ಮಹಾರಾಷ್ಟ್ರದಲ್ಲಿ ತಂದೆ, ತಾಯಿ ಜೊತೆಗಿದ್ದ ಹುಡುಗನೊಬ್ಬ ಅವರ ಮರಣಾನಂತರ ಕರಾವಳಿಯ ಪುಟ್ಟ ಊರಿಗೆ ಮರಳುತ್ತಾನೆ. ಅವನ ತಾಯಿ ಅವನ ತಂದೆಯನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಕತೆ ಅವರಿವರು ಹೇಳುವುದು ಕಿವಿಗೆ ಬೀಳುತ್ತದೆ.

ರಾಜೇಶ್ ಶೆಟ್ಟಿ

ಕತೆ ಉತ್ತಮವಾಗಿ ಆರಂಭವಾಗುತ್ತದೆ. ಪರಿಪೂರ್ಣವಾಗಿ ಮುಗಿಯುತ್ತದೆ. ಆದರೆ ಎಲ್ಲಾ ಕತೆಗಳಂತೆ ಆರಂಭವಾಗುವುದಿಲ್ಲ. ಎಲ್ಲಾ ಕತೆಗಳಂತೆ ಇದರ ಅಂತ್ಯವೂ ಇಲ್ಲ. ಇದು ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಬಂದ ಅರ್ಥಪೂರ್ಣ ಬರವಣಿಗೆಯ ಅತ್ಯುತ್ತಮ ಸಿನಿಮಾ ಎಂದರೆ ಉತ್ಪ್ರೇಕ್ಷೆ ಅಲ್ಲ. ಮಹಾರಾಷ್ಟ್ರದಲ್ಲಿ ತಂದೆ, ತಾಯಿ ಜೊತೆಗಿದ್ದ ಹುಡುಗನೊಬ್ಬ ಅವರ ಮರಣಾನಂತರ ಕರಾವಳಿಯ ಪುಟ್ಟ ಊರಿಗೆ ಮರಳುತ್ತಾನೆ. ಅವನ ತಾಯಿ ಅವನ ತಂದೆಯನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಕತೆ ಅವರಿವರು ಹೇಳುವುದು ಕಿವಿಗೆ ಬೀಳುತ್ತದೆ. ಆದರೆ ಆ ಹುಡುಗ ಆ ಕುರಿತು ಮಾತನಾಡುವುದಿಲ್ಲ. ಅವನಿಗೆ ಪ್ರಶ್ನೆಗಳು ಎದುರಾಗುತ್ತವೆ. ಅವನು ದಟ್ಟ ವಿಷಾದ ತುಂಬಿರುವ ಕಣ್ಣುಗಳಿಂದ ಆ ಪ್ರಶ್ನೆಗಳನ್ನು ಎದುರಿಸುತ್ತಾನೆ. ಉತ್ತರ ಕೊಡುವುದಿಲ್ಲ.

ಆ ಪ್ರಶ್ನೆಗಳು, ಆ ಪರಿಸ್ಥಿತಿಗಳು, ಆ ಸುಡುಸುಡು ಬದುಕು ಅವನೊಳಗೆ ಏನನ್ನೂ ತುಂಬಿಸಿವೆ ಅನ್ನುವುದನ್ನು ನಿರ್ದೇಶಕ ಹೇಳುವುದಿಲ್ಲ. ಅರ್ಥ ಮಾಡಿಕೊಳ್ಳಬೇಕು. ಅವನು ಮೌನವಾಗಿರುತ್ತಾನೆ. ಹೊಸ ಸೈಕಲ್ ಸಿಕ್ಕಾಗ ನಗುತ್ತಾನೆ. ತಾಯಿ ಕುರಿತ ಮಾತಿಗೆ ಕೆರಳುತ್ತಾನೆ. ನೀರಲ್ಲಿ ಬಿದ್ದಾಗ ಅರಳುತ್ತಾನೆ. ಅವನೊಂದು ಕಡು ವಿಷಾದದಂತೆ ಕಾಡುತ್ತಾ ಹೋಗುತ್ತಾನೆ. ಒಂದು ಸಲ ಅಳು ಮಾರಾಯ ಎಂದು ಮನಸ್ಸು ಹೇಳುತ್ತಿರುತ್ತದೆ. ಆದರೆ ಅವನು ಅಳುವುದಿಲ್ಲ. ಪರಿಸ್ಥಿತಿ ತಂದ ನೋವನ್ನು, ಬದುಕಿನ ದಾರುಣತೆಯನ್ನು, ಮನಸ್ಸು ಸೃಷ್ಟಿಸಿದ ಕ್ರೌರ್ಯವನ್ನು, ಜನರ ಸಣ್ಣತನವನ್ನು, ಬಾಲ್ಯದ ಭಾಷೆಯ ಆಸೆಯನ್ನು, ಪರಿಮಳದಂತೆ ಹಬ್ಬುವ ಪ್ರೇಮವನ್ನು, ಆಹ್ಲಾದಗೊಳಿಸುವ ಅಕ್ಕರೆಯನ್ನು ನಿರ್ದೇಶಕರು ತನ್ನ ಬರವಣಿಗೆ ಮೂಲಕ, ದೃಶ್ಯ ಕಟ್ಟುವಿಕೆಯ ಮೂಲಕ ದಾಟಿಸುತ್ತಾ ಹೋಗುತ್ತಾರೆ. 

ಅಸಹನೀಯ ಎಂಬಂತೆ ಇಲ್ಲಿ ಯಾವುದೂ ಇಲ್ಲ. ಬಸ್ಸಲ್ಲಿ ಸಾಗುವಾಗ ಎಲ್ಲಾ ದೃಶ್ಯಗಳು ಹಿಂದೆ ಹಿಂದುಹಿಂದಕ್ಕೆ ಹೋದಂತೆ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಅವನ್ನೆಲ್ಲಾ ಸಶಕ್ತ ಇಮೇಜ್‌ಗಳನ್ನಾಗಿ ಮನಸ್ಸಲ್ಲಿ ಕೂರಿಸಿ ಬಿಡುತ್ತಾರೆ. ಇಷ್ಟೇ ಅಂತ ಎಲ್ಲೂ ಹೇಳುವುದಿಲ್ಲ. ಐಸ್‌ಬರ್ಗ್‌ ಥಿಯರಿಯಂತೆ ಮೇಲೆ ಕಾಣುವುದು ಚೂರು, ಕಾಣದೇ ಇರುವುದು ಅಗಾಧ. ಇಡೀ ಸಿನಿಮಾ ಕಾವ್ಯ ಗುಣವನ್ನು ಧರಿಸಿಕೊಂಡಿದೆ. ಒಂದೊಂದು ಸಾಲು ಒಂದೊಂದು ಅರ್ಥ ದಾಟಿಸುವಂತೆ ಒಂದೊಂದು ಪಾತ್ರಗಳು ಒಂದೊಂದು ಬದುಕನ್ನು ಹೇಳುತ್ತವೆ. 

ಚಿತ್ರ: ಮಿಥ್ಯ
ನಿರ್ದೇಶನ: ಸುಮಂತ್ ಭಟ್
ತಾರಾಗಣ: ಆತಿಶ್ ಶೆಟ್ಟಿ, ಪ್ರಕಾಶ್ ತುಮಿನಾಡು, ರೂಪಾ ವರ್ಕಾಡಿ
ರೇಟಿಂಗ್: 4

ಮಳೆಯಲ್ಲಿ ನೆನೆಯುತ್ತಿರುವ ವಾಲಿಬಾಲ್‌ ನೆಟ್, ಮೋಡಾವೃತವಾಗಿ ಕತ್ತಲು ಬೆಳಕಲ್ಲಿ ಕಾಣುವ ಒಂಟಿ ಕೆರೆ, ಭೂತ ಕನ್ನಡಿಯಲ್ಲಿ ಸುಟ್ಟುಹೋಗುವ ಪೇಪರ್‌, ಒದ್ದೆ ರಸ್ತೆಯಲ್ಲಿ ನಿಂತ ಒಂಟಿ ಸೈಕಲ್ಲು ಎಲ್ಲವೂ ರೂಪಕಗಳಾಗಿ ಆವರಿಸಿಕೊಳ್ಳುತ್ತದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಇಡೀ ಚಿತ್ರಕ್ಕೊಂದು ದೃಷ್ಟಿಬೊಟ್ಟು. ಬದುಕು ಕೊಟ್ಟ ಪೆಟ್ಟಿನಿಂದ ಮೃಗವಾಗಲು ಹೊರಟಿದ್ದ ಒಬ್ಬ ಹುಡುಗ ಪ್ರೀತಿಯ ಕಾರಣಕ್ಕೆ ಮತ್ತೆ ಮಗುವಾಗಿ ಬದಲಾಗುವ ಒಂದು ಮ್ಯಾಜಿಕಲ್‌ ಮೊಮೆಂಟ್‌. ಆಗ ಅವನು ಅಳುತ್ತಾನೆ. ಅವನ ಕಣ್ಣಿಂದ ಒಂದೊಂದು ಹನಿ ಕೆಳಕ್ಕೆ ಉರುಳಿದಾಗಲೂ ಸುದೀರ್ಘ ನಿಟ್ಟುಸಿರು. ನಿರ್ದೇಶಕನಿಗೆ ನಮಸ್ಕಾರ.