Merry Christmas Movie Review: ಸುಂದರ ಮೊಗದ ಹಿಂದಿನ ಕ್ರೂರತೆ ಇಷ್ಟಿರುತ್ತಾ?
2024 ರಲ್ಲಿ ಬಿಡುಗಡೆಯಾದ ಶ್ರೀರಾಮ್ ರಾಘವನ್ ನಿರ್ದೇಶನದ, ಕಟ್ರೀನಾ ಕೈಫ್ ಹಾಗೂ ವಿಜಯ್ ಸೇತುಪತಿ ಅಭಿನಯದ ಮೆರ‍್ರಿ ಕ್ರಿಸ್ಮಸ್ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಓಡುತ್ತಿದೆ. ಈ ಚಿತ್ರದ ರಿವ್ಯೂ
- ವೀಣಾ ರಾವ್, ಎ.ವಿ
ಸುಂದರ ಮೊಗದ ಹಿಂದಿನ ಕ್ರೂರತೆ ಎಂದರೆ ಈ ಸಿನಿಮಾ ನೋಡಬೇಕು. ಇಬ್ಬರು ಅಪರಿಚಿತರು ಕ್ರಿಸ್ಮಸ್ ಈವ್‌ನಲ್ಲಿ ಭೇಟಿಯಾಗಿ ಪರಸ್ಪರ ಹತ್ತಿರವಾಗುವಂಥ ಸನ್ನಿವೇಶದಲ್ಲಿ ಹೇಗೆ ಕಥೆ ತಿರುವು ತೆಗೆದುಕೊಂಡು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತದೆ ಎಂಬುವುದೇ ರೋಚಕ. ಈ ಚಿತ್ರ ಹಿಂದಿ ಮತ್ತು ತಮಿಳು ಎರಡೂ ಭಾಷೆಯಲ್ಲಿವೆ.
ಇದು 1980ರ ಸಮಯದ ಮುಂಬೈನಲ್ಲಿ ನಡೆದಿರಬಹುದಾದ ಕಥೆ. ಮರಿಯ ಒಂದು ಮಗಳಿರುವ ಗೃಹಿಣಿ. ನಾಲ್ಕೈದು ವರ್ಷದ ಆ ಮಗುವಿಗೆ ಮಾತು ಬಾರದು. ಆಲ್ಬರ್ಟ್ ಒಂದು ಕೊಲೆ ಮಾಡಿ ಶಿಕ್ಷೆ ಅನುಭವಿಸಿ, ಅದೇ ತಾನೇ ಕಾರಾಗೃಹದಿಂದ ಹೊರಬಂದ ಖೈದಿ. ಕ್ರಿಸ್ಮಸ್ ದಿನ ಅವನಿಗೆ ಏನಾದರೂ ಥ್ರಿಲ್ ಆಗುವಂಥ ಅನುಭವ ಮಾಡಬೇಕು ಎನಿಸುತ್ತದೆ. ಮನೆಯಿಂದ ಹೊರಟು ಒಂದು ಹೋಟೆಲಿಗೆ ಬರುತ್ತಾನೆ. ಒಂದು ಸುಂದರ ಹೆಣ್ಣಿನೊಡನೆ ಆ ರಾತ್ರಿಯೆಲ್ಲ ಕಾಲ ಕಳೆಯಬೇಕು ಎಂಬುವುದು ಅವನಿಚ್ಛೆ. ಅಲ್ಲಿ ಅವನಿಗೆ ಮರಿಯಾ ತನ್ನ ಮಗುವಿನೊಂದಿಗೆ ಕಾಣಿಸುತ್ತಾಳೆ. ಅಚಾನಕ್ಕಾಗಿ ಅವಳ ಪರಿಚಯವಾಗುತ್ತದೆ. ತಾನು ದುಬೈಯಲ್ಲಿ ಆರ್ಕಿಟೆಕ್ಟ್ ಎಂದ್ಹೇಳಿ ಪರಿಚಯ ಮಾಡಿಕೊಳ್ಳುತ್ತಾನೆ. ಮರಿಯಾ ಮನೆಗೆ ಕರೆಯುತ್ತಾಳೆ. ತಾನು ಒಂದು ಬೇಕರಿ ಇಟ್ಟಿರುವುದಾಗಿಯೂ ತನ್ನ ಗಂಡ ಕುಡುಕ ಕೆಡುಕನೆಂದೂ ಹೇಳುತ್ತಾಳೆ. ತಾನು ಅವನಿಂದ ಬೇರೆ ಇರಬೇಕೆಂದು ಯೋಚಿಸಿರುವುದಾಗಿಯೂ ಹೇಳುತ್ತಾಳೆ. ಆಲ್ಬರ್ಟ್ ಮರಿಯಾಳ ಸೌಂದರ್ಯಕ್ಕೆ ಮಾರು ಹೋಗುತ್ತಾನೆ. ಅವಳ ಜೀವನದ ಬಗ್ಗೆ ಸಹಾನುಭೂತಿ ಹುಟ್ಟು ಕೊಳ್ಳುತ್ತದೆ ಅವನಿಗೆ. ಅವಳು, ಮಗಳು ಹಾಗೂ ಅವನು ಅವಳ ಮನೆ ಕಂ ಬೇಕರಿಗೆ ಬರುತ್ತಾರೆ. ಸಹಜವಾಗಿ ಮರಿಯಾ ಆಲ್ಬರ್ಟ್‌ನಿಗೆ ಡ್ರಿಂಕ್ಸ್ ಆಫರ್ ಮಾಡುತ್ತಾಳೆ. ಅವಳ ಮನೆ ಚೆಂದವಾಗಿ ಸಿಂಗರಿಸಲ್ಪಟ್ಟಿರುತ್ತದೆ. ಅಲ್ಲಿ ಕ್ರಿಸ್ಮಸ್ ಟ್ರೀ ಜಗಮಗ ಹೊಳೆಯುತ್ತಿರುತ್ತದೆ. ಅದನ್ನು ನೋಡಿದ ಆಲ್ಬರ್ಟ್ ತನ್ನ ಹತ್ತಿರ ಇದ್ದ ಪುಟ್ಟ ಪಂಜರದಲ್ಲಿ ಇದ್ದ ಪಕ್ಷಿಯನ್ನು (ಕೃತಕವಾದದ್ದು) ಆ ಕ್ರಿಸ್ಮಸ್ ಟ್ರೀಗೆ ಸಿಕ್ಕಿಸುತ್ತಾನೆ. ಇಬ್ಬರೂ ವೈನ್ ಕುಡಿಯುತ್ತಾರೆ, ಜೋರಾದ ಮ್ಯೂಸಿಕ್ ಹಾಕಿರುತ್ತಾರೆ. ಇಬ್ಬರೂ ನೃತ್ಯ ಮಾಡುತ್ತಾರೆ. ಹಾಗೆ ನರ್ತಿಸುವಾಗ ಮರಿಯ ತನ್ನ ಸಂಸಾರದ ಸಮಸ್ಯೆಗಳನ್ನು ಅವನೊಂದಿಗೆ ಹೇಳಿ ಕೊಳ್ಳುತ್ತಾಳೆ. ಅವನೂ ಅವಳೊಂದಿಗೆ ತನ್ನ ಕತೆಯನ್ನು ಹೇಳುತ್ತಾನೆ. ತಾನು ರೋಸಿಯೊಂದಿಗೆ ಗೋವಾಕ್ಕೆ ಓಡಿಹೋಗಿ ಏಳು ವರ್ಷ ಅವಳ ಜೊತೆ ಇದ್ದುದಾಗಿಯೂ ಹೇಳುತ್ತಾನೆ. ರೋಸಿ ಬೇರೆಯವರ ಹೆಂಡತಿಯಾಗಿದ್ದೂ, ತನ್ನನ್ನು ಪ್ರೀತಿಸಿದ್ದೆಂದು ಹೇಳುತ್ತಾನೆ. ಈಗ ರೋಸಿ ಎಲ್ಲಿ ಎಂದರೆ ಕಳೆದ ವರ್ಷ ತೀರಿಕೊಂಡಳು. ಈಗ ತಾನು ಒಂಟಿ ಎನ್ನುತ್ತಾನೆ.
'ಮಂಜುಮ್ಮೆಲ್ ಬಾಯ್ಸ್' ಒಟಿಟಿ ರಿಲೀಸ್‌ಗೆ ಸಜ್ಜು; 200 ಕೋಟಿ ಕ್ಲಬ್ ಸೇರಿದ ಮೊದಲ ಮಲಯಾಳಂನ ಬ್ಲಾಕ್‌ಬಸ್ಟರ್
ಕಥೆ ಮೊದಲರ್ಧದಲ್ಲಿ ಬಹಳ ನಿಧಾನವಾಗಿ ಸಾಗುತ್ತಿದೆ ಎನಿಸುತ್ತದೆ. ಬೋರ್ ಅನುಭವ ಕೂಡ ಆಗಬಹುದು. ಆದರೆ ಇಲ್ಲಿ ಕಥೆಗೆ ಒಂದು ರೋಚಕ ತಿರುವು ಇದೆ. ಮಗಳನ್ನು ಮಲಗಿಸಿ ಬಂದ ಮರಿಯಾ, ಆಲ್ಬರ್ಟ್‌ಗೆ ಹೊರಗೆ ಹೋಗೋಣ ಬಾ ಎಂದು ಕರೆದುಕೊಂಡು ಹೋಗುತ್ತಾಳೆ. ಗಂಡನಿಗೆ ಒಂದು ಚೀಟಿ ಬರೆದಿಟ್ಟ ಮರಿಯಾ ಮಗಳನ್ನು ಮಲಗಿಸಿ ಮನೆಗೆ ಬೀಗ ಹಾಕಿ ಹೊರಡುತ್ತಾಳೆ.
ಅವರು ತಿರುಗಾಟದಿಂದ ಮನೆಗೆ ಬಂದಾಗ ಮನೆಯ ಬಾಗಿಲು ಹಾರು ಹೊಡೆದಿರುತ್ತದೆ. ಗಾಬರಿಯಿಂದ ಮರಿಯಾ ಜೆರೋಂ ಜೆರೋಂ ಎಂದು ಗಂಡನ ಹೆಸರು ಹಿಡಿದು ಕೂಗುತ್ತಾ ಒಳಗೆ ಬರುತ್ತಾಳೆ, ಆಲ್ಬರ್ಟ್ ಕೂಡ ಗಾಬರಿಯಿಂದ ಅವಳನ್ನು ಹಿಂಬಾಲಿಸುತ್ತಾನೆ. ಮನೆಯೊಳಗೆ ನೋಡಿದರೆ ಎಲ್ಲವೂ ಹಾಗೆಯೇ ಇದೆ ಆದರೆ ಕ್ರಿಸ್ಮಸ್ ಟ್ರೀ ಪಕ್ಕದ ಒಂದು ಕುರ್ಚಿಯಲ್ಲಿ ಅವಳ ಪತಿ ಜೆರೋಂ ಸತ್ತು ಬಿದ್ದಿರುತ್ತಾನೆ. ಮರಿಯಾ ಗಾಬರಿಯಿಂದ ಅವನ ಹೆಸರು ಕೂಗುತ್ತಾ ಅವನನ್ನು ಆಲ್ಲಾಡಿಸುತ್ತಾಳೆ, ಪರೀಕ್ಷಿಸುತ್ತಾಳೆ. ಆದರೆ ಆಲ್ಬರ್ಟ್ ಜೆರೋಂನನ್ನು ಪರೀಕ್ಷಿಸಿ ಸತ್ತಿರುವುದು ಖಚಿತ ಪಡಿಸುತ್ತಾನೆ, ಮರಿಯಾ ಪೊಲೀಸರನ್ನು ಕರೆಯಲು ಹೇಳುತ್ತಾಳೆ. ಆದರೆ ಆಲ್ಬರ್ಟ್‌ನಿಗೆ ವೃಥಾ ತಾನು ಈ ಹಗರಣದಲ್ಲಿ ಸಿಕ್ಕಬಾರದು ಎನಿಸುತ್ತದೆ. ಅವನು ತಾನು ಹೋಗುವುದಾಗಿ ಹೇಳುತ್ತಾನೆ. ತಾನೇ ರೋಸಿಯನ್ನು ಕೊಂದು ಶಿಕ್ಷೆ ಅನುಭವಿಸಿ ಹಿಂದಿನ ದಿನವೇ ಬಿಡುಗಡೆಯಾಗಿದ್ದೇನೆ. ಮತ್ತೆ ಇದೇ ಹಗರಣ ತನಗೆ ಬೇಡವೆಂದು ಹೇಳುತ್ತಾನೆ. ಮರಿಯಾ ಕೋಪದಿಂದ 'ಹೋಗು ಇಲ್ಲಿಂದ' ಎಂದು ಕಿರುಚುತ್ತಾಳೆ. ಆಲ್ಬರ್ಟ್ ತನ್ನ ಗುರುತು ಏನೂ ಪೊಲೀಸರಿಗೆ ಸಿಗಬಾರದು ಎಂದು ತನ್ನ ಕೈಗುರುತುಗಳನ್ನು ಅಳಿಸಿ, ತಾನು ತಂದಿದ್ದ ಪುಟ್ಟ ಪಂಜರದ ಹಕ್ಕಿಯನ್ನು ತೆಗೆದು ಕೊಳ್ಳಲು ಹುಡುಕಿದರೆ ಅದು ಸಿಗುವುದಿಲ್ಲ. ಎಷ್ಟು ಹುಡುಕಿದರೂ ಸಿಗುವುದಿಲ್ಲ. ಅವನ ತಲೆ ಕೆಟ್ಟಂತಾಗುತ್ತದೆ. ಅಲ್ಲಿದ ಹೊರಟು ಹೊರಗೆ ಬರುತ್ತಾನೆ. ದಾರಿ ಬದಿಯಲ್ಲಿ ಒಂದು ಸಣ್ಣ ಸ್ಟಾಲಿನಲ್ಲಿ ಟೀ ಕುಡಿಯುತ್ತಿದ್ದಾಗ ಅವನ ದೃಷ್ಟಿ ಅಚಾನಕ್ಕಾಗಿ ರಸ್ತೆ ಮೇಲೆ ಬೀಳುತ್ತದೆ. ಅವಾಕ್ಕಾಗಿ ನಿಂತು ಬಿಡುತ್ತಾನೆ. ಮಾರಿಯಾ ತನ್ನ ಮಗಳೊಡನೆ ಏನೂ ನಡೆದೇ ಇಲ್ಲವೇನೋ ಎಂಬಂತೆ ಕೂಲಾಗಿ ನಡೆದು ಹೋಗುತ್ತಿರುತ್ತಾಳೆ. ಅವನಿಗೆ ಅನುಮಾನ ಬರುತ್ತದೆ. ಅವಳನ್ನು ಹಿಂಬಾಲಿಸುತ್ತಾನೆ. ಅವಳು ಚರ್ಚ್‌ಗೆ ಹೋಗುತ್ತಾಳೆ. ಅಲ್ಲಿ ಇನ್ನೊಬ್ಬನ ಪರಿಚಯವಾಗುತ್ತದೆ. ಅವನನ್ನು ಮನೆಗೆ ಆಹ್ವಾನಿಸುತ್ತಾಳೆ. ಸೇಮ್ ಟು ಸೇಮ್ ಇವನ ಬಳಿ ಹೇಗೆ ಮಾತಾಡಿದ್ದಳೋ, ಅದೇ ರೀತಿ ಅವನೊಂದಿಗೂ ವ್ಯವಹರಿಸುತ್ತಾಳೆ. ಅವನನ್ನು ಕರೆದುಕೊಂಡು ಮನೆಗೆ ಬರುತ್ತಾಳೆ. ಆಲ್ಬರ್ಟ್ ಕೂಡ ವಿಚಿತ್ರ ಸನ್ನಿವೇಷದಲ್ಲಿ ಅವರಿಬ್ಬರೊಂದಿಗೆ ಮರಿಯಾಳ ಮನೆಗೆ ಬರುತ್ತಾನೆ. ಆಶ್ಚರ್ಯವೆಂದರೆ ಅಲ್ಲಿ ಜೋರೋಂನ ಶವ ಇರುವುದಿಲ್ಲ.
2024ರಲ್ಲಿ ಬಿಡುಗಡೆಯಾದ ಟಾಪ್ 10 ವೆಬ್‌ಸರಣಿ; ಮಿಸ್ ಮಾಡದೇ ನೋಡಿ!
ಜೋರೋಂನ ಶವ ಎಲ್ಲಿ ಹೋಯಿತು? ಮರಿಯಾ ಯಾರು? ದೆವ್ವವೇ? ಅವಳ ಮಗಳಿಗೆ ನಿಜವಾಗಿ ಮಾತು ಬರುವುದಿಲ್ಲವೇ? ಆಲ್ಬರ್ಟ್ ಕತೆ ಏನಾಗುತ್ತದೆ? ಜೋರೋಂ ಕೊಲೆ ಯಾರು ಮಾಡಿದ್ದು? ಅವಳ ಜೊತೆ ಬಂದ ಆ ಇನ್ನೊಬ್ಬ ವ್ಯಕ್ತಿ ಯಾರು? ಅವನ ಕಥೆ ಏನಾಗುತ್ತದೆ? ಈ ಎಲ್ಲ ಪ್ರಶ್ನೆಗಳು ಪ್ರೇಕ್ಷಕನ ಮನದಲ್ಲಿ ಗಿರಕಿ ಹೊಡೆಯುತ್ತದೆ. ಮೊದಲರ್ಧ ನಿಧಾನವಾಗಿ ಸಾಗುವ ಕಥೆ ಉತ್ತರಾರ್ಧದಲ್ಲಿ ಆ ಎಂದು ಬಾಯಿಬಿಟ್ಟು ಕೊಂಡು ನೋಡುವಂತೆ ಮಾಡುತ್ತದೆ. ಸುಂದರ ಮುಖದ ಮರಿಯಾಳ ಇನ್ನೊಂದು ಮುಖ ನಿಮಗೆ ಭಯ ಹುಟ್ಟಿಸಬಹುದು. ಮುಗ್ಧ ಸುಂದರ ಮುಖದ ಹಿಂದೆ ಇರುವ ಕ್ರೌರ್ಯ ಪ್ರೇಕ್ಷಕನನ್ನು ಬೆಚ್ಚಿ ಬೀಳಿಸುತ್ತದೆ. ವಿಕ್ರಂ ವೇದಾ ಖ್ಯಾತಿಯ ವಿಜಯ್ ಸೇತುಪತಿ ಹಾಗೂ ಕತ್ರೀನಾ ಕೈಫ್ ಅಭಿನಯವೇ ಈ ಚಿತ್ರದ ಜೀವಾಳ. ಸಂಜಯ್ ಕಪೂರ್ ಪರವಾಗಿಲ್ಲ. ಆದರೆ ಪೊಲೀಸ್ ಪಾತ್ರ ಮಾಡಿರುವ ವಿನಯ್ ಪಾಠಕ್ ಅಭಿನಯ ಚುರುಕಾಗಿದೆ. ಆಶ್ವಿನಿ ಕಾಲೇಸ್ಕರ್ ಪಾತ್ರ ಚಿಕ್ಕದಾದರೂ ಚೊಕ್ಕವಾಗಿದೆ. ಒಮ್ಮೆ ನೋಡಬಹುದಾದ ಕ್ರೈಂ ಥ್ರಿಲ್ಲರ್ ಚಿತ್ರ.