ಹುಡುಗಿಯೊಬ್ಬಳು ಒಂದು ಮುರಿದುಬಿದ್ದ ಸೇತುವೆಯಿಂದ ರಭಸವಾಗಿ ಹರಿಯುವ ನದಿಗೆ ಬೀಳುವಲ್ಲಿಂದ ಕತೆ ಶುರುವಾಗುತ್ತದೆ. ಆಕೆ ಹೋಗಿ ಸೇರುವುದು ಒಂದು ನಿಗೂಢ ನಿರ್ಜನ ನಿಬಿಡ ಕಾಡಿಗೆ.
ಆರ್.ಎಸ್.
ಎಲ್ಲಾ ಕತೆಯಂತೆ ಈ ಕತೆ ಶುರುವಾಗುವುದಿಲ್ಲ. ಎಲ್ಲಾ ಸಿನಿಮಾಗಳಂತೆ ಈ ಸಿನಿಮಾ ಮುಂದುವರಿಯುವುದಿಲ್ಲ. ಇಲ್ಲಿ ಹಾಡಿಲ್ಲ. ಡಾನ್ಸ್ ಇಲ್ಲ. ಎಲ್ಲಾ ಸಿನಿಮಾಗಳಲ್ಲಿ ಕಾಣಸಿಗುವ ಅಂಶಗಳು ಬಹಳ ಕಡಿಮೆ ಇವೆ. ಅದರ ಬದಲಿಗೆ ನಿಗೂಢತೆ ಇದೆ, ಮಿಸ್ಟ್ರಿ ಇದೆ, ಕುತೂಹಲ ಇದೆ, ಪ್ರಶ್ನೆಗಳಿವೆ. ಅದಕ್ಕೆ ಈ ಸಿನಿಮಾ ವಿಭಿನ್ನವಾಗಿದೆ. ಹುಡುಗಿಯೊಬ್ಬಳು ಒಂದು ಮುರಿದುಬಿದ್ದ ಸೇತುವೆಯಿಂದ ರಭಸವಾಗಿ ಹರಿಯುವ ನದಿಗೆ ಬೀಳುವಲ್ಲಿಂದ ಕತೆ ಶುರುವಾಗುತ್ತದೆ. ಆಕೆ ಹೋಗಿ ಸೇರುವುದು ಒಂದು ನಿಗೂಢ ನಿರ್ಜನ ನಿಬಿಡ ಕಾಡಿಗೆ.
ಕಾಡು ಮಳೆ ಎಂಬ ತಾಣಕ್ಕೆ. ಅಲ್ಲಿ ಹೋದ ಮೇಲೆ ಆಕೆಗೆ ವಿಕ್ಷಿಪ್ತ ಅನುಭವಗಳು ಉಂಟಾಗುತ್ತವೆ. ಅದು ಭ್ರಮೆಯೇ, ನಿಜವೇ, ಮನಸಿನ ಆಟವೇ ಎಂಬ ಪ್ರಶ್ನೆಯ ಜೊತೆಗೆ ಕತೆ ಮುಂದುವರಿಯುತ್ತದೆ. ಸದ್ದಿನ ಮೂಲಕ, ಕ್ಯಾಮೆರಾ ಚಲನೆಯ ಮೂಲಕ ಗಾಬರಿ, ಆತಂಕ, ಕುತೂಹಲ ಹುಟ್ಟಿಸುತ್ತಾ ಸಿನಿಮಾ ಮುಂದೆ ಸಾಗುತ್ತದೆ. ಇದು ಬುದ್ಧಿಗೆ ಸವಾಲೆಸೆಯುವ ಸಿನಿಮಾ. ಜಾಣ್ಮೆಯಿಂದ ಚಿತ್ರಕತೆ ರೂಪಿಸಿರುವ ಸಿನಿಮಾ. ಹಾಗಾಗಿ ಉಡಾಫೆಯಿಂದ ನೋಡುವಂತಿಲ್ಲ. ಅವಸರ ಮಾಡುವಂತೆಯೂ ಇಲ್ಲ. ಸಾವಧಾನದಿಂದ, ತಾಳ್ಮೆಯಿಂದ ನೋಡಬೇಕು.
ಚಿತ್ರ: ಕಾಡು ಮಳೆ
ನಿರ್ದೇಶನ: ಸಮರ್ಥ
ತಾರಾಗಣ: ಅರ್ಥ, ಸಂಗೀತಾ, ಕಾರ್ತಿಕ್ ಭಟ್
ರೇಟಿಂಗ್: 3
ಮುಂದೇನಾಗುತ್ತದೆ ಎಂದು ಕಾಯಬೇಕು. ಸಹನೆ ತಪ್ಪಿದರೆ ಕಾಡು ಮಳೆಯಲ್ಲಿ ಒದ್ದೆಯಾಗುವ ಅವಕಾಶ ದಕ್ಕುವುದಿಲ್ಲ. ಮೇಕಿಂಗ್ ಸೊಗಸಾಗಿದೆ. ಸಿನಿಮಾ ಪೂರ್ತಿ ಆವರಿಸಿರುವ ಸಂಗೀತಾ ಚೆನ್ನಾಗಿ ನಟಿಸಿದ್ದಾರೆ. ಅರ್ಥ ನಿಗೂಢತೆ ಹೆಚ್ಚಿಸುತ್ತಾರೆ. ಈ ಸಿನಿಮಾ ನಿಜವೇ, ಭ್ರಮೆಯೇ ಎಂಬುದನ್ನು ನೋಡುಗರು ಅವರವರೇ ಕಂಡುಕೊಳ್ಳಬೇಕು. ಉತ್ತರ ಕೂಡ ಅವರವರದೇ. ಅಷ್ಟರ ಮಟ್ಟಿಗೆ ನಿಗೂಢತೆಯನ್ನು ಉಳಿಸಿದ್ದಾರೆ ನಿರ್ದೇಶಕರು. ಇದೊಂದು ನಿಗೂಢತೆಯನ್ನು ದಾಟಿಸುವ ವಿಭಿನ್ನ ಸಿನಿಮಾ.
