Asianet Suvarna News Asianet Suvarna News

ಶರ್ಮಾಜಿಕೀ ಬೇಟಿ: ಮಹಿಳಾ ಕೇಂದ್ರಿತ ಚಿತ್ರದ ಹೆಸರು ಮಾತ್ರ ಹೀಗೆ!

ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಶರ್ಮಾಜಿಕೀ ಬೇಟಿ ಚಿತ್ರ ಮಧ್ಯ ವರ್ಗದ ಸುಖ ದುಃಖ ಹೇಳುವ ಪಕ್ಕಾ ಮನೋರಂಜನೆ ನೀಡುವ ಚಿತ್ರ. ಮನಸ್ಸು ಹಗುರವಾಗಿಸುವುದರಲ್ಲಿ ಅನುಮಾನವಿಲ್ಲ. 

Sharmajee Ki Beti Movie review streaming on amazon prime must watch
Author
First Published Aug 7, 2024, 11:14 AM IST | Last Updated Aug 7, 2024, 11:14 AM IST

- ವೀಣಾ ರಾವ್, ಕನ್ನಡಪ್ರಭ

ಇದೇ ವರ್ಷದ ಜೂನ್‌ನಲ್ಲಿ ಬಿಡುಗಡೆಯಾದ ಅಮೇಜಾನ್ ಪ್ರೈಮ್‌ನಲ್ಲಿ ಸ್ಕ್ರೀಂ ಆಗುತ್ತಿರುವ ಶರ್ಮಾಜೀ ಕಿ ಬೇಟಿ ಎಂಬ ಅಪ್ಪಟ ಮನರಂಜನೆಯ ಚಿತ್ರ. ಇದರಲ್ಲಿ ಶರ್ಮಾಜಿ ಎಂಬ ಪಾತ್ರ ಇಲ್ಲ. ಇಲ್ಲಿರುವ ಪಾತ್ರಗಳಲ್ಲಿ ಮೂರು ಮುಖ್ಯ ಸ್ತ್ರೀ ಪಾತ್ರಗಳು ಶರ್ಮಾ ಎಂಬ ಉಪನಾಮ ಹೊಂದಿರುವುದರಿಂದ ಇದರ ಹೆಸರು ಹೀಗಿದೆ.

ಜ್ಯೋತಿ ಶರ್ಮಾ (ಸಾಕ್ಷಿ ತನ್ವರ್) ಎಂಬ ಮಧ್ಯಮ ವರ್ಗದ ಹೆಣ್ಣು ಮಗಳು, ಒಂದು ಟ್ಯುಟೋರಿಯಲ್ಸ್‌ನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ಇವಳ ಮಗಳು ಸ್ವಾತಿ ಎಂಟನೇ ತರಗತಿಯಲ್ಲಿ ಓದುತ್ತಿರುತ್ತಾಳೆ. ಗಂಡ ಸುಧೀರ್ ಶರ್ಮಾ ಸದಾ ಹೆಂಡತಿಯನ್ನು ಬೆಂಬಲಿಸುವ ಸಂಸಾರದ ಬಗ್ಗೆ ಕಾಳಜಿ ಪ್ರೀತಿ ಇರುವ ಗಂಡ. ಜ್ಯೋತಿ ತಾನು ಬೆಳಗ್ಗೆ ಎದ್ದು ರೆಡಿಯಾಗಿ ತನ್ನ ಇನ್ಸ್ಟಿಟ್ಯೂಟಿಗೆ ಹೋಗುವ ಹೊತ್ತಿಗೆ ಮಗಳು ಇನ್ನೂ ನಿದ್ರೆಯಿಂದ ಎದ್ದೂ ಇರಲ್ಲ. ಅವಳನ್ನು ಎಬ್ಬಿಸಿ, ರೆಡಿ ಮಾಡಿಸಿ ಸ್ಕೂಲಿಗೆ ಬಿಟ್ಟು ಬರುವ ಕೆಲಸ ಗಂಡ ಸುಧೀರನದು. ಸ್ವಾತಿಯ ಕೂದಲು ಗುಂಗುರು. ಎಷ್ಟು ಬಾಚಿದರೂ ಅಂಕೆಯಿಲ್ಲದೆ ಮುಖದ ತುಂಬಾ ಹರಡುವ ಕೂದಲೆಂದರೆ ಸ್ವಾತಿಗೆ ಅಲರ್ಜಿ. ಇದರ ಜೊತೆಗೆ ಅಪ್ಪನ ಜೊರೆ ಟೂ ವ್ಹೀಲರ್‌ನಲ್ಲಿ ಹೋಗುವಾಗ ಹೆಲ್ಮೆಟ್‌ನಿಂದಾಗಿ ಕೂದಲು ಕೆದರಿ ರಂಪವಾಗಿರುತ್ತದೆ. ಇದರ ಸಲುವಾಗಿ ಅಮ್ಮ-ಮಗಳಿಗೆ ಸದಾ ಜಗಳ. ಸ್ವಾತಿಗೆ ತನ್ನ ವಯಸ್ಸು 13 ಆದರೂ ತನಗಿನ್ನೂ ಪೀರಿಯಡ್ಸ್ ಶುರುವಾಗಿಲ್ಲವೆಂಬ ಚಿಂತೆ. ತನ್ನ ಸಹಪಾಟಿ ಗುರುಮೀತ್ ಶರ್ಮಾಳ ಜೊತೆ ಯಾವಾಗಲೂ ಅದೇ ಚರ್ಚೆ. ತನಗಿನ್ನೂ ಪೀರಿಯಡ್ಸ್ ಶುರವಾಗಿಲ್ಲ, ತನಗೆ ಮೈಮಾಟ ಇಲ್ಲ. ಸೊಣಕಲಿಯಾದ ತಾನು ಹೇಗೆ ಮೈತುಂಬಿಕೊಳ್ಳುವುದು, ತನಗೆ ಒಬ್ಬ ಬಾಯ್ ಫ್ರೆಂಡ್ ಸಿಗುವುದು ಯಾವಾಗ, ಎಂಬೆಲ್ಲ ಚಿಂತೆಗಳು ಈ ಹದಿಮೂರರ ಪೋರಿಗೆ. ಅಮ್ಮ ತನ್ನ ಬಗ್ಗೆ ಗಮನ ಹರಿಸುತ್ತಿಲ್ಲ ಅಮ್ಮನಿಗೆ ಯಾವಾಗಲೂ ತನ್ನ ಇನಸ್ಟಿಟ್ಯೂಟ್‌ ಬಗ್ಗೆಯೇ ಕಾಳಜಿ, ತನ್ನಮೇಲಿಲ್ಲ ಎಂಬ ಕೋಪ ಅವಳಿಗೆ. ಅಮ್ಮ ಎಂದರೆ ಸಿಡಿದೇಳುತ್ತಾಳೆ. ಇದರಿಂದ ನೊಂದುಕೊಳ್ಳುವ ಜ್ಯೋತಿಗೆ 'ನೀನು 40. ಅವಳು 14 ಸ್ವಲ್ಪ ಗ್ಯಾಪ್ ಇರತ್ತೆ. ನೀನೇ ಹೊಂದಾಣಿಕೆ ಮಾಡಿಕೋ’ ಎಂದು ಅನುನಯಿಸುವ ಗಂಡ ಸುಧೀರ್ ಪಾತ್ರದ ಶರೀಬ್ ಹಶ್ಮಿ ತುಂಬಾ ಇಷ್ಟವಾಗುತ್ತಾರೆ.

ವಿಚ್ಛೇದನ ಬಯಸಿದ್ದ ಜೋಡಿ ಮತ್ತೆ ಒಂದಾದಾಗ: ದೋ ಔರ್ ದೋ ಪ್ಯಾರ್ ರಿವ್ಯೂ

ನೆರೆಯ ಕಿರಣ್ ಶರ್ಮಾ (ದಿವ್ಯಾ ದತ್ತಾ) ಸ್ವಾತಿಯ ಗೆಳತಿ ಗುರುಮೀತ್‌ಳ ತಾಯಿ. ದೂರದ ಪಟಿಯಾಲದಿಂದ ಮುಂಬೈಗೆ ಬಂದಿರುವ ಅವಳಿಗೆ ಮುಂಬೈ ವೇಗದ ಜೀವನ ನೋಡಿ ಆಶ್ಚರ್ಯ ಮತ್ತು ಭಯ ಕೂಡ. ಹೆಚ್ಚು ಓದಿಲ್ಲದ ಕಿರಣ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುವ ಗೃಹಿಣಿ. ಆದರೆ ಅವಳಿಗೆ ಫ್ಯಾಷನ್ ಹಾಗೂ ಕಲೆ ಕುಸುರಿ ಇಂವುಗಳ ಬಗ್ಗೆ ಅಪಾರ ಅಭಿರುಚಿ. ಒಳ್ಳೆಯ ಕೆಲಸದಲ್ಲಿ ಇರುವ ಗಂಡ ಕೈತುಂಬಾ ಸಂಪಾದನೆ ಮಾಡುತ್ತಾನೆ. ಆದರೆ ಹೆಂಡತಿಯೆಂದರೆ ಅಸಡ್ಡೆ. ಹೆಂಡತಿ ಹೆಚ್ಚು ಓದಿಲ್ಲ ಎಂಬ ತಾತ್ಸಾರ. ಅವಳ ಆಸೆ, ಅಭಿರುಚಿ ಎಂದರೆ ಅವನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಂಬಲಿಸಿ ಬಳಿಗೆ ಬರುವ ಹೆಂಡತಿಯೊಂದಿಗೆ ಒಂದೆರಡು ಮಾತೂ ಆಡದೆ ಮುಸುಕೆಳೆದು ಮಲಗುವ, ಸದಾ ಮೊಬೈಲಿನೊಳಗೆ ಮುಖ ಹುದುಗಿಸಿಕೊಂಡಿರುವ ಗಂಡನೆಂದರೆ ಕಿರಣ್‌ಗೆ ವಿಚಿತ್ರ ಭಯ. ಗಂಡನ ಅನಾದರದಿಂದ ನೊಂದುಕೊಳ್ಳುವ ಕಿರಣ್ ಮುಂದೆ ತಾನೇ ಒಂದು ಈವೆಂಟ್ ಮ್ಯಾನೇಜ್‌ಮೆಂಟ್ ಟೀಂ ಮಾಡಿ ಅದರಲ್ಲಿ ಪ್ರಸಿದ್ಧಳಾಗುತ್ತಾಳೆ. ಗಂಡನಿಗೆ ಬೇರೊಂದು ಸಂಬಂಧ ಇದೆಯೆಂದು ತಿಳಿದಾಗ ಆಘಾತಗೊಂಡರೂ, ಅವನ ಪಾಡಿಗೆ ಅವನನ್ನು ಬಿಟ್ಟುಬಿಡುತ್ತಾಳೆ. ನೊಂದ ಹೆಂಡತಿಯಾಗಿ ಮುಗ್ಧತೆಯ ಪ್ರತೀಕವಾಗಿ ತನ್ನ ನೋವನ್ನು ಕಣ್ಣಲ್ಲೇ ವ್ಯಕ್ತಪಡಿಸುವ ಪಾತ್ರದಲ್ಲಿ ದಿವ್ಯಾದತ್ತಾ ನಟನೆ ವಾವ್ ಎನಿಸುತ್ತದೆ. ತಾನು ನೌಕರಿ ಮಾಡುವುದಿಲ್ಲವೆಂದು ತನಗೆ ಸಮಯದ ಮಹತ್ವ ಗೊತ್ತಿಲ್ಲವೆಂದು ಸದಾ ಹಂಗಿಸುವ ಗಂಡನಿಗೆ ಮುಂದೆ ತನ್ನನ್ನು ಮಾತನಾಡಲು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವಂತೆ ಮಾಡುತ್ತಾಳೆ.

ಕಿರಣ್ ನೆರೆಯವಳಾದ ತನ್ವಿ ಶರ್ಮಾ(ಸಯಾಮಿ ಖೇರ್) ಒಬ್ಬ ಕ್ರಿಕೆಟ್ ಪ್ಲೇಯರ್. ರಣಜಿಯಲ್ಲಿ ಆಡುತ್ತಾ ನ್ಯಾಷನಲ್ ಲೆವೆಲ್‌ಗೆ ಸೇರಬೇಕೆಂಬ ಕನಸು ಅವಳಿಗೆ. ಸದಾ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಾ ತನ್ನ ಕನಸುಗಳನ್ನು ಗಟ್ಟಿಗೊಳಿಸುತ್ತಾ ಇರುವ ತನ್ವಿಗೆ ರೋಹನ್ ಎಂಬ ಗೆಳೆಯ. ರೋಹನ್ ಒಬ್ಬ ನಟ. ಬಾಲಿವುಡ್‌ನಲ್ಲಿ ಹೆಸರು ಮಾಡಬೇಕು, ಎತ್ತರಕ್ಕೆ ಬೆಳೆಯಬೇಕು ಎಂಬ ಮಹತ್ವಾಕಾಂಕ್ಷೆಯುಳ್ಳ ಯುವಕ. ತನ್ವಿಯ ಕ್ರಿಕೆಟನ್ನು ಪ್ರೀತಿಸುವಮತೆ ನಟಿಸಿದರೂ, ಅಂತರಂಗದಲ್ಲಿ ಅವನಿಗೆ ಅವಳು ಕ್ರಿಕೆಟ್ ಆಟಗಾರಳಾಗುವುದು ಇಷ್ಟವಿಲ್ಲ. ನೀನೇನು ಸಚಿನ್ ಆಗಲು ಸಾಧ್ಯವೇ? ಕೊಹ್ಲಿ ಆಗಲು ಆಗುತ್ತದೆಯೇ? ನ್ಯಾಷನಲ್ ಲೆವೆಲ್‌ಗೆ ಹೋಗುವುದು ಅಷ್ಟು ಸುಲಭವಲ್ಲ ಎಂದು ಸದಾ ಅವಳನ್ನು ಹೀಗಳೆಯುವ ಅವನು ತನ್ವಿಯ ಸೌಂದರ್ಯವನ್ನು ಮಾತ್ರ ಆಸ್ವಾದಿಸುತ್ತಾನೆ. ಅವಳು ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಕೊಂಡು ತನ್ನ ಶರೀರವನ್ನು ತನಗಾಗಿ ಕೋಮಲವಾಗಿ ಇಟ್ಟುಕೊಳ್ಳಬೇಕು ಎಂದು ಆಶಿಸುವ ಸ್ವಾರ್ಥಿ. ಸದಾ ಅವಳ ಸೌಂದರ್ಯ ಹಾಳಾಗಬಾರದದು ಕ್ರಿಕೆಟ್‌ನಂಥ ಆಟದಿಂದ ಸೌಂದರ್ಯಕ್ಕೆ ಪೆಟ್ಟು ಬಿದ್ದರೆ ಎಂಬೆಲ್ಲ ಋಣಾತ್ಮಕವಾಗಿ ಮಾತನಾಡುತ್ತಾ ಅವಳನ್ನು ಉತ್ಸಾಹ ಭಂಗಗೊಳಿಸುತ್ತಿರುತ್ತಾನೆ. ಒಂದು ಹಂತದಲ್ಲಿ ರೋಹನ್‌ನ ಈ ಅತಿಪ್ರೀತಿ ಸ್ವಾರ್ಥದ ಕಾಳಜಿಗೆ ರೋಸಿ ಹೋದ ತನ್ವಿ ಅವನನ್ನು ಬಿಟ್ಟು, ತನ್ನ ಕ್ರಿಕೆಟ್ಟೇ ತನಗೆ ಹೆಚ್ಚೆಂದು ಅವನಿಗೆ ಖಡಕ್ಕಾಗಿ ಹೇಳಿ ಬಂದು ಬಿಡುತ್ತಾಳೆ. ತನ್ನ ಸ್ನಿಗ್ಧ ನಗು ಹಾಗೂ ಚುರುಕಾದ ನಟನೆಯಿಂದ ಸೈಯಾಮಿ ಗಮನ ಸೆಳೆಯುತ್ತಾಳೆ. ರೋಹನ್ ಗೆ ಗುಡ್ ಬೈ ಹೇಳಿ ಬರುವಾಗ ತನ್ವಿಯ ಮುಖದ ನಿರಾಳತೆ, ಸ್ವಚ್ಛಂದ ನಗು ನೋಡುವ ನಮಗೂ ಖುಷಿಯಾಗುತ್ತದೆ.

8 AM Metro: ಒಂದು ಆತ್ಮಸಂಗಾತದ ಕಥೆಯ ಮೂವಿ ರಿವ್ಯೂ ಇದು

ಇನ್ನು ಜ್ಯೋತಿ ಮಗಳು ಸ್ವಾತಿ ಹಾಗೂ ಕಿರಣ್ ಮಗಳು ಗುರುಮೀತ್ ಸಹಪಾಟಿಗಳು ಹಾಗೂ ಅಂತರಂಗದ ಗೆಳತಿಯರು. ಹದಿವಯಸ್ಸಿನ ಈ ಪೋರಿಯರು ಏನೇನು ಮಾತನಾಡುತ್ತಾರೆ ಎಂದು ಅಂಥ ವಯಸ್ಸಿನ ಮಕ್ಕಳಿರುವ ತಾಯಂದಿರು ನೋಡಿ ತಿಳಿಯಬೇಕು. ಮಕ್ಕಳ ಧೈರ್ಯಕ್ಕೆ ತಾಯಂದಿರು ಬೆಚ್ಚಬೀಳಬೇಕೋ, ಹೆಮ್ಮೆ ಪಡಬೇಕೋ ನೀವೇ ನಿರ್ಧರಿಸಿ. ತನಗಿನ್ನೂ ಪೀರಿಯಡ್ಸ್ ಆಗಿಲ್ಲವೆಂದು ಸದಾ ಗೆಳತಿಯ ಮುಂದೆ ಹಲುಬುವ ಸ್ವಾತಿ, ಅದಕ್ಕಾಗಿ ತನ್ನಮ್ಮನನ್ನು ಗೈಲಕಾಲಜಿಸ್ಟ್  ಬಳಿಯೂ ಕರೆದೊಯ್ಯುತ್ತಾಳೆ.  ಈಗಿನ ಟೀನ್ ಮಕ್ಕಳು ಎಷ್ಟು ದಿಟ್ಟರು  ಅನಿಸದೆ ಇರದು. ತನಗೆ ಹುಡುಗರು ಇಷ್ಟವಾಗುವುದಿಲ್ಲ. ತನಗೆ ಹುಡುಗಿಯರೇ ಇಷ್ಟವಾಗುತ್ತಾರೆ ತಾನು ಏಕಲಿಂಗಿ ಇರಬಹುದು ಎಂಬ ಸಂಶಯ ಹೊರಹಾಕುವ ಹದಿವಯಸ್ಸಿನ ಗುರುಮೀತ್ ಪ್ರೇಕ್ಷಕರ ಹುಬ್ಬೇರುವಂತೆ ಮಾಡುತ್ತಾಳೆ. ತನ್ನಮ್ಮನ ಬಳಿಯೂ ಈ ವಿಷಯವನ್ನು ಬೋಲ್ಡಾಗಿ ಹೇಳುವ ಗುರುಮೀತ್, ಈಗಿನ ಅಮ್ಮಂದಿರ ಮನಸಿನಲ್ಲಿ ಚಳಿ ಹುಟ್ಟಿಸಬಹುದು. ಆದರೆ ಕಿರಣ್ ಮಗಳ ಅಭಿಪ್ರಾಯಕ್ಕೆ ಬೆಲೆ ಕೊಡುತ್ತಾಳೆ. ಇದೇನೂ ಪಾಪವಲ್ಲ, ನೀನು ಯಾರನ್ನು ಬೇಕಾದರೂ ಪೀತಿಸು. ಗಂಡು ಹೆಣ್ಣು ಎಂಬ ಬೇಧವಿಲ್ಲ. ಆದರೆ ಪ್ರೀತಿಸುವುದು ಮುಖ್ಯ ಎನ್ನುವ ಕಿರಣ್ ಗುರುಮೀತಳಿಗೆ ಹತ್ತಿರವಾಗುತ್ತಾಳೆ. ಗಂಡನ ಪ್ರೀತಿಗೆ ಎರವಾದ ಕಿರಣ್, ಪ್ರೀತಿ ಎಂಬ ಅಂಶಕ್ಕೆ ಒತ್ತು ಕೊಡುವುದು ಸಹಜವೇ ಅನಿಸುತ್ತದೆ.

ಅಮ್ಮನನ್ನು ಸದಾ ದ್ವೇಷಿಸುವ ಸ್ವಾತಿ, ಅಮ್ಮನ ಇನ್ಸ್ಟಿಟ್ಯೂಟಿನಲ್ಲಿ ವರ್ಷದ ಟೀಚರ್ ಆಗಿ ಆಯ್ಕೆಯಾದಾಗ, ಅಮ್ಮನ ಭಾಷಣ ಕೇಳಿ ಭಾವಪರವಶಳಾಗುತ್ತಾಳೆ. ಅಮ್ಮನ ಬಗ್ಗೆ ಇರುವ ಕಹಿಯೆಲ್ಲ ಮರೆತು ತಾನೂ ಈವರೆಗೂ ನಡೆದುಕೊಂಡ ಒರಟು ನಡವಳಿಕೆ ಬಗ್ಗೆ ಕ್ಷಮೆ ಕೇಳುತ್ತಾಳೆ. ಅವಳಾಸೆಯಂತೆ ಅಂತೂ ಅವಳಿಗೆ ಪೀರಿಯಡ್ಸ್ ಕಾಣಿಸಿಕೊಂಡಾಗ ಆನಂದದಿಂದ ಹುಚ್ಚಿಯಂತಾಡುವ ಸ್ವಾತಿ ನಮಗೂ ನಗೆಯುಕ್ಕಿಸುತ್ತಾಳೆ.

ಜಮೀನುದಾರರ ದೌರ್ಜನ್ಯ, ಪಾಳೆಗಾರರ ಅಟ್ಟಹಾಸ; ರಕ್ತದೋಕುಳಿ ಹರಿಸುವ ಮಿರ್ಜಾಪುರ್

ನಲ್ವತ್ತರ ಹರೆಯದ ಅಮ್ಮಂದಿರು ಖಂಡಿತಾ ನೋಡಲೇ ಬೇಕಾದ ಚಿತ್ರ ಶರ್ಮಾಜಿಕಿ ಬೇಟಿ. ಮೂವರು ವಿಭಿನ್ನ ಮನೋಭಾವದ ಹೆಣ್ಣುಮಕ್ಕಳು, ಅವರ ಜೀವನ ಸಂಕಟಗಳನ್ನು ಮನಸ್ಸಿಗೆ ನಾಟುವಂತೆ ನಮಗೆ ದಾಟಿಸುವಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ. ಹದಿಹರೆಯದ ಮಕ್ಕಳು ಏನನ್ನು ಯೋಚಿಸುತ್ತಾರೆ ಎಂಬುದು ಎಲ್ಲಾ ತಾಯಂದಿರೂ ತಿಳಿದು ಕೊಳ್ಳಲೇ ಬೇಕಾದ ವಿಷಯ. ಸದಾ ಪಾಠದ ವಿಷಯವೇ ಮಕ್ಕಳ ತಲೆಯಲ್ಲಿ ಇರುತ್ತದೆ ಎಂದು ತಿಳಿದಿರುವುದು ಮೂರ್ಖತನ. ಅವರ ಮನಸ್ಸುಗಳಲ್ಲಿ ಯಾವ ಭಾವನೆಗಳು ಓಡುತ್ತಿರುತ್ತದೆ ಎಂಬುದನ್ನು ತಾಯಂದಿರು ಅರಿಯಬೇಕು. ಮಕ್ಕಳನ್ನು ಸದಾ ಮುಗ್ಧರು ಎಂಬ ಮಾನದಂಡದಿಂದಲೇ ಅಳೆಯಲು ಸಾಧ್ಯವಿಲ್ಲ. ಮಕ್ಕಳು ಸಹ ತಮ್ಮ ವಯಸ್ಸಿನ ಆಗುಹೋಗುಗಳ ಬಗ್ಗೆ ತಮ್ಮ ಸೌಂದರ್ಯದ ಬಗ್ಗೆ ತಮ್ಮ ದೇಹ ರಚನೆಯ ಬಗ್ಗೆ ಯೋಚಿಸುತ್ತಾರೆ ಅವರಿಗೂ ಅವರದೇ ಆದ ಕಲ್ಪನೆಗಳು ಇರುತ್ತವೆ ಎಂಬುದು ಅಚ್ಚರಿಯಾದರೂ ಸತ್ಯ.


 

Latest Videos
Follow Us:
Download App:
  • android
  • ios