Asianet Suvarna News Asianet Suvarna News
breaking news image

Sukhee Movie Reveiw: ಆಕರ್ಷಕ ಹಾಗೂ ತುಂಟತನದ ಸುಖೀ ನಿಮ್ಮನ್ನು ಆವರಿಸುತ್ತಾಳೆ!

ಶೆಲ್ಪಾ ಶೆಟ್ಟಿ ಅಭಿನಯದ ಸುಖೀ ಚಿತ್ರ ನಡು ವಯಸ್ಸಿನ ಹೆಂಗೆಳೆಯರು ನೋಡಲೇಬೇಕಾದ ಚಿತ್ರ. ಕಾಲೇಜು ದಿನಗಳ ತುಂಟತನವನ್ನು ಹುಡುಕಿ ಹೋಗುವ ಮಹಿಳೆಯ ಸಂಸಾರದ ಕಥೆ ಇದು!

Shilpa shetty acted sukhee momie must watch for middle women which makes you feel collegehood
Author
First Published Apr 1, 2024, 3:46 PM IST

- ವೀಣಾ ರಾವ್, ಕನ್ನಡ ಪ್ರಭ

ಸುಖಿ ಸುಖಪ್ರೀತ್ ಕಾಲ್ರಾ ಒಂದು ಮಗಳಿರುವ ಪಂಜಾಬಿ ಗೃಹಿಣಿ. ತಾನು ಓದುವಾಗ ಶಾಲಾ ಕಾಲೇಜಿನಲ್ಲಿ ತನ್ನ ಸೌಂದರ್ಯ ಹಾಗೂ ತುಂಟತನದಿಂದಲೇ ತನ್ನದೇ ಛಾಪು ಮೂಡಿಸಿದ್ದ ಹೆಣ್ಣು. ಈಗ ಮದುವೆಯಾಗಿ ಒಂದು ಮಗುವಿನ ತಾಯಿಯೂ ಆಗಿ ತನ್ನ ಸಂಸಾರದಲ್ಲಿ ಮುಳುಗಿ ಹೋದರೂ ಆ ತುಂಟತನ ಆಗಾಗ ಹೆಡೆಯಾಡುತ್ತಲೇ ಇರುತ್ತದೆ. ಮನೆಯಲ್ಲಿ ವೃದ್ಧ ಮಾವ ಎಲ್ಲದಕ್ಕೂ ಸೊಸೆಯನ್ನೇ ಅವಲಂಬಿಸಿರುತ್ತಾರೆ. ಮಾವನ ಸೇವೆಯನ್ನು ಖುಷಿಯಿಂದಲೇ ಮಾಡುವ ಸುಖಿ, ತನ್ನ ಅಂತರಂಗದ ಮಾತುಗಳನ್ನು ವ್ಯಥೆ ಸಂತೋಷಗಳನ್ನೂ ಮಾವನೊಂದಿಗೇ ಹಂಚಿಕೊಳ್ಳುವಷ್ಟು ಮಾವ-ಸೊಸೆ ಆಪ್ತರು. ಸದಾ ತನ್ನ ಸೇವೆ ಮಾಡುತ್ತಾ, ಮಗಳ-ಗಂಡನ ಬೇಕು ಬೇಡಗಳನ್ನು ಗಮನಿಸುತ್ತಾ ತನಗೇ ಒಂದು ವ್ಯಕ್ತಿತ್ವ ಇದೆ ಎಂಬುದನ್ನೇ ಮರೆತ ಸುಖಿಯ ಬಗ್ಗೆ ಮಾವನಿಗೆ ಸ್ನೇಹಪೂರ್ವಕ ಸಹಾನುಭೂತಿ.

ಗಂಡ ಮಗಳಿಗೆ ಮಾತ್ರ ಸುಖೀ ಹೇಗಿದ್ದರೂ ಕಷ್ಟ. ತನ್ನ ತಾಯಿಗೂ ಒಂದು ಅವಳದ್ದೇ ಆದ ಪ್ರಪಂಚವಿದೆ ಎಂಬುದನ್ನೇ ಗಮನಿಸದ ಮಗಳು. ಮದುವೆಯಾದ ಹೊಸದರಲ್ಲಿ ಪ್ರೀತಿಯ ಮಳೆಯನ್ನೇ ಸುರಿಸಿದ್ದ ಪತಿರಾಯ ಈಗ ಯಾಂತ್ರಿಕತೆಗೆ (Mechanical Life) ಜೋತು ಬಿದ್ದಿರುತ್ತಾನೆ. ಹೆಂಡತಿಗೂ ಆಸೆ ಆಕಾಂಕ್ಷೆಗಳಿರುತ್ತದೆ ಎಂಬುದನ್ನು ಅರಿತೂ ಅರಿಯದ ನಿರ್ಲಕ್ಷ್ಯ. ತನ್ನ ದುಡಿಮೆ (Earnings), ಹಣ ಸಂಪಾದನೆ ಇದರಲ್ಲೇ ಮುಳುಗಿ ಹೋಗಿರುತ್ತಾನೆ.

Merry Christmas Movie Review: ಸುಂದರ ಮೊಗದ ಹಿಂದಿನ ಕ್ರೂರತೆ ಇಷ್ಟಿರುತ್ತಾ?

ತನ್ನ ದೈನಂದಿನ ಜಂಜಾಟದಲ್ಲಿ ಬಾಡಿ ಬಸವಳಿದ ಸುಖೀ ತನ್ನ ವಿದ್ಯಾರ್ಥಿ ಜೀವನದ ಗೆಳತಿಯರನ್ನು ಕಂಡು ಮಾತನಾಡಿಸಲು ಹಾತೊರೆಯುತ್ತಿರುತ್ತಾಳೆ. ಇದರ ಬಗ್ಗೆ ಗಂಡ ಮಗಳಿಗೋ ಮುಗಿಯದ ನಿರ್ಲಕ್ಷ್ಯ. ಆದರೆ ಮಾವನಿಗೆ ಅವಳು ತನ್ನ ಹಳೆಯ ಗೆಳತಿಯರನ್ನು ನೋಡಿ ಬರಲಿ ಎಂಬ ಅಕ್ಕರೆ. ಅದಕ್ಕಾಗಿ ದಿನವೂ ಅವಳಿಗೆ ಹೇಳುತ್ತಿರುತ್ತಾನೆ. 'ನನ್ನ ಬಗ್ಗೆ ಯೋಚಿಸಬೇಡ. ನೀನು ಗೆಳತಿಯರನ್ನು ಭೇಟಿಯಾಗಿ ಬಾ ನಿನ್ನ ಖುಷಿಯ ಬಗ್ಗೆಯೂ ಗಮನ ಕೊಡು. ನೀನು ಇಲ್ಲದೆ ಮನೆ ಹೇಗೆ ನಡೆಯುತ್ತದೆಂಬ ಚಿಂತೆ ಬೇಡ. ನೀನಿಲ್ಲದ ಕೊರತೆಯನ್ನು ಕೊಂಚ ದಿನ ನಿನ್ನ ಗಂಡ ಮಗಳು ಅನುಭವಿಸಲಿ,' ಎಂದು ಆಗಾಗ ಹೇಳುತ್ತಿರುತ್ತಾನೆ.  ಮಗಳು ಹಾಗೂ ಗಂಡ ಇವಳ ಬಗ್ಗೆ ಕೇರ್ ಮಾಡದೆ ಇರುವುದು ಸುಖೀ ದುಃಖಿತಳಾಗುವುದು ಆಗಾಗ ನಡೆಯುತ್ತಲೇ ಇರುತ್ತದೆ.

ಫ್ರೆಂಡ್ಸ್ ಮೀಟ್ ಆಗ್ತಾಳಾ ಸುಖೀ?:
ಹಳೆಯ ಗೆಳತಿಯರೊಂದಿಗಿನ ಮರುಮಿಲನಕ್ಕೆ ಹೋಗಬೇಕು ಎಂದು ನಿರ್ಧಾರಿಸುವಾಗಲೇ ಸುಖೀಯ ಪ್ರೀತಿಯ ಮಾವ ತೀರಿಕೊಳ್ಳುತ್ತಾರೆ. ಸುಖಿ ಕುಸಿದು ಹೋಗುತ್ತಾಳೆ. ಕೆಲವು ದಿನಗಳ ನಂತರ ಅವಳಿಗೆ ಒಂದು ಕೊರಿಯರ್ ಬರುತ್ತದೆ. ಅದರಲ್ಲಿ ಅವಳ ಮಾವ ತಾನು ಸಾಯುವ ಮುನ್ನ ಅವಳಿಗೆ ಗೆಳತಿಯರನ್ನು ಭೇಟಿ ಮಾಡಲು ದೆಹಲಿಗೆ ಹೋಗಲು ಟಿಕೆಟ್ ಖರೀದಿಸಿರುತ್ತಾರೆ. ಅದನ್ನು ನೋಡಿದ ಸುಖೀ ಕಣ್ಣೀರಾಗುತ್ತಾಳೆ. ತಾನು ದೆಹಲಿಗೆ ಹೋಗುವ ಗಟ್ಟಿ ನಿರ್ಧಾರ ಮಾಡಿ, ಒಂದು ವಾರದ ಮಟ್ಟಿಗೆ ಹೊರಟು ಬಿಡುತ್ತಾಳೆ. ಅಲ್ಲಿ ಗೆಳತಿಯರ ಭೇಟಿ ಮೋಜು ಮಸ್ತಿ ಎಲ್ಲವೂ ನಡೆಯುತ್ತದೆ. ಸುಖೀ ಹಳೆಯ ಹಿಂದಿನ ತುಂಟ ಪೋರಿಯಾಗುತ್ತಾಳೆ. ಅದೇ ಸಿಡಿದೇಳುವ ಗುಣ ಮಾತುಮಾತಿಗೂ ನಗುವ ಚಂಚಲೆಯಾಗುತ್ತಾಳೆ. ಹಕ್ಕಿಯಂತೆ ಹಾರಾಡುತ್ತಾಳೆ. ಹಾವು ತನ್ನ ಪೊರೆ ಕಳಚಿ ತಾಜಾ ಆದಂತೆ ಮರುಹುಟ್ಟು ಪಡೆಯುತ್ತಾಳೆ. ತಾನು ಪ್ರೀತಿಸಿ ಮದುವೆಯಾದಾಗ ದೂರವಾಗಿದ್ದ ತಂದೆತಾಯಿಯನ್ನೂ ಈ ಒಂದು ವಾರದಲ್ಲಿ ಪುನಃ ಪಡೆದುಕೊಳ್ಳುತ್ತಾಳೆ. ತನ್ನ ಕಾಲೇಜಿನ ದಿನಗಳಲ್ಲಿ ತನ್ನನ್ನು ಪ್ರೀತಿಸುತ್ತಿದ್ದ ವಿಕ್ರಮ್ ವರ್ಮಾ ಕೂಡ ಸುಖಿಯನ್ನು ಬೇಟಿಯಾಗುತ್ತಾನೆ. ತಾನಿನ್ನೂ ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳುತ್ತಾನೆ. ಸುಖೀ ಗೆಳತಿಯರೊಂದಿಗೆ ಹಾಡಿ ಕುಣಿದು ನಕ್ಕು ನಲಿಯುತ್ತಾಳೆ. ಕುದುರೆ ರೇಸಿನಲ್ಲಿ ಭಾಗವಹಿಸಿ ಗೆದ್ದು, ತಾನಿನ್ನೂ ಆ ಹಳೆಯ ಉತ್ಸಾಹೀ ಸುಖೀಯೇ ಎಂದು ಸಾಬೀತು ಮಾಡುತ್ತಾಳೆ.

Sirf Ek Bandaa Kaafi Hai Review: ಚಲನಚಿತ್ರದಲ್ಲಲ್ಲ, ನಿಜ ಜೀವನದಲ್ಲೂ ನ್ಯಾಯ ದಕ್ಕಿಸಿಕೊಳ್ಳಬಹುದು

ಸುಖೀ ಕೊನೆಗೆ ಏನು ಮಾಡುತ್ತಾಳೆ? ಮನೆಗೆ ಬಂದು ತನ್ನ ಗಂಡಮಗಳನ್ನು ಕೂಡಿಕೊಳ್ಳುತ್ತಾಳಾ ಅಥವಾ ನೀರಸ ಸಂಸಾರದ ಬದುಕಿಗೆ ವಿದಾಯ ಹೇಳುತ್ತಾಳಾ? ಅಥವಾ ತನ್ನ ಕಾಲೇಜಿನ ಗೆಳೆಯ ವಿಕ್ರಮ್‌ನೊಂದಿಗೆ ಹೊಸ ಬದುಕು ಅರಸಿ ಹೋಗುತ್ತಾಳಾ? ಸುಖೀ ನೀವೂ ನೋಡಿ ಹೇಳಿ.

ಶಿಲ್ಪಾ ಶೆಟ್ಟಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾಳೆ. ತನ್ನ ಆಕರ್ಷಕ ನಗು ಹಾಗೂ ತನ್ನ ಲವಲವಿಕೆಯ ನಟನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾಳೆ. ಯಾವಾಗಲೂ ಗಂಭೀರ ಪಾತ್ರಗಳನ್ನೇ ಮಾಡುವ ವಿಕ್ರಮ್ ಸಾಧ್ ಇಲ್ಲಿ ಒಬ್ಬ ಪ್ರೇಮಿಯಾಗಿ ತನ್ನ ನವಿರಾದ ಅಭಿನಯದಿಂದ ನೋಡುಗರ ಮನ ಗೆದ್ದಿದ್ದಾನೆ. ಅವನ ಆಕರ್ಷಕ ನಗುವಿಗೆ ಜನ ಫಿದಾ ಆಗುವುದರಲ್ಲಿ ಎರಡು ಮಾತಿಲ್ಲ. ಮೊದಮೊದಲು ಅಮ್ಮನನ್ನು ಹೀಗಳೆಯುವ ಮಗಳು ನಂತರ ಅಮ್ಮನನ್ನು ನೆನೆದು ಪೇಚಾಡುವುದು ಅಯ್ಯೋ ಅನಿಸುತ್ತದೆ.

2023 ರಲ್ಲಿ ಬಿಡುಗಡೆಯಾದ ಸೋನಲ್ ಜೋಷಿ ನಿರ್ದೇಶನದ ಸುಖೀ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. 

2012ರಲ್ಲಿ ಬಿಡುಗಡೆಯಾದ ಇಂಗ್ಲಿಷ್-ವಿಂಗ್ಲಿಷ್ ನೋಡಿದವರಿಗೆ ಈ ಚಿತ್ರವೂ ಅದೇ ಜಾಡಿನಲ್ಲಿದೆ ಎನಿಸಿದರೆ ಅತಿಶಯವಲ್ಲ. ಆದರೆ ಇಂಗ್ಲಿಷ್ ವಿಂಗ್ಲಿಷ್ ನ ಶಶಿ ಹಾಗೂ ಸುಖಿಯ ಸ್ವಭಾವದಲ್ಲಿ ಅಂತರವಿದೆ. ಶಶಿ ಗಂಭೀರ ಸ್ವಭಾವದ ಹೆಣ್ಣುಮಗಳು ಹಾಗೂ ಉದ್ಯಮಶೀಲ ಮಹಿಳೆ. ಸುಖೀ ತುಂಟಿ, ಗೃಹಿಣಿಯಾದರೂ ಆ ತುಂಟ ಸ್ವಭಾವ ಮರೆಯಾಗಿರುತ್ತದೆ ಅಷ್ಟೆ ವಿನಾ ಪೂರ್ತಿ ಹೋಗಿರವುದಿಲ್ಲ. 2017ರಲ್ಲಿ ಬಿಡುಗಡೆಯಾದ ವಿದ್ಯಾಬಾಲನ್ ಅಭಿನಯದ ತುಮ್ಹಾರಿ ಸುಲು ಕೂಡ ನೆನಪಾಗದಿರದು. ಅಂದರೆ ಗೃಹಿಣಿಯರಿಗೆ ತಮ್ಮ ಗೃಹಕೃತ್ಯದ ಹೊರತಾಗಿಯೂ ಒಂದು ಪ್ರಂಪಚ ಇದೆ, ಅದರಲ್ಲಿ ಅವರು ಎಂಜಾಯ್ ಮಾಡಬಲ್ಲರು, ಅಗತ್ಯ ಬಿದ್ದರೆ ಸವಾಲುಗಳನ್ನು ಹಿಮ್ಮೆಟ್ಟಿಸಿ ತಮ್ಮ ಛಾಪು ಮೂಡಿಸಬಲ್ಲರು ಎಂಬುದೇ ಈ ಚಿತ್ರಗಳ ಹೂರಣ.
 

Latest Videos
Follow Us:
Download App:
  • android
  • ios