Rudra Garuda Purana Film Review: ರಿವೇಂಜ್‌ನ ಥ್ರಿಲ್ ಒದಗಿಸುವ ತನಿಖೆಯ ಕತೆ
ಆರಂಭದಲ್ಲಿ ತನಿಖೆಯಿಂದ ಶುರುವಾಗಿ ಕೊನೆ ಕೊನೆಗೆ ರಿವೇಂಜ್ ದಾರಿಯಲ್ಲಿ ಹೆಜ್ಜೆ ಇಟ್ಟು, ಆ ಪ್ರತೀಕಾರಕ್ಕಿರುವ ಪರಿಣಾಮಕಾರಿ ಫ್ಲ್ಯಾಷ್ ಬ್ಯಾಕ್ ಕತೆ ತೆರೆದುಕೊಳ್ಳುತ್ತದೆ. ದ್ವೇಷದ ಕತೆಯಲ್ಲಿ ಹದಗೆಟ್ಟಿರುವ ಬಸ್ಸು, ಒಬ್ಬ ರಾಜಕಾರಣಿ.

ಕೇಶವ
ಬದುಕಿದ್ದಾಗ ಭೂಮಿ ಮೇಲೆ ಮಾಡಿದ ಪಾಪಗಳಿಗೆ ಸತ್ತು ನರಕಕ್ಕೆ ಹೋಗಿ ಶಿಕ್ಷೆ ಅನುಭವಿಸೋದು ಸುಳ್ಳು, ಇಲ್ಲಿ ಮಾಡಿದ ಪಾಪಕ್ಕೆ ಇಲ್ಲೇ ಶಿಕ್ಷೆ ಅನುಭವಿಸಿ ಎನ್ನುತ್ತದೆ ‘ರುದ್ರ ಗರುಡ ಪುರಾಣ’ ಚಿತ್ರ. ‘ಇಲ್ಲೇ ಸ್ವರ್ಗ, ಇಲ್ಲೇ ನರಕ. ಮೇಲೇನಿಲ್ಲ’ ಎನ್ನುವ ಹಾಡಿನ ಸಾಲನ್ನು ಗಟ್ಟಿಯಾಗಿ ನಂಬಿಕೊಂಡಿದೆ. ಹಾಗಾದರೆ ಇಲ್ಲಿನ ಪಾಪಗಳಿಗೆ ಇಲ್ಲೇ ಶಿಕ್ಷೆ ಕೊಡೋದು ಯಾರು ಎನ್ನುವ ಕುತೂಹಲ ಮತ್ತು ಆ ಸಸ್ಪೆನ್ಸ್ ಹಿಂದಿರುವ ತಣ್ಣನೆಯ ಕ್ರೌರ್ಯ, ಇದರಿಂದ ಬದುಕು ಕಳೆದುಕೊಂಡಿದ್ದು ಯಾರೆಂಬ ಹುಡುಕಾಟದ ಆಸಕ್ತಿದಾಯಕ ತನಿಖಾ ಕಥನವಿದು.
ಆರಂಭದಲ್ಲಿ ತನಿಖೆಯಿಂದ ಶುರುವಾಗಿ ಕೊನೆ ಕೊನೆಗೆ ರಿವೇಂಜ್ ದಾರಿಯಲ್ಲಿ ಹೆಜ್ಜೆ ಇಟ್ಟು, ಆ ಪ್ರತೀಕಾರಕ್ಕಿರುವ ಪರಿಣಾಮಕಾರಿ ಫ್ಲ್ಯಾಷ್ ಬ್ಯಾಕ್ ಕತೆ ತೆರೆದುಕೊಳ್ಳುತ್ತದೆ. ದ್ವೇಷದ ಕತೆಯಲ್ಲಿ ಹದಗೆಟ್ಟಿರುವ ಬಸ್ಸು, ಒಬ್ಬ ರಾಜಕಾರಣಿ, ನೇರ ಮತ್ತು ನಿಷ್ಠೂರ ಪೊಲೀಸ್ ಅಧಿಕಾರಿ, ರಾಜಕಾರಣಿ ಮಗನ ಪ್ರೇಮ ಕತೆ, ವಿದ್ಯಾರ್ಥಿಗಳ ಸಾವು ಹೀಗೆ ಎಲ್ಲೆಲ್ಲೋ ಸಂಚಾರ ಮಾಡಿ ಕೊನೆಗೆ ಅದೇ ನಿಲ್ದಾಣಕ್ಕೆ ಬಂದು ಸೇರುವ ಹೊತ್ತಿಗೆ ಕ್ಲೈಮ್ಯಾಕ್ಸ್ ನಂತರವೂ ಕತೆ ನೋಡಿದ ಮತ್ತು ಕೇಳಿದ ಅನುಭವಕ್ಕೆ ಪಾತ್ರನಾಗುತ್ತಾನೆ ಪ್ರೇಕ್ಷಕ. ಅದರಿಂದಾಗಿಯೇ ಈ ಸಿನಿಮಾ ವಿಭಿನ್ನವಾಗಿ ನಿಲ್ಲುತ್ತದೆ.
ಚಿತ್ರ: ರುದ್ರ ಗರುಡ ಪುರಾಣ
ತಾರಾಗಣ: ರಿಷಿ, ಪ್ರಿಯಾಂಕ ಕುಮಾರ್, ಅವಿನಾಶ್, ಸಿದ್ಲಿಂಗು ಶ್ರೀಧರ್, ವಿನೋದ್ ಆಳ್ವಾ, ಅಶ್ವಿನಿ ಗೌಡ, ದಡಿಯ ಗಿರಿ
ನಿರ್ದೇಶನ: ಕೆ.ಎಸ್.ನಂದೀಶ್
ರೇಟಿಂಗ್ : 3
ರಿಷಿ ಅವರ ಪೊಲೀಸ್ ಪಾತ್ರದ ವರ್ತನೆ, ಏನಾಗಿರಬಹುದು ಎನ್ನುವ ಕುತೂಹಲವು ಚಿತ್ರದ ಪ್ಲಸ್ ಪಾಯಿಂಟ್. ಪೊಲೀಸ್ ಪಾತ್ರದಲ್ಲಿ ರಿಷಿ ಹೊಸದಾಗಿ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ಹೆಚ್ಚುಗಾರಿಕೆ. ನಾಯಕಿ ಪ್ರಿಯಾಂಕ ಕುಮಾರ್ ಈ ಥ್ರಿಲ್ಲರ್ ತನಿಖೆಯಲ್ಲಿ ಆಗಾಗ ಎದುರಾಗುವ ವಿಶ್ರಾಂತಿ ತಾಣದಂತೆ. ನಾಯಕ ನಟ ರಿಷಿ ಈ ಸಿನಿಮಾ ಮೇಲೆ ಅಪಾರ ನಂಬಿಕೆ ಹೊಂದಿದ್ದು, ‘ನಿರ್ದೇಶಕರು ಶ್ರಮದಿಂದ ಈ ಸಿನಿಮಾ ರೂಪಿಸಿದ್ದಾರೆ. ನಿರ್ಮಾಪಕರು ಯಾವುದಕ್ಕೂ ಕೊರತೆ ಇಲ್ಲದೆ ನಿರ್ಮಾಣ ಮಾಡಿದ್ದಾರೆ. ರುದ್ರ ಗರುಡ ಪುರಾಣ ಒಂದೊಳ್ಳೆ ಸಿನಿಮಾವಾಗಿ ಮೂಡಿ ಬಂದಿದೆ’ ಎಂದು ಹೇಳಿದ್ದಾರೆ.