ಮೈಸೂರು(ನ.06): ಕಲ್ಪವೃಕ್ಷ ಎಂದೇ ಖ್ಯಾತಿ ಪಡೆದಿರುವ ತೆಂಗಿನ ಮರದಲ್ಲಿ ಕಳೆದ ಕೆಲವು ವರ್ಷಗಳಿಂದ ರುಗೋಸ್‌ ಸುರುಳಿಯಾಕಾರದ ಬಿಳಿನೊಣ ಬಾಧೆ ಹೆಚ್ಚಾಗಿದೆ. ಇದರಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೂಲತಃ ಅಮೆರಿಕಾದ ಕೀಟವಾದ ರುಗೋಸ್‌ ಸುರುಳಿಯಾಕಾರದ ಬಿಳಿನೊಣ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ಕಾಣಿಸಿಕೊಂಡಿದೆ. ಇದು ಅಲ್ಯುರೋಡಿಕಸ್‌ ರುಗಿಯೋಪರಿಕುಲೇಟಸ್‌ ಮಾರ್ಟಿನ್‌ ಎಂಬ ಜಾತಿಗೆ ಸೇರಿದ್ದು, ತೆಂಗಿನ ಮರಗಳಲ್ಲಿ ಬಿಳಿನೊಣಗಳು ಇರುವುದನ್ನು 2004ರಲ್ಲಿ ಮಾರ್ಟಿನ್‌ ಅವರು ಬೆಲೀಜ್‌ನಲ್ಲಿ ಕಂಡು ಹಿಡಿದಿದ್ದಾರೆ.

4 ವರ್ಷದ ನಂತರ ತುಂಬಿದ ಜಲಾಶಯ, ನೀರಿನಲ್ಲಿ ಈಜಾಡಿದ ಕುಣಿಗಲ್ ಶಾಸಕ..!

2016ರ ಸೆಪ್ಬೆಂಬರ್‌ನಲ್ಲಿ ಮೊದಲ ಬಾರಿಗೆ ಭಾರತದ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯಲ್ಲಿ ಕಂಡು ಬಂದ ಬಿಳಿನೊಣವು ನಂತರ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ತೀವ್ರವಾಗಿ ಹಾವಳಿ ನಡೆಸಿತು, ಈಗ ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳಿಗೂ ಹರಡಿದೆ. ರಾಜ್ಯದ ಪ್ರಮುಖ ಬೆಳೆಯಾದ ತೆಂಗು ಹಾಗೂ ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಕೃಷಿ ಮಾಡುವ ಬಾಳೆ ಮೂಲಕ ಆರ್ಥಿಕ ಸಂಪಾದನೆ ಮಾಡುತ್ತಿರುವ ರೈತರಿಗೆ ಬಿಳಿನೊಣ ಕಾಟದಿಂದ ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ.

ಕೀಟಬಾಧೆಯ ಲಕ್ಷಣಗಳು:

ತೆಂಗಿನ ಮರದ ಎಲೆಗಳ ಕೆಳಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸುರುಳಿ ಬಿಳಿನೊಣ ಕಂಡು ಬಂದು ಎಲೆಗಳ ರಸವನ್ನು ಹೀರುವುದರಿಂದ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ಕೀಟಗಳು ಸ್ರವಿಸುವ ಸಿಹಿ ಅಂಟಿನ ಮೇಲೆ ಕಪ್ಪು ಶಿಲೀಂಧ್ರ ಬೆಳೆಯುತ್ತವೆ. ಇದರಿಂದ ಎಲೆಗಳ ಆಹಾರ ತಯಾರಿಕೆ ಕುಂಠಿತಗೊಂಡು ಇಳುವರಿಯ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಅಲ್ಲದೆ, ವಿವಿಧ ವೈರಸ್‌ಗಳನ್ನು ವಿವಿಧ ಬೆಳೆಗಳಿಗೆ ವರ್ಗಾವಣೆ ಮಾಡುತ್ತದೆ.

ಬಿಳಿನೊಣಗಳು ಅಧಿಕ ಉಷ್ಣತೆ ಮತ್ತು ಕಡಿಮೆ ಮಳೆ ಬೀಳುವ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತವೆ. ಬಿಳಿನೊಣದ ದೇಹವು 2 ರಿಂದ 3 ಮಿ.ಮೀ ಉದ್ದವಿದ್ದು, ರೆಕ್ಕೆಗಳ ಮೇಲೆ ಮೇಣದಂತಹ ಪದಾರ್ಥ ಇರುತ್ತದೆ. ಇವುಗಳಿಂದ ವರ್ಷಕ್ಕೆ 10 ರಿಂದ 12 ಬಾರಿ ಸಂತಾನಾಭಿವೃದ್ಧಿ ಮಾಡುತ್ತವೆ. 2 ವಾರಗಳ ಅವಧಿಯಲ್ಲಿ ಸುಮಾರು 125 ಮೊಟ್ಟೆಗಳನ್ನು ಇಡಬಲ್ಲದು. ಉಷ್ಣಾಂಶ ಹೆಚ್ಚಿದ್ದಾಗ ಹೆಚ್ಚಿನ ಮೊಟ್ಟೆಗಳನ್ನು ಇಡುತ್ತವೆ. ಈ ಕೀಟದ ಪರಭಕ್ಷಕ ಜೀವಿಗಳಾದ ಕ್ರೇಸೋಪ ಮತ್ತು ಬ್ರೂಮಸ್‌ ಪ್ರಭೇದಕ್ಕೆ ಸೇರಿದ ಕೀಟಗಳು ಬಿಳಿನೊಣಗಳನ್ನು ತಿಂದು ನಾಶಪಡಿಸುತ್ತವೆ.

ಬಿಳಿನೊಣಗಳನ್ನು ಗುರುತಿಸುವುದು ಹೇಗೆ?

ಬಿಳಿನೊಣ ರಸಹೀರುವ ಕೀಟವಾಗಿದ್ದು, ಗಾತ್ರದಲ್ಲಿ ಚಿಕ್ಕದಾಗಿದ್ದು, ಮೈ ತುಂಬ ಬಿಳಿ ಬಣ್ಣದ ಮೇಣದಂತಹ ಹುಡಿ ಇರುತ್ತದೆ. ಕೀಟವು ಹಳದಿ ಬಣ್ಣದಿಂದ ಕೂಡಿದ್ದು 4 ಬಿಳಿ ಬಣ್ಣದ ರೆಕ್ಕೆಗಳನ್ನು ಹೊಂದಿದೆ. ಈ ಕೀಟವು ತನ್ನ ಎಲ್ಲಾ ಜೀವನದ ಅವಧಿಯನ್ನು ಎಲೆಗಳ ಕೆಳಭಾಗದಲ್ಲಿ ಕಳೆಯುತ್ತದೆ. ಕೀಟವು ಆರಂಭಿಕ ಹಂತದಲ್ಲಿ ಎಲೆಗಳ ಅಡಿಯಲ್ಲಿ ವೃತ್ತಾಕಾರದಲ್ಲಿ ಮೊಟ್ಟೆಗಳನ್ನು ಇಡುತ್ತವೆ.

ಮರಿಗಳು ಹಾಗೂ ಪ್ರೌಢ ಕೀಟಗಳು ಸತತವಾಗಿ ಎಲೆಗಳ ಕೆಳಭಾಗದಲ್ಲಿ ಕುಳಿತು ರಸ ಹೀರುತ್ತವೆ. ಹೀಗಾಗಿ, ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ, ಮುದುಡುತ್ತವೆ, ಕ್ರಮೇಣವಾಗಿ ಒಣಗಲು ಆರಂಭಿಸುತ್ತವೆ. ಕೀಟಗಳು ಸಿಹಿಯಾದ ಜೇನಿನ ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಬೂದು ಬಣ್ಣದ ಶಿಲೀಂಧ್ರ ಬೆಳೆದು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕಡಿಮೆ ಆಗುತ್ತದೆ.

KR ಪೇಟೆ ಗೆಲ್ಲಲು ದೊಡ್ಡಗೌಡ್ರ ರಣತಂತ್ರ..! BJP ಮುಖಂಡನಿಗೆ ಗಾಳ

ರುಗೋಸ್‌ ಸುರುಳಿಯಾಕಾರದ ಬಿಳಿನೊಣವು ಪ್ರಮುಖವಾಗಿ ತೆಂಗು, ಬಾಳೆ, ತರಕಾರಿ ಮತ್ತು ಹಲವು ಅಲಂಕಾರಿಕ ಗಿಡಗಳಲ್ಲಿ ಕಂಡು ಬಂದಿರುತ್ತದೆ. ಅಡಿಕೆ, ಕೊಕ್ಕೋ ಗಿಡಗಳಲ್ಲಿಯೂ ಬಿಳಿ ಕೀಟಗಳು ಸಂತಾನೋತ್ಪತ್ತಿ ಮಾಡುತ್ತವೆ.

ಈ ಸಂಬಂಧ ರೈತರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಸಲಹಾ ಮತ್ತು ಮಾಹಿತಿ ಕೇಂದ್ರ (ಹಾರ್ಟಿ ಕ್ಲಿನಿಕ್‌), ತೋಟಗಾರಿಕೆ ಇಲಾಖೆ, ಕರ್ಜನ್‌ ಪಾರ್ಕ್, ಮೈಸೂರು ದೂ. 0821- 2430451 ಸಂಪರ್ಕಿಸಬಹುದು.

ಬಿಳಿನೊಣದ ನಿರ್ವಹಣೆ ಹೇಗೆ?

ಪ್ರಕೃತಿಯಲ್ಲಿ ಸಾಧಾರಣವಾಗಿರುವ ಕಾಕ್ಸಿನೆಲ್ಲಿಡ್‌ ದುಂಬಿಗಳು ಇವುಗಳನ್ನು ನಿಯಂತ್ರಣದಲ್ಲಿ ಇಡುತ್ತವೆ. ಬೇವಿನ ಆಧಾರಿತ ಕೀಟನಾಶಕಗಳಾದ ನೀಮಾರ್ಕ, ನೀಮ್‌ ಗೋಲ್ಡ್‌ (1000 ಪಿಪಿಎಂ) ಇವುಗಳನ್ನು (ಪ್ರತಿ ಲೀಟರ್‌ ನೀರಿಗೆ 5 ಮಿ.ಲೀ. ಲೀಟರ್‌ ಜೊತೆಗೆ 1 ಮಿ.ಲೀ. ಶ್ಯಾಂಪ್‌ನೊಂದಿಗೆ) ಮಿಶ್ರಣ ಮಾಡಿ ಗಿಡಗಳಿಗೆ ಸಿಂಪಡಿಸಬೇಕು. ಶೇ.4ರ ಬೇವಿನ ಬೀಜದ ಕಷಾಯ ಸಿಂಪಡಿಸುವುದು. ಕೀಟನಾಶಕಗಳಾದ 1 ಮಿ.ಲೀ. ಅಸಿಫೇಟ್‌ 75 ಎಸ್‌ಪಿ ಅಥವಾ ಫಿಪ್ರೋನಿಲ್‌ 5 ಎಸ್ಸಿ ಅಥವಾ 1.7 ಮಿ.ಲೀ. ಡೈಮಿಥೋಯೇಟ್‌ ಅಥವಾ 0.5 ಮಿ.ಲೀ. ಟ್ರೈಅಸೋಫಾಸ್‌ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸುವುದು. ಈ ಕೀಟನಾಶಕಗಳನ್ನು 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು.

ಬಾಧಿತ ತೆಂಗಿನ ಮರಗಳು ಬೆಳವಣಿಗೆಯಲ್ಲಿ ಕುಂಠಿತವಾಗಿರುವುದರಿಂದ ಹೆಚ್ಚಿನ ಪ್ರಮಾಣದ ಸಾವಯವ ಗೊಬ್ಬರ ಮತ್ತು ಶಿಫಾರಿತ ರಾಸಾಯನಿಕ ಗೊಬ್ಬರಗಳನ್ನು ಪೂರೈಸುವುದು ಉತ್ತಮ. ಎಲೆ ಕಾಡಿಗೆ ರೋಗದ ಹಾವಳಿಯಿಂದ ಆವೃತವಾಗಿರುವ ಎಲೆಗಳಿಗೆ ಶೇ.1 ಸ್ಟಾಚ್‌ರ್‍ ದ್ರಾವಣ ಸಿಂಪಡಿಸುವುದು.

-ಬಿ. ಶೇಖರ್‌ ಗೋಪಿನಾಥಂ