ಆರ್‌. ಕೇಶವಮೂರ್ತಿ

ಚೆನ್ನಾಗಿರುವುದನ್ನು ನಾವು ಹುಡುಕಿಕೊಂಡು ಹೋಗುತ್ತೇವಲ್ಲ, ಹಾಗೇ ‘ಹದಿನೇಳೆಂಟು’ ಕೂಡ ನಮ್ಮ ಹುಡುಕಾಟದ ಪಟ್ಟಿಗೆ ಸೇರಿಸಿಕೊಳ್ಳಬಹುದಾದ ಸಿನಿಮಾ. ನಿರ್ದೇಶಕ ಪೃಥ್ವಿ ಕೊಣನೂರು ಸದ್ದಿಲ್ಲದೆ ನಮ್ಮ ನಡುವಿನ ಘಟನೆಯನ್ನು ಸಮಾಜದ ಬೇರೆ ಬೇರೆ ಸ್ತರಗಳಲ್ಲಿ ಸುತ್ತಾಡಿಸುವ ಮೂಲಕ ಸತ್ಯ ಕನ್ನಡಿಯೊಂದನ್ನು ನೋಡುಗರ ಮುಂದಿಟ್ಟಿದ್ದಾರೆ.

ನಿರ್ದೇಶನ: ಪೃಥ್ವಿ ಕೊಣನೂರು

ತಾರಾಗಣ: ಶೆರ್ಲಿನ್‌ ಭೋಸಲೆ, ನೀರಜ್‌ ಮ್ಯಾಥ್ಯೂ, ಸುಧಾ ಬೆಳವಾಡಿ, ನಾಗೇಂದ್ರ ಷಾ, ರೇಖಾ ಕೂಡ್ಲಿಗಿ, ಭವಾನಿ ಪ್ರಕಾಶ್, ರವಿ ಹೆಬ್ಬಳ್ಳಿ.

ರೇಟಿಂಗ್‌: 4

BACHELOR PARTY REVIEW ದ್ರೋಹವೂ ಇಲ್ಲಿ ತಮಾಷೆಯ ಬೆನ್ನೇರಿದೆ!

ಚಿತ್ರದ ಹೆಸರು ಗಣಿತವನ್ನು ನೆನಪಿಸುತ್ತದೆ. ಈ ಗಣಿತ ಸಮಸ್ಯೆಗಳು ಲೆಕ್ಕಗಳಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಹೇಳುತ್ತಾರೆ ನಿರ್ದೇಶಕರು. ದೀಪ ಮತ್ತು ಹರಿ ಕಾಲೇಜಿನಲ್ಲಿ ತಾವು ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡಿರುತ್ತಾರೆ. ಆ ವಿಡಿಯೋ ಹೇಗೋ ಹೊರಗೆ ಬಂದು ಇಂಟರ್‌ನೆಟ್‌ ಸೇರಿ ವೈರಲ್‌ ಆಗುತ್ತದೆ. ತಮ್ಮ ಕಾಲೇಜಿನಲ್ಲಿ ಆದ ಈ ಘಟನೆಯಿಂದ ಕಾಲೇಜಿನ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಓದಿನಲ್ಲಿ ಮುಂದಿರುವ ಹರಿಯನ್ನು ಉಳಿಸಿಕೊಂಡು, ವಿದ್ಯೆಯಲ್ಲಿ ಅಷ್ಟೇನು ಜಾಣೆ ಅಲ್ಲದೆ ದೀಪಾಳನ್ನು ಕಾಲೇಜಿನಿಂದ ಹೊರಗೆ ಹಾಕಲು ಕಾಲೇಜಿನ ಆಂತರಿಕ ಸಮಿತಿ ನಿರ್ಧರಿಸುತ್ತದೆ. ಆದರೆ, ಈ ನಿರ್ಧಾರ ಹುಟ್ಟು ಹಾಕುವ ಪ್ರಶ್ನೆ, ಸಮಸ್ಯೆಗಳು ಒಂದಕ್ಕೊಂದು ಜತೆಯಾಗಿ ಜಾತಿ, ಹೆಣ್ಣು. ಮೇಲು-ಕೀಳು, ವ್ಯವಸ್ಥೆಯ ಲೋಪಗಳು, ಕಾನೂನು, ಪೊಲೀಸರು ನಡೆ... ಹೀಗೆ ಎಲ್ಲವೂ ಬಂದು ಹೋಗುತ್ತವೆ.

Case of Kondana Review ತೀವ್ರವಾಗಿ ಕಾಡುವ ಕ್ರೈಮ್ ಥ್ರಿಲ್ಲರ್‌

ಕ್ರೀಡೆಯಲ್ಲಿ ಮುಂದಿರುವ ದೀಪಾಳ ಕುಟುಂಬಕ್ಕೆ ವೈರಲ್‌ ಆದ ಖಾಸಗಿ ವಿಡಿಯೋದಿಂದ ಮಾನ ಹರಾಜು ಆಯಿತು ಎನ್ನುವುದಕ್ಕಿಂತ ತಮ್ಮ ಮಗಳು ವಿದ್ಯೆಯಿಂದ ವಂಚಿತಳಾಗುತ್ತಾಳೆ ಎನ್ನುವ ಸಂಕಟವೇ ಹೆಚ್ಚಾಗುತ್ತದೆ. ಆದರೆ, ಅದೇ ಖಾಸಗಿ ವಿಡಿಯೋದಲ್ಲಿರುವ ಹರಿ ಕುಟುಂಬಕ್ಕೆ ಮರ್ಯಾದೆ ಮುಖ್ಯವಾಗುತ್ತದೆ. ಮರ್ಯಾದೆ ಮತ್ತು ಬಡತನದ ವಿದ್ಯೆ ಎರಡರಲ್ಲಿ ಯಾವುದು ಯಥಾಸ್ಥಿತಿಯ ಕಟಕಟೆಯಲ್ಲಿ ನಿಲ್ಲುತ್ತದೆ ಎನ್ನುವುದು ಚಿತ್ರದ ಕ್ಲೈಮ್ಯಾಕ್ಸ್‌ ಆದರೂ, ಅದೇ ಆರಂಭ ಕೂಡ!

ಇಲ್ಲಿ ಯಾರನ್ನೂ ಖಳನಾಯಕರನ್ನಾಗಿಸದಿರುವುದೇ ನಿರ್ದೇಶಕ ಪೃಥ್ವಿ ಕೊಣನೂರು ಅವರ ಹೆಚ್ಚುಗಾರಿಕೆ. ಹರಿಯ ಪರ ಇರುವ ಲಾಯರ್‌, ಪೊಲೀಸ್‌ ಅಧಿಕಾರಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲೆ, ಉಪನ್ಯಾಸಕಿ ಈ ಪಾತ್ರಗಳು ಸಮಾಜದ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಎಲ್ಲರ ಪ್ರತಿನಿಧಿಗಳಂತೆ ಕಾಣುತ್ತಾರೆ. ಮನೆ ಕೆಲಸ ಮಾಡುವ ದೀಪಾಳ ತಾಯಿ ಕೇಳುವ ‘ಈಗ ನಾನ್‌ ಏನ್‌ ಮಾಡ್ಲಿ’ ಪ್ರಶ್ನೆಯೇ ಚಿತ್ರದ ಒಟ್ಟು ಧ್ವನಿಯಾಗುತ್ತದೆ.