Kabza Review ಅದ್ದೂರಿ ಚಿತ್ರಿಕೆ ಅಗಾಧ ಕಥನ
ಉಪೇಂದ್ರ, ಸುದೀಪ್, ಶಿವರಾಜ್‌ಕುಮಾರ್, ಶ್ರೀಯಾ ಶರಣ್, ಮುರಳಿ ಶರ್ಮಾ ಅಭಿನಯಿಸಿರುವ ಕಬ್ಜ ಸಿನಿಮಾ ಹೇಗಿದೆ? ಉಪ್ಪಿ, ಶಿವಣ್ಣ ಮತ್ತು ಕಿಚ್ಚ ಪಾತ್ರ ಹೇಗಿದೆ?
ರಾಜೇಶ್ ಶೆಟ್ಟಿ
ಆರಂಭದಿಂದ ಅಂತ್ಯದವರೆಗೆ ಪ್ರತೀ ಫ್ರೇಮ್ ಕೂಡ ಅದ್ದೂರಿಯಾಗಿ ಕಾಣಿಸುವಂತೆ ರೂಪಿಸಿರುವ ಸಿನಿಮಾ ಕಬ್ಜ. ಇಲ್ಲಿ ಎಲ್ಲವೂ ಅಗಾಧ. ತಾರಾಗಣದಿಂದ ಹಿಡಿದು ಬಳಸುವ ಕತ್ತಿ, ಬಂದೂಕಿನವರೆಗೆ ಎಲ್ಲವೂ ದೊಡ್ಡದೇ. ರಣ ಭಯಂಕರ ವಿಲನ್‌ಗಳು, ಅಚ್ಚರಿ ಹುಟ್ಟಿಸುವ ಸೆಟ್‌ಗಳು, ಸುಟ್ಟು ಬೀಳುವ ಬುಲೆಟ್‌ಗಳು, ಚಿಲ್ಲೆಂದು ಹಾರುವ ರಕ್ತದ ಕೋಡಿ ಎಲ್ಲವೂ ಅಭೂತಪೂರ್ವ. ಕಬ್ಜ ನಿರ್ದೇಶಕರು ದೊಡ್ಡ ಕನಸು ಕಂಡಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ದೊಡ್ಡದೊಂದು ಸಿನಿಮಾ ಜಗತ್ತು ಕಟ್ಟಿದ್ದಾರೆ.
ಉತ್ತರ ಭಾರತದ ಸ್ವಾತಂತ್ರ್ಯ ಹೋರಾಟಗಾರನೊಬ್ಬ ಪಿತೂರಿಯಿಂದ ಕೊಲ್ಲಲ್ಪಟ್ಟಾಗ ಆತನ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ದಕ್ಷಿಣ ಭಾರತಕ್ಕೆ ಬರುತ್ತಾಳೆ. ಆ ಮಕ್ಕಳಲ್ಲಿ ಒಬ್ಬ ಉಗ್ರ ಪ್ರತಾಪಿ. ಇನ್ನೊಬ್ಬ ಶಾಂತಿ ಪ್ರೇಮಿ. ನೆತ್ತರು ಹೀರುವ ದುಷ್ಟರು ತುಂಬಿರುವ ಪ್ರದೇಶಕ್ಕೆ ಬಂದು ಜೀವನ ಕಟ್ಟುವ ವೇಳೆಗೆ ಉಂಟಾಗುವ ಒಬ್ಬನ ಮರಣದಿಂದ ಕತೆ ಶುರುವಾಗುತ್ತದೆ. ಆ ಲೆಕ್ಕದಲ್ಲಿ ನೋಡಿದರೆ ಇದೊಂದು ರಿವೇಂಜ್ ಡ್ರಾಮಾ. ಆದರೆ ಅಲ್ಲಿಗೆ ನಿಲ್ಲುವುದಿಲ್ಲ. ಒಂದು ಪ್ರದೇಶದಿಂದ, ಒಂದು ಭಾಗದಿಂದ, ಒಂದು ದೇಶದ ಉದ್ದಗಲಕ್ಕೂ ಪಸರಿಸುವಷ್ಟರ ಮಟ್ಟಿಗೆ ಕತೆ ಬೆಳೆಯುತ್ತದೆ. ಆ ಪ್ರಯಾಣದಲ್ಲಿ ಅಸಂಖ್ಯಾತ ಬಂದೂಕುಗಳು ಗರ್ಜಿಸುತ್ತವೆ. ಕೆಜಿಗಟ್ಟಲೆ ಬುಲೆಟ್‌ಗಳು ಖಾಲಿಯಾಗುತ್ತವೆ.
Kabzaa; ಪಾರ್ಟ್-2ನಲ್ಲಿ ಅಮರಾಪುರ 'ಕಬ್ಜ' ಮಾಡಿ ಉಪ್ಪಿ ಸಾಮ್ರಾಜ್ಯಕ್ಕೆ ಅಧಿಪತಿ ಆಗ್ತಾರಾ ಶಿವಣ್ಣ?
ನಿರ್ದೇಶನ: ಆರ್. ಚಂದ್ರು
ತಾರಾಗಣ: ಉಪೇಂದ್ರ, ಸುದೀಪ್, ಶಿವರಾಜ್‌ಕುಮಾರ್, ಶ್ರೀಯಾ ಶರಣ್, ಮುರಳಿ ಶರ್ಮಾ
ರೇಟಿಂಗ್- 3
ಈ ಸಿನಿಮಾದಲ್ಲಿ ನಾಯಕನ ಧೈರ್ಯಕ್ಕಿಂತ ನಿರ್ದೇಶಕರ ಧೈರ್ಯವೇ ದೊಡ್ಡದು. ಅದಕ್ಕೆ ಕಾರಣ ಕತೆಯನ್ನು ಅತ್ಯಂತ ಕುತೂಹಲಕರ ಘಟ್ಟದಲ್ಲಿ ನಿಲ್ಲಿಸಿರುವುದು. ಕಬ್ಜ 2 ಸಿನಿಮಾ ಬರಲಿದೆ ಎಂಬುದನ್ನು ಸೂಚಿಸಿರುವುದು. ಈ ಕತೆಯಲ್ಲಿ ಇಬ್ಬರು ನಾಯಕರಿದ್ದರೆ ಉಳಿದ ಕತೆಯಲ್ಲಿ ಮತ್ತೊಬ್ಬ ನಾಯಕ ಬರುತ್ತಾನೆ. ಅದನ್ನು ಹೇಳುವುದರ ಮೂಲಕ ಕಬ್ಜದ ಬೃಹತ್ ಲೋಕವನ್ನು ಮತ್ತಷ್ಟುವಿಸ್ತರಿಸುವ ಸೂಚನೆ ನೀಡಲಾಗಿದೆ.
Kabzaa Twitter Review; ಉಪೇಂದ್ರ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದೇನು, ಹೇಗಿದೆ ಕಿಚ್ಚ, ಶಿವಣ್ಣನ ಪಾತ್ರ?
ಕೇಡಿಗಳ ಆಕ್ರೋಶದ ಜೊತೆಗೆ ಇಲ್ಲೊಂದು ಮಧುರವಾದ ಪ್ರೇಮಕತೆ ಇದೆ. ದೊಡ್ಡ ಕುಟುಂಬವೊಂದರ ಪರಂಪರೆಯ ಹಿನ್ನೆಲೆ ಇದೆ. ಆದರೆ ಅವೆಲ್ಲವೂ ಮಸುಕು ಮಸುಕು ಭಾವದಲ್ಲಿ ಮೂಡಿಬಂದಿದೆ. ಬಣ್ಣವೂ ಮಸುಕು ಮಸುಕು ಇರುವುದರಿಂದ ಅನೇಕ ಕಡೆಗಳಲ್ಲಿ ಕೆಜಿಎಫ್ ಛಾಯೆ ಮನಸ್ಸಿಗೆ ಬರುತ್ತದೆ. ಧೂಳು ತುಂಬಿರುವ ಜಾಗ, ಮಸಿ ಅಂಟಿಕೊಂಡಿರುವ ಬಟ್ಟೆಗಳು ಕೂಡ ತೆರೆ ಮೇಲೆ ಅದ್ದೂರಿಯಾಗಿ ಕಾಣಿಸುವುದರ ಹಿಂದೆ ಛಾಯಾಗ್ರಾಹಕ ಎ.ಜೆ. ಶೆಟ್ಟಿಕೈಚಳಕ ಎದ್ದು ಕಾಣುತ್ತದೆ. ಛಿಲ್ಲೆಂದು ಹಾರುವ ರಕ್ತವನ್ನೂ ಅವರು ಮೋಹಕ ಬಣ್ಣದಂತೆ ಕಾಣಿಸುತ್ತಾರೆ. ರವಿ ಬಸ್ರೂರು ಸಂಗೀತ ಮತ್ತು ಅವರ ಛಾಯಾಗ್ರಹಣ ಈ ಸಿನಿಮಾದ ಎರಡು ಮೇರು ಶಕ್ತಿಗಳು.
ಕತೆಯನ್ನು ನಿರೂಪಿಸುವ ಕಿಚ್ಚ ಸುದೀಪ್ ಧ್ವನಿ ಚಿತ್ರಕ್ಕೊಂದು ವಿಶಿಷ್ಟಶಕ್ತಿ ಒದಗಿಸಿದೆ. ಕಡೆಯಲ್ಲಿ ಕಾಣಿಸಿಕೊಳ್ಳುವ ಶಿವಣ್ಣನ ಗತ್ತಿನ ನಡೆ ಕುತೂಹಲ ಮೂಡಿಸುತ್ತದೆ. ನಾನಾ ಬಗೆಯ ಚಿತ್ರಗಳು ಕಲಸುಮೇಲೋಗರವಾಗಿ ಮನಸ್ಸಲ್ಲಿ ಮೂಡಿ ಮರೆಯಾಗುತ್ತಾ ಗಾಢವಾಗಿ ಕಂಡ ಮರುಕ್ಷಣವೇ ಅಂತರ್ಧಾನವಾಗುತ್ತಾ ಇರುವ ವೇಳೆಯಲ್ಲಿ ಕಟ್ಟಕಡೆಗೆ ನೋಡುಗನ ಮನಸ್ಸಲ್ಲಿ ಅಚ್ಚರಿಯಾಗಿ ಉಳಿಯುವುದು ರಣಬಿಸಿಯಾದ ಯುದ್ಧಭೂಮಿಯಲ್ಲಿ ಶಿವಣ್ಣ ಕೂರುವ ಮರದ ಚೇರು. ಆ ಚೇರಿನ ಕತೆ ನೋಡಲು ಕಬ್ಜ 2ಗೆ ಕಾಯಬೇಕು.