ಬೆಂಗಳೂರು (ನ.08): ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಹೈಕಮಾಂಡ್ ಹಿಂದೆಯೇ ಅವಕಾಶ ನೀಡಿತ್ತು. ಆದರೆ ನಾನು ಬೇರೆಯವರ ಸಲಹೆಯನ್ನೂ ಪಡೆಯುವಂತೆ ಹೇಳಿದ್ದರಿಂದ ಅವಕಾಶ ವಂಚಿತನಾದೆ. ಈ ಬಾರಿ ಹೈಕಮಾಂಡ್ ಅವಕಾಶ ನೀಡಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ನಾನಾಗಿ ಯಾವುದಕ್ಕೂ ಅರ್ಜಿ ಹಾಕಿಕೊಂಡು ಹೋಗುವುದಿಲ್ಲ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಪಕ್ಷವೇ ಸೂಚನೆ ನೀಡಿತ್ತು. ಆದರೆ, ನಾನೇ ಒಪ್ಪಿಕೊಳ್ಳಲಿಲ್ಲ. ಆದರೆ, ಈಗ ಪಕ್ಷ ಅವಕಾಶ ನೀಡಿದರೆ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಆದರೆ ನಾನಾಗಿ ಯಾವುದನ್ನೂ ಕೇಳಿಕೊಂಡು ಹೋಗುವುದಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಉಪ ಚುನಾವಣೆಯಲ್ಲಿ ಪಕ್ಷ ಗೆಲ್ಲುವಂತೆ ಮಾಡುವುದರ ಕಡೆಗಷ್ಟೇ ನಮ್ಮ ಗಮನ ಎಂದರು. ಪಕ್ಷದಲ್ಲಿ ಕಾಲೆಳೆಯುವವರ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಬ್ರೇಕ್ ಹಾಕುವವರು ಇದ್ದಾರೆ. ಎಕ್ಸಿಲರೇಟರ್ ಕೊಟ್ಟು ವೇಗ ಹೆಚ್ಚಿಸುವವರೂ ಇದ್ದಾರೆ ಎಂದರು. 

ಸಿದ್ದರಾಮಯ್ಯ ಬಗ್ಗೆ ಪ್ರತಿಕ್ರಿಯಿಸಲ್ಲ: ಸಿದ್ದರಾಮಯ್ಯ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕ ರಾಗಿ ಬೆಳೆಯುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ನಮ್ಮ ನಾಯಕರು. ವಿರೋಧಪಕ್ಷದ ನಾಯಕ, ಶಾಸಕಾಂಗ ಪಕ್ಷದ ನಾಯಕ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ನಾವು ಅವರ ಕೈಕೆಳಗೆ ಕೆಲಸ ಮಾಡುತ್ತಾ ಬಂದಿದ್ದೇವೆ. ಹೀಗಾಗಿ ಯಾರಿಗೆ ಎಷ್ಟು ಗೌರವ ದೊರೆಯಬೇಕೋ ಅಷ್ಟು ನೀಡುತ್ತೇನೆ. ಯಾರ ಗೌರವಕ್ಕೂ ಧಕ್ಕೆಯಾಗದಂತೆ ನಾನು ನೋಡಿಕೊಳ್ಳಬೇಕು ಎಂದರು.