ವಿಜಯನಗರ ಕಾಲದ ನಿಧಿ ಪೆಟ್ಟಿಗೆ, ಈಗ ಕಾಲದ ರಾಘವನ ಅನ್‌ಲಾಕ್ ಪ್ರತಿಭೆ, ಹಳೆಯ ವಸ್ತುಗಳಿಗಾಗಿ ಹಪಹಪಿಸುವ ಪೀಟರ್, ಆರ್ಕಿಯಾಲಜಿಸ್ಟ್ ಜಾನಕಿ ಇವರ ನಡುವಿನ ಲಿಂಕು ಏನು ಎನ್ನುವ ಒಂದಿಷ್ಟು ಕುತೂಹಲಕಾರಿ ಅಂಶ.
ಆರ್.ಕೇಶವಮೂರ್ತಿ
ಬರವಣಿಗೆ ಮತ್ತು ಮೆರವಣಿಗೆ... ಚಿತ್ರಕ್ಕೆ ರೈಟರ್ ಆಗಿರುವ ಸತ್ಯ ರಾಯಲ ಹಾಗೂ ನಿರ್ದೇಶಕರಾಗಿರುವ ದೀಪಕ್ ಮಧುವನಹಳ್ಳಿ ಅವರ ಹೆಸರಿನ ಜತೆಗೆ ಕಾಣಿಸಿಕೊಂಡ ಡೆಸಿಗ್ನೇಷನ್ ಇದು. ಅವರ ಈ ಡೆಸಿಗ್ನೇಷನ್‌ನಂತೆ ಇದು ಹೀರೋನನ್ನು ಮೆರವಣಿಗೆ ಮಾಡುವ ಸಿನಿಮಾ. ಬರವಣಿಗೆ ಕೂಡ ಈ ಮೆರವಣಿಗೆಗೆ ಸಾಥ್ ಕೊಟ್ಟಿರುವುದು ವಿಶೇಷ. ಹೊಸ ಹುಡುಗನನ್ನು ಹೀರೋ ಮಾಡಲು ತೆರೆ ಮೇಲೆ ಯಾವ ರೀತಿ ದೃಶ್ಯಗಳನ್ನು ರೂಪಿಸಬಹುದು ಎನ್ನುವುದಕ್ಕೆ ಒಂದೊಳ್ಳೆಯ ಸಿಲೆಬಸ್ ಆಗಿ ಕಾಣುತ್ತದೆ ‘ಅನ್‌ಲಾಕ್ ರಾಘವ’.
ವಿಜಯನಗರ ಕಾಲದ ನಿಧಿ ಪೆಟ್ಟಿಗೆ, ಈಗ ಕಾಲದ ರಾಘವನ ಅನ್‌ಲಾಕ್ ಪ್ರತಿಭೆ, ಹಳೆಯ ವಸ್ತುಗಳಿಗಾಗಿ ಹಪಹಪಿಸುವ ಪೀಟರ್, ಆರ್ಕಿಯಾಲಜಿಸ್ಟ್ ಜಾನಕಿ ಇವರ ನಡುವಿನ ಲಿಂಕು ಏನು ಎನ್ನುವ ಒಂದಿಷ್ಟು ಕುತೂಹಲಕಾರಿ ಅಂಶಗಳಿದ್ದು, ಅವುಗಳನ್ನು ನಿಮಗೆ ಬೇಕಾದಂತೆ ಜೋಡಿಸಿಕೊಂಡು ನೋಡುವ ಸ್ವಾತಂತ್ರ್ಯವನ್ನು ನಿರ್ದೇಶಕರು ಕೊಟ್ಟಿದ್ದಾರೆ. ಹಾಗಂತ ತೀರ ಹೊಸ ಕತೆಯೇನು ಅಲ್ಲ. ನಿಧಿ ಹಿಂದೆ ಬೀಳುವ ಒಂದು ಗ್ಯಾಂಗಿನ ಕತೆ.
ಚಿತ್ರ: ಅನ್‌ಲಾಕ್ ರಾಘವ
ತಾರಾಗಣ: ಮಿಲಿಂದ್ ಗೌತಮ್, ರೆಚೆಲ್ ಡೇವಿಡ್, ಅವಿನಾಶ್, ವೀಣಾ ಸುಂದರ್, ಭೂಮಿ ಶೆಟ್ಟಿ
ನಿರ್ದೇಶನ: ದೀಪಕ್ ಮಧುವನಹಳ್ಳಿ
ರೇಟಿಂಗ್: 3
ಫೈಟ್, ಡ್ಯಾನ್ಸ್‌ನಲ್ಲಿ ಹೊಸ ನಟ ಮಿಲಿಂದ್ ಗೌತಮ್ ಫಸ್ಟ್ ಕ್ಲಾಸ್ ಸ್ಟೂಡೆಂಟ್. ಜಾನಕಿ ಪಾತ್ರಧಾರಿ ರೆಚೆಲ್ ಡೇವಿಡ್ ಅವರು ಹಳೆಯ ಕಾಲದ ನಿಧಿಗಿಂತಲೂ ಪಳಪಳನೆ ಹೊಳೆಯುತ್ತಾರೆ. ಅವರ ಅಂದಕ್ಕೆ ಖಳನಾಯಕ ಪೀಟರ್ ಮಾತ್ರವಲ್ಲ, ಪ್ರೇಕ್ಷಕನೂ ಫಿದಾ ಆಗುತ್ತಾನೆ. ಪೋಷಕ ನಟ ಸುಂದರ್ ಅವರಿಗೆ ಮಾತೇ ಇಲ್ಲದಂತೆ ಮಾಡಿದರೂ ಸುಂದರ್ ಅಭಿಮಾನಿಗಳು ಸಿಟ್ಟಿಗೇಳದಂತೆ ತಡೆಯಲು ಚಿನಕುರಳಿಯಂತಹ ಭೂಮಿ ಶೆಟ್ಟಿಯನ್ನು ಅವರಿಗೆ ಜೋಡಿ ಮಾಡಿದ್ದಾರೆ ಅನಿಸುತ್ತದೆ! ರೌಡಿ ಬೇಬಿ ಪಾತ್ರದಲ್ಲಿ ಭೂಮಿ ಶೆಟ್ಟಿ ಅಚ್ಚರಿ ಮೂಡಿಸುತ್ತಾರೆ. ಆಕ್ಸಫರ್ಡ್ ಪಾತ್ರದಲ್ಲಿ ಧರ್ಮಣ್ಣ ಕಡೂರ್ ನಗಿಸುತ್ತಾರೆ.
