ಚಿತ್ರ ವಿಮರ್ಶೆ: ಇನ್ಸ್‌ಪೆಕ್ಟರ್ ವಿಕ್ರಂ
ಫನ್ನಿಯಾಗಿ ಮಾತಾಡ್ತಾ ರೌಡಿಗಳನ್ನು ಬೆಂಡೆತ್ತೋ ಪ್ರಜ್ವಲ್, ಚಮಕ್ ಕೊಡ್ತಾನೇ ತುಂಟನಗೆಯಲ್ಲಿ ಗಮನಸೆಳೆಯೋ ಭಾವನಾ, ಅಭಿನಯದಲ್ಲಿ ಹೀರೋನನ್ನೇ ಮೀರಿಸೋ ರಘು ಮುಖರ್ಜಿ, ದರ್ಶನ್ ಆದರ್ಶ, ಶೋಭರಾಜ್ ಹಾಸ್ಯ, ಜೊತೆಗೆ ಅದ್ಭುತ ಸಿನಿಮಟೋಗ್ರಫಿ, ಬ್ಯಾಗ್ರೌಂಡ್ ಸ್ಕೋರ್.. ಈ ಎಲ್ಲದರ ಒಟ್ಟು ಮೊತ್ತ ‘ಇನ್ಸ್‌ಪೆಕ್ಟರ್ ವಿಕ್ರಂ’. ಎಷ್ಟೋ ಸಮಯದ ಬಳಿಕ ಫುಲ್‌ಹೌಸ್ ಪ್ರದರ್ಶನ ಕಂಡ ಮೊದಲ ಸ್ಟಾರ್ ಸಿನಿಮಾ ಮನರಂಜನೆಯಲ್ಲಿ ಖಂಡಿತಾ ಮೋಸ ಮಾಡಲ್ಲ.
ಪ್ರಿಯಾ ಕೆರ್ವಾಶೆ
ಡ್ರಗ್ ಮಾಫಿಯಾ ವಿರುದ್ಧ ಹೋರಾಡುತ್ತ, ಇದರ ಹಿಂದಿರುವ ರಹಸ್ಯ ವ್ಯಕ್ತಿಗಳ ಬೇಟೆಯಲ್ಲಿರುತ್ತಾನೆ ಇನ್ಸ್‌ಪೆಕ್ಟರ್ ವಿಕ್ರಂ. ಇಂಥಾ ಟೈಮ್‌ನಲ್ಲಿ ಹುಡುಗಿಯೊಬ್ಬಳನ್ನು ಹಿಂದಿಂದ ನೋಡಿಯೇ ಅವಳ ಮೇಲೆ ಲವ್ವಾಗುತ್ತೆ. ಒಂದು ಫೈಟು, ಒಂದು ಹಾಡಿನೊಂದಿಗೆ ಭಾವನಾಳನ್ನು ಇಂಪ್ರೆಸ್ ಮಾಡೋ ಪ್ರಯತ್ನ. ಅಷ್ಟರಲ್ಲಿ ಅವಳೂ ಡ್ರಗ್ ಪೆಡ್ಲರ್‌ಗಳೊಂದಿಗೆ ಶಾಮೀಲಾಗಿರೋದು ತಿಳಿದು ಕಹಾನಿ ಮೆ ಟ್ವಿಸ್ಟ್. ಕೊನೆಗೊಮ್ಮೆ ಡ್ರಗ್ ಮಾಫಿಯಾದವರೇ ಪರಸ್ಪರ ಹೊಡೆದಾಡಿಕೊಳ್ಳುವ ಸಂದರ್ಭ ಬರುತ್ತೆ. ಆಗ ಭಾವನಾ ವಿದೇಶಿ ಪೆಡ್ಲರ್‌ಗಳನ್ನು ಶೂಟ್ ಮಾಡುತ್ತಾಳೆ. ಮರೆಯಲ್ಲಿ ಇದನ್ನು ನೋಡುತ್ತಾ ತಡೆಯಲು ಬಂದ ಇನ್ಸ್‌ಪೆಕ್ಟರ್ ವಿಕ್ರಂಗೇ ಗುಂಡೇಟು ತಗುಲುತ್ತೆ. ಅಲ್ಲಿಗೆ ಇಂಟರ್‌ವೆಲ್.
ತನಗೇ ಶೂಟ್ ಮಾಡಿದ ಭಾವನಾಳನ್ನು ವಿಕ್ರಂ ಕ್ಷಮಿಸುತ್ತಾನಾ, ಅವಳ ನಿಜ ರೂಪ ಏನು ಅನ್ನೋದು ಇಂಟೆರೆಸ್ಟಿಂಗ್ ಫಾಕ್ಟ್. ಆರಂಭದಲ್ಲಿ ಪ್ರಾಮಾಣಿಕ ಸೀನಿಯರ್ ಆಫೀಸರ್ ಆಗಿ ಕಾಣಿಸಿಕೊಳ್ಳುವ ರಘು ಅವರದು ನೆಗೆಟಿವ್ ಶೇಡ್. ಆತ್ಮಹತ್ಯೆಗೆ ಯತ್ನಿಸುವ ಯುವಕನಿಗೆ ತಿಳಿಹೇಳುತ್ತಾ ಒಂದು ಹಂತದಲ್ಲಿ ಶ್ರೀಕೃಷ್ಣ ಪರಮಾತ್ಮನಂತೆ ಕಾಣಿಸಿಕೊಳ್ಳುತ್ತಾರೆ ದರ್ಶನ್.
ತಾರಾಗಣ: ಪ್ರಜ್ವಲ್ ದೇವರಾಜ್, ಜಾಕಿ ಭಾವನಾ, ರಘು ಮುಖರ್ಜಿ, ದರ್ಶನ್
ನಿರ್ದೇಶನ: ಶ್ರೀ ನರಸಿಂಹ
ಸಂಗೀತ: ಅನೂಪ್ ಸೀಳಿನ್
ಛಾಯಾಗ್ರಾಹಣ: ನವೀನ್ ಕುಮಾರ್
ರೇಟಿಂಗ್ : 3
ಪೊಲೀಸ್ ಪಾತ್ರ ಮಾಡಲು ಅಪ್ಪನೇ ಸ್ಫೂರ್ತಿ: ಪ್ರಜ್ವಲ್ ದೇವರಾಜ್
ಮಳೆ, ಬಿಸಿಲು, ಬಣ್ಣ, ನೆರಳಲ್ಲಿ ಛಾಯಾಗ್ರಾಹಕ ಆಟ ಆಡಿರೋದು ಮಜವಾಗಿದೆ. ಸಿನಿಮಟೋಗ್ರಫಿಗೆ ಫುಲ್ ಮಾರ್ಕ್ಸ್. ಬ್ಯಾಗ್ರೌಂಡ್ ಸ್ಕೋರ್ ಸಹ ಚೆನ್ನಾಗಿದೆ. ಪ್ರಜ್ವಲ್ ಅಭಿನಯದಲ್ಲಿ ಲವಲವಿಕೆ, ಸ್ಮಾರ್ಟ್‌ನೆಸ್ ಇದೆ. ಜಾಕಿ ಭಾವನಾ ಪರಮತುಂಟಿಯಂತೆ ಕಾಣುತ್ತಾರೆ. ಬೆಸ್ಟ್ ಅನಿಸೋದು ರಘು ಮುಖರ್ಜಿ ಪರ್ಫಾಮೆನ್ಸ್. ಎರಡು ಶೇಡ್‌ಗಳಲ್ಲಿ ಅವರು ಅಕ್ಷರಶಃ ಜೀವಿಸಿದ್ದಾರೆ. ತಮಾಷೆ, ಎಂಟರ್‌ಟೈನ್‌ಮೆಂಟ್, ರೊಮ್ಯಾನ್ಸ್ ಎಲ್ಲ ಇದೆ. ಆದರೆ ಹಳೇ ಹೀರೋಯಿಸಂಅನ್ನೇ ಮೆರೆಸಿದ್ದಾರೆ. ಹೊಸತನ ಕಾಣಸಿಗೋದಿಲ್ಲ. ಶುರುವಲ್ಲಿ ಸಖತ್ ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳುವ ಭಾವನಾ ಪಾತ್ರವನ್ನು, ಹೀರೋನನ್ನು ಮೆರೆಸಲೋಸ್ಕರ ಕೊನೆಗೆ ಬೇಕೆಂದೇ ಡಲ್ ಮಾಡಿದಂತಿದೆ. ಇಂಥದ್ದೆಲ್ಲ ಇದ್ದರೂ ನಿರ್ದೇಶಕ ನರಸಿಂಹ ಅವರಿಗೆ ಕತೆಯನ್ನು ಇಂಟರೆಸ್ಟಿಂಗ್ ಆಗಿ ಪ್ರೆಸೆಂಟ್ ಮಾಡೋ ಕಲೆ ಒಲಿದಿದೆ. ಬಹುಶಃ ಪ್ರಜ್ವಲ್‌ಗೆ ಬ್ರೇಕ್ ನೀಡೋ ಸಿನಿಮಾ ಇದಾಗಬಹುದು.