ಪ್ರೀತಿ, ತ್ಯಾಗ, ಕಾಯುವಿಕೆ, ನೆನಪುಗಳು, ಆಪ್ತವಾದ ಭಾವನೆಗಳನ್ನು ಕಟ್ಟಿಕೊಳ್ಳುತ್ತಾ ಹೋಗುವ ‘ಮರ್ಫಿ’ ಒಂದು ಗಾಢವಾದ ಅನುಭವವನ್ನು ನೀಡುತ್ತದೆ. ರೇಡಿಯೋ ಎಂಬುದು ಪ್ರತಿಯೊಬ್ಬರ ನೆನಪಿನ ಬುತ್ತಿ. 

ಆರ್‌. ಕೇಶವಮೂರ್ತಿ

ಅದು ಹಸಿರು, ಮಳೆ, ಬೀಚ್‌ನಿಂದ ಕೂಡಿದ ಪ್ರದೇಶ. ಅಲ್ಲಿ ತನ್ನ ಅಜ್ಜನೊಂದಿಗೆ ವಾಸ ಮಾಡುತ್ತಿರುವ ಹೀರೋ. ಸ್ನೇಹ, ಪ್ರೀತಿ-ಪ್ರೇಮ, ಹುಡುಗಾಟಿಕೆ ಎಂದುಕೊಂಡಿದ್ದವನ ಜೀವನಕ್ಕೆ ಒಂದು ಮಳೆ ಬಂದ ರಾತ್ರಿ ಹಳೇ ರೇಡಿಯೋ ಸಿಗುತ್ತದೆ. ಈ ರೇಡಿಯೋಗೆ ಇದ್ದಕ್ಕಿದ್ದಂತೆ ಜೀವ ಬರುತ್ತದೆ. ಆದರೆ, ರೇಡಿಯೋದ ಈ ಜೀವ 90ರ ದಶಕಕ್ಕೆ ಕರೆದುಕೊಂಡು ಹೋಗುತ್ತದೆ. ಇಲ್ಲಿಂದ ಮುಂದೇನಾಗುತ್ತದೆ ಎಂಬುದು ಚಿತ್ರದ ಕತೆ.

ಪ್ರೀತಿ, ತ್ಯಾಗ, ಕಾಯುವಿಕೆ, ನೆನಪುಗಳು, ಆಪ್ತವಾದ ಭಾವನೆಗಳನ್ನು ಕಟ್ಟಿಕೊಳ್ಳುತ್ತಾ ಹೋಗುವ ‘ಮರ್ಫಿ’ ಒಂದು ಗಾಢವಾದ ಅನುಭವವನ್ನು ನೀಡುತ್ತದೆ. ರೇಡಿಯೋ ಎಂಬುದು ಪ್ರತಿಯೊಬ್ಬರ ನೆನಪಿನ ಬುತ್ತಿ. ಅದೇ ರೇಡಿಯೋವನ್ನು ಚಿತ್ರದ ಮುಖ್ಯ ಪಾತ್ರಧಾರಿಯನ್ನಾಗಿ ಮಾಡಿಕೊಂಡು ಎರಡು ಕಾಲಘಟ್ಟದ ಕತೆಯನ್ನು ಹೇಳಿರುವ ನಿರ್ದೇಶಕ ಬಿ ಎಸ್‌ ಪ್ರದೀಪ್‌ ವರ್ಮಾ ಅವರ ಕಲಾ ಕುಸುರಿ ಮೆಚ್ಚುಕೊಳ್ಳಬೇಕು.

ಚಿತ್ರ: ಮರ್ಫಿ
ತಾರಾಗಣ: ಪ್ರಭು ಮುಂಡ್ಕೂರ್‌, ರೋಶಿನಿ ಪ್ರಕಾಶ್‌, ದತ್ತಣ್ಣ, ಇಳಾ ವೀರ್ಮಲ್ಲ, ಮಹಾಂತೇಶ್ ಹಿರೇಮಠ್‌, ಅಶ್ವಿನ್‌ ರಾವ್‌ ಪಲ್ಲಕ್ಕಿ
ನಿರ್ದೇಶನ: ಬಿ ಎಸ್‌ ಪ್ರದೀಪ್‌ ವರ್ಮ
ರೇಟಿಂಗ್: 3

ನೆನಪು ಮತ್ತು ಪ್ರೀತಿಗೆ ದೊಡ್ಡ ಶಕ್ತಿ ಇದೆ ಎಂಬುದನ್ನು ‘ಮರ್ಫಿ’ ಸಿನಿಮಾ ಮತ್ತೊಮ್ಮೆ ಸಾಬೀತು ಮಾಡುತ್ತದೆ. ಆದರ್ಶ್ ಆರ್ ಅವರ ಕ್ಯಾಮೆರಾ, ಮಹೇಶ್ ತೊಗಟ ಸಂಕಲನ, ಅರ್ಜುನ್ ಜನ್ಯಾ ಸಂಗೀತವು ನಿರ್ದೇಶಕರ ಕನಸಿಗೆ ಜೀವ ತುಂಬಿದೆ. ಅಂದಹಾಗೆ ‘ಮರ್ಫಿ’ ಟೈಮ್‌ ಟ್ರಾವೆಲಿಂಗ್‌ ಜಾನರ್‌ಗೆ ಸೇರಿದ ಸಿನಿಮಾ. ಭೂತಕಾಲದಿಂದ ವರ್ತಮಾನಕ್ಕೆ ಅಥವಾ ವರ್ತಮಾನದಿಂದ ಭೂತ ಕಾಲಕ್ಕೆ ಪಯಣಿಸುವ ಈ ಚಿತ್ರದ ಕತೆಯಲ್ಲಿ ಕಳೆದು ಹೋದ ಪ್ರೀತಿಯನ್ನು ತ್ಯಾಗದ ದಾರಿಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.