ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರೂ ಹಿಂದೂ ವಿರೋಧಿಗಳಲ್ಲವೇ? ಕಿಶೋರ್ ಪ್ರಶ್ನೆ
ನಟ ಕಿಶೋರ್ ಕುಮಾರ್ ರಾಮಮಂದಿರ ವಿಚಾರವಾಗಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜಕಾರಣಿಗಳಿಗೆ ರಾಮ ಬರೀ ರಾಜಕೀಯ ಲಾಭಕ್ಕಾಗಿಯೇ ಇರುವ ವ್ಯಾಪಾರದ ಸರಕು ಎಂದು ಹೇಳಿದ್ದಾರೆ.
ಬೆಂಗಳೂರು (ಜ.15): ರಾಮಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಇದರ ನಡುವೆ ರಾಮಮಂದಿರ ವಿಚಾರವಾಗಿ ದೇಶದ ಶಂಕರಾಚಾರ್ಯ ಪೀಠಗಳ ಜಗದ್ಗರುಗಳು ಹೇಳಿರುವ ಮಾತಿನೊಂದಿಗೆ ಸರ್ಕಾರವನ್ನು ಟೀಕೆ ಮಾಡಲಾಗುತ್ತಿದೆ. ಈ ಕುರಿತಂತೆ ನಟ ಕಿಶೋರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅಸಲಿ ಹಿಂದೂ ವಿರೋಧಿ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರು ಹಿಂದೂ ವಿರೋಧಗಳಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ದೇಶದ ಸಮಸ್ಯೆಗಳನ್ನು ಮರೆಮಾಚಿ ಅರ್ಧಂಬರ್ಧ ದೇವಸ್ಥಾನದ ಉದ್ಘಾಟನೆ ಮಾಡಿ ಓಟು ಹಾಕಿ ಎನ್ನುತ್ತಿರುವ ಅಂಧಭಕ್ತರು ಹಿಂದೂ ವಿರೋಧಿಗಳಲ್ಲವೇ ಎಂದು ಜಾಡಿಸಿದ್ದಾರೆ. ನಟ ಕಿಶೋರ್ ಕುಮಾರ್ ಪೋಸ್ಟ್ ಮಾಡಿರುವ ಸಾಲುಗಳು ಇಲ್ಲಿದೆ.
'ಅಸಲಿ ಹಿಂದೂ ವಿರೋಧಿ ಯಾರು? ಧರ್ಮದ ರಾಜಕೀಕರಣವನ್ನು ವಿರೋಧಿಸುವವರನ್ನು ಹಿಂದೂ ವಿರೋಧಿಗಳು, ದೇಶ ವಿರೋಧಿಗಳೆಂದು ಟ್ರೋಲ್ ಮಾಡುವ ವಿಶ್ವಗುರು ಭಕ್ತರು ಮತ್ತು ತನ್ನ ವೃತ್ತಿಧರ್ಮಕ್ಕೆ ದ್ರೋಹ ಬಗೆದ ಗೋದಿ ಮಾಧ್ಯಮದವರು ಈಗೇನು ಮಾಡುತ್ತಾರೆ ಶಂಕರಾಚಾರ್ಯರುಗಳನ್ನೂ ಹಿಂದೂ ವಿರೋಧಿಗಳು ದೇಶ ವಿರೋಧಿಗಳೆಂದು ಟ್ರೋಲ್ ಮಾಡುತ್ತಾರೆಯೇ? ರಾಮ ಮಂದಿರದ ರಾಜಕೀಕರಣವನ್ನು ವಿರೋಧಿಸುತ್ತಿರುವ ಶಂಕರಾಚಾರ್ಯರುಗಳು ಹಿಂದೂ ವಿರೋಧಿಗಳಲ್ಲವೆಂದರೆ ನಿಜವಾದ ಹಿಂದೂ ವಿರೋಧಿಗಳು ಯಾರು ?? ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ, ಅರ್ಧಂಬರ್ಧ ದೇವಸ್ಥಾನದ ಉದ್ಘಾಟನೆ ಮಾಡಿ ಓಟು ಬಾಚಲು ನಿಂತಿರುವ ಧೂರ್ತರು ಅವರ ಅಂಧಭಕ್ತರು ಹಿಂದೂ ವಿರೋಧಿಗಳೇ ಅಲ್ಲವೇ?? ಅವರ ಧರ್ಮಾಂಧತೆಯ ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರೂ ಅದೇ ಆಗಿಬಿಡುವುದಿಲ್ಲವೇ?? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಅಯೋಗ್ಯ ರಾಜಕಾರಿಣಿಗಳಿಗೆ ರಾಮ ಬರೀ ರಾಜಕೀಯ ಲಾಭಕ್ಕಾಗಿಯೇ ಇರುವ ವ್ಯಾಪಾರದ ಸರಕು.. ಅಷ್ಟೇ. ನಿಜವಾದ ದೈವವೆನ್ನುವ ನಂಬಿಕೆ ಇರುವುದು ಮಂದಿರ ಮಸೀದಿ ಚರ್ಚುಗಳಲ್ಲಲ್ಲ.. ಗಾಂಧಿಯಂತೆ, ಜೀವನದ ಪ್ರತಿ ನಡೆಯಲ್ಲಿ ರಾಮ.. ಪ್ರತಿ ನುಡಿಯಲ್ಲಿ ರಾಮ.. ಸಾವಲ್ಲೂ ಹೇ ರಾಮ.. ಈ ಢೋಂಗಿಗಳಿಗೆ ಎಂದಾದರೂ ಅದು ಸಾಧ್ಯವೇ ? ಎಷ್ಟೇ ಆಗಲಿ ಆ ಗಾಂಧಿಯನ್ನು ಕೊಂದವರಲ್ಲವೇ..' ಎಂದು ಬರೆದು ತಮ್ಮ ಪೋಸ್ಟ್ ಮುಗಿಸಿದ್ದಾರೆ.
ಇನ್ನು ಕಿಶೋರ್ ಅವರ ಪೋಸ್ಟ್‌ಗೆ ಸಾಕಷ್ಟು ಪರ-ವಿರೋಧದ ಕಾಮೆಂಟ್‌ಗಳು ಬಂದಿವೆ. 'ದೇಶದ ಬದ್ಧತೆ ಬಿಜೆಪಿಗೂ ಇಲ್ಲ ಸನಾತನಗಳಿಗೂ ಇಲ್ಲ ಇವರಿಗೆ ಇರುವುದು ಒಂದೇ ಅವರ ಅಜ್ಞಾನವನ್ನು ಭಾರತದಲ್ಲಿ ನೆಲೆಗೊಳಿಸುವುದು ಜನರನ್ನು ದಿಕ್ಕು ತಪ್ಪಿಸಿ ತಮ್ಮ ಮೇಲೆ ಬೇಯಿಸಿಕೊಳ್ಳುವುದು, ಸನಾತನಿಗಳು ಭಾರತಕ್ಕೆ ಕೊಟ್ಟಿರುವ ಕೊಡುಗೆಗಳಾದರು ಏನು ಭಾರತದ ಬಡತನಕ್ಕೆ ನಿರ್ಮೂಲನೆಗೆ ಅವರು ಓಡಿರುವ ಪಟ್ಟಿರುವ ಕಷ್ಟವಾದರೂ ಏನು ಭಾರತದ ಕೈಗಾರಿಕೋದ್ಯಮ ಏಳಿಗೆಗೆ ಅವರ ಪಾಲಿನ ಭಾರತದ ಎಲ್ಲಾ ಜನರ ದುಡ್ಡನ್ನು ಕಳ್ಳ ಮಾರ್ಗದಿಂದ ಸಂಗ್ರಹಿಸಿ ಕೈಗಾರಿಕೋದ್ಯಮಗಳನ್ನು ಸ್ಥಾಪಿಸಿ ಅಧಿಕ ಬಂಡವಾಳವನ್ನು ಸಂಪಾದಿಸುತ್ತಿದ್ದಾರೆ ಇಲ್ಲ ಸಲ್ಲದ ತೆರಿಗೆಗಳನ್ನು ಅವರಿಗೆ ಅನುಕೂಲ ಮಾಡಿಕೊಟ್ಟು ಬಡವರು ತಲೆಯ ಮೇಲೆ ಟ್ಯಾಕ್ಸ್ ಹಾಕುತ್ತಿದ್ದಾರೆ ನರೇಂದ್ರ ಭಾರತದ ಉತ್ಪಾದನೆಯನ್ನು ಹೊರದೇಶದ ಬ್ಯಾಂಕುಗಳಲ್ಲಿ ಶೇಖರಣೆ ಮಾಡುವಂತ ವ್ಯವಸ್ಥೆ ಅತ್ಯಧಿಕವಾಗಿ ನಡೆಯುತ್ತಿದೆ ಇದನ್ನು ಕಾಣದ ಈ ಮುಗ್ಧ ಮತದಾರರು ರಾಮ ಸೀತಾ ಲಕ್ಷ್ಮಣ ಸರಸ್ವತಿ ಅನೇಕ ದೇವರುಗಳ ಹಿಂದೆ ಬಿದ್ದು ಹಾಳಾಗುತ್ತಿದೆ..' ಎಂದು ಒಬ್ಬರು ಬರೆದಿದ್ದಾರೆ.
ಲಾಗಿನ್ ಐಡಿ ಕೊಟ್ಟಿದ್ದಕ್ಕೆ ಮಹುವಾ ಉಚ್ಛಾಟನೆಯಾದ್ರೆ, ದೇಶದ ಆಸ್ತಿ ಸ್ನೇಹಿತನಿಗೆ ಕೊಟ್ಟವನನ್ನು ಏನು ಮಾಡಬೇಕು?
'1528 ರಿಂದ ನಮ್ಮ ರಾಮ ಜನ್ಮ ಭೂಮಿ ಅಯೋಧ್ಯೆಯ ಹೋರಾಟ ನಡಿತಿರೋದು ... ಅವತ್ತೇ ಮಾಡಬಹುದಿತ್ತು ಕಾಂಗ್ರೆಸ್ನವರು .... ಮಾಡಲ್ಲ , ಕಾಂಗ್ರೆಸ್ ಯಾವತ್ತಿದ್ದರೂ ಮುಸ್ಲಿಂ ಪಕ್ಷ . ... ಬಿಜೆಪಿ . Rss . ಭಜರಂಗದಳ . ವಿಎಚ್‌ಪಿ ಇವುಗಳಿಂದ ಮಾತ್ರ ನಮ್ಮ ದೇಶ ನಮ್ಮ ಧರ್ಮ ಉಳಿಯೋದಕ್ಕೇ ಕಾರಣ.. ಜೈ ಶ್ರೀ ರಾಮ್' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ನಟ ಕಿಶೋರ್ ಪೋಸ್ಟ್ 'ಪನೌತಿಯಿಂದ ಸೋಲುವುದು ಎಷ್ಟು ಸುಳ್ಳೋ, ಜೈಶ್ರೀರಾಮ್‌ನಿಂದ ಗೆಲ್ಲುವುದು ಅಷ್ಟೇ ಸುಳ್ಳು..'