ಗೆ ಬೆಂಗಳೂರಿನಲ್ಲಿ ಸೀರೆ ಖರೀದಿಸಿದ್ದು, ಅದು ಅವರ ಪತ್ನಿಯಾಗಲು ಕಾರಣವಾಯಿತು ಎಂದು ನೆನಪಿಸಿಕೊಂಡಿದ್ದಾರೆ.

ಬೆಂಗಳೂರು (ಮಾ.13): ತನ್ನ ಸಿನಿ ಬದುಕು ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ಬೆಂಗಳೂರಿನ ಪಾತ್ರ ಬಹಳಷ್ಟಿದೆ ಎಂದು ಬಾಲಿವುಡ್‌ ಲಖನ್‌ ಅನಿಲ್‌ ಕಪೂರ್‌ ಹೇಳಿದ್ದಾರೆ.ಇತ್ತೀಚೆಗೆ ಖಾಸಗಿ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅನಿಲ್‌ ಕಪೂರ್‌ ತಮ್ಮ ಜೀವನದಲ್ಲಿ ಬೆಂಗಳೂರು ವಹಿಸಿದ್ದ ಪಾತ್ರವನ್ನು ನೆನಪಿಸಿಕೊಂಡಿದ್ದಾರೆ. ಪ್ರೊಡಕ್ಷನ್‌ ಬಾಯ್‌ ಆಗಿದ್ದ ನನ್ನನ್ನು ಹೀರೋ ಆಗಿ ಮಾಡಿದ್ದು ಬೆಂಗಳೂರು ಎಂದಿರುವ ಅನಿಲ್‌ ಕಪೂರ್‌, ತಮ್ಮ ಸಂಗಾತಿ ಸಿಗುವಲ್ಲೂ ಬೆಂಗಳೂರಿನ ಪಾತ್ರವನ್ನು ನೆನಪಿಸಿಕೊಂಡಿದ್ದಾರೆ. 

'ನಾನು ಬೆಂಗಳೂರಿನಲ್ಲಿದ್ದ ದಿನಗಳನ್ನು ನೆನಪಿಸಿಕೊಳ್ಳಬೇಕು. ಎಂಜಿ ರೋಡ್‌ಗೆ ಹೋಗೋದನ್ನ ಸಖತ್‌ ಎಂಜಾಯ್‌ ಮಾಡ್ತಿದ್ದೆ. ಅಲ್ಲಿಯೇ ಅಂದು ನನ್ನ ಗರ್ಲ್‌ ಫ್ರೆಂಡ್‌ ಆಗಿದ್ದ ಸುನೀತಾಗೆ ಮೊದಲ ಗಿಫ್ಟ್‌ ಖರೀದಿ ಮಾಡಿದ್ದೆ. ಬೆಂಗಳೂರಿನ ಒಂದು ಸೀರೆ. ಆ ಬಳಿಕವೇ ಆಕೆ ನನ್ನ ಪತ್ನಿಯಾದಳು ಹಾಗೂ ನನ್ನ ಮಕ್ಕಳಿಗೆ ತಾಯಿಯಾದಳು. ಇಂದು ಕೂಡ ಬೆಂಗಳೂರಿಗೆ ಬರಲು ವಿಮಾನವೇರುವ ಮುನ್ನ ಆಕೆಗೆ ಇದನ್ನೇ ಕೇಳಿದ್ದೆ. ಬೆಂಗಳೂರಿನಿಂದ ಇನ್ನೊಂದು ಸೀರೆ ತಂದುಕೊಡಲಾ ಎಂದು ಕೇಳಿದೆ. ಆಕೆ ನನ್ನನ್ನು ನೋಡಿದಳು. ನಾವಿಬ್ಬರೂ 45 ವರ್ಷಗಳ ಹಿಂದಿನ ನೆನಪುಗಳಿಗೆ ಜಾರಿದೆವು. ಬಹುಶಃ ನಾವಿಬ್ಬರೂ ಜೊತೆಯಾಗಿಯೇ ಇರಬೇಕು ಅನ್ನೋದೇ ವಿಧಿ ಆಗಿತ್ತು. ಬೆಂಗಳೂರಿನ ಸೀರೆ ಅದಕ್ಕೊಂದು ಕಾರಣವಾಯಿತು' ಎಂದು ಹೇಳಿದ್ದಾರೆ.

ಪ್ರೊಡಕ್ಷನ್‌ ಬಾಯ್‌ ಆಗಿದ್ದ ನನ್ನನ್ನು ಹೀರೋ ಮಾಡಿದ್ದು ಬೆಂಗಳೂರು ಎಂದ ಪ್ರಖ್ಯಾತ ಬಾಲಿವುಡ್‌ ನಟ!

ಪಲ್ಲವಿ ಅನುಪಲ್ಲವಿ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅನಿಲ್‌ ಕಪೂರ್‌, ಕನ್ನಡ ಸಿನಿಮಾದಲ್ಲಿ ಮತ್ತೆ ಹೊಸ ಅಲೆಯ ಸಿನಿಮಾಗಳು ಬರುತ್ತಿವೆ ಎಂದು ಹೇಳಿದ್ದಾರೆ. ಹಾಗೇನಾದರೂ ಕನ್ನಡದಲ್ಲಿ ಮತ್ತೊಮ್ಮೆ ನಟಿಸುವ ಆಸೆ ಇದೆಯಾ ಎನ್ನುವ ಪ್ರಶ್ನೆಗೆ, 'ನನ್ನ ಪ್ರಕಾರ ಇದೇ ಸರಿಯಾದ ಸಮಯ. ಕೆಜಿಎಫ್‌ನಂಥ ಸಿನಿಮಾಗಳು ಬಂದಿವೆ. ಟಾಕ್ಸಿಕ್‌ನಂಥ ಸಿನಿಮಾ ತಯಾರಾಗುತ್ತಿದೆ. ಇಂಥ ಸಿನಿಮಾಗಳು ವಿಶ್ವದಾದ್ಯಂತ ಇರುವ ಪ್ರೇಕ್ಷಕರ ಜೊತೆ ಲಿಂಕ್‌ ಸಾಧಿಸುತ್ತದೆ' ಎಂದು ಹೇಳಿದರು.
ಭಾರತದ ಸಂಸ್ಕೃತಿ, ಕಥೆಗಳು ಹಾಗೂ ಮೌಲ್ಯದೊಂದಿಗೆ ಲಿಂಕ್‌ ಮಾಡುವ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ನನಗೆ ಮೊದಲಿನಿಂದಲೂ ಇರುವ ಆಸೆ. ಇದು ಎಲ್ಲಾ ಭಾರತೀಯರನ್ನು ಒಗ್ಗೂಡಿಸುತ್ತದೆ. ಕಾಂತಾರ ರೀತಿಯ ಸಿನಿಮಾಗಳು ಇದಕ್ಕೆ ಉದಾಹರಣೆ. ಈ ಸಿನಿಮಾಗಳ ನಿರ್ದೇಶಕರು ಮಾಡಿದ ಸಿನಿಮಾಗಳು ನನಗೆ ಮಾತ್ರವಲ್ಲ, ಜಾಗತಿಕ ವೀಕ್ಷಕರನ್ನು ಸೆಳೆದಿದೆ ಎಂದು ಅನಿಲ್‌ ಕಪೂರ್‌ ಹೇಳಿದ್ದಾರೆ.

ಮುಂಬೈ 'ಗ್ಯಾರೇಜ್‌'ನಲ್ಲಿ ವಾಸವಿದ್ದ ನಟ; ಈಗ ದುಬೈ, ಲಂಡನ್‌, ಅಮೆರಿಕಾದಲ್ಲೂ ಮನೆ, ಹತ್ತು ಕಾರುಗಳು!