ಸ್ಯಾಂಡಲ್‌ವುಡ್ ನಟಿಯೊಬ್ಬರು ನಿರ್ಮಾಪಕ ಅರವಿಂದ್ ರೆಡ್ಡಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು, ತಾವು ಲಿವ್-ಇನ್ ಸಂಬಂಧದಲ್ಲಿದ್ದಾಗ ಹಿಂಸೆ ನೀಡಿದ್ದಾರೆಂದು ದೂರಿದ್ದಾರೆ. ಐಸಿಯುನಲ್ಲಿದ್ದಾಗ ತನ್ನ ಬಟ್ಟೆ ಹರಿದು ಅರೆಬೆತ್ತಲೆ ಮಾಡಿದ್ದರು ಎಂದು ನಟಿ ಆರೋಪಿಸಿದ್ದಾರೆ.

ಬೆಂಗಳೂರು (ನ.15): ಉದ್ಯಮಿ ಹಾಗೂ ನಿರ್ಮಾಪಕ ಅರವಿಂದ್‌ ರೆಡ್ಡಿ ಹಾಗೂ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಸಿದ್ದ ಸ್ಯಾಂಡಲ್‌ವುಡ್‌ ನಟಿ ನಡುವಿನ ವಿವಾದ ತಾರಕಕ್ಕೆ ಏರಿದೆ. ಒಂದೆಡೆ ಅರವಿಂದ್‌ ರೆಡ್ಡಿ ವಿರುದ್ಧ ನಟಿ ಕಿರುಕುಳದ ಕೇಸ್‌ ದಾಖಲು ಮಾಡಿದ್ದರೆ, ಇನ್ನೊಂದೆಡೆ ಅರವಿಂದ್‌ ರೆಡ್ಡಿ ನನ್ನ ಮೇಲಿರುವ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಲ್ಲದೆ, ತಮ್ಮ ಕೇಸ್‌ ವಿರುದ್ಧ ಕೋರ್ಟ್‌ನಿಂದ ಜಾಮೀನು ಕೂಡ ಪಡೆದುಕೊಂಡಿದ್ದಾರೆ. ನಾನು ಆಕೆಗೆ ಮೂರು ಕೋಟಿ ಖರ್ಚು ಮಾಡಿದ್ದೇನೆ. ಪೋರ್ಶೆ ಕಾರು ನೀಡಿದ್ದೇನೆ. ಅವರ ಮನೆಗೆ ಸಹಾಯ ಮಾಡಿದ್ದೇನೆ ಎಂದು ಅರವಿಂದ್ ರೆಡ್ಡಿ ಹೇಳಿದ್ದರೆ, ಇನ್ನೊಂದೆಡೆ ನಟಿ ಈ ಸುದ್ದಿಯನ್ನು ನಿರಾಕರಿಸಿದ್ದಾರೆ.

ಈ ಬಗ್ಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಮಾತನಾಡಿರುವ ನಟಿ, 'ನನ್ನ ಸ್ನೇಹಿತ, ಮನೆ ಮಾಲೀಕ, ಆತ್ಮೀಯ ಗೆಳತಿ ಅನುಪಮಾ ಗೌಡ ಬಗ್ಗೆ ಅನಾಮಧೇಯ ಕೆಟ್ಟ ಲೆಟರ್‌ ಬರುತ್ತಿದ್ದವು. ನನಗೆ ಅರವಿಂದ್ ವೆಂಕಟ್ ರೆಡ್ಡಿ ಮೇಲೆ ಅನುಮಾನ ಇತ್ತು. ಏಕೆಂದರೆ, ನಾನು ಅವರ ಜೊತೆ 6 ತಿಂಗಳು ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿ ಇದ್ದೆ. ಎರಡು ವರ್ಷದ ಹಿಂದೆ ಅವರೊಂದಿಗೆ ನನ್ನ ರಿಲೇಷನ್‌ಷಿಪ್‌ ಇತ್ತು' ಎಂದು ನಟಿ ಹೇಳಿದ್ದಾರೆ.

ಆಗ ಸಮಸ್ಯೆ ಆಗಿತ್ತು. ಇದರಿಂದ ನಾನು ಹೊರಬರಬೇಕು ಎಂದಾಗ ಅವರ ಜೊತೆ ಗಲಾಟೆ ಆಯಿತು. ಆಗ ತುಂಬಾ ತೊಂದರೆ ಮಾಡಿದ್ದ ಕಾರಣಕ್ಕೆ ಕಮೀಷನರ್‌ ಅವರಿಗೆ ದೂರು ಕೊಟ್ಟಿದ್ದೆ. ಆಗ ಇನ್ನು ತೊಂದರೆ ಕೊಡಲ್ಲ ಅಂತಾ ಹೇಳಿ ನಿಲ್ಲಿಸಿದ್ದರು. ಈಗ ಮತ್ತೆ ಅದನ್ನೇ ಶುರು ಮಾಡಿದ್ದಾರೆ . ನನಗೆ ಬದುಕೋಕೆ ಆಗದೆ ಇರೋ ಹಾಗೆ ಮಾಡಿದ್ದಾರೆ. ಅವರು ತುಂಬಾ ಪವರ್ ಫುಲ್ ತುಂಬಾ ದುಡ್ಡು ಇರೋರು. ನನಗೆ ಇದನ್ನ ಫೇಸ್ ಮಾಡೋಕೆ ಆಗುತ್ತಾ ಅಂತ ಗೊತಿರಲಿಲ್ಲ. ಈಗ ಇದು ಎಷ್ಟು ದೊಡ್ಡದಾಗುತ್ತೆ ಅಂತ ಗೊತಿರಲಿಲ್ಲ ಎಂದು ಹೇಳಿದ್ದಾರೆ.

ನನ್ನ ಹಣ ನಾನು ಸಂಪಾದಿಸಿದ್ದೇನೆ

ನನಗೆ ಎರಡು ವರ್ಷದ ಹಿಂದೆ ಪರಿಚಯ ಆಗಿತ್ತು. ಅವರ ಜೊತೆ ಇದ್ದಿದ್ದು 6 ತಿಂಗಳು ಮಾತ್ರ. ನಂತರದ 6 ತಿಂಗಳು ತುಂಬಾ ಹಿಂಸೆ ನೀಡಿದ್ದರು. ನಾನು ಎಲ್ಲಾ ಕಡೆ ಅವರನ್ನ ಬ್ಲಾಕ್ ಮಾಡಿದ್ದೇನೆ. ಮತ್ತೆ ಈಗ ಎರಡು ತಿಂಗಳಿನಿಂದ ಸಮಸ್ಯೆ ಶುರುವಾಗಿದೆ. ದುಡ್ಡು ಕೊಟ್ಟಿದ್ದಾರೆ ಅಂತಾ ಹೇಳುತ್ತಿದ್ದಾರೆ. ಅವರಿಂದ ನಾನು ಎಂದೂ ಹಣ ಪಡೆದುಕೊಂಡಿಲ್ಲ. ಪ್ರೀತಿಯಲ್ಲಿ ಇದ್ದಾಗ ಅವರು ನನಗೆ ಖರ್ಚು ಮಾಡಿದ್ದಾರೆ. ನಾನು ನನ್ನ ಸಂಪಾದನೆ ಮಾಡಿದ್ದೇನೆ. ನನಗೆ ಅವರು ಮೂರು ಕೋಟಿ ಖರ್ಚು ಮಾಡಿಲ್ಲ. ನನಗೆ ಕಾರ್ ಕೊಡಿಸಿದ್ದಾರೆ ಅದನ್ನ ವಾಪಾಸ್ ಕೊಟ್ಟಿದ್ದೇನೆ. ಅವರು ಮನೆ ಕೊಡಿಸಿದ್ದೆ ಎಂದು ಹೇಳುತ್ತಿದ್ದಾರೆ. ನಾನು ಯಾವತ್ತೂ ಅವರ ಮನೆಯಲ್ಲಿ ಇದ್ದಿರಲೇ ಇಲ್ಲ. ಅವರು ನನಗೆ ಏನೆಲ್ಲ ಕೊಟ್ಟಿದ್ದರೋ ಅದನ್ನ ನಾನು ವಾಪಾಸ್ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಬಟ್ಟೆ ಹರಿದು ಅರೆಬೆತ್ತಲೆ ಮಾಡಿದ್ದರು

ನಾನು ಹುಷಾರಿಲ್ಲದೆ ಐಸಿಯುನಲ್ಲಿದೆ. ಆಗ ನನ್ನ ಬಟ್ಟೆ ಹರಿದು ಅರೆಬೆತ್ತಲೆ ಮಾಡಿದ್ದರು ಎಂದು ನಟಿ ದೊಡ್ಡ ಆರೋಪ ಮಾಡಿದ್ದಾರೆ. ಈ ಬಗ್ಗೆ ಅವರು ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿಯೂ ತಿಳಿಸಿದ್ದಾರೆ.

ನಟಿ ಆರತಿ ಪಡುಬಿದ್ರೆ ಬಗ್ಗೆಯೂ ಆರೋಪ

ನಟಿ ಆರತಿ ಪಡುಬಿದ್ರೆ ಬಗ್ಗೆಯೂ ಕೃಷಿ ಆರೋಪ ಮಾಡಿದ್ದಾರೆ. ಅವರು ಅರವಿಂದ್ ಜೊತೆ ಗುರುತಿಸಿಕೊಂಡಿದ್ದರು. ಅವರು ನನ್ನ ಫೋಟೋ ತೆಗೆದು ಅರವಿಂದ್‌ಗೆ ಕಳಿಸುತ್ತಿದ್ದರು. ನಾನು ಕೇರಳಕ್ಕೆ ಹೋಗುತ್ತಿದ್ದೆ. ಆಗ ನಾನು ಎಲ್ಲಿದ್ದೇನೆ ಅಂತ ಫೋಟೋ ತೆಗೆದು ಅರವಿಂದ್ ಅವರಿಗೆ ಕಳಿಸಿದ್ದರು. ಅದಕ್ಕೆ ನಾನು ಅವರ ಮೇಲೆ ಅನುಮಾನ ಪಟ್ಟು ದೂರು ಕೊಟ್ಟಿದ್ದೇನೆ ಎಂದಿದ್ದಾರೆ.