ಮೈಸೂರಿನಲ್ಲಿ ಜನಿಸಿ ಶ್ರೀಲಂಕಾಕ್ಕೆ ಉಡುಗೊರೆಯಾಗಿ ತೆರಳಿದ ನಡುಂಗಮುವ ರಾಜಾ, ಕ್ಯಾಂಡಿ ಪೆರಹೆರಾದಲ್ಲಿ ಪವಿತ್ರ ದಂತಧಾತುವಿನ ಪೆಟ್ಟಿಗೆ ಹೊತ್ತು ಅಲ್ಲಿನ ಅತ್ಯಂತ ಗೌರವಾನ್ವಿತ ಗಜರಾಜನಾಗಿ ಗುರುತಿಸಿಕೊಂಡಿದ್ದಾನೆ.
ಮೈಸೂರು ಎಂದಾಕ್ಷಣ ಅರಮನೆ, ದಸರಾ ಮತ್ತು ಆನೆಗಳ ನೆನಪು ಬರುತ್ತದೆ. ಆದರೆ ಮೈಸೂರಿನಿಂದ ಶ್ರೀಲಂಕಾಕ್ಕೆ ತೆರಳಿ ಅಲ್ಲಿನ ಜನರ ಪಾಲಿಗೆ ಅತ್ಯಂತ ಗೌರವಾನ್ವಿತ ಗಜರಾಜನಾಗಿ, ರಾಷ್ಟ್ರೀಯ ಸಂಪತ್ತಾಗಿ ಗುರುತಿಸಿಕೊಂಡ ಆನೆಯೊಂದರ ಕಥೆ ನಿಜಕ್ಕೂ ಕುತೂಹಲ ಮೂಡಿಸುತ್ತದೆ. ಆ ಆನೆಯೇ ನಡುಂಗಮುವ ರಾಜ (Nadungamuwa Raja).
1953ರಲ್ಲಿ ಮೈಸೂರಿನಲ್ಲಿ ಜನಿಸಿದ್ದ ರಾಜಾ, ಬಳಿಕ ಶ್ರೀಲಂಕಾಕ್ಕೆ ತೆರಳಿ ಹಲವು ದಶಕಗಳ ಕಾಲ ಅಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಪ್ರಮುಖ ಭಾಗವಾಗಿದ್ದ. 2022ರಲ್ಲಿ 68ನೇ ವಯಸ್ಸಿನಲ್ಲಿ ನಿಧನರಾದ ಈ ಗಜರಾಜನಿಗೆ ಶ್ರೀಲಂಕಾ ಸರ್ಕಾರ ‘ರಾಷ್ಟ್ರೀಯ ಸಂಪತ್ತು’ ಎಂಬ ಗೌರವ ನೀಡಿತ್ತು.
ಮೈಸೂರಿನಿಂದ ಶ್ರೀಲಂಕಾಕ್ಕೆ ಹೇಗೆ ಹೋದ?
ವರದಿಗಳ ಪ್ರಕಾರ, ರಾಜಾ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಅಧೀನದಲ್ಲಿದ್ದ ಆನೆ ಮರಿಗಳಲ್ಲಿ ಒಂದಾಗಿತ್ತು. ಮಹಾರಾಜರ ಕುಟುಂಬದ ಸದಸ್ಯರೊಬ್ಬರ ದೀರ್ಘಕಾಲದ ಅನಾರೋಗ್ಯವನ್ನು ಶ್ರೀಲಂಕಾದ ವೈದ್ಯ-ಸನ್ಯಾಸಿಯೊಬ್ಬರು ಗುಣಪಡಿಸಿದ ಹಿನ್ನೆಲೆಯಲ್ಲಿ, ಕೃತಜ್ಞತೆಯ ಸಂಕೇತವಾಗಿ ಎರಡು ಆನೆ ಮರಿಗಳನ್ನು ಉಡುಗೊರೆಯಾಗಿ ನೀಡಲಾಯಿತು. ಅವುಗಳಲ್ಲಿ ಒಂದೇ ಮುಂದೆ ನಡುಂಗಮುವ ರಾಜನಾಗಿ ಪ್ರಸಿದ್ಧಿಯಾಯಿತು.
₹75 ಸಾವಿರಕ್ಕೆ ಖರೀದಿಯಾಗಿದ್ದ ಗಜರಾಜ
ಶ್ರೀಲಂಕಾಕ್ಕೆ ತೆರಳಿದ ಬಳಿಕ ರಾಜಾ ಹಲವು ವರ್ಷಗಳ ಕಾಲ ವಿವಿಧ ಮಾಲೀಕರ ಬಳಿ ಇತ್ತು. 1978ರಲ್ಲಿ ಆಯುರ್ವೇದ ವೈದ್ಯ ಧರ್ಮವಿಜಯ ವೇದ ರಾಳಹಾಮಿ ಅವರು ರಾಜಾನನ್ನು ಸುಮಾರು ₹75,000ಕ್ಕೆ ಖರೀದಿಸಿದರು. ನಂತರ ಅವರ ಪುತ್ರ ಹರ್ಷ ಧರ್ಮವಿಜಯ ರಾಜಾನನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಿಂದಲೇ ಆನೆಗೆ ನಡುಂಗಮುವ ರಾಜಾ ಎಂಬ ಹೆಸರು ಮತ್ತಷ್ಟು ಪ್ರಸಿದ್ಧಿಯಾಯಿತು.
10 ಅಡಿ ಎತ್ತರದ ಭವ್ಯ ಗಜರಾಜ
ರಾಜಾ ಶ್ರೀಲಂಕಾದ ಅತ್ಯಂತ ಎತ್ತರದ ಪಳಗಿದ ಆನೆಗಳಲ್ಲಿ ಒಂದಾಗಿತ್ತು. ಸುಮಾರು 10.5 ಅಡಿ ಎತ್ತರ ಹೊಂದಿದ್ದ ಈ ಗಜರಾಜ ಜನರ ಪ್ರಮುಖ ಆಕರ್ಷಣೆಯಾಗಿತ್ತು. ಕ್ಯಾಂಡಿಯ ಎಸಲ ಪೆರಹೆರಾ ಸೇರಿದಂತೆ ಹಲವು ಧಾರ್ಮಿಕ ಮೆರವಣಿಗೆಗಳಲ್ಲಿ ರಾಜಾ ಪ್ರಮುಖ ಪಾತ್ರ ವಹಿಸಿತ್ತು.
ಪವಿತ್ರ ದಂತಧಾತುವಿನ ಪೆಟ್ಟಿಗೆ ಹೊತ್ತ ಆನೆ
ರಾಜನಿಗೆ ದೊರೆತ ಅತ್ಯಂತ ದೊಡ್ಡ ಗೌರವವೆಂದರೆ ಕ್ಯಾಂಡಿ ಎಸಲ ಪೆರಹೆರಾದಲ್ಲಿ ಬುದ್ಧನ ಪವಿತ್ರ ದಂತಧಾತುವಿನ ಪೆಟ್ಟಿಗೆಯನ್ನು ಹೊರುವ ಜವಾಬ್ದಾರಿ. 2005ರಿಂದ 2021ರವರೆಗೆ ರಾಜಾ ಒಟ್ಟು 13 ಬಾರಿ ಈ ಪವಿತ್ರ ಪೆಟ್ಟಿಗೆಯನ್ನು ಹೊತ್ತಿತ್ತು ಎಂದು ಶ್ರೀಲಂಕಾ ಸರ್ಕಾರದ ದಾಖಲೆಗಳು ತಿಳಿಸುತ್ತವೆ. ಈ ಸೇವೆಯ ಕಾರಣದಿಂದಲೇ ರಾಜಾ ಶ್ರೀಲಂಕಾದ ಬೌದ್ಧ ಸಮುದಾಯದಲ್ಲಿ ಅಪಾರ ಗೌರವ ಗಳಿಸಿತ್ತು.
90 ಕಿ.ಮೀ ಕಾಲ್ನಡಿಗೆಯ ಪ್ರಯಾಣ
ಕ್ಯಾಂಡಿ ಪೆರಹೆರಾದಲ್ಲಿ ಭಾಗವಹಿಸಲು ರಾಜಾ ಹಲವು ಬಾರಿ ಸುಮಾರು 90 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿತ್ತು. ಜನಸಂದಣಿ ಇರುವ ರಸ್ತೆಗಳ ಮೂಲಕ ಸಾಗುವಾಗ ಅದರ ಸುರಕ್ಷತೆಗಾಗಿ ವಿಶೇಷ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತಿತ್ತು. ಇದರಿಂದ ರಾಜಾ ಸಾಮಾನ್ಯ ಆನೆಯಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಶ್ರೀಲಂಕಾದಲ್ಲಿ ಅದಕ್ಕೆ ಸಿಕ್ಕಿದ್ದ ಸ್ಥಾನಮಾನ ಎಷ್ಟೊಂದು ವಿಶೇಷವಾಗಿತ್ತು ಎಂಬುದಕ್ಕೆ ಇದೇ ಸಾಕ್ಷಿ.
2022ರಲ್ಲಿ ನಿಧನ, ರಾಷ್ಟ್ರೀಯ ಸಂಪತ್ತಿನ ಗೌರವ
2022ರ ಮಾರ್ಚ್ 7ರಂದು ನಡುಂಗಮುವ ರಾಜಾ ನಿಧನ ಹೊಂದಿತು. ಅದರ ನಿಧನದ ಬಳಿಕ ಶ್ರೀಲಂಕಾದಾದ್ಯಂತ ಜನರು ದುಃಖ ವ್ಯಕ್ತಪಡಿಸಿದರು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಶ್ರೀಲಂಕಾ ಸಚಿವ ಸಂಪುಟವು ರಾಜಾನನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿತು.
ಈಗಲೂ ಜೀವಂತವಾಗಿರುವಂತೆ ಕಾಣುತ್ತಿದೆ
ರಾಜನ ನೆನಪನ್ನು ಮುಂದಿನ ಪೀಳಿಗೆಗೂ ಉಳಿಸಲು ಅದರ ದೇಹವನ್ನು ಸಂರಕ್ಷಿಸುವ ಕಾರ್ಯ ಕೈಗೊಳ್ಳಲಾಯಿತು. 2026ರಲ್ಲಿ ಅದರ ಸಂರಕ್ಷಿತ ಪುನರ್‌ನಿರ್ಮಿತ ರೂಪವನ್ನು ಶ್ರೀಲಂಕಾದ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಈ ಸಂರಕ್ಷಣಾ ಯೋಜನೆಗೆ ಸುಮಾರು ₹2.6 ಕೋಟಿ ಶ್ರೀಲಂಕಾ ರೂಪಾಯಿ ವೆಚ್ಚವಾಗಿದೆ ಎಂದು ವರದಿ ತಿಳಿಸಿದೆ. ಹೀಗೆ ಮೈಸೂರಿನಲ್ಲಿ ಜನಿಸಿ, ಶ್ರೀಲಂಕಾದಲ್ಲಿ ಬೆಳೆದು, ಪವಿತ್ರ ದಂತಧಾತುವನ್ನು ಹೊತ್ತು, ಅಲ್ಲಿನ ಜನರ ಹೃದಯದಲ್ಲಿ ಸ್ಥಾನ ಪಡೆದ ನಡುಂಗಮುವ ರಾಜನ ಕಥೆ ಭಾರತ-ಶ್ರೀಲಂಕಾ ನಡುವಿನ ಒಂದು ಅಪರೂಪದ ಸಾಂಸ್ಕೃತಿಕ ಸಂಪರ್ಕದ ಕಥೆಯಾಗಿ ಉಳಿದಿದೆ.
