Main Atal Hoon Movie Review:ಅಚಲ ಮನದ ಅಜಾತ ಶತ್ರು ಅಟಲರ ಜೀವನಗಾಥೆ, ವಾಜಪೇಯಿಗೂ ಗೆಳತಿ ಇದ್ಲಾ?
ಪ್ರಧಾನಿ ಸ್ಥಾನಕ್ಕೆ ಗೌರವ ತಂದ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಎಲ್ಲರಿಗೂ ಎಲ್ಲಿಲ್ಲದ ಗೌರವ. ಏನೋ ಹೆಮ್ಮೆ. ಅಂಥವರ ಬಯೋಬಿಕ್‌ನಲ್ಲಿ ಅವರಿಗೂ ಒಬ್ಬ ಗೆಳತಿ ಇದ್ದಳು ಎಂಬುವುದು ತಿಳಿಯುತ್ತದೆ.
ಚಿತ್ರ: ಮೆ ಅಟಲ್ ಹ್ಞೂ
ನಿರ್ದೇಶನ: ರವಿ ಜಾಧವ್
ಮುಖ್ಯ ಭೂಮಿಕೆಯಲ್ಲಿ ಪಂಕಜ್ ತ್ರಿಪಾಟಿ
ಒಟಿಟಿ: ಝೀ 5
ಬಯೋ ಪಿಕ್ಸ್ ಅಪರೂಪವೇನಲ್ಲ. ನಡೆದಾಡುವ ಕಂಪ್ಯೂಟರ್ ಶಕುಂತಲಾ ದೇವಿ, ಮಹಾನಟಿ ಸಾವಿತ್ರಿ, ನೀರಜಾ ಭಾನೋಟ್, ಸರದಾರ್ ಉದ್ದಮ್ ಸಿಂಗ್, ಮಿಲ್ಕಾ ಸಿಂಗ್, ಪಾನ್ ಸಿಂಗ್ ತೋಮರ್ ಕ್ಯಾಪ್ಟನ್ ವಿಕ್ರಮ್ ಭಾತ್ರಾ ಅವರ ಆತ್ಮಕತೆ ಶೇರ್ ಶಾಹ್, ನಟ ಸಂಜಯ್ ದತ್ ಆತ್ಮಕತೆ ಸಂಜು, ವೀರ ಮಂಗಲ್ ಪಾಂಡೆ, ದಂಗಲ್, ಮೇರಿ ಕೋಂ, ಭಗತ್ ಸಿಂಗ್ ಹೀಗೆ ಸಾಕಷ್ಟು ಚಿತ್ರಗಳಿವೆ. ಅದೇ ಗುಂಪಿಗೆ ಮತ್ತೊಂದು ಸೇರ್ಪಡೆ 'ಮೆ ಅಟಲ್ ಹ್ಞೂ'.
ಹೆಸರೇ ಹೇಳುವಂತೆ ಇದು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕುರಿತ ಬಯೋಪಿಕ್. ಅಟಲ್ ಅವರ ಜೀವನಗಾಥೆಯನ್ನು ಸಂಕ್ಷಿಪ್ತವಾಗಿ ಇಲ್ಲಿ ತೋರಿಸಲಾಗಿದೆ. ಅಟಲ್ ಅವರ ವಿದ್ಯಾಭ್ಯಾಸ, ಅವರ ಕವಿತೆ, ಕವಿತೆಗಳೊಂದಿಗಿನ ಅವರ ಬಾಂಧವ್ಯ, ಅವರ ರಾಜಕೀಯ ಆಸಕ್ತಿ, ಅವರ ರಾಜಕೀಯ ಜೀವನ, ಅವರ ಗೆಳೆಯರು, ಆತ್ಮೀಯರು, ಅವರು ಪ್ರಧಾನಿಯಾದ ಸಂದರ್ಭ, ಒಂದು ಮತದಿಂದ ಸೋತು ಹೋದ ಆ ಗಳಿಗೆ, ಅವರು ಭವ್ಯ ಭಾರತಕ್ಕಾಗಿ ಕಂಡ ಕನಸು, ಪದೇಪದೇ ಗಡಿಭಾಗದಲ್ಲಿ ಕಿರುಕುಳ ಕೊಡುತ್ತಿದ್ದ ಪಾಕಿಸ್ತಾನವನ್ನು ಎದುರಿಸಿ ನಿಂತ ಬಗೆ, ಪ್ರೋಕ್ರಾನ್ ಅಣುಪರೀಕ್ಷೆ, ಕಾರ್ಗಿಲ್ ಯುದ್ಧದ ವಿಜಯ ಹೀಗೆ ಅಟಲರ ಜೀವನದ ಹತ್ತು ಹಲವು ಮಜಲುಗಳನ್ನು ಇಲ್ಲಿ ತೋರಿಸಲಾಗಿದೆ. ಇದೊಂದು ಭಾವಪೂರ್ಣ ಚಿತ್ರ ಎಂದರೆ ಅತಿಶಯೋಕ್ತಿಯಲ್ಲ.
ಶತ್ರುಗಳೂ/ವಿರೋಧ ಪಕ್ಷದವರೂ ಅಭಿಮಾನಿಸಿದ ವ್ಯಕ್ತಿ ಎಂದರೆ ಅದು ಅಟಲ್ ಬಿಹಾರಿ ವಾಜಪೇಯಿ ಮಾತ್ರ. ಸರ್ವರೂ ಸಮ್ಮಾನಿಸಿದ ವ್ಯಕ್ತಿ ಅಟಲ್ ಜೀ. ಆದ್ದರಿಂದಲೇ ಅವರನ್ನು ಅಜಾತಶತ್ರು ಎನ್ನುತ್ತಿದ್ದರು.
PATNA SHUKLA MOVIE REVIEW:ವಿಶ್ವವಿದ್ಯಾಲಯದಲ್ಲಿ ನಡೆಯುವ ಹೊಲಸ ಹೊರಗಿಟ್ಟ ತನ್ವಿ ಶುಕ್ಲಾ
ಈ ಬಯೋಪಿಕ್‌ಗಳಲ್ಲಿ ಆ ವ್ಯಕ್ತಿಯ ಪಾತ್ರವನ್ನು ಯಾರು ಮಾಡಿದ್ದಾರೆ, ಅವರು ಆ ವ್ಯಕ್ತಿಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆಯೇ ಎಂಬ ವಿಷಯವೂ ಬಹಳ ಮುಖ್ಯ. ಇಲ್ಲಿ ಅಟಲ್ ಪಾತ್ರದಲ್ಲಿ ಪಂಕಜ್ ತ್ರಿಪಾಟಿ ಅಕ್ಷರಶಃ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದಾರೆ. ನಾವು ಪರದೆ ಮೇಲೆ ಅಟಲರನ್ನೇ ನೋಡುತ್ತಿದ್ದೇವೇನೋ ಎಂಬ ಭ್ರಮೆ ಹುಟ್ಟುತ್ತದೆ. ಅಷ್ಟು ಖಡಕ್ಕಾಗಿ ತ್ರಿಪಾಟಿ ಅಟಲ್ ಆಗಿಬಿಟ್ಟಿದ್ದಾರೆ. ಅವರ ಹಾವಭಾವ, ಮಾತುಗಾರಿಕೆ ನೈಪುಣ್ಯ, ಕವಿತ್ವ, ನಗು, ಮುಖದ ಕವಳಿಕೆ, ಅವರ ನಿಧಾನ ಸ್ವಭಾವ, ನಡಿಗೆ ಎಲ್ಲವನ್ನೂ ಪಂಕಜ್ ತಮ್ಮದಾಗಿಸಿಕೊಂಡಿದ್ದಾರೆ ಅರ್ಥಾತ್ ಕದ್ದು ಬಿಟ್ಟಿದ್ದಾರೆ ಎಂಬುದೇ ನಾವು ಪಂಕಜ್ ಅಭಿನಯಕ್ಕೆ ಕೊಡುವ ಗೌರವ.
ಒಟಿಟಿ ಯುಗ ಪ್ರಾರಂಭವಾದಾಗ ಅಮೇಜಾನ್ ಪ್ರೈಂಮ್ ನಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿರಬಹುದು ಎನ್ನಲಾದ ಕ್ರೈಂ ಥ್ರಿಲ್ಲರ್ ಸೀರೀಸ್ ಮಿರ್ಜಾಪುರ್‌ನಲ್ಲಿ ಗೂಡಾ ನಾಯಕನಾಗಿ ಖಡಕ್ ಅಭಿನಯ ನೀಡಿದ ಪಂಕಜ್ ತ್ರಿಪಾಟಿ ನಂತರ ಬಹಳಷ್ಟು ಸಿನಿಮಾ/ಸೀರೀಸ್‌ನಲ್ಲಿ ಮಿಂಚಿದವರು. ಅಭಿನಯದಲ್ಲಿ ತಮ್ಮದೇ ಛಾಪು ಒತ್ತಿದವರು. ಹಾಸ್ಯವಿರಲಿ, ಕ್ರೈಂ ಇರಲಿ, ಗೂಢಚಾರಕೆ/ಪತ್ತೆದಾರಿಕೆ, ಗುಂಡಾರಾಜ್ಯ, ಕ್ರಿಮಿನಲ್ ಲಾಯರ್, ಭಾವನಾತ್ಮಕ ಪಾತ್ರಗಳು ಹೀಗೆ ಎಲ್ಲದರಲ್ಲೂ ತಮ್ಮದೇ ಛಾಪು ನೀಡಿ ಸಿನಿ ಪ್ರಿಯರ ಮನಸ್ಸಿನಲ್ಲಿ ಒಂದು ಸ್ಥಾನ ಗಿಟ್ಟಿಸಿಕೊಂಡವರು ಪಂಕಜ್ ತ್ರಿಪಾಠಿ. ಬಹುಮುಖ ಪ್ರತಿಭೆಯ ಈ ಅಭಿಜಾತ ಕಲಾವಿದ ಅಟಲ್ ಬಿಹಾರಿ ವಾಜಪೇಯಿಯವರ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿದ್ದಾರೆ.
Silence Movie Review: ಸಿರಿವಂತ ಅವಿವಾಹಿತ ಸುಂದರಿಯ ಸಾವಿನ ಸುತ್ತೊಂದು ಥ್ರಿಲ್ಲರ್ ಚಿತ್ರ
ಇಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಪ್ರಾರಂಭಿಸಿ ಕಾರ್ಗಿಲ್ ವಿಜಯದವರೆಗೂ ಕಥೆಯನ್ನು ತಂದು ನಿಲ್ಲಿಸಿದ್ದಾರೆ. ಮೊದಲ ಪ್ರಧಾನಿ ಜವಹರಲಾಲ್ ನೆಹರು, ನಂತರದ ಶಾಸ್ತ್ರೀಜೀ, ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿಯ ಕರಾಳ ದಿನಗಳು, ನಂತರದ ಪ್ರಧಾನಿ ಮೊರಾರ್ಜಿ ದೇಸಾಯಿ, ಜನಸಂಘ ಹುಟ್ಟಿದ ಬಗೆ, ಅದು ಭಾರತೀಯ ಜನತಾ ಪಕ್ಷವಾಗುವಾಗ ಆದ ಪರಿವರ್ತನೆ ರಾಜಕೀಯ ವಿಪ್ಲವಗಳು, ಪತ್ರಕರ್ತನಾಗಿ ಹಾಗೂ ಒಂದು ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದ್ದ ಅಟಲ್, ಅಟಲರ ರಾಜಕೀಯ ನಡೆ, ಅವರು ಪ್ರಧಾನಿಯಾದಾಗಿನ ದಿನಗಳು ಎಲ್ಲವನ್ನೂ ನಿರ್ದೇಶಕ ರವಿ ಜಾಧವ್ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಇಲ್ಲಿ ನಮಗೆ ಆಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮೊದಲಾದ ಮಹನೀಯರ ಪಾತ್ರಗಳು ಕಂಡಾಗ ಪ್ರೇಕ್ಷಕನಿಗೆ ರೋಮಾಂಚನವಾಗುವುದು ಸುಳ್ಳಲ್ಲ. ಅಟಲರಿಗೆ ಒಬ್ಬ ಗೆಳತಿಯೂ ಇದ್ದಳು ಎಂಬುದು ಕೂಡ ಈ ಚಿತ್ರದಲ್ಲಿ ತಿಳಿಯುತ್ತದೆ. ಆದರೆ ಆ ಗೆಳತಿಯೊಂದಿಗಿನ ಅವರ ಸಂಬಂಧ ಹೇಗಿತ್ತು ಎಂಬುದನ್ನು ನೀವು ಚಿತ್ರ ನೋಡಿಯೇ ತಿಳಿಯಬೇಕು. ಇಲ್ಲೇ ವಿವರಿಸಿದರೆ ಸ್ವಾರಸ್ಯವಿರುವುದಿಲ್ಲ.
ಅಟಲರ ಜೀವನ ಚರಿತ್ರೆಯ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಬಹುದಿತ್ತು ಎನಿಸಿದರೂ ಲವಲವಿಕೆಯಿಂದ ನೋಡಿಸಿಕೊಂಡು ಹೋಗಬಹುದಾದ ಚಿತ್ರ 'ಮೆ ಅಟಲ್ ಹ್ಞೂ.' 19 ಜನವರಿ 2024 ರಲ್ಲಿ ಬಿಡುಗಡೆಯಾದ ಈ ಚಿತ್ರ ಈಗ ಝೀ5 ನಲ್ಲಿ ಓಡುತ್ತಿದೆ.
Sharukh Khan's Dunki Movie Review: ಡಂಕಿ ಎಂಬ ಕಳ್ಳದಾರಿ