ಟಿ.ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ಅವರ ವಿವಾದಾತ್ಮಕ ಹೇಳಿಕೆ ಪ್ರಸಾರ ಮಾಡಿದ ಖಾಸಗಿ ವಾಹಿನಿ ಮಾಲೀಕ ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ನ್ಯಾಯ ಒದಗಿಸುವಂತೆ ಅವರು ವಿಪಕ್ಷ ನಾಯಕರ ಮೊರೆ ಹೋಗಿದ್ದಾರೆ.

ಟಿ.ನರಸೀಪುರ: ಇನ್‌ಸ್ಪೆಕ್ಟರ್ ಧನಂಜಯ ವಿವಾದಾತ್ಮಕ ನಡೆ ಪ್ರಕರಣವು ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಇನ್‌ಸ್ಪೆಕ್ಟರ್ ಹೇಳಿಕೆಯ ವಿಡಿಯೋವನ್ನು ಪ್ರಸಾರ ಮಾಡಿದ್ದ ಸ್ಥಳೀಯ ಖಾಸಗಿ ವಾಹಿನಿ ಮಾಲೀಕ ಮಂಜುನಾಥ್ ಅವರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಟಿ.ನರಸೀಪುರ ಪೊಲೀಸ್ ಠಾಣೆಯ ಪಿಸಿ ಯಶ್ವಂತ್ ನೀಡಿದ ದೂರಿನ ಆಧಾರದ ಮೇಲೆ, 'ಮಸೀದಿ ರಸ್ತೆಯಲ್ಲಿ ಹೋಗಬಾರದು ಮತ್ತು ಮಸೀದಿ ಮುಂದೆ ಪಟಾಕಿ ಸಿಡಿಸಿ ಡ್ಯಾನ್ಸ್ ಮಾಡಬಾರದು' ಎಂಬ ಇನ್‌ಸ್ಪೆಕ್ಟರ್ ಅವರ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಬಿಎನ್ಎಸ್ 353(1)(B), 353(1)(C), ಹಾಗೂ 353(2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ತನ್ನ ತಪ್ಪು ಮುಚ್ಚಿಕೊಳ್ಳಲು ಹೋಗಿ ಮತ್ತೊಂದು ಯಡವಟ್ಟು ಮಾಡಿಕೊಂಡ ಧನಂಜಯ

ಖಾಸಗಿ ವಾಹಿನಿ ಮಾಲೀಕ ಮಂಜುನಾಥ್ ವಿರುದ್ಧ ಪೊಲೀಸರು ದೂರು ದಾಖಲಿಸಿರುವುದಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ತವ್ರ ಆಕ್ರೋಶ ವ್ಯಕ್ತವಾಗಿದೆ. ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತೆ ಆಗಿದೆ ಇನ್‌ಸ್ಪೆಕ್ಟರ್ ನಡೆ ಎಂಬ ಮಾತುಗಳು ಕೇಳಿಬರುತ್ತಿವೆ. ತನ್ನನ್ನು ತಾನು ಪ್ರಚಾರ ಮಾಡಿಕೊಳ್ಳುವ ಹುಚ್ಚಿನಿಂದ ಸೆಪ್ಟೆಂಬರ್ 7ರಂದು ಠಾಣೆಯಲ್ಲಿ ನಡೆದ ಶಾಂತಿ ಸಭೆಗೆ ವರದಿ ಮಾಡಲು ಯೂಟ್ಯೂಬರ್‌ಗಳು ಹಾಗೂ ಸ್ಥಳೀಯ ಮಾಧ್ಯಮದವರನ್ನು ಇನ್‌ಸ್ಪೆಕ್ಟರ್ ಧನಂಜಯ ಕರೆಸಿದ್ದರು. ಆದರೆ, ಆ ಸಭೆಯಲ್ಲಿ ಮಸೀದಿ ಮುಂದೆ ಗಣಪತಿ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿಡಿಸ್ತೀನಿ ಎಂಬ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ, ತಾನು ಮಾಡಿದ ತಪ್ಪಿನಿಂದ ಹೇಗಾದರೂ ಮಾಡಿ ಪಾರಾಗಬೇಕೆಂದು ತನ್ನದೇ ಠಾಣೆಯ ಪಿಸಿ ಮೂಲಕ ಈಗ ಖಾಸಗಿ ವಾಹಿನಿ ವರದಿಗಾರ ಮಂಜುನಾಥ್ ವಿರುದ್ಧವೇ ಎಫ್‌ಐಆರ್ ದಾಖಲಿಸಿ ತಾನೇ ತೋಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾನೆ.

ಕೇಸ್ ದಾಖಲಾಗುತ್ತಿದ್ದಂತೆಯೇ ಮಂಜುನಾಥ್ ಆಕ್ರೋಶ

ತನ್ನ ಮೇಲೆ ಎಫ್‌ಐಆರ್ ಆಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವರದಿಗಾರ ಮಂಜುನಾಥ್ , ಪ್ರತಿಯೊಂದು ಪ್ರಕರಣದಲ್ಲೂ ಪ್ರಚಾರದ ಹುಚ್ಚಿನಿಂದ ಠಾಣೆಗೆ ಕರೆಸಿ ಸುದ್ದಿ ಮಾಡಿಸುತ್ತಿದ್ರು. ಈ ವಿಚಾರ ವಿವಾದವಾದ ಮೇಲೆ ತಾನು ತಪ್ಪಿಸಿಕೊಳ್ಳಲು ನನ್ನ ಮೇಲೆ ಎಫ್ ಐ ಆರ್ ಮಾಡಿದ್ದಾರೆ. ಒಂದು ವೇಳೆ ಇನ್‌ಸ್ಪೆಕ್ಟರ್ ಅವರ ಹೇಳಿಕೆಯನ್ನು ಸಿಎಂ ಡಿಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದಾದರೆ, ಸತ್ಯವನ್ನು ಪ್ರಸಾರ ಮಾಡಿದ ನನ್ನ ಮೇಲೇಕೆ ಎಫ್‌ಐಆರ್ ಮಾಡಬೇಕು? ಈ ಇಡೀ ಘಟನೆಗೆ ಇನ್‌ಸ್ಪೆಕ್ಟರ್ ಧನಂಜಯ ಅವರೇ ಕಾರಣ ಎಂದು ಕಿಡಿಕಾರಿದ್ದಾರೆ.

ಸರ್ಕಾರ ತಕ್ಷಣವೇ ತನ್ನ ಮೇಲಿನ ಎಫ್‌ಐಆರ್ ರದ್ದುಪಡಿಸಬೇಕು ಎಂದು ಒತ್ತಾಯಿಸಿರುವ ಮಂಜು, ಟಿ ನರಸೀಪುರ ಘಟನೆಗೆ ಇನ್ಸ್ಪೆಕ್ಟರ್ ಧನಂಜಯ ಅವರೇ ಕಾರಣ. ನನಗೆ ನ್ಯಾಯ ಕೊಡಿಸಿ ತಮಗೆ ನ್ಯಾಯ ಕೊಡಿಸುವಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಲ್ಲಿ ಬಹಿರಂಗವಾಗಿ ಮನವಿ ಮಾಡಿದ್ದಾರೆ.