ಮೈಸೂರಿನ ಸಾಲಿಗ್ರಾಮದಲ್ಲಿ, 70 ವರ್ಷದ ರೈತರೊಬ್ಬರು ತಮ್ಮ ಸ್ವಯಾರ್ಜಿತ ಆಸ್ತಿಯ ಖಾತೆಗಾಗಿ 8 ವರ್ಷಗಳಿಂದ ಅಲೆದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನನೊಂದು ನಾಡಕಚೇರಿ ಮುಂದೆ ಕ್ರಿಮಿನಾಶಕ ಸೇವಿಸಿ ಆತ್ಮ೧ಹತ್ಯೆಗೆ ಯತ್ನಿಸಿದ್ದಾರೆ.

ಮೈಸೂರು (ಮಾ.12): ಅನ್ನದಾತನೊಬ್ಬ ತನ್ನ ಸ್ವಯಾರ್ಜಿತ ಆಸ್ತಿಯ ಖಾತೆ ಮಾಡಿಸಿಕೊಳ್ಳಲು ಎಂಟು ವರ್ಷಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದು, ಕೊನೆಗೆ ಮನನೊಂದು ನಾಡಕಚೇರಿಯ ಮುಂದೆಯೇ ಆತ್ಮ೧ಹತ್ಯೆಗೆ ಯತ್ನಿಸಿದ ಘೋರ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆದಿದೆ.

ಬರೋಬ್ಬರಿ 8 ವರ್ಷ ಅಲೆದಾಡಿಸಿರುವ ಭ್ರಷ್ಟ ಅಧಿಕಾರಿಗಳು

ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ 70 ವರ್ಷದ ರೈತ ರಂಗೇಗೌಡ ಅವರು ತಮ್ಮ 24 ಗುಂಟೆ ಸ್ವಯಾರ್ಜಿತ ಆಸ್ತಿಯ ಖಾತೆಗಾಗಿ ಕಳೆದ 8 ವರ್ಷಗಳಿಂದ ಅಲೆದಾಡಿದ್ದಾರೆ. ಎರಡು ವರ್ಷಗಳ ಹಿಂದೆ ನಾಡಕಚೇರಿಯಲ್ಲಿ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದರೂ, ಅಧಿಕಾರಿಗಳು ಬಡಪಾಯಿ ರೈತನನ್ನು ಅಲೆದಾಡಿಸಿದ್ದಾರೆ. ತಹಶೀಲ್ದಾರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನೊಂದ ರೈತ ಸಾಲಿಗ್ರಾಮ ನಾಡಕಚೇರಿ ಮುಂದೆಯೇ ಕ್ರಿಮಿನಾಶಕ ಸೇವಿಸಿ ಆತ್ಮ೧ಹತ್ಯೆಗೆ ಯತ್ನಿಸಿದ್ದಾರೆ.

ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ರೈತನ ಸ್ಥಿತಿ

ವಿಷ ಸೇವಿಸಿ ಕುಸಿದು ಬಿದ್ದ ರಂಗೇಗೌಡ ಅವರನ್ನು ತಕ್ಷಣವೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. 'ಮುಂದಿನ 48 ಗಂಟೆಗಳ ಕಾಲ ಏನನ್ನೂ ಹೇಳಲು ಸಾಧ್ಯವಿಲ್ಲ' ಎಂದು ವೈದ್ಯರು ತಿಳಿಸಿದ್ದು, ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲೆದಾಡಿ 2.5 ಲಕ್ಷ ಹಣ ಖರ್ಚು: ರೈತನ ಮಗನ ಆಕ್ರೋಶ

'ನಮ್ಮ ತಂದೆ ಬದುಕಿರುವ ಬಗ್ಗೆ ಒಂದು ದಾಖಲೆ ಕೇಳುವುದನ್ನು ಬಿಟ್ಟು ಉಳಿದೆಲ್ಲಾ ದಾಖಲೆಗಳನ್ನು ಅಧಿಕಾರಿಗಳು ಕೇಳಿದ್ದಾರೆ' ಎಂದು ರಂಗೇಗೌಡ ಅವರ ಮಗ ವೆಂಕಟೇಶ್ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಈ ಎಂಟು ವರ್ಷಗಳಲ್ಲಿ ಇಬ್ಬರು ಶಾಸಕರು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಆರ್.ಐ, ವಿ.ಎ ಗಳ ಬಳಿ ಅಲೆದಾಡಿ ಸುಮಾರು 2.5 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದೇವೆ. ಆದರೂ ಕೆಲಸ ಮಾತ್ರ ಆಗಿಲ್ಲ ಎಂದು ಅವರು ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿದ್ದಾರೆ.

ಈಗ ಎಚ್ಚೆತ್ತ ಅಧಿಕಾರಿಗಳು: 15 ದಿನದ ಭರವಸೆ

ರೈತ ವಿಷ ಸೇವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು, ಈಗ '15 ದಿನದಲ್ಲಿ ಖಾತೆ ಮಾಡಿಕೊಡುತ್ತೇವೆ' ಎಂದು ಭರವಸೆ ನೀಡುತ್ತಿದ್ದಾರೆ. '8 ವರ್ಷಗಳಿಂದ ಆಗದ ಕೆಲಸ ಈಗ 15 ದಿನದಲ್ಲಿ ಆಗುವುದಾದರೆ ಆಗಲಿ, ಇದರಿಂದಲಾದರೂ ಇತರ ರೈತರಿಗೆ ಅನುಕೂಲವಾಗಲಿ' ಎಂದು ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂದೆ ಪ್ರಜ್ಞೆ ಬಂದ ನಂತರ ಈ ವಿಳಂಬಕ್ಕೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕುಟುಂಬಸ್ಥರು ಎಚ್ಚರಿಸಿದ್ದಾರೆ.