ಮೈಸೂರಿನ ಕಾಂಗ್ರೆಸ್ ಸಮಾವೇಶದಿಂದ ವಾಪಾಸ್ಸಾಗುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರ ಎಸ್ಕಾರ್ಟ್ ವಾಹನ ಪಲ್ಟಿಯಾಗಿದೆ. ಎಸ್ಕಾರ್ಟ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕೆಶಿ ಅವರಿಗೆ ಯಾವುದೇ ಅಪಾಯವಾಗಿಲ್ಲ.

ಮಂಡ್ಯ (ಜು.19): ಮೈಸೂರಿನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್‌ (Congress) ಸಾಧನಾ ಸಮಾವೇಶದಿಂದ (Saadhana Samaavesha)ಅರ್ಧಕ್ಕೆ ವಾಪಾಸ್‌ ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರ ಎಸ್ಕಾರ್ಟ್‌ (escort vehicle) ವಾಹನ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿದೆ. ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮುಗಿದ ಬಳಿಕ ಹಾಗೂ ಸಿಎಂ ಸಿದ್ಧರಾಮಯ್ಯ (Siddaramaiah) ಭಾಷಣ ಆರಂಭ ಮಾಡುವ ಮುನ್ನವೇ ಸಾಧನಾ ಸಮಾವೇಶದಿಂದ ಅವರು ಹೊರಹೋಗಿದ್ದರು.

ಬೆಂಗಳೂರಿಗೆ ಡಿಕೆ ಶಿವಕುಮಾರ್‌ ವಾಪಾಸ್ ಬರುತ್ತಿದ್ದ ವೇಳೆ ಅವರ ಎಸ್ಕಾರ್ಟ್ ವಾಹನ ಪಲ್ಟಿಯಾಗಿದ. ಕಾರಿನಲ್ಲಿದ್ದ ಇಬ್ಬರು ಎಸ್ಕಾರ್ಟ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೌಡಹಳ್ಳಿ ಟಿಎಂ ಹೊಸೂರು ಬಳಿಯ ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವ್ಯಾಪ್ತಿಯ ಎಕ್ಸ್‌ಪ್ರೆಸ್‌ ಹೈವೆ ಇದಾಗಿದೆ.

ಮೈಸೂರಿನ ಸಾಧನಾ ಸಮಾವೇಶ ಮುಗಿಸಿ ಡಿಸಿಎಂ ಡಿಕೆಶಿ ಬೆಂಗಳೂರಿಗೆ ವಾಪಾಸ್‌ ಬರುತ್ತಿದ್ದರು. ಡಿಕೆ ಶಿವಕುಮಾರ್‌ ಬೆಂಗಾವಲು ವಾಹನದಲ್ಲಿ ಎಸ್ಕಾರ್ಟ್ ಸಿಬ್ಬಂದಿ ತೆರಳುತ್ತಿದ್ದರು. ಡಿವೈಡರ್ ಡಿಕ್ಕಿಯಾಗಿ ಎಸ್ಕಾರ್ಟ್ ವಾಹನ ಪಲ್ಟಿಯಾಗಿದೆ. ಎಸ್ಕಾರ್ಟ್ ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಡಿಕೆಶಿ ಕುಳಿತಿದ್ದ ಕಾರು ಎಸ್ಕಾರ್ಟ್ ವಾಹನ ಹಿಂಬಾಲಿಸುತ್ತದ್ದರು. ಹಿಂದೆಯಿದ್ದ ಕಾರಣ ಅದೃಷ್ಟವಶಾತ್ ಡಿಕೆ ಶಿವಕುಮಾರ್‌ ಕಾರಿಗೆ ಯಾವುದೇ ಹಾನಿಯಾಗಿಲ್ಲ. ಸಿಬ್ಬಂದಿಯನ್ನು ಆಸ್ಪತ್ರೆಗೆ ಕಳಿಸಿ, ಘಟನೆ ಬಳಿಕ ಡಿಕೆ ಶಿವಕುಮಾರ್ ಬೆಂಗಳೂರಿಗೆ ಪ್ರಯಾಣ ಮುಂದುವರೆಸಿದ್ದಾರೆ.

ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ ಎಂದ ಡಿಕೆ ಶಿವಕುಮಾರ್‌

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್‌, ಚುನಾವಣೆ ಪೂರ್ವದಲ್ಲಿ ಕಮಲ ಕೆರೆಯಲ್ಲಿ ಇದ್ದರೆ ಚಂದ, ತೆನೆ ಹೊಲದಲ್ಲಿ ಇದ್ದರೆ ಚಂದ, ಕೈ ಅಧಿಕಾರದಲ್ಲಿ ಇದ್ದರೆ ಚಂದ ಎಂದು ಹೇಳಿದ್ದೆ. ಐದು ಬೆರಳು ಸೇರಿದರೆ ಒಂದು ಮುಷ್ಠಿ. ನಾವು ಜೈಕಾರ ಹಾಕಿಸಿ ಕೊಳ್ಳಲು ಇಲ್ಲಿಗೆ ಬಂದಿಲ್ಲ‌. ನಿಮ್ಮ ಋಣವನ್ನು ತೀರಿಸಲು ಇಲ್ಲಿಗೆ ಬಂದಿದ್ದೇವೆ. ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಗ್ಯಾರಂಟಿಗೆ ಚಾಲನೆ ಕೊಟ್ಟೆವು. ನಮ್ಮ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ಹೇಳಿದರು.

ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗಲಿದೆ ಎಂದಿದ್ದ ಬಿಜೆಪಿಯವರು ಇದೀಗ ಅವರು ಕೂಡ ಗ್ಯಾರಂಟಿ ಭರವಸೆ ನೀಡ್ತಿದ್ದಾರೆ. ಮುಂಬರುವ ಬಿಹಾರ ಚುನಾವಣೆಗೂ ಗ್ಯಾರಂಟಿ ಭರವಸೆ ನೀಡುತ್ತಿದ್ದಾರೆ. ಮಧ್ಯಪ್ರದೇಶ ದೆಹಲಿ ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಚುನಾವಣೆಯಲ್ಲೂ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದಾರೆ. ನಾವು ಭಾವನೆಗಳ ಮೇಲೆ ಅಧಿಕಾರ ಮಾಡುತ್ತಿಲ್ಲ‌. ಜನರ ಬದುಕಿನ ಆಧಾರದ ಮೇಲೆ ಅಧಿಕಾರ ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಬರುತ್ತೇ ಎಂದಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದನಂತರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ಬಿಜೆಪಿ ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ಶಾಶ್ವತವಾಗಿ ಉಳಿಯುವಂತಹ ಯಾವುದೇ ಕಾರ್ಯಕ್ರಮ ಮಾಡಿಲ್ಲ. ನಿಮ್ಮ ಟೀಕೆಗೆ ನಿಂದನೆಗೆ ಬಗ್ಗಲ್ಲ. ನಿಂದಕರಿರಬೇಕು, ನಿಂದಕರಿದ್ದರೆ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಸಾಧ್ಯ. ನಿಮ್ಮ ಟೀಕೆ ನಿಂದನೆಗೆ ಜಗ್ಗದೇ ನುಗ್ಗಿ ನಡೆ ಮುಂದೆ ಎಂದು ನಾವು ಸಾಗುತ್ತೇವೆ ಎಂದು ಹೇಳಿದ್ದಾರೆ.