ಒಂದು ಕಡೆ ಮಾದಕ ದ್ರವ್ಯ ಜಾಲ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಹೇಳುವ ಸಿನಿಮಾ ಇನ್ನೊಂದು ಕಡೆ ಆ ಜಾಲದ ಒಬ್ಬೊಬ್ಬರ ನಿಗೂಢ ಹತ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ. ಡ್ರಗ್ಸ್‌ ಪೆಡ್ಲರ್‌ಗಳ ಸರಣಿ ಸಾವಿನ ಹಿಂದಿನ ವ್ಯಕ್ತಿ ಯಾರು ಎನ್ನುವುದೇ ಸಿನಿಮಾದ ಹೈಲೈಟ್‌. 

ಪ್ರಿಯಾ ಕೆರ್ವಾಶೆ

ಡ್ರಗ್‌ ನಶೆ ಅನ್ನುವುದು ನೋವನ್ನು ಮರೆಸುತ್ತದೆ, ಬೇರೆ ಜಗತ್ತನ್ನು ಪರಿಚಯಿಸುತ್ತದೆ ಎಂಬ ಮನಸ್ಥಿತಿ ಮತ್ತು ಅದರ ಪರಿಣಾಮಗಳನ್ನು ಹೇಳುವ ಸಿನಿಮಾ ‘ಪ್ರಕರಣ ತನಿಖಾ ಹಂತದಲ್ಲಿದೆ’. ಸಿನಿಮಾದಲ್ಲಿ ಮೂರ್ನಾಲ್ಕು ಲೇಯರ್‌ಗಳಿವೆ. ದಕ್ಷ ಪೊಲೀಸ್ ಅಧಿಕಾರಿಯೊಬ್ಬ ಸರಣಿ ಕೊಲೆ ಪ್ರಕರಣದ ತನಿಖೆಗೆ ಮುಂದಾದಾಗ ಡ್ರಗ್ಸ್‌ ಮಾಫಿಯಾ ಜಾಲದ ಕಬಂಧ ಬಾಹುಗಳು ತೆರೆದುಕೊಳ್ಳುತ್ತ ಹೋಗುತ್ತವೆ. 

ಒಂದು ಕಡೆ ಮಾದಕ ದ್ರವ್ಯ ಜಾಲ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಹೇಳುವ ಸಿನಿಮಾ ಇನ್ನೊಂದು ಕಡೆ ಆ ಜಾಲದ ಒಬ್ಬೊಬ್ಬರ ನಿಗೂಢ ಹತ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ. ಡ್ರಗ್ಸ್‌ ಪೆಡ್ಲರ್‌ಗಳ ಸರಣಿ ಸಾವಿನ ಹಿಂದಿನ ವ್ಯಕ್ತಿ ಯಾರು ಎನ್ನುವುದೇ ಸಿನಿಮಾದ ಹೈಲೈಟ್‌. ಡ್ರಗ್‌ ಜಾಲ ಹೇಗಿರುತ್ತೆ ಅನ್ನೋದನ್ನು ಈಗಾಗಲೇ ಹಲವಾರು ಕಮರ್ಷಿಯಲ್‌ ಸಿನಿಮಾಗಳು ಅದ್ದೂರಿ ವಿಶ್ಯುವಲ್ಸ್‌ ಮೂಲಕ ನಿರೂಪಿಸಿಯಾಗಿದೆ. ಅಂಥಾ ಸಿನಿಮಾ ಕಣ್ತುಂಬಿಕೊಂಡಿರುವವರಿಗೆ, ಪ್ರೀಮಿಯರ್‌ ಪದ್ಮಿನಿ ಕಾರಲ್ಲಿ ಒಂಟಿಯಾಗಿ ಬರುವ ಸಾಮಾನ್ಯ ಲುಕ್‌ನ ವ್ಯಕ್ತಿಯನ್ನೇ ಮೇನ್‌ ವಿಲನ್‌ ಎಂದು ತಿಳಿದುಕೊಳ್ಳಬೇಕು ಅಂದರೆ ಕಷ್ಟ ಆಗುತ್ತೆ. 

ಚಿತ್ರ: ಪ್ರಕರಣ ತನಿಖಾ ಹಂತದಲ್ಲಿದೆ
ತಾರಾಗಣ: ಮಹಿನ್ ಕುಬೇರ್, ಚಿಂತನ್‌ ಕಂಬಣ್ಣ, ರಾಜ್‌ ಗಗನ್
ನಿರ್ದೇಶನ: ಸುಂದರ್ ಎಸ್
ರೇಟಿಂಗ್ : 3

ಟಯರ್‌ನಡಿ ಮೊಳೆ ಇಟ್ಟು ಪಂಕ್ಚರ್‌ ಮಾಡುವಂಥಾ ಟೆಕ್ನಿಕ್‌ಗಳನ್ನು ಎಂದೋ ದಾಟಿ ಹೋಗಿರುವ ನೋಡುಗನಿಗೆ ಮತ್ತೆ ಹಳೇ ಟೆಕ್ನಿಕ್‌ಗಳನ್ನೇ ತೋರಿಸಿದರೆ ಆತ ಒಪ್ಪಿಕೊಳ್ತಾನ ಅನ್ನೋದು ಪ್ರಶ್ನೆಯನ್ನು ಈ ಸಿನಿಮಾ ಮುಂದಿಡುತ್ತದೆ. ಕ್ರೈಮ್‌ ಸನ್ನಿವೇಶಗಳನ್ನು ನಿರೂಪಿಸುವಲ್ಲಿ ಇನ್ನೊಂದಿಷ್ಟು ಹೊಸತನ, ಜಾಣ್ಮೆ ಇದ್ದಿದ್ದರೆ ಸಿನಿಮಾ ಪರಿಣಾಮಕಾರಿಯಾಗುತ್ತಿತ್ತು. ಉಳಿದಂತೆ ಮಹಿನ್ ಕುಬೇರ್‌, ತೀಕ್ಷ್ಣ, ಖಡಕ್ ನಿಲುವುಗಳ ಪೊಲೀಸ್‌ ಅಧಿಕಾರಿಯಾಗಿ ಗಮನಸೆಳೆಯುತ್ತಾರೆ. ಭಾರ್ಗವ್‌ ಪಾತ್ರಕ್ಕೆ ಚಿಂತನ್‌ ಕಂಬಣ್ಣ ನ್ಯಾಯ ಸಲ್ಲಿಸಿದ್ದಾರೆ. ಕ್ರೈಮ್‌ ಥ್ರಿಲ್ಲರ್ ಇಷ್ಟಪಡುವವರು ಈ ಸಿನಿಮಾ ನೋಡಬಹುದು.