ಸದಾ ಸುಳ್ಳು ಬೊಗಳುವ ರಾಜನ ಸುಳ್ಳು ಹೇಳಲೂ ಬಾರದ ದಡ್ಡ ಗೂಂಡಾಪಡೆ ಎಸ್‌ಬಿಐ: ಕಿಶೋರ್
ನಟ ಕಿಶೋರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಚುನಾವಣಾ ಬಾಂಡ್ ವಿಚಾರದಲ್ಲಿ ಎಸ್‌ಬಿಐ ನಡೆದುಕೊಂಡಿರುವ ರೀತಿಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಎಸ್‌ಬಿಐಅನ್ನು ದಡ್ಡ ಗೂಂಡಾಪಡೆ ಎಂದು ಕರೆದಿದ್ದಾರೆ.
ಬೆಂಗಳೂರು (ಮಾ.14): ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಕುರಿತಾಗಿ ಟೀಕೆ ಮಾಡುತ್ತಲೇ ಇರುವ ನಟ ಕಿಶೋರ್, ಇತ್ತೀಚಿನ ಚುನಾವಣಾ ಬಾಂಡ್ ವಿಚಾರವಾಗಿಯೂ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಸರ್ಕಾರದ ನೀತಿ ನಿರೂಪಣೆ ವಿಚಾರವಾಗಿ ಕಿಡಿಕಾರುತ್ತಲೇ ಇರುವ ಕಿಶೋರ್, ಇತ್ತೀಚೆಗೆ ಸಾಕಷ್ಟು ಸದ್ದು ಮಾಡಿದ ಚುನಾವಣಾ ಬಾಂಡ್ ವಿಚಾರವಾಗಿ ಪೋಸ್ಟ್ ಮಾಡಿದ್ದಾರೆ. ಚುನಾವಣಾ ಬಾಂಡ್‌ನ ಮಾಹಿತಿಗಳನ್ನು ಕೇಂದ್ರ ಚುನಾವಣಾ ಆಯೋಗ ಹಾಗೂ ತನಗೆ ಸಲ್ಲಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ, ಇದು ಸಾಕಷ್ಟು ಸಮಯ ಹಿಡಿಯುತ್ತದೆ. ಜೂನ್ ಅಂತ್ಯದವರೆಗೆ ಸಮಯ ನೀಡಿ ಎಂದು ಎಸ್‌ಬಿಐ ಮನವಿ ಮಾಡಿತ್ತು. ಆದರೆ, ಎಸ್‌ಬಿಐನ ಮನವಿ ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್, ಮಾರ್ಚ್ 12ರ ಒಳಗಾಗಿ ಈ ಮಾಹಿತಿ ಸಲ್ಲಿಕೆ ಮಾಡಬೇಕು ಎಂದಿತ್ತು. ಅದರಂತೆ ಮಾರ್ಚ್ 12ರ ಒಳಗಾಗಿ ಎಸ್‌ಬಿಐ ಇದರ ಮಾಹಿತಿಯನ್ನು ನೀಡಿತ್ತು. ಇದೇ ವಿಚಾರವಾಗಿ ಕಿಶೋರ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಎಸ್‌ಬಿಐಅನ್ನು ದಡ್ಡ ಗೂಂಡಾಪಡೆ ಎಂದು ಅವರು ಕರೆದಿದ್ದಾರೆ.
'ನಾಚಿಕೆಗೇಡು ಎಸ್.ಬಿ.ಐ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಭಿಕ್ಷುಕರೂ ಡಿಜಿಟಲ್ ಬ್ಯಾಂಕಿಂಗ್ ಮಾಡುವ ಭಾರತದಲ್ಲಿ, ದೇಶದ ಅತಿ ದೊಡ್ಡಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ದೇಶದ ಅತಿದೊಡ್ಡ ಅಸಂವೈಧಾನಿಕ ಹಫ್ತಾ ವಸೂಲಿ ಹಗರಣ ಎಲೆಕ್ಟೊರಲ್ ಬಾಂಡಿನ ಲೆಕ್ಕವನ್ನು ಕೈಯಲ್ಲಿ ಬರೆದಿಟ್ಟಿದೆಯಂತೆ.. ಎಷ್ಟು ಹಾಸ್ಯಾಸ್ಪದ..ಹಾಗಾಗಿ 22 ಸಾವಿರ ಎಂಟ್ರಿ ವಿವರ ಕೊಡೋಕೆ ಐದು ತಿಂಗಳು ಬೇಕಂತೆ.. ( ಎಲೆಕ್ಷನ್ ). ಸದಾ ಸುಳ್ಳು ಬೊಗಳುವ ರಾಜನ ಸುಳ್ಳು ಹೇಳಲೂ ಬಾರದ ದಡ್ಡ ಗೂಂಡಾಪಡೆ .. ಇವರೆಲ್ಲ ಸೇರಿ ಯಾರ ಕಿವಿಯ ಮೇಲೆ ಹೂವಿಡಲು ಪ್ರಯತ್ನಿಸುತ್ತಿದ್ದಾರೆ ?? ಚಿಕ್ಕ ಮಕ್ಕಳೂ ಹೇಳಬಲ್ಲರು ಇದರ ಹಿಂದಿನ ಕೈವಾಡ ಯಾರದೆಂದು..
ಬರೀ ಸುಳ್ಳೇ ಬೊಗಳಿಯೂ ಧರ್ಮಾಂಧತೆಯ ಮಂಕುಬೂದಿಯೆರಚಿ ಯಾಮಾರಿಸುವ ಕಲೆ ಕರಗತಗೊಳಿಸಿರೊಂಡ ಹಗರಣದ ಕಿಂಗ್ ಪಿನ್, ಅತೀ ಭ್ರಷ್ಟ ಖೈದಿ ನಂ.56 ಇಲ್ಲೂ ತಪ್ಪಿಸಿಕೊಂಡರೆ ಈ ಮೂರ್ಖಾತಿರೇಕಕ್ಕೆ ದೇಶವನ್ನು , ಪ್ರಜಾಪ್ರಭುತ್ವವನ್ನು ಬಲಿಕೊಟ್ಟು ಸುಮ್ಮನೇ ಒಮ್ಮೆ ಕಣ್ಣುಮುಚ್ಚಿ ಕೂಗಿಬಿಡಿ… ‘ಅವನಿ’ದ್ದರೆ ಇದೂ ಸಾಧ್ಯವೆಂದು.. (ಸಬ್ ಕುಚ್ ಮುಮ್ಕಿನ್ ಹೈ)' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಎಸ್‌ಬಿಐಗೆ ಕೋರ್ಟ್ ಎದುರು ಸುಳ್ಳು ಹೇಳಲು ಕೂಡ ಬರೋದಿಲ್ಲ. ಸದಾ ಸುಳ್ಳು ಬೊಗಳುವ ರಾಜನ ಸುಳ್ಳು ಹೇಳಲೂ ಬಾರದ ದಡ್ಡ ಗೂಂಡಾಪಡೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರ ಹೆಸರು ಬಳಸದೇ ಅವರನ್ನು ಟೀಕೆ ಮಾಡಿದ್ದಾರೆ.
'ಇದು ರಾಮ ರಾಜ್ಯವೋ, ಹರಾಮ್ ರಾಜ್ಯವೋ..' ನಟ ಕಿಶೋರ್ ಟೀಕೆ!
ಇನ್ನು ಕಿಶೊರ್ ಅವರ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ. 'ಸರ್ ನಿಮ್ಮ ಆಗಾಧವಾದ ಜ್ಞಾನಕ್ಕೆ ಮತ್ತು ಸಾಮಾಜಿಕ ಕಳಕಳಿಗೆ ಅತಿ ಹೆಚ್ಚು ಅಭಿಮಾನಿ ನಾನು.. ಕೆಲವು ವರ್ಷಗಳ ಮುಂಚೆ ತಮ್ಮ ನಟನೆಗೆ ಮಾತ್ರ ಅಭಿಮಾನಿಯಾಗಿದ್ದೆ, ಆದರೆ ನೀವು ಕೃಷಿ ಮಾಡಲು ಶುರು ಮಾಡಿದ ಮೇಲೆ ನೀವು ಮತ್ತು ನಿಮ್ಮ ಧರ್ಮಪತ್ನಿ ಇಬ್ಬರೂ ರೈತರ ಸಮಸ್ಯೆ ಮತ್ತು ಅದನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಹಂಬಲ ನೋಡಿ ನಾನೇ ಖುದ್ದಾಗಿ ರಾಗಿ ಹಳ್ಳಿಗೆ ಬಂದು ಒಮ್ಮೆಯಾದರೂ ಭೇಟಿಮಾಡುವ ಹಂಬಲವಿದೆ, ಈ ಡಿಜಿಟಲ್ ಮಾಧ್ಯಮವಿಲ್ಲದಿದ್ದರೇ ನಿಜವಾಗಿಯೂ ನಿಮ್ಮಂತಹ ವ್ಯಕ್ತಿಯನ್ನು ಮತ್ತು ತಮ್ಮ ನಿಲುವುಗಳನ್ನು ತಿಳಿದುಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ. ತಮ್ಮ ಭಾಷಾಭಿಮಾನ ಮತ್ತು ಇತರೆ ಭಾಷೆಗಳ ಮೇಲಿನ ಹಿಡಿತ ಹೇಗೆ ಬಂತು ಮತ್ತು ತಮ್ಮ ಈ ಜ್ಞಾನ ಸಂಪತ್ತಿನ ಮೂಲ ತಿಳಿಯುವ ಬಯಕೆ ಸಾಧ್ಯವಾದರೆ ಒಮ್ಮೆ ನನಗೆ ರೀಪ್ಲೈ ಮಾಡಿ ತಮ್ಮನ್ನು ಭೇಟಿಯಾಗುವ ಆಸೆಯಿದೆ' ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.
ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರೂ ಹಿಂದೂ ವಿರೋಧಿಗಳಲ್ಲವೇ? ಕಿಶೋರ್ ಪ್ರಶ್ನೆ