ಗೆಳೆಯರ ತರಲೆ, ಅದರ ಮಧ್ಯೆ ಹೀರೋ ಮತ್ತು ಹೀರೋಯಿನ್ ಇಬ್ಬರ ಸರಸ ಸಲ್ಲಾಪದ ಮೂಲಕ ಕತೆ ಮುಂದೆ ಸಾಗುತ್ತಿರುತ್ತದೆ. ಅದರ ಜೊತೆಗೆ ಸೀರಿಯಲ್ ಕಿಲ್ಲರ್ ಒಬ್ಬನ ಕತೆಯೂ ನಡೆಯುತ್ತಿರುತ್ತದೆ.
ರಾಜೇಶ್ ಶೆಟ್ಟಿ
ನಂಬಿಕೆ ದ್ರೋಹದ ಕತೆಗಳು ಮನುಷ್ಯನ ಮನಸ್ಸಿನ ಅಗಾಧ ಸಾಧ್ಯತೆಗಳನ್ನು ತೋರಿಸುತ್ತದೆ. ಈ ಸಿನಿಮಾ ಕೂಡ ಮನುಷ್ಯನ ಆಸೆ, ದುರಾಸೆ, ಹಪಹಪಿತನ, ಕ್ರೌರ್ಯ, ಕ್ರೋಧ ಎಲ್ಲವನ್ನೂ ದಾಟಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಪಂಚ ಎದುರು ದುಷ್ಟನಾಗಿ ಕಾಣಬಲ್ಲ ಗಂಡಸಿನ ಹಿಂದೆ ಒಂದು ಮೋಸದ ಕತೆ ಇರಬಹುದು ಎಂಬ ಚಿಂತನೆಯನ್ನು ಹುಟ್ಟಿಹಾಕುವ ಪ್ರಯತ್ನ ಮಾಡುತ್ತದೆ.
ಈ ಸಿನಿಮಾ ಆರಂಭವಾಗುವುದು ಲವಲವಿಕೆಯಿಂದ. ಕಾಲೇಜು ವಾತಾವರಣ, ಗೆಳೆಯರ ತರಲೆ, ಅದರ ಮಧ್ಯೆ ಹೀರೋ ಮತ್ತು ಹೀರೋಯಿನ್ ಇಬ್ಬರ ಸರಸ ಸಲ್ಲಾಪದ ಮೂಲಕ ಕತೆ ಮುಂದೆ ಸಾಗುತ್ತಿರುತ್ತದೆ. ಅದರ ಜೊತೆಗೆ ಸೀರಿಯಲ್ ಕಿಲ್ಲರ್ ಒಬ್ಬನ ಕತೆಯೂ ನಡೆಯುತ್ತಿರುತ್ತದೆ. ಈ ತಾರುಣ್ಯದ ಹುಮ್ಮಸ್ಸು ಮತ್ತು ಕೊಲೆಯ ಕುತೂಹಲ ಎರಡನ್ನೂ ಮಿಳಿತಗೊಳಿಸಿರುವುದರಿಂದ ಅಲ್ಲಲ್ಲಿ ಎಳೆದಂತೆ ಅನ್ನಿಸಿದರೂ ನಿಗೂಢವಾಗಿ ಸಾಗುತ್ತದೆ. ಮಧ್ಯಂತರದ ನಂತರ ಕತೆಯ ಬೇರೆ ಬೇರೆ ಆಯಾಮ ತೆರೆದುಕೊಂಡು ಪ್ರೇಕ್ಷಕನನ್ನು ಅಚ್ಚರಿಗೆ, ಗಾಬರಿಗೆ ದೂಡುತ್ತದೆ. ಅಷ್ಟರ ಮಟ್ಟಿಗೆ ಈ ಕತೆ ನೋಡುಗನನ್ನು ಕಲಕುತ್ತದೆ.
ಚಿತ್ರ: ಐ ಯಾಮ್ ಗಾಡ್
ನಿರ್ದೇಶನ: ರವಿ ಬಿ ಗೌಡ
ತಾರಾಗಣ: ರವಿ ಬಿ ಗೌಡ, ಆರ್ಮುಗಂ ರವಿಶಂಕರ್, ವಿಜೇತಾ ಪಾರೀಖ್, ಅವಿನಾಶ್, ಅರುಣಾ ಬಾಲರಾಜ್
ರೇಟಿಂಗ್: 3
ದ್ವಿತೀಯಾರ್ಧದಲ್ಲಿನ ಟರ್ನ್ ಆಂಡ್ ಟ್ವಿಸ್ಟ್‌ಗಳು, ಕಂಡದ್ದರ ಹಿಂದೆ ಬೇರೇನೋ ಇರಬಹುದು ಅನ್ನಿಸುವ ಗುಣ ನೋಡುಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಕತೆ ಕಾಲಘಟ್ಟದ ಕುರಿತು ಪ್ರಶ್ನೆಗಳು ಉಳಿಯಬಹುದು. ನಟನೆ ಮತ್ತು ನಿರ್ದೇಶನ ಎರಡನ್ನೂ ಸೊಗಸಾಗಿ ನಿಭಾಯಿಸಿರುವ ರವಿ ಗೌಡ ಪ್ರಯತ್ನ ಶ್ಲಾಘನೀಯ. ರವಿಶಂಕರ್ ಉಪಸ್ಥಿತಿಯೇ ಈ ಚಿತ್ರದ ಮತ್ತೊಂದು ಸೊಗಸು. ವಿಜೇತಾ ಪಾರೀಖ್ ಮತ್ತಿತರ ಕಲಾವಿದರು ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ನಂಬಿಕೆ ದ್ರೋಹದ ಕತೆಗಳು ಇರಿಯುತ್ತವೆ, ಕಾಡುತ್ತವೆ. ಈ ಸಿನಿಮಾ ಅಂಥದ್ದೊಂದು ಪ್ರಯತ್ನ ಮಾಡಿದೆ.
