ಛೂ ಮಂತರ್ ಚಿತ್ರ ವಿಮರ್ಶೆ: ಟ್ವಿಸ್ಟು, ಅಚ್ಚರಿ ಅಡಗಿಸಿಕೊಂಡಿರುವ ಕಥನ ಕುತೂಹಲ

ಪ್ರಥಮಾರ್ಧ ಪೂರ್ತಿ ಕತೆಯೊಳಕ್ಕೆ ಎಳೆದುಕೊಂಡು ಹೋಗುವ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಹೊಂದಿಸಿ ಬರೆಯುವ ಜಾಣ್ಮೆ ತೋರುತ್ತಾರೆ. ಈ ಹಂತದಲ್ಲಿ ಕಾರಣಗಳನ್ನು ಜೋಡಿಸಲಾಗುತ್ತದೆ. 

Sharan Chikkanna Starrer Choo Mantar Kannada Movie Review

ಆರ್‌.ಎಸ್‌.

ಒಂದು ಭೂತ ಬಂಗಲೆ. ಆ ಬಂಗಲೆಯಲ್ಲಿ ಅಮರಿಕೊಂಡಿರುವ ದೆವ್ವಗಳನ್ನು ಓಡಿಸಲೆಂದು ಛೂ ಮಂತರ್ ಆ್ಯಂಡ್ ಕೋ ಬರುವುದರೊಂದಿಗೆ ಕತೆ ಆರಂಭವಾಗುತ್ತದೆ. ಹಾಗಂತ ಇದು ಬರೀ ದೆವ್ವ ಓಡಿಸುವ ಯೋಜನೆ ಎಂದು ನೀವು ಅಂದುಕೊಳ್ಳಬಾರದು. ಪ್ರತಿಯೊಂದರ ಹಿಂದೆಯೂ ಒಂದು ಕಾರಣ ಇರುತ್ತದೆ. ನಿರ್ದೇಶಕ ನವನೀತ್ ಟ್ವಿಸ್ಟುಗಳನ್ನು, ಸರ್ಪ್ರೈಸುಗಳನ್ನು ನೆಚ್ಚಿಕೊಂಡವರು. ಭೂತ ಓಡಿಸುವ ಈ ಕತೆಯಲ್ಲೂ ಅವರು ಆ ತಂತ್ರಕ್ಕೆ ನೆಚ್ಚಿಕೊಂಡಿದ್ದಾರೆ. ಬಂಗಲೆಯನ್ನು ಸೇರಿಕೊಂಡ ಮೇಲೆ ಅಲ್ಲಿ ಎದುರಾಗುವ ನಾನಾ ತಿರುವುಗಳಿಗೆ ಪ್ರೇಕ್ಷಕರು ಎದುರಾಗಬೇಕಾಗುತ್ತದೆ. 

ದಿಗ್ಮೂಢರಾಗಬೇಕಾಗುತ್ತದೆ. ಪ್ರಥಮಾರ್ಧ ಪೂರ್ತಿ ಕತೆಯೊಳಕ್ಕೆ ಎಳೆದುಕೊಂಡು ಹೋಗುವ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಹೊಂದಿಸಿ ಬರೆಯುವ ಜಾಣ್ಮೆ ತೋರುತ್ತಾರೆ. ಈ ಹಂತದಲ್ಲಿ ಕಾರಣಗಳನ್ನು ಜೋಡಿಸಲಾಗುತ್ತದೆ. ಕೆಲವು ಕೊಂಡಿಗಳನ್ನು ಬಿಡಲಾಗುತ್ತದೆ. ನಾಳೆಗಳನ್ನು ಮೊದಲೇ ಊಹಿಸಬಹುದು ಅನ್ನಿಸತೊಡಗುತ್ತದೆ. ಟ್ವಿಸ್ಟುಗಳು ಭಾರ ಅನ್ನಿಸುತ್ತವೆ. ಆದರೆ ಕಲಾವಿದರು ಬಿಡುವುದಿಲ್ಲ. ನೋಡುಗರನ್ನು ಜೊತೆಗೇ ಕರೆದೊಯ್ಯುತ್ತಾರೆ. ಅಷ್ಟರ ಮಟ್ಟಿಗೆ ಶರಣ್, ಚಿಕ್ಕಣ್ಣ, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಪ್ರಭು ಮುಂಡ್ಕೂರ್ ಪಾತ್ರಗಳನ್ನು ಆವರಿಸಿದ್ದಾರೆ.

ಚಿತ್ರ: ಛೂ ಮಂತರ್‌
ನಿರ್ದೇಶನ: ನವನೀತ್
ತಾರಾಗಣ: ಶರಣ್, ಚಿಕ್ಕಣ್ಣ, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಪ್ರಭು ಮುಂಡ್ಕೂರ್‌
ರೇಟಿಂಗ್: 3

ಇದು ಹಾರರ್ ಥ್ರಿಲ್ಲರ್ ಮಾದರಿಯ ಕತೆ. ಈ ಮಾದರಿಯಲ್ಲಿ ಅಚ್ಚರಿಗೊಳಿಸುವುದೇ ಮೂಲಗುಣ. ಅದರಲ್ಲಿ ನಿರ್ದೇಶಕರು ಬಹುತೇಕ ಯಶಸ್ವಿಯಾಗಿದ್ದಾರೆ. ಅದಕ್ಕೆ ಪೂರಕವಾಗಿ ರೆಸೂಲ್ ಪೂಕುಟ್ಟಿಯವರ ಅದ್ಭುತ ಧ್ವನಿ ಗ್ರಹಣ ಕತೆಯಲ್ಲಿ ತಲ್ಲೀನರಾಗುವಂತೆ ಮಾಡುತ್ತದೆ. ಹಿನ್ನೆಲೆ ಸಂಗೀತ ನೀಡಿರುವ ಅನಿಲ್ ಬಾಸುತ್ಕರ್ ಕೂಡ ಮೆಚ್ಚುಗೆ ಮೂಡಿಸುತ್ತಾರೆ. ಹಾರರ್‌ ಚಿತ್ರದ ನಿಗೂಢತೆ, ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಷನ್‌ ಕೊಡುವ ಖುಷಿ, ಕತೆ ಅಡಗಿಸಿಕೊಂಡಿರುವ ಕುತೂಹಲ ಇತ್ಯಾದಿಗಳ ಮೇಲೆ ಆಸಕ್ತಿ ಇರುವವರಿಗೆ ಛೂ ಮಂತರ್ ಮಜಾ ಅನ್ನಿಸುತ್ತದೆ.

Latest Videos
Follow Us:
Download App:
  • android
  • ios