ಮೈಸೂರು: ಹಾರಂಗಿ ನಾಲೆ ಮೂಲಕ ಕೆರೆಕಟ್ಟೆಗಳಿಗೆ ನೀರು

ಹಾರಂಗಿ ಎಡದಂಡೆ ನಾಲೆಯ ಬೂದನೂರು ಹಳ್ಳ, ಹರದನಹಳ್ಳಿಯಿಂದ ಕೊನೆ ಹಂತ ಭೇರ್ಯ ಸಮೀಪದವರೆವಿಗೂ ಬರುವ ಕೆರೆಕಟ್ಟೆಗಳನ್ನು ಹಾರಂಗಿ ನಾಲೆ ಮೂಲಕ ತುಂಬಿಸಲಾಗಿದೆ. ಕೆ.ಆರ್‌. ನಗರ ತಾಲೂಕಿನಲ್ಲಿ ಬರುವ 30 ರಿಂದ 40ಕ್ಕೂ ಹೆಚ್ಚು ಕೆರೆಕಟ್ಟೆಗಳನ್ನು ತುಂಬಿಸಲಾಗಿದೆ.

Water released to lakes through harangi Canal

ಮೈಸೂರು(ಅ.26): ಹಾರಂಗಿ ಎಡದಂಡೆ ನಾಲೆಯ ಬೂದನೂರು ಹಳ್ಳ, ಹರದನಹಳ್ಳಿಯಿಂದ ಕೊನೆ ಹಂತ ಭೇರ್ಯ ಸಮೀಪದವರೆವಿಗೂ ಬರುವ ಕೆರೆಕಟ್ಟೆಗಳನ್ನು ಹಾರಂಗಿ ನಾಲೆ ಮೂಲಕ ತುಂಬಿಸಲಾಗಿದೆ.

ಹಾರಂಗಿ ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ ಕೆ.ಆರ್‌. ನಗರ ತಾಲೂಕಿನಲ್ಲಿ ಬರುವ 30 ರಿಂದ 40ಕ್ಕೂ ಹೆಚ್ಚು ಕೆರೆಕಟ್ಟೆಗಳನ್ನು ತುಂಬಿಸಲಾಗಿದ್ದು, ಈ ಬಾರಿ ಕೊನೆ ಹಂತದವರೆಗೂ ನಾಲೆಯ ಆಧುನೀಕರಣ ಕಾಮಗಾರಿ ಮಾಡಲಾಗಿದೆ ಹಾಗೂ ವರುಣನ ಕೃಪೆ ಹೆಚ್ಚಾಗಿದ್ದರ ಪರಿಣಾಮದಿಂದಾಗಿ ಕೆರೆಕಟ್ಟೆಗಳು ತುಂಬಿ ರೈತರ ಮುಖದಲ್ಲಿ ಹರ್ಷ ತಂದಿದೆ.

ನಾಲೆ ಆಧುನೀಕರಣ:

ಹಾರಂಗಿ ನಾಲೆ ಆಧುನೀಕರಣ ಕಾಮಗಾರಿಗೆ 2017-18ನೇ ಸಾಲಿನಲ್ಲಿ 60 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲು ಸರ್ಕಾರ ಮಂಜೂರಾತಿ ನೀಡಿತ್ತು. ಮಾಜಿ ಸಚಿವ, ಶಾಸಕ ಸಾ.ರಾ. ಮಹೇಶ್‌ ಅವರು ಈ ಭಾಗದ ರೈತರ ಜಮೀನುಗಳಿಗೆ ಒಂದು ಬೆಳೆಗಾದರೂ ನೀರು ಹರಿಸಬೇಕೆಂಬ ಉದ್ದೇಶದೊಂದಿಗೆ ನೀರಾವರಿ ಅಧಿಕಾರಿಗಳ ಜತೆಯಲ್ಲಿ ಚರ್ಚಿಸಿ ಅಂದಾಜು ಪಟ್ಟು ತಯಾರಿಸಿ ಸರ್ಕಾರಕ್ಕೆ ಪ್ರಸ್ತವಾನೆ ಸಲ್ಲಿಸಿದರು. ನಂತರ ಸರ್ಕಾರ ಹಾರಂಗಿ ಎಡದಂಡೆ ನಾಲೆಯನ್ನು ಆಧುನೀಕರಣ ಕಾಮಗಾರಿ ಮಾಡಲು ಟೆಂಡರ್‌ ಪ್ರಕ್ರಿಯೆ ನೆಡಸಿ, 2017-18 ಸಾಲಿನ ಜನವರಿಯಲ್ಲಿ ಕಾಮಗಾರಿಗೆ ಶಾಸಕ ಸಾ.ರಾ. ಮಹೇಶ್‌ ಅವರು ತಾಲೂಕಿನ ಗಡಿ ಭಾಗವಾದ ಹರದನಹಳ್ಳಿ ಸಮೀಪದಲ್ಲಿ ಹಾರಂಗಿ ನಾಲೆಯ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ಅಂತರ್ಜಲ ವೃದ್ಧಿ:

ಹಾರಂಗಿ ನಾಲೆಯ ವ್ಯಾಪ್ತಿಯಲ್ಲಿ ಬರುವ ಎಷ್ಟೋ ಬೋರ್‌ವೆಲ್‌, ಕೃಷಿ ಪಂಪ್‌ಸೆಟ್‌ಗಳು ನೀರಿಲ್ಲದೆ ಬತ್ತಿ ಹೋಗಿದ್ದವು, ಆದರೆ ಯಾವಾಗ ಕೆರೆಕಟ್ಟೆಗಳು ತುಂಬಿಸಲಾಯಿತು, ಎಲ್ಲ ಬೋರ್‌ವೆಲ್‌, ಕೃಷಿ ಪಂಪ್‌ಸೆಟ್‌ಗಳಲ್ಲಿ ಅಂತರ್ಜಲ ವೃದ್ಧಿಯಾಗಿ ನೀರು ಹೆಚ್ಚಾಗಿದ್ದು, ಜಮೀನುಗಳಲ್ಲಿ ಅರೆ ಬೇಸಾಯ ಮಾಡಿ ತರಕಾರಿಗಳನ್ನು ಬೆಳೆದು ಆರ್ಥಿಕ ಸಂಕಷ್ಟದಿಂದ ಪಾರಾಗಿದ್ದಾರೆ ಕೆಲ ರೈತರು.

ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ಮುಚ್ಚಿದ ಬೋರ್‌ವೆಲ್‌ಗಳನ್ನು ತೆಗೆದು ಜಮೀನುಗಳಿಗೆ ನೀರನ್ನು ಹರಿಸಿ ಬೆಳೆಬೆಳೆಯಲಾಗುತ್ತಿದೆ. ಹಾರಂಗಿ ನಾಲೆ ಸದಾ ನೀರಿನಿಂದ ತುಂಬಿ ಹರಿದರೆ ರೈತರ ಮೊಗದಲ್ಲಿ ಹರ್ಷವಿರುತ್ತದೆ.

ಹಾರಂಗಿ ನಾಲೆಯಿಂದ ಕಾಕನಹಳ್ಳಿ ಕೆರೆಗೆ ನೀರು ಹರಿಸಿ ಕೆರೆ ತುಂಬಿಸಿ ಎಂದು ಕಾಕನಹಳ್ಳಿ ಗ್ರಾಮಸ್ಥರು ಶಾಸಕರಾದ ಸಾ.ರಾ.ಮಹೇಶ್‌ ಅವರಿಗೆ ಮನವಿ ಮಾಡಿದ್ದವು, ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಗ್ರಾಮದ ಮುಖಂಡ ಕೃಷ್ಣ ಹೇಳಿದ್ದಾರೆ.

ಹರ್ಷ ತಂದ ವರ್ಷಧಾರೆ

ಕಾಮಗಾರಿ ಆದಷ್ಟುಬೇಗ ಮಾಡಿ ರೈತರ ಜಮೀನುಗಳಿಗೆ ನೀರು ಹರಿಸಿ ಹಾಗೂ ಹಾರಂಗಿ ನಾಲೆ ವ್ಯಾಪ್ತಿಯಲ್ಲಿ ಬರುವ ಕೆರೆಕಟ್ಟೆಗಳಿಗೆ ನೀರು ಹರಿಸಿ ಎಂದು ನೀರಾವರಿ ಅಧಿಕಾರಿಗಳಿಗೆ ಶಾಸಕ ಸಾ.ರಾ. ಮಹೇಶ್‌ ತಾಕೀತು ಮಾಡಿದ್ದರು. ಆದರೆ ಸಮಯಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ನೀರಾವರಿ ಅಧಿಕಾರಿಗಳು ಹಂತಹಂತವಾಗಿ ಒಂದೊಂದು ಕೆರೆಕಟ್ಟೆಗಳನ್ನು ತುಂಬಿಸುತ್ತಾ ಬಂದಿದ್ದು, ಆಗಸ್ಟ್‌ ತಿಂಗಳಲ್ಲಿ ಅಧಿಕ ಮಳೆಯಾಗಿದ್ದರಿಂದ ಕೊನೆ ಹಂತದವರೆಗೂ ಬರುವ ಸಂಕನಹಳ್ಳಿ, ಬಾಚಹಳ್ಳಿ, ಎಲೆಮುದ್ದನಹಳ್ಳಿ, ಕೋಡಿಯಾಲ, ಹನುಮನಹಳ್ಳಿ, ಕಾಕನಹಳ್ಳಿ, ನರಚನಹಳ್ಳಿ, ಬಟಿಗನಹಳ್ಳಿ ಗ್ರಾಮಗಳ ಕೆರೆಕಟ್ಟೆಗಳನ್ನು ತುಂಬಿಸಿ ಗ್ರಾಮಸ್ಥರಿಂದ ಮೆಚ್ಚುಗೆ ಪಡೆದರು.

ಬಟಿಗನಹಳ್ಳಿ ಗ್ರಾಮದ ಚೂರಿಕಟ್ಟೆಕೆರೆಯ ಹೂಳು ತೆಗೆದು ನೀರು ತುಂಬಿಸುಂತೆ ಶಾಸಕರಾದ ಸಾ.ರಾ. ಮಹೇಶ್‌ ಅವರಿಗೆ ಮನವಿ ಮಾಡಿದ್ದವು, 15 ಲಕ್ಷದ ವೆಚ್ಚದಲ್ಲಿ ಹೂಳು ತೆಗಿಸಿ ಕೆರೆಗೆ ನೀರು ತುಂಬಿಸಿದ್ದಾರೆ. ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಬಟಿಗನಹಳ್ಳಿ ಗ್ರಾಮದ ಬಿ.ಟಿ. ನಾಗೇಂದ್ರ ಹೇಳಿದ್ಧಾರೆ.

-ಭೇರ್ಯ ಮಹೇಶ್‌

Latest Videos
Follow Us:
Download App:
  • android
  • ios