Asianet Suvarna News Asianet Suvarna News

ಚಿತ್ರ ವಿಮರ್ಶೆ: ಪುಕ್ಸಟ್ಟೆ ಲೈಫು

ಲಾಕ್‌ಡೌನ್ ಸಂದರ್ಭದಲ್ಲಿ ಮನೆಯೊಳಗೇ ಕೂತು, ಓಟಿಟಿಯಲ್ಲಿ ಅಚ್ಚುಕಟ್ಟಾದ ಸಿನಿಮಾಗಳನ್ನು ನೋಡುತ್ತಾ, ಕನ್ನಡದಲ್ಲೂ ಇಂಥ ಸಿನಿಮಾಗಳು ಯಾಕೆ ಬರುತ್ತಿಲ್ಲ ಎಂದು ಪ್ರಶ್ನಾರ್ಥಕ ಚಿನ್ಹೆಯಾದವರಿಗೆ ಉತ್ತರವಾಗಿ ಬಂದಿರುವ ಸಿನಿಮಾ ಪುಕ್ಸಟ್ಟೆ ಲೈಫು-ಪುರುಸೊತ್ತೇ ಇಲ್ಲ! 

Sanchari Vijay Kannada movie Puksatte lifu film review vcs
Author
Bangalore, First Published Sep 25, 2021, 1:57 PM IST

ಕಂಟೆಂಟ್ ಸಿನಿಮಾ ಬೇಕು, ನೇಟಿವಿಟಿ ಬೇಕು, ಬಿಗಿಯಾದ ಚಿತ್ರಕತೆ ಇರಬೇಕು, ಸಣ್ಣ ತಮಾಷೆ ಬೇಕು, ಎಲ್ಲೂ ಬೋರು ಹೊಡೆಸಬಾರದು, ಅಂದುಕೊಂಡದ್ದು ನಡೆಯಬಾರದು, ಊಹಿಸದೇ ಇದ್ದದ್ದೇನೋ ಇರಬೇಕು, ಸ್ಟಾರ್‌ಗಿರಿ ಇರಕೂಡದು ಎಂಬಿತ್ಯಾದಿ ನೂರೆಂಟು ಬೇಡಿಕೆ ಇಟ್ಟವರು ಕೂಡ ನೋಡಬಹುದಾದ ಸಿನಿಮಾವನ್ನು ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಅರವಿಂದ್ ಕುಪ್ಳೀಕರ್ ನೀಡಿದ್ದಾರೆ.

ಸಂಚಾರಿ ವಿಜಯ್ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರದ ಕತೆ ಒಂದು ಪುಟ್ಟ ಊರಿನಲ್ಲಿ ನಡೆಯುತ್ತದೆ. ಬೀಗ ರಿಪೇರಿ ಮಾಡುವ ಶಹಜಹಾನ್ ಮತ್ತು ಅವನಿಗೆ ತಾಜಮಹಲ್ಲಿನ ಕನಸು ಬೀಳುವಂತೆ ಮಾಡುವ ಪೊಲೀಸರ ನಡುವಿನ ಸಂಬಂಧದ ಈ ಕತೆ, ಕ್ರಮೇಣ ಗಾಢವಾಗುತ್ತಾ ಹೋಗುತ್ತದೆ. ಒಂದು ಸಣ್ಣ ಪ್ರೇಮಪ್ರಸಂಗ, ಮತ್ತೊಂದು ವಿಷಾದ, ಕಾಡುವ ಅಪರಾಧದ ಭಯ, ನಿಶ್ಚಿಂತೆಯಿಂದ ಇರುವ ಕಳ್ಳ ವಿನಯ್ ಮಲ್ಯ ಮತ್ತು ಸತ್ಯಶೋಧಕ ಅಧಿಕಾರಿ- ಇವರನ್ನೆಲ್ಲ ಮುಂದಿಟ್ಟುಕೊಂಡು ಅರವಿಂದ್ ಇವತ್ತಿನ ಕತೆಯನ್ನು ಅಚ್ಚುಕಟ್ಟಾಗಿ ಹೇಳುತ್ತಾ ಹೋಗುತ್ತಾರೆ.

Sanchari Vijay Kannada movie Puksatte lifu film review vcs

ಬಿಡಿಬಿಡಿಯಾದ ಘಟನೆಗಳಾಗಲೀ, ಚಿತ್ರಕ್ಕೆ ಸಂಬಂಧಪಡದ ಸಂಗತಿಗಳಾಗಲೀ, ಅಚ್ಚರಿ ಹುಟ್ಟಿಸಲಿಕ್ಕೆ ಕತೆಯಿಂದಾಚೆ ನಿಲ್ಲುವ ಪಾತ್ರಗಳಾಗಲೀ ಇಲ್ಲಿಲ್ಲ. ಒಂದು ಸಣ್ಣಕತೆಯ ಬಿಗು, ಕಾದಂಬರಿಯ ವಿಸ್ತಾರ, ವೆಬ್‌ಸರಣಿಯ ಕುತೂಹಲ ಮತ್ತು ಥ್ರಿಲ್ಲರ್‌ಗೆ ಇರಬೇಕಾದ ವೇಗ ಎಲ್ಲವನ್ನೂ ಪುಕ್ಸಟ್ಟೆ ಲೈಫು ತನ್ನೊಳಗೆ ಇಟ್ಟುಕೊಂಡಿದೆ. ಅಪರಾಧಿಯೊಬ್ಬನನ್ನು ಹೊತ್ತು ಸಾಗುವ ಪೊಲೀಸು ಜೀಪು, ತಲುಪಬೇಕಾದ ಜಾಗ ತಲುಪುತ್ತದೆ. ಅಲ್ಲಿ ನಡೆಯಬೇಕಾದದ್ದೇ ನಡೆಯುತ್ತದೆ. ಆಮೇಲೆ ಆಗಬೇಕಾದದ್ದೇ ಆಗುತ್ತದೆ. ಅರವಿಂದ್ ಎಲ್ಲೂ ರಾಜಿ ಮಾಡಿಕೊಂಡಿಲ್ಲ. ಯಾವ ಪಾತ್ರವನ್ನೂ ಸುಮ್ಮನೆ ತಂದಿಲ್ಲ, ಸುಮ್ಮನೆ ಕೂರಿಸಿಲ್ಲ. ಟೀ ಮಾರುವ ಹುಡುಗನಿಂದ ಹಿಡಿದು ಟೀ ಮಾಡುವ ಕಾನ್‌ಸ್ಟೇಬಲ್ ತನಕ ಎಲ್ಲ ಪಾತ್ರಗಳೂ ಪರಿಪೂರ್ಣ. ಎಲ್ಲ ಫ್ರೇಮುಗಳೂ ಅನಿವಾರ್ಯ.

ವಿಜಿ ಇಲ್ಲದ ನೋವಲ್ಲಿ ಪುಕ್ಸಟ್ಟೆಲೈಫು ಬಿಡುಗಡೆ; ನಿರ್ದೇಶಕ ಅರವಿಂದ ಕುಪ್ಳೀಕರ್‌ ಸಂದರ್ಶನ

ಅವವೇ ಪಾತ್ರಗಳಲ್ಲಿ ಕಾಣಿಸಿಕೊಂಡು ಹಳೆಪಳೆಯ ಮುಖಗಳಂತೆ ಕಾಣುತ್ತಿದ್ದ ಕಲಾವಿದರಿಗೆ ಬೇರೆಯೇ ಪಾತ್ರ ಕೊಟ್ಟು ಅವರ ಪ್ರತಿಭೆ ಕಳೆಕಟ್ಟುವಂತೆ ಮಾಡಿದ್ದಕ್ಕೂ ನಿರ್ದೇಶಕರಿಗೆ ಅಭಿನಂದನೆ ಹೇಳಬೇಕು. ಪೊಲೀಸರ ಬಡತನ, ಅಸಹಾಯಕತೆ, ಕ್ರೌರ್ಯ, ಹತಾಶೆ, ದಾಹ, ದುರಾಸೆ- ಎಲ್ಲವನ್ನೂ ಪುಕ್ಸಟ್ಟೆ ಲೈಫು ತಣ್ಣಗೆ ಹೇಳುತ್ತಾ ಹೋಗುತ್ತದೆ, ಟಿಪ್ಪಣಿಯಿಲ್ಲದ ಕತೆಯಂತೆ!

ಅರವಿಂದ್ ಕುಪ್ಳೀಕರ್ ಕತೆಗೆ ಅನೇಕರ ಪ್ರತಿಭೆ ಕೂಡಿಕೊಂಡಿದೆ. ಸಂಚಾರಿ ವಿಜಯ್ ಅಭಿನಯದ ನಾನು ಅವನಲ್ಲ ಅವಳು ನೋಡಿ ಮರುಳಾದವರಿಗೆ ಇಲ್ಲಿ ಅವರ ಪ್ರತಿಭೆಯ ಮತ್ತೊಂದು ಮುಖದ ಪರಿಚಯವಾಗುತ್ತದೆ. ರಂಗಾಯಣ ರಘು, ಅಚ್ಯುತ, ಶ್ರೀನಿವಾಸ ಮೇಷ್ಟ್ರು, ಸ್ವತಃ ಅರವಿಂದ್ ಕುಪ್ಳೀಕರ್, ಮಾತಂಗಿ- ಎಲ್ಲರೂ ಕತೆಯೊಳಗೆ ಸೇರಿಹೋಗಿದ್ದಾರೆ. ಹಿನ್ನೆಲೆ ಸಂಗೀತ ಅವರೆಲ್ಲದ ಚಲನೆಯನ್ನು ಅಚ್ಚುಕಟ್ಟಾಗಿ ನಿಯಂತ್ರಿಸುತ್ತದೆ.

"

ಚಿತ್ರರಂಗ ಈಗಷ್ಟೇ ತೆರೆದುಕೊಳ್ಳುತ್ತಿದೆ. ಈಗ ಎಲ್ಲ ಕನ್ನಡಿಗರೂ ಕನ್ನಡ ಸಿನಿಮಾಗಳನ್ನು ನೋಡಿ ಪೊ್ರೀತ್ಸಾಹಿಸಬೇಕು. ಸಂಚಾರಿ ವಿಜಯ್ ಕೊನೆಕೊನೆಯ ಚಿತ್ರಗಳಲ್ಲಿ ಇದೂ ಒಂದು. ಅಗಲಿದ ನಟನಿಗೆ ಗೌರವ ಸಲ್ಲಿಸಲು ಈ ಸಿನಿಮಾ ನೋಡಲೇಬೇಕು.

ಪುಕ್ಸಟ್ಟೆ ಲೈಫ್ ಪ್ರೀಮಿಯರ್ ಶೇ: ಸಂಚಾರಿ ವಿಜಯ್‌ಗೆ ಸೀಟು ಮೀಸಲು!

ಈ ಎರಡು ಕಾರಣಗಳನ್ನು ಪಕ್ಕಕ್ಕಿಟ್ಟು ನೋಡಬಹುದಾದ ಚಿತ್ರವೊಂದನ್ನು ಅರವಿಂದ್ ಕುಪ್ಳೀಕರ್ ನೀಡಿದ್ದಾರೆ. ಚಿತೊ್ರೀದ್ಯಮ ಮರಳಿ ತೆರೆದುಕೊಳ್ಳುವ ಹೊತ್ತಿಗೆ, ಕನ್ನಡ ಸಿನಿಮಾಗಳ ಮೇಲೆ ಪ್ರೀತಿ ಉಕ್ಕುವಂತೆ ಮಾಡುವ ಚಿತ್ರ ಇದು. ಇದೇ ಮಟ್ಟದ ಕಸಬುದಾರಿಕೆ ಉಳಿಸಿಕೊಂಡರೆ ಅರವಿಂದ್ ಕುಪ್ಳೀಕರ್ ಅವರಿಂದ ಬಹಳಷ್ಟನ್ನು ನಿರೀಕ್ಷಿಸಬಹುದು ಎಂಬ ಭರವಸೆಯನ್ನೂ ಪುಕ್ಸಟ್ಟೆ ಲೈಫು ಕೊಡುತ್ತದೆ.

ಅಂದಹಾಗೆ, ಈ ಚಿತ್ರದ ಟೈಟಲ್ಲು ನೋಡಿ ಇದೊಂದು ಸಾಮಾನ್ಯ ಹಾಸ್ಯ ಚಿತ್ರ ಎಂದು ಮೋಸಹೋಗಬೇಡಿ. ಟೈಟಲ್ಲಿಗಿಂತ ನೂರುಪಟ್ಟು ಈ ಸಿನಿಮಾ ಗಾಢವಾಗಿದೆ. ಅರವಿಂದ್ ಮಾಡಿರುವ ಏಕೈಕ ತಪ್ಪೆಂದರೆ ಚಿತ್ರಕ್ಕೆ ಹೊಂದದ ಶೀರ್ಷಿಕೆ ಇಟ್ಟದ್ದು.

Follow Us:
Download App:
  • android
  • ios