ಯರ್ರಾಬಿರ್ರಿ ಕಾಡು ನಾಡು ಜಾತಿ ಸಂಘರ್ಷದ ಕಥೆಗಳು ಬರುತ್ತಿವೆ. ನಿರ್ದೇಶಕ ರಾಮನಾರಾಯಣ್‌ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲೂ ತಳಸಮುದಾಯದ ಅರಣ್ಯವಾಸಿಗಳ ನೋವಿನ ಕಥೆ ಹೇಳಿದ್ದಾರೆ. 

ಪ್ರಿಯಾ ಕೆರ್ವಾಶೆ

ಲವ್‌ಸ್ಟೋರಿ, ರಿವೆಂಜ್‌ ಡ್ರಾಮಾ ಅಂತಿದ್ದ ಸ್ಯಾಂಡಲ್‌ವುಡ್‌ ಮಂದಿಗೆ ಇದ್ದಕ್ಕಿದ್ದ ಹಾಗೆ ಕಾಡುಮಂದಿಯ ಮೇಲೆ ವ್ಯಾಮೋಹ ಬಂದುಬಿಟ್ಟಿದೆ. ಯರ್ರಾಬಿರ್ರಿ ಕಾಡು ನಾಡು ಜಾತಿ ಸಂಘರ್ಷದ ಕಥೆಗಳು ಬರುತ್ತಿವೆ. ನಿರ್ದೇಶಕ ರಾಮನಾರಾಯಣ್‌ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲೂ ತಳಸಮುದಾಯದ ಅರಣ್ಯವಾಸಿಗಳ ನೋವಿನ ಕಥೆ ಹೇಳಿದ್ದಾರೆ. ಸಿನಿಮಾದ ಆರಂಭದಲ್ಲೇ ಯೋಗರಾಜ ಭಟ್ಟರು ಬಿದಿರು ಬುಂಡೆ ಹಿರೀಕನಾಗಿ ಬಂದು ಮುತ್ತಿನಂಥಾ ಸಂದೇಶದೊಂದಿಗೆ ಕತೆಗೆ ಚಾಲನೆ ನೀಡುತ್ತಾರೆ.

ಆಮೇಲೆ ಅವರ ವಂಶಜ ಮುತ್ತರಸನ ಮೂಲಕ ಕಥೆ ಮುಂದುವರಿಯುತ್ತದೆ. ನಾಯಕನ ಸರ್ವ ಒಳ್ಳೆತನ ತುಂಬಿರುವ, ಅಶಿಕ್ಷಿತನಾಗಿದ್ದರೂ ಸ್ಮಾರ್ಟ್‌ನೆಸ್‌ ಇರುವ ಈ ಮುತ್ತರಸ ಮುಂದೆ ಜಾತಿ ಕಾರಣಕ್ಕೆ ಸಾಲು ಸಾಲು ಚಾಲೆಂಜ್‌ಗಳನ್ನು ಎದುರಿಸುತ್ತಾನೆ. ನಡುವೆ ಸುಲಭಕ್ಕೆ ಊಹಿಸಲಾಗದಂಥಾ ತಿರುವು ಇದೆ. ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಕೊರಳಿನ ರುದ್ರಾಕ್ಷಿಯೇ ಉರುಳಾಗುವ ದೃಶ್ಯ ಗಮನಸೆಳೆಯುವಂತಿದೆ. ಜೊತೆಗೆ ಮಾಮಿ ಅಂತ ಕರೆಸಿಕೊಳ್ಳೋ ತಬಲಾ ನಾಣಿ ಹಾಗೂ ಬಿಸಿ ರಾಗಿಹಿಟ್ಟು ಮತ್ತು ಡೋಲೋ 650 ಡೈಲಾಗ್‌ ಹೊಡೆಯೋ ಸೀತಮ್ಮ ಕಾಮಿಡಿ ಸೀನ್‌ ಮಜವಾಗಿದೆ.

ಚಿತ್ರ: ಕುಲದಲ್ಲಿ ಕೀಳ್ಯಾವುದೋ
ತಾರಾಗಣ: ಮನು ಮಡೆನೂರು, ಮೌನಾ ಗುಡ್ಡೆಮನೆ, ಶರತ್‌ ಲೋಹಿತಾಶ್ವ, ಸೋನಲ್‌ ಮೊಂತೆರೋ
ನಿರ್ದೇಶನ: ಕೆ. ರಾಮನಾರಾಯಣ್‌
ರೇಟಿಂಗ್ : 3

ಮಡೆನೂರು ಮನು ಹಾಗೂ ನಾಯಕಿ ಮೌನಾ ಗುಡ್ಡೆಮನೆ ನಟನೆ ಚೆನ್ನಾಗಿದೆ. ಶರತ್‌ ಲೋಹಿತಾಶ್ವ, ತಬಲಾ ನಾಣಿ, ಕರಿಸುಬ್ಬು ಪೈಪೋಟಿಗೆ ಬಿದ್ದಂತೆ ಅತ್ಯುತ್ತಮ ಅಭಿನಯ ಮೆರೆದಿದ್ದಾರೆ. ಹಾಡುಗಳು ಕಾಡಿನ ತಂಗಾಳಿ, ಫೈಟು ಬಿರುಗಾಳಿ. ಕಥೆ ಎಳೆತ ಕೊಂಚ ಹೆಚ್ಚಾಯ್ತು. ಇನ್ನೊಂಚೂರು ಹೊಸತನ ಇದ್ದರೆ ಚೆನ್ನಾಗಿರ್ತಿತ್ತು ಅನ್ನೋದನ್ನು ಬಿಟ್ಟರೆ ಮನೋರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಮೆರೆಯುವ ಚಿತ್ರವಿದು.