Minchu Hulu Film Review: ಶ್ರಮದಾಯಕ, ಹರ್ಷದಾಯಕ, ಸ್ಫೂರ್ತಿದಾಯಕ ಮಿಂಚುಹುಳ
ಒಂದು ಪುಟ್ಟ ಮಿಂಚು ಹುಳವನ್ನು ಒಂದು ದೊಡ್ಡ ರೂಪಕವಾಗಿ ತೋರಿಸಿರುವುದು ನಿರ್ದೇಶಕ ಮಹೇಶ್ ಕುಮಾರ್ ಹೆಚ್ಚುಗಾರಿಕೆ. ಮೇಲ್ನೋಟಕ್ಕೆ ಇದೊಂದು ಮಕ್ಕಳ ಸಿನಿಮಾದಂತೆ ಕಾಣಿಸಿದರೂ ಇದರ ಅಂತಃಸ್ಸತ್ವ ಅಗಾಧವಾದುದು. ಸ್ಫೂರ್ತಿ ತುಂಬುವ ಗುಣ ಈ ಸಿನಿಮಾಗಿದೆ.
ಆರ್.ಬಿ.ಎಸ್.
ಇಲ್ಲೊಬ್ಬ ಪುಟ್ಟ ಹುಡುಗನಿದ್ದಾನೆ. ಅವನಿಗೆ ಬೆಟ್ಟದಷ್ಟು ಆಸೆ. ಓದಿ ಬೆಳೆಯುವ ಕನಸು. ಆದರೆ ಮನೆಯಲ್ಲಿ ಕಷ್ಟಗಳ ಸರಮಾಲೆ. ಅಪ್ಪನದು ಹಾದಿ ತಪ್ಪಿದ ಬಾಳು. ಮಗನಿಗೆ ಬದುಕು ಕೊಡದಷ್ಟು ಅವನಿಗೆ ಕಷ್ಟ. ಆದರೆ ಶಾಲೆಗೆ ಹೋಗುವ ಮಗನಿಗೆ ಹೇಗಾದರೂ ಓದುವ ಆಸೆ. ಆಗ ಅವನಿಗೆ ನೆರವಾಗುವುದು ಒಂದು ಪುಟ್ಟ ಮಿಂಚು ಹುಳ. ಆ ಮಿಂಚು ಹುಳ ಬೆಳಕು ತೋರಿಸುತ್ತದೆ. ಹಾಗೆಯೇ ದಾರಿಗೆ ಬೆಳಕಾಗುತ್ತದೆ.
ಒಂದು ಪುಟ್ಟ ಮಿಂಚು ಹುಳವನ್ನು ಒಂದು ದೊಡ್ಡ ರೂಪಕವಾಗಿ ತೋರಿಸಿರುವುದು ನಿರ್ದೇಶಕ ಮಹೇಶ್ ಕುಮಾರ್ ಹೆಚ್ಚುಗಾರಿಕೆ. ಮೇಲ್ನೋಟಕ್ಕೆ ಇದೊಂದು ಮಕ್ಕಳ ಸಿನಿಮಾದಂತೆ ಕಾಣಿಸಿದರೂ ಇದರ ಅಂತಃಸ್ಸತ್ವ ಅಗಾಧವಾದುದು. ಸ್ಫೂರ್ತಿ ತುಂಬುವ ಗುಣ ಈ ಸಿನಿಮಾಗಿದೆ. ಹಾಗಾಗಿಯೇ ಇದು ವಿಭಿನ್ನವಾಗಿ ನಿಲ್ಲುತ್ತದೆ. ಸಿನಿಮಾದ ಮೊದಲಾರ್ಧದಲ್ಲಿ ಕತೆಯನ್ನು ವಿವರವಾಗಿ ತಿಳಿಸುವ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಕತೆಯನ್ನು ಮತ್ತಷ್ಟು ತೀವ್ರಗೊಳಿಸುತ್ತಾರೆ. ಸ್ಫೂರ್ತಿದಾಯಕ ಘಟ್ಟಕ್ಕೆ ಕರೆದೊಯ್ಯುತ್ತಾರೆ.
ಚಿತ್ರ: ಮಿಂಚುಹುಳು
ನಿರ್ದೇಶನ: ಮಹೇಶ್ ಕುಮಾರ್
ತಾರಾಗಣ: ಪೃಥ್ವಿರಾಜ್, ಮಾ.ಪ್ರೀತಮ್, ಪರಶಿವಮೂರ್ತಿ, ರಶ್ಮಿ ಗೌಡ, ಪೂರ್ವಿಕಾ
ಆ ಪುಟ್ಟ ಹುಡುಗನ ಬದುಕು ಎಲ್ಲಿಗೆ ಬಂದು ನಿಲ್ಲುತ್ತದೆ ಅನ್ನುವುದೇ ಸಿನಿಮಾದ ಕುತೂಹಲ. ಈ ಸಿನಿಮಾದ ವಿಶೇಷತೆ ಪೃಥ್ವಿರಾಜ್. ಆಶಾದಾಯಕವಾಗಿ ನಟಿಸಿರುವ ಅವರು ಕಥೆಯ ಮುಖ್ಯ ಘಟ್ಟದಲ್ಲಿ ಬಂದು ಮುಖ್ಯ ಪಾತ್ರಕ್ಕೆ ಸ್ಫೂರ್ತಿ ತುಂಬುತ್ತಾರೆ. ಮಾ. ಪ್ರೀತಮ್ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಪ್ರತಿಯೊಬ್ಬ ಕಲಾವಿದರೂ ಕತೆಗೆ ತಕ್ಕಂತೆ ಜೀವ ತುಂಬಿದ್ದಾರೆ. ಈ ಮಿಂಚು ಹುಳ ಆಗಾಗ ಮಿಂಚಿ ಹೊಳೆಯುತ್ತದೆ ಅನ್ನುವುದೇ ಸಿನಿಮಾದ ಹೆಚ್ಚುಗಾರಿಕೆ.